Karavali Utsava: ಬೆಂಗಳೂರಲ್ಲಿ ಕಡಲೂರ ಕಲರವ; ಹುಲಿಕುಣಿತ, ಯಕ್ಷಗಾನ, ಆಹಾ ಫಿಶ್‌ಫ್ರೈ ಪುಳಿಮುಂಚಿ ಚಿಕನ್ ಸುಕ್ಕ, ಇಲ್ಲಿದೆ ಚಿತ್ರನೋಟ
- ಬೆಂಗಳೂರಿನ ಜೆಪಿ ನಗರದ ಆರ್‌ಬಿಐ ಲೇಔಟ್ ಬಿಬಿಎಂಪಿ ಮೈದಾನದಲ್ಲಿ ನಿನ್ನೆ (ಫೆ.25) ಕರಾವಳಿ ಉತ್ಸವದ ಸೊಬಗು ಕಳೆಗಟ್ಟಿತ್ತು. ಹುಲಿ ವೇಷ ಕುಣಿತ, ಯಕ್ಷಗಾನ, ಕೋಳಿ ಅಂಕ, ಹೋಳಿ ಕುಣಿತ, ಕಂಗೋಲು ಕುಣಿತದಂತಹ ಕರಾವಳಿ ಕಲಾ ಸಂಸ್ಕೃತಿಯ ಜೊತೆಗೆ ವಿವಿಧ ಆಟೋಟ ಸ್ಪರ್ಧೆಗಳು ಗಮನ ಸೆಳೆದವು. ಕರಾವಳಿ ಭಾಗದ ಆಹಾರ ವೈವಿಧ್ಯಗಳು ನೆರೆದವರ ನಾಲಿಗೆ ಚಪಲ ತಣಿಸಿದವು.
- ಬೆಂಗಳೂರಿನ ಜೆಪಿ ನಗರದ ಆರ್‌ಬಿಐ ಲೇಔಟ್ ಬಿಬಿಎಂಪಿ ಮೈದಾನದಲ್ಲಿ ನಿನ್ನೆ (ಫೆ.25) ಕರಾವಳಿ ಉತ್ಸವದ ಸೊಬಗು ಕಳೆಗಟ್ಟಿತ್ತು. ಹುಲಿ ವೇಷ ಕುಣಿತ, ಯಕ್ಷಗಾನ, ಕೋಳಿ ಅಂಕ, ಹೋಳಿ ಕುಣಿತ, ಕಂಗೋಲು ಕುಣಿತದಂತಹ ಕರಾವಳಿ ಕಲಾ ಸಂಸ್ಕೃತಿಯ ಜೊತೆಗೆ ವಿವಿಧ ಆಟೋಟ ಸ್ಪರ್ಧೆಗಳು ಗಮನ ಸೆಳೆದವು. ಕರಾವಳಿ ಭಾಗದ ಆಹಾರ ವೈವಿಧ್ಯಗಳು ನೆರೆದವರ ನಾಲಿಗೆ ಚಪಲ ತಣಿಸಿದವು.
(1 / 12)
ಕರಾವಳಿಗರ ಒಕ್ಕೂಟ (ರಿ) ಬೆಂಗಳೂರು ಇವರು ಮಹಾನಗರಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರನ್ನು ಒಗ್ಗೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕರಾವಳಿ ಉತ್ಸವ ಅದ್ದೂರಿಯಾಗಿ ನೆರವೇರಿತು. ಕರಾವಳಿ ಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳು, ಗ್ರಾಮೀಣ ಕ್ರೀಡೆಗಳು, ಆಹಾರ ಪದ್ಧತಿ ಇವೆಲ್ಲವೂ ಕಾರ್ಯಕ್ರಮದ ಸೊಬಗು ಹೆಚ್ಚಿಸಿದ್ದವು. ಕರಾವಳಿ ಉತ್ಸವದ ಸೊಬಗಿನ ಕ್ಷಣಗಳ ಫೋಟೊಗಳನ್ನು ನೀವೂ ಕಣ್ತುಂಬಿಕೊಳ್ಳಿ.
(2 / 12)
ಕರಾವಳಿ ಸಂಸ್ಕೃತಿ ಬಿಂಬಿಸುವ ವಿವಿಧ ಟ್ಲಾಬೊಗಳು ಕರಾವಳಿ ಉತ್ಸವದಲ್ಲಿ ಗಮನ ಸೆಳೆದವು. ಟ್ಲಾಬೊಗಳ ಜೊತೆ ನಿಂತು ಜನರು ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಕಾರ್ಯಕ್ರಮದ ಆರಂಭದಲ್ಲಿ ಬ್ಯಾಂಡ್‌ನೊಂದಿಗೆ ಟ್ಯಾಬ್ಲೊಗಳ ಮೆರವಣಿಗೆಯು ಕಾರ್ಯಕ್ರಮದ ಅಂದ ಹೆಚ್ಚಿಸಿತು.
(3 / 12)
ಗ್ರಾಮೀಣ ಕ್ರೀಡೆಯಾದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಕರಾವಳಿ ಭಾಗದ ಪುರುಷರು ಮಹಿಳೆಯರು ಸಮನಾಗಿ ಭಾಗವಹಿಸಿ ಶಕ್ತಿ ಪ್ರರ್ದಶನ ಮಾಡಿದರು. ಸ್ಪರ್ಧೆಯಲ್ಲಿ ಗೆದ್ದವರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.
(4 / 12)
ಕರಾವಳಿಯ ಹೆಮ್ಮೆಯ ಕಲೆ ಹುಲಿ ವೇಷ ಕುಣಿತವು ನೆರೆದವರನ್ನೂ ಕುಣಿಯುವಂತೆ ಮಾಡಿತ್ತು. ವೇಷಧಾರಿಗಳು ಮಾತ್ರವಲ್ಲದೇ ಕಾರ್ಯಕ್ರಮದಲ್ಲಿ ಸೇರಿದ್ದವರು ಅವರೊಂದಿಗೆ ಹೆಜ್ಜೆ ಹಾಕಿ ಖುಷಿಪಟ್ಟರು. ಮಕ್ಕಳು ಕೂಡ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ್ದು ಕಂಡು ಬಂದಿತು.
(5 / 12)
ಕಡಲೂರಿನ ಇನ್ನೊಂದು ಪ್ರಮುಖ ಗ್ರಾಮಿಣ ಕಲೆ ಮಡಿಕೆ ಒಡೆಯುವ ಸ್ಪರ್ಧೆಯು ರೋಚಕವಾಗಿತ್ತು. ಇದರಲ್ಲೂ ಪುರುಷರು ಹಾಗೂ ಮಹಿಳೆಯರು ಭಾಗವಹಿಸಿ ಆನಂದಿಸಿದರು.
(6 / 12)
ʼಬೆಂಗಳೂರಿಗೆ ಬಂದ್ರು ನಾವು ಕೊಟ್ಟೆ ಕಟ್ಟೋದು ಮರೆತಿಲ್ಲ ಸ್ವಾಮಿʼ ಎನ್ನುತ್ತಾ ಕೊಟ್ಟೆ ಕಟ್ಟುವ ಸ್ಪರ್ಧೆಯಲ್ಲಿ ಪೈಪೋಟಿ ತೋರಿದ ಕರಾವಳಿ ಕುವರಿಯರು.
(7 / 12)
ಕರಾವಳಿ ಸಂಸ್ಕೃತಿಯನ್ನು ಅನಾವರಣಗೊಳಿಸುವ ಚಿತ್ತಾರವಿರುವ ಫೋಟೊ ಫ್ರೇಮ್ ಕೂಡ ಕರಾವಳಿ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಈ ಫ್ರೇಮ್‌ನಲ್ಲಿ ತಮ್ಮ ಫೋಟೊ ತೆಗೆಸಿಕೊಳ್ಳಲು ಜನ ಕ್ಯೂ ನಿಂತಿದ್ದು ಕಂಡು ಬಂದಿತ್ತು.
(8 / 12)
ಕರಾವಳಿ ಉತ್ಸವ ನಡೆದ ಬಿಬಿಎಂಪಿ ಮೈದಾನದಲ್ಲಿ ಎಲ್ಲೆಲ್ಲೂ ಕರಾವಳಿ ಖಾದ್ಯಗಳ ಘಮವೇ ಹರಡಿತ್ತು. ಮಂಡಕ್ಕಿ-ಖಾರಕಡ್ಡಿ-ಜಿಲೇಬಿಯಿಂದ, ಗೋಳಿಬಜೆವರೆಗೆ, ಕೋರಿ ರೊಟ್ಟಿಯಿಂದ ಫಿಶ್ ಪುಳಿಮುಂಚಿವರೆಗೆ ವಿವಿಧ ಬಗೆಗೆ ಕರಾವಳಿ ಖಾದ್ಯಗಳು ಉತ್ಸವದಲ್ಲಿ ನೆರೆದವರ ಹೊಟ್ಟೆ ತುಂಬಿಸುವ ಜೊತೆಗೆ ನಾಲಿಗೆಯನ್ನು ರುಚಿಯನ್ನೂ ಹೆಚ್ಚಿಸಿದವು. ಸಸ್ಯಾಹಾರ, ಮಾಂಸಾಹಾರದ ಫುಡ್ ಸ್ಟಾಲ್‌ಗಳ ಮುಂದೆ ಜನಸ್ತೋಮ ತುಂಬಿರುವುದು ಕಂಡು ಬಂದಿತು.
(9 / 12)
ಕರಾವಳಿ ಭಾಗದ ವಿವಿಧ ಕಲೆ, ಸಂಸ್ಕೃತಿಯನ್ನು ಕಟ್ಟಿಕೊಡುವ ವಿಶೇಷ ಕಾರ್ಯಕ್ರಮ ಕರಾವಳಿ ಕಲಾ ವೈಭವ ನೋಡುಗರ ಮೆಚ್ಚುಗೆ ಗಳಿಸಿದ ಕಾರ್ಯಕ್ರಮವಾಗಿತ್ತು. ಶ್ರೀ ಅಂಬಾಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆ (ರಿ) ಪರ್ಕಳ ಇವರು ಕಟ್ಟಿಕೊಟ್ಟ ಕರಾವಳಿ ಬದುಕು ಭಾವ ಮಹಾನಗರಿಯ ಕರಾವಳಿಗರಲ್ಲಿ ಹೆಮ್ಮೆಯ ಗರಿ ಮೂಡಿಸಿತ್ತು.
(10 / 12)
2024ರ ಕರಾವಳಿ ಉತ್ಸವದ ಕೊನೆಯಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ ಇವರ ಶಿವದೂತ ಪಂಜರ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಪಂರ್ಜುಲಿ ಪ್ರವೇಶದ ವೇಳೆ ಜನರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸುವ ಜೊತೆಗೆ ಫೋಟೊ, ವಿಡಿಯೊ ಕ್ಲಿಕ್ಕಿಸಿದ್ದು ಕಂಡು ಬಂದಿತು.
(11 / 12)
ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ, ಹುಟ್ಟೂರಿನ ಅಭಿಮಾನ ಮೆರೆದರು. ಅಲ್ಲದೇ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
ಇತರ ಗ್ಯಾಲರಿಗಳು