World Senior Citizens Day: ಹಿರಿಯ ನಾಗರಿಕರ ದಿನ; ನಿಮಗಾಗಿ ಇರುವ ಈ ಸರ್ಕಾರಿ ಯೋಜನೆಗಳನ್ನು ಕಳೆದುಕೊಳ್ಳಬೇಡಿ-world senior citizens day list of government schemes for senior citizens in india atal pension yojana prs ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  World Senior Citizens Day: ಹಿರಿಯ ನಾಗರಿಕರ ದಿನ; ನಿಮಗಾಗಿ ಇರುವ ಈ ಸರ್ಕಾರಿ ಯೋಜನೆಗಳನ್ನು ಕಳೆದುಕೊಳ್ಳಬೇಡಿ

World Senior Citizens Day: ಹಿರಿಯ ನಾಗರಿಕರ ದಿನ; ನಿಮಗಾಗಿ ಇರುವ ಈ ಸರ್ಕಾರಿ ಯೋಜನೆಗಳನ್ನು ಕಳೆದುಕೊಳ್ಳಬೇಡಿ

World Senior Citizens Day: ಪ್ರತಿ ವರ್ಷ ಆಗಸ್ಟ್ 21 ರಂದು ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುತ್ತದೆ. ಅವರ ಸಾಧನೆ ಮತ್ತು ಕೊಡುಗೆಗಳನ್ನು ಗೌರವಿಸುವ ಮತ್ತು ಶ್ಲಾಘಿಸುವ ದಿನ ಇದು.

 ವಿಶ್ವ ಹಿರಿಯ ನಾಗರಿಕರ ದಿನ
ವಿಶ್ವ ಹಿರಿಯ ನಾಗರಿಕರ ದಿನ (Live mint)

ವರ್ಷದ 365 ದಿನಗಳಲ್ಲಿ ದಿನಕ್ಕೊಂದು ವಿಶೇಷ ಇದ್ದೇ ಇರುತ್ತದೆ. ಅದರಂತೆ ಹಿರಿಯ ನಾಗರಿಕರಿಗೂ ಒಂದು ದಿನವಿದೆ. ಅದೇ ಆಗಸ್ಟ್​ 21. ಇಂದು (ಆಗಸ್ಟ್​ 21) ವಿಶ್ವ ಹಿರಿಯ ನಾಗರಿಕರ ದಿನ ಆಚರಿಸುತ್ತೇವೆ. ಸಮಾಜದಲ್ಲಿ ಹಿರಿಯ ವಯಸ್ಕರ ಕೊಡುಗೆಗಳು ಮತ್ತು ಸಾಧನೆಗಳನ್ನು ಗೌರವಿಸಲು ಮತ್ತು ಶ್ಲಾಘಿಸಲು ಮೀಸಲಾಗಿರುವ ದಿನ ಇದಾಗಿದೆ. ಅವರ ಅಮೂಲ್ಯವಾದ ಬುದ್ಧಿವಂತಿಕೆ, ಅನುಭವ ಮತ್ತು ಜ್ಞಾನ ಗುರುತಿಸಲು ಮತ್ತು ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸುತ್ತೇವೆ.

ಅಮೆರಿಕದಲ್ಲಿ ಮೊದಲ ಬಾರಿಗೆ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗಿತ್ತು. 1988ರ ಆಗಸ್ಟ್​ 21ರಂದು ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಗಿತ್ತು. ಯುನೈಟೆಡ್ ಸ್ಟೇಟ್ಸ್‌ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಈ ದಿನವನ್ನು ಘೋಷಿಸಿದ್ದರು. ಆದರೆ ಇದು ಅಮೆರಿಕದಾಚೆಗೂ ಪಸರಿಸಿತು. ಜಾಗತಿಕ ಆಚರಣೆಯಾಗಿ ವಿಕಸನಗೊಂಡಿತು. 1990ರ ಡಿಸೆಂಬರ್​ 14ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ವಿಶ್ವ ಹಿರಿಯ ನಾಗರಿಕರ ದಿನವನ್ನು ಘೋಷಿಸಿತ್ತು. ನಂತರ 1991ರಂದು ಮೊದಲ ಬಾರಿಗೆ ಆಚರಣೆ ಮಾಡಲಾಗಿತ್ತು.

ಹಿರಿಯ ನಾಗರಿಕರಿಗೆ ಸರ್ಕಾರದ ಯೋಜನೆಗಳು

ಹಿರಿಯ ನಾಗರಿಕರ ದಿನದ ನೆನಪಿನಲ್ಲಿ ಅವರಿಗೆ ಸಿಗುತ್ತಿರುವ ಸರ್ಕಾರದ ವಿವಿಧ ಸೌಲಭ್ಯಗಳೇನು ಎಂಬುದನ್ನು ಈ ಮುಂದೆ ತಿಳಿಯೋಣ. ಹಿರಿಯರ ಆರೈಕೆಗೆ ಕೇಂದ್ರ ಸರ್ಕಾರವು ಪ್ರಮುಖ ಪಾತ್ರವಹಿಸುತ್ತಿದೆ. ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಅಟಲ್ ವಯೋ ಅಭ್ಯುದಯ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ, ಅಟಲ್ ಪಿಂಚಣಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ.

ಪ್ರಧಾನ ಮಂತ್ರಿ ವಯ ವಂದನಾ ಯೋಜನೆ

ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (Pradhan Mantri Vaya Vandana Yojana) ನಿವೃತ್ತಿ ಮತ್ತು ಪಿಂಚಣಿ ಯೋಜನೆಯಾಗಿದೆ. ಇದು ಭಾರತೀಯ ಜೀವ ವಿಮಾ ನಿಗಮ (LIC) ನೀಡುವ ಯೋಜನೆಯಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುತ್ತದೆ. 10 ವರ್ಷಗಳವರೆಗೆ ನಿಗದಿತ ದರದಲ್ಲಿ ಮಾಸಿಕವಾಗಿ ಪಿಂಚಣಿ ಮತ್ತು ವಿಮೆ ನೀಡುತ್ತದೆ. ಆದರೆ ನೂತನ ಪಾವತಿದಾರರಿಗೆ ಬಡ್ಡಿ 7.75ರಷ್ಟು ಇರಲಿದೆ.

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ

ಇಂದಿರಾ ಗಾಂಧಿ ವೃದ್ಧಾಪ್ಯ ಯೋಜನೆಯು ಭಾರತ ಸರ್ಕಾರವು ಸೂಚಿಸಿದ ಮಾರ್ಗಸೂಚಿಗಳ ಪ್ರಕಾರ ಬಡತನ ರೇಖೆಗಿಂತ ಕೆಳಗಿರುವ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ವಯಸ್ಕರಿಗೆ ನೀಡುವ ಪಿಂಚಣಿ ಯೋಜನೆಯಾಗಿದೆ. ಇದು ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮದ (NSAP) ಒಂದು ಭಾಗವಾಗಿದ್ದು, ಈ ಯೋಜನೆಯ ಅನ್ವಯ 65 ರಿಂದ 80 ವರ್ಷದವರಿಗೆ 500 ರೂಪಾಯಿ ವೇತನ, 80 ವರ್ಷ ಮೇಲ್ಪಟ್ಟವರು 750 ರೂ ಮಾಸಾಶನ ಪಡೆಯಲಿದ್ದಾರೆ.

ಹಿರಿಯರ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2010-11ರ ಅವಧಿಯಲ್ಲಿ ವೃದ್ಧರ ವಿವಿಧ ಆರೋಗ್ಯ-ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು 'ಹಿರಿಯರ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮ' (NPHCE) ಅನ್ನು ಪ್ರಾರಂಭಿಸಿತು. ಈ ಯೋಜನೆಯ ಅಡಿಯಲ್ಲಿ ರಾಜ್ಯ ಆರೋಗ್ಯ ಸೊಸೈಟಿಯ ಮೂಲಕ ಜಿಲ್ಲಾಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು (CHC), ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC) ಮತ್ತು ಉಪ-ಕೇಂದ್ರಗಳಲ್ಲಿ (SCs) ಮೀಸಲಾದ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು.

ರಾಷ್ಟ್ರೀಯ ವಯೋಶ್ರೀ ಯೋಜನೆ

ರಾಷ್ಟ್ರೀಯ ವಯೋಶ್ರೀ ಯೋಜನೆ (RVY) ಬಿಪಿಎಲ್​ ವರ್ಗಕ್ಕೆ ಸೇರಿದ ಹಿರಿಯ ನಾಗರಿಕರಿಗೆ ದೈಹಿಕ ನೆರವು ಮತ್ತು ಸಹಾಯ-ಜೀವನ ಸಾಧನಗಳನ್ನು ಒದಗಿಸುವ ಯೋಜನೆಯಾಗಿದೆ. ಇದು ಕೇಂದ್ರ ವಲಯದ ಯೋಜನೆಯಾಗಿದ್ದು, ಕೇಂದ್ರದಿಂದ ಸಂಪೂರ್ಣ ಹಣವನ್ನು ನೀಡಲಾಗುತ್ತದೆ. ಯೋಜನೆಯ ಅನುಷ್ಠಾನಕ್ಕೆ ವೆಚ್ಚವನ್ನು 'ಹಿರಿಯ ನಾಗರಿಕರ ಕಲ್ಯಾಣ ನಿಧಿ' ಯಿಂದ ಭರಿಸಲಾಗುವುದು.

ವರಿಷ್ಠ ಮೆಡಿಕ್ಲೈಮ್ ಪಾಲಿಸಿ

60 ರಿಂದ 80 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ಔಷಧಿಗಳ ವೆಚ್ಚ, ರಕ್ತ, ಆಂಬ್ಯುಲೆನ್ಸ್ ಶುಲ್ಕ ಸೇರಿದಂತೆ ಆರೋಗ್ಯ ಸಂಬಂಧಿತ ವೆಚ್ಚಗಳನ್ನು ಪೂರೈಸಲು ಈ ಯೋಜನೆ ನೆರವಾಗುತ್ತದೆ. ಇದಲ್ಲದೆ, ಸೆಕ್ಷನ್ 80ಡಿ ಅಡಿಯಲ್ಲಿ ಪ್ರೀಮಿಯಂಗಳ ಪಾವತಿಗೆ ಆದಾಯ ತೆರಿಗೆ ಪ್ರಯೋಜನಗಳನ್ನು ಅನುಮತಿಸಲಾಗಿದೆ. ಪಾಲಿಸಿ ಅವಧಿಯು ಒಂದು ವರ್ಷವಾದರೂ ರಿನಿವಲ್ ಮೂಲಕ 90 ವರ್ಷದವರೆಗೆ ವಿಸ್ತರಿಸಬಹುದು.

ರಾಷ್ಟ್ರೀಯ ಪಿಂಚಣಿ ಯೋಜನೆ

ವರಿಷ್ಠ ಪಿಂಚಣಿ ಬಿಮಾ ಯೋಜನೆ

ಉದ್ಯೋಗಿ ಪಿಂಚಣಿ ಯೋಜನೆ

ಅಟಲ್ ಪಿಂಚಣಿ ಯೋಜನೆ

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ

ಹಿರಿಯ ನಾಗರಿಕರ ಕಲ್ಯಾಣ ನಿಧಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.