ಬನ್ನೇರುಘಟ್ಟ ಉದ್ಯಾನದಲ್ಲಿ ಹೊಸ ವರ್ಷಕ್ಕೆ ಹೊಸ ಅತಿಥಿ; ಮುದ್ದಾದ ಹೆಣ್ಣುಮರಿಗೆ ಜನ್ಮ ನೀಡಿದ ರೂಪಾ ಆನೆ
ನಾಡಿನಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ. ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಈ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದು ಹೊಸ ಅತಿಥಿ. ಹೌದು, ರೂಪಾ ಎಂಬ ಆನೆ ಮುದ್ದಾದ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದೆ. ಇದರ ಫೋಟೋ ವರದಿ ಇಲ್ಲಿದೆ. ( ಚಿತ್ರ ವರದಿ - ಎಚ್. ಮಾರುತಿ)
(1 / 5)
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹೊಸ ವರ್ಷದ ಶುರುವಿನಲ್ಲೇ ಹೊಸ ಅತಿಥಿ ಆಗಮನವಾಗಿದೆ. ರೂಪಾ ಎಂಬ ಆನೆ ಮುದ್ದಾದ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದೆ. ರೂಪಾ ಜನ್ಮ ಕೊಟ್ಟ ಮೂರನೇ ಮರಿ ಇದಾಗಿದೆ.
(2 / 5)
ರೂಪಾ ಆನೆ ಈ ಹಿಂದೆ 2020ರ ಆಗಸ್ಟ್ 1ರಂದು ಒಂದು ಗಂಡು ಮರಿಗೆ ಜನ್ಮ ನೀಡಿತ್ತು. ಆ ಮರಿಗೆ ಬಸವ ಎಂದು ನಾಮಕರಣ ಮಾಡಲಾಗಿತ್ತು. ಇದಕ್ಕೂ ಮೊದಲು 2016ರಲ್ಲಿ ಒಂದು ಹೆಣ್ಣು ಮರಿಗೆ ಜನ್ಮ ನೀಡಿತ್ತು. ಅದಕ್ಕೆ ಗೌರಿ ಎಂದು ನಾಮಕರಣ ಮಾಡಲಾಗಿತ್ತು. ಈಗ ಹೊಸ ಮರಿಯಾನೆ ಸುಮಾರು 120 ಕೆ.ಜಿ ತೂಕವಿದ್ದು ಆರೋಗ್ಯವಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.
(3 / 5)
ರೂಪಾ ಜನ್ಮ ನೀಡಿದ ಮರಿಯಾನೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ವರ್ಷದ ದಿನದಂದು ಆನೆ ಸಫಾರಿಗೆ ಆಗಮಿಸುವ ಪ್ರವಾಸಿಗರು ಮರಿಯಾನೆಯನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಮಕ್ಕಳು ಮರಿಯಾನೆಯ ತುಂಟಾಟಗಳನ್ನು ನೋಡಿ ಖುಷಿಪಡುತ್ತಿದ್ದಾರೆ.
(4 / 5)
ಆನೆ ಸಫಾರಿ ಸೀಗೇಕಟ್ಟೆ ಬಳಿ ಇರುವ ಆನೆ ಕುಟುಂಬದಲ್ಲಿ ಮರಿಯಾನೆಗೆ ತಾಯಿ ರೂಪಾ, ಅಕ್ಕ ಗೌರಿ ಮತ್ತು ಇತರ ಆನೆಗಳಾದ ರೀಟಾ, ವೇದಾ ಮರಿಗೆ ಓಡಾಡುವ ತರಬೇತಿ ನೀಡುತ್ತಿವೆ.ಆನೆ ಮರಿಯ ಚೆಲ್ಲಾಟದ ದೃಶ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ನೂತನ ಅತಿಥಿಯ ಆಗಮನದಿಂದ ಬನ್ನೇರುಘಟ್ಟ ಉದ್ಯಾನದಲ್ಲಿ ಆನೆಗಳ ಸಂಖ್ಯೆ 25 ಕ್ಕೆ ಏರಿದೆ.
ಇತರ ಗ್ಯಾಲರಿಗಳು