ಕರ್ನಾಟಕ ಬಜೆಟ್ 2024: ಈ ಸಲದ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕದ ಜನತೆಯ ಟಾಪ್ 10 ನಿರೀಕ್ಷೆಗಳಿವು
ಕರ್ನಾಟಕ ಬಜೆಟ್ 2024: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಈ ಸಲದ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕದ ಜನತೆ ಬಯಸುವ ಟಾಪ್ 10 ನಿರೀಕ್ಷೆಗಳಿವು.
(1 / 12)
ಕರ್ನಾಟಕ ಬಜೆಟ್ 2024: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಫೆ.16) ಬಜೆಟ್ ಮಂಡನೆ ಮಾಡಲಿದ್ದು, ನಾಡಿನ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಈ ಪೈಕಿ ಟಾಪ್ 10 ನಿರೀಕ್ಷೆಗಳ ಕಡೆಗೆ ಒಂದು ನೋಟ ಬೀರಲು ಈ ಕ್ಷಣ ಒಂದು ನಿಮಿತ್ತ. (ANI)
(2 / 12)
ಕರ್ನಾಟಕ ಬಜೆಟ್ 2024: ಬಾಗಲಕೋಟೆ, ವಿಜಯಪುರ, ಬೀದರ್, ಯಾದಗಿರಿ: ನಾಲ್ಕು ಜಿಲ್ಲೆಗಳ ಜನರು ಈ ಸಲದ ಬಜೆಟ್‌ನಲ್ಲಿ ಮೂಲಸೌಕರ್ಯ ಮತ್ತು ಪ್ರವಾಸೀತಾಣಗಳ ಅಭಿವೃದ್ಧಿಗೆ ಪ್ಯಾಕೇಜ್‌ಗಳನ್ನು ಎದುರು ನೋಡುತ್ತಿದ್ದಾರೆ. ಅದೇ ರೀತಿ ನೀರಾವರಿ ಯೋಜನೆಗಳಿಗೆ ಅನುದಾನ, ಕೈಗಾರಿಕಾ ಕ್ಲಸ್ಟರ್ ಅನುಷ್ಠಾನಕ್ಕೆ ಕ್ರಮ, ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ, ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಬಲವರ್ಧನೆ, ಕಲಬುರಗಿಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗಳನ್ನು ಎದುರು ನೋಡುತ್ತಿದ್ದಾರೆ. (ಕಡತ ಚಿತ್ರ)(HT Kannada )
(3 / 12)
ಕರ್ನಾಟಕ ಬಜೆಟ್ 2024: ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳ ಜನರ ಗಮನ ಕಳಸಾ-ಬಂಡೂರಿ, ಮಹದಾಯಿ ಯೋಜನೆಗಳ ಕಡೆಗಿದೆ. ಅಷ್ಟೇ ಅಲ್ಲ, ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆಯನ್ನು ಬಯಸಿದ್ದಾರೆ. ಕೊಪ್ಪಳದಲ್ಲಿ ಏತ ನೀರಾವರಿ ಯೋಜನೆಗಳಿಗೆ ಅನುದಾನ. ಹಾವೇರಿಯಲ್ಲೂ ನೀರಾವರಿ ಯೋಜನೆಗೆ ಪ್ಯಾಕೇಜ್ ನಿರೀಕ್ಷೆಯಲ್ಲಿದ್ದಾರೆ.(Twitter)
(4 / 12)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)
(5 / 12)
ಕರ್ನಾಟಕ ಬಜೆಟ್ 2024: ಉತ್ತರ ಕನ್ನಡ, ಉಡುಪಿ, ದಕ್ಷಿಣಕನ್ನಡ ಈ ಮೂರು ಕರವಾಗಳಿ ಜಿಲ್ಲೆಗಳಲ್ಲಿ ಜನ ಪ್ರವಾಸಿ ತಾಣಗಳ ಅಭಿವೃದ್ದಿ, ಕಡಲ್ಕೊರೆತ ತಡೆಗೆ ಕ್ರಮ, ಮೀನುಗಾರಿಕೆ ಮತ್ತು ಇತರೆ ಮೂಲಸೌಕರ್ಯ ಪ್ಯಾಕೇಜ್‌ಗಳನ್ನು ನಿರೀಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲ, ಉದ್ಯೋಗ ಸೃಷ್ಟಿ ಕಡೆಗೂ ಗಮನ ಕೊಡಿ ಎಂದು ಹೇಳುತ್ತಿದ್ದಾರೆ.
(6 / 12)
ಕರ್ನಾಟಕ ಬಜೆಟ್ 2024: ಶಿವಮೊಗ್ಗ, ಚಿಕ್ಕಮಗಳೂರು ಮಲೆನಾಡು ಭಾಗದಲ್ಲಿ ಸದ್ಯ ಜನರನ್ನು ಕಾಡುತ್ತಿರುವುದು ಮಂಗನ ಕಾಯಿಲೆ ಅಥವಾ ಕೆಎಫ್‌ಡಿ. ಇದಕ್ಕೆ ಲಸಿಕೆ ಅಭಿವೃದ್ಧಿ ಪಡಿಸಬೇಕು ಎಂಬ ಆಗ್ರಹಕ್ಕೆ ಸರ್ಕಾರ ಗಮನಹರಿಸಬೇಕು ಎಂಬುದು ಜನರ ಅಪೇಕ್ಷೆ. ಅದೇ ರೀತಿ, ಕೃಷಿ, ಕೈಗಾರಿಕೆಗಳಿಗೆ ಉತ್ತೇಜನ, ಅಡಕೆಸಂಶೋಧನಾ ಕೇಂದ್ರ, ಕಾಡಾನೆ ಕಾಟ ತಡೆಗೆ ಕ್ರಮ ತೆಗೆದುಕೊಳ್ಳಬೇಕು. ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು. ಇನ್ನು ಪಕ್ಕದ ದಾವಣಗೆರೆ ಜನ ವಿಮಾನ ನಿಲ್ದಾಣಕ್ಕೆ ಮೂಲಸೌಕರ್ಯ, ಪ್ರತ್ಯೇಕ ಹಾಲು ಒಕ್ಕೂಟ, ಕೃಷಿ ಸಹಕಾರ ಕಾಲೇಜು, ಜವುಳಿ ಪಾರ್ಕ್, ಐಟಿ ಬಿಟಿ ಕಂಪನಿಗಳ ಸ್ಥಾಪನೆಯನ್ನು ಬಯಸುತ್ತಿದ್ದಾರೆ. ಚಿತ್ರದುರ್ಗದವರು ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ, ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ.
(7 / 12)
ಕರ್ನಾಟಕ ಬಜೆಟ್ 2024: ಹಾಸನ ಮತ್ತು ಮೈಸೂರು ಭಾಗದ ಜನರು ವಿಮಾನ ನಿಲ್ದಾಣ ಸೇರಿ ಮೂಲಸೌಕರ್ಯಕ್ಕೆ ಅನುದಾನ, ನೀರಾವರಿ, ಪ್ರವಾಸೋದ್ಯಮಕ್ಕೆ ಪ್ಯಾಕೇಜ್ ಬಯಸುತ್ತಿದ್ದಾರೆ. ಮೈಸೂರಿಗೆ ಕೈಗಾರಿಕಾ ಕಾರಿಡಾರ್, ದಸರಾ ಪ್ರಾಧಿಕಾರ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ವರುಣಾಕೆರೆ ಅಭಿವೃದ್ಧಿ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆಯಾಗಬೇಕು ಎಂದು ಹೇಳುತ್ತಿದ್ದಾರೆ.
(8 / 12)
ಕರ್ನಾಟಕ ಬಜೆಟ್ 2024: ಚಾಮರಾಜನಗರ, ಮಂಡ್ಯ ಜಿಲ್ಲೆಯ ಜನರ ಬೇಡಿಕೆ ಕೂಡ ಮೂಲಸೌಕರ್ಯದ್ದೇ ಇದೆ. ಚಾಮರಾಜನಗರಲ್ಲಿ ಮಿನಿ ವಿಧಾನ ಸೌಧ, ರಸ್ತೆ ಮತ್ತು ಇತರೆ ಮೂಲಸೌಕರ್ಯ, ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಆಗಬೇಕು ಎಂದು ಬಯಸಿದ್ದಾರೆ. ಮಂಡ್ಯ ಹೊಸ ಸಕ್ಕ ರೆ ಕಾರ್ಖಾನೆ ಆರಂಭ ತೂಬಿನಕೆರೆ ಬಳಿಮಂಡ್ಯ ಉಪನಗರ, ಮಂಡ್ಯ ನಗರದ ದಕ್ಷಿಣಭಾಗದಲ್ಲೂ ಬೈಪಾಸ್ ರಸ್ತೆ ಕೂಡ ಬೇಕು ಎಂದು ಹೇಳುತ್ತಿದ್ಧಾರೆ.
(9 / 12)
ಕರ್ನಾಟಕ ಬಜೆಟ್ 2024: ರಾಯಚೂರು, ಬಳ್ಳಾರಿ, ವಿಜಯನಗರಗಳಲ್ಲಿ ನೀರಾವರಿ, ಶಾಲಾ ಶಿಕ್ಷಣ, ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸಬೇಕೆಂಬ ನಿರೀಕ್ಷೆಯಲ್ಲಿದ್ದಾರೆ. ಜನ. ರಾಯಚೂರು ಸಣ್ಣ ನೀರಾವರಿಗೆ ಉತ್ತೇಜನ, ಶಾಲಾ ಶಿಕ್ಷಣ, ವಿಮಾನ ನಿಲ್ದಾಣ, ರಾಯಚೂರು ಮಹಾನಗರಪಾಲಿಕೆ ಎಂದು ಘೋಷಿಸಿ ಅನುದಾನ ನೀಡಬೇಕು ಎಂದು ಬಯಸುತ್ತಿದ್ದಾರೆ. ಅದೇ ರೀತಿ, ಬಳ್ಳಾರಿ ಜನ, ನದಿಜೋಡಣೆ ಅಗತ್ಯ ಇದೆ. ಟಿಬಿ ಅಣೆಕಟ್ಟಿನ ಹೂಳು ಎತ್ತಬೇಕು ಎಂದು ಹೇಳುತ್ತಿದ್ದಾರೆ. ಅದೇ ರೀತಿ ಜೀನ್ಸ್ ಉಡುಪುಗಳ ಪಾರ್ಕ್ ಸ್ಥಾಪಿಸಬೇಕು. ಮೆಣಸಿನ ಕಾಯಿ ಮಾರುಕಟ್ಟೆ, ವಿಮಾನ ನಿಲ್ದಾಣ ಕೂಡ ಬೇಕು. ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಬೇಕು ಎನ್ನುತ್ತಿದ್ದಾರೆ. ಇನ್ನು ವಿಜಯನಗರದಲ್ಲೂ ಅಷ್ಟೆ- ಪ್ರವಾಸಿತಾಣಗಳ ಅಭಿವೃದ್ಧಿ ಪ್ಯಾಕೇಜ್, ಜಿಲ್ಲಾಡಳಿತ ಭವನ ಮುಂತಾದ ಮೂಲಸೌಕರ್ಯಕ್ಕೆ ಕ್ರಮವನ್ನು ಎದುರು ನೋಡುತ್ತಿದ್ಧಾರೆ.
(10 / 12)
ಕರ್ನಾಟಕ ಬಜೆಟ್ 2024: ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಪ್ರಕಾರ ಅಭಿವೃದ್ಧಿ ಆಗಬೇಕಿದ್ದು, 500 ಕೋಟಿ ರೂಪಾಯಿ ಅನುದಾನದ ನಿರೀಕ್ಷೆಯಲ್ಲಿದ್ದಾರೆ ಜನ. ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರು ನಗರ ಬೆಳೆಯುತ್ತಿದ್ದು , ಮೆಟ್ರೋ ಯೋಜನೆಗೆ ಅನುಮೋದನೆ ನೀಡಬೇಕು ಎಂಬುದು ಅಪೇಕ್ಷೆ. ಇನ್ನು ಚಿಕ್ಕಬಳ್ಳಾಪುರದ ಜನರಿಗೆ ಎತ್ತಿನಹೊಳೆ ಯೋಜನೆಯ ಕುಡಿಯುವ ನೀರು ಬೇಕು. ಈ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸಬೇಕೆಂಬ ಆಗ್ರಹವಿದೆ. ಜತೆಗೆ ಕೃಷ್ಣಾ ಪೆನ್ನಾರ್ ನದಿ ನೀರು ಈ ಭಾಗಕ್ಕೆ ಬೇಕೆಂಬ ಒತ್ತಾಯವೂ ಇದೆ. ಕೆರೆಗಳ ಸಮಗ್ರ ಪುನಶ್ಚೇತನಕ್ಕೆ ಒತ್ತು ಬೇಕು. ಪ್ರವಾಸ್ಯೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ, ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಆಗಬೇಕು ಎನ್ನುತ್ತಾರೆ. ಇದೇ ರೀತಿ ಕೋಲಾರದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಬಯಸುತ್ತಿದ್ದಾರೆ.
(11 / 12)
ಕರ್ನಾಟಕ ಬಜೆಟ್ 2024: ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳು ಅಕ್ಕಪಕ್ಕದ ಜಿಲ್ಲೆಗಳು. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೇವನಹಳ್ಳಿ ಜಿಲ್ಲೆ ಎಂದು ಹೆಸರಿಡಬೇಕು. ಜಿಲ್ಲಾಡಳಿತ ಕಚೇರಿಗಳು ಬೆಂಗಳೂರಿನಿಂದ 2017ರಲ್ಲಿ ದೇವನಹಳ್ಳಿ ತಾಲೂಕಿಗೆ ಸ್ಥಳಾಂತರವಾಯಿತು. ಈ ಸಲ ಬಜೆಟ್‌ನಲ್ಲಿ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡಬೇಕು ಎಂಬ ಆಗ್ರಹವಿದೆ. ಅಂತಾರಾಷ್ಟ್ರೀ ಯವಿಮಾನ ನಿಲ್ದಾಣಕ್ಕೆ ಬರುವ ಕಾವೇರಿ ನೀರು ನಗರಕ್ಕೆ ವಿಸ್ತರಣೆ, ಮೆಟ್ರೋ ರೈಲು, ಜಿಲ್ಲಾ ಕ್ರೀಡಾಂಗಣ, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಇನ್ನು ರಾಮನಗರದಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಚಾಲನೆ ಬಯಸಿದ್ದಾರೆ ಜನ. ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಸ್ಥಾಪನೆ, ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಬೇಕು. ರಾಮ ದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿ ರಾಮಮಂದಿರ ನಿರ್ಮಾಣ ಆಗಬೇಕು ಎನ್ನುತ್ತಿದ್ದಾರೆ ಜನ. (PTI)
(12 / 12)
ಕರ್ನಾಟಕ ಬಜೆಟ್ 2024: ಬೆಂಗಳೂರು ನಗರ ಬಹಳ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಜನಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಿರುವಾಗ ಅಗತ್ಯಕ್ಕೆ ತಕ್ಕಂತೆ ಮೂಲಸೌಕರ್ಯ ಒದಗಿಸುವ ಕೆಲಸವೂ ವೇಗ ಪಡೆಯಬೇಕು. ಕೈಗೊಂಡಿರುವ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರು ಬಿಸಿನೆಸ್ ಕಾರಿಡಾರ್ ಸ್ಥಾಪನೆಯಾಗಬೇಕು.
ಇತರ ಗ್ಯಾಲರಿಗಳು