ಹಸಿರು ತೋರಣ, ಊರ ದಿಬ್ಬಣ, ಯಕ್ಷಗಾನ ನರ್ತನ, ಸನ್ಮಾನ ಸಂಭ್ರಮ; ಬೆಂಗಳೂರಲ್ಲಿ ನಡೆದ ಕುಂದಾಪ್ರ ಕನ್ನಡ ಹಬ್ಬದ ಮೊದಲ ದಿನದ ಸಚಿತ್ರ ವರದಿ
- ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಆಯೋಜಿಸಿರುವ ʼಕುಂದಾಪ್ರ ಕನ್ನಡ ಹಬ್ಬʼದ ಸಂಭ್ರಮ ಕಳೆಗಟ್ಟಿತ್ತು. ಇಲ್ಲಿನ ವೈಟ್ ಪೆಟಲ್ಸ್ ಆವರಣದಲ್ಲಿ ಎಲ್ಲಿ ನೋಡಿದರೂ ಕರಾವಳಿಯ ಸಂಸ್ಕೃತಿ ಅನಾವರಣವಾಗಿತ್ತು. ಜೊತೆಗೆ ಕುಂದಗನ್ನಡದ ಕಂಪು ಹರಡಿತ್ತು. ದಿಬ್ಬಣದಿಂದ ಯಕ್ಷಗಾನ ಜೋಡಾಟದವರೆಗೆ ಕುಂದಾಪ್ರ ಕನ್ನಡ ಹಬ್ಬದ ಮೊದಲ ದಿನ ಹೀಗಿತ್ತು.
- ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಆಯೋಜಿಸಿರುವ ʼಕುಂದಾಪ್ರ ಕನ್ನಡ ಹಬ್ಬʼದ ಸಂಭ್ರಮ ಕಳೆಗಟ್ಟಿತ್ತು. ಇಲ್ಲಿನ ವೈಟ್ ಪೆಟಲ್ಸ್ ಆವರಣದಲ್ಲಿ ಎಲ್ಲಿ ನೋಡಿದರೂ ಕರಾವಳಿಯ ಸಂಸ್ಕೃತಿ ಅನಾವರಣವಾಗಿತ್ತು. ಜೊತೆಗೆ ಕುಂದಗನ್ನಡದ ಕಂಪು ಹರಡಿತ್ತು. ದಿಬ್ಬಣದಿಂದ ಯಕ್ಷಗಾನ ಜೋಡಾಟದವರೆಗೆ ಕುಂದಾಪ್ರ ಕನ್ನಡ ಹಬ್ಬದ ಮೊದಲ ದಿನ ಹೀಗಿತ್ತು.
(1 / 11)
ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನಗಳ (ಆಗಸ್ಟ್ 17, 18) ಕಾಲ ನಡೆಯುವ ಅದ್ಧೂರಿ ಕುಂದಾಪ್ರ ಕನ್ನಡ ಹಬ್ಬಕ್ಕೆ ಚಾಲನೆ ದೊರೆತಿದೆ. ನಗರದ ವಿವಿಧ ಭಾಗಗಳಿಂದ ದಿಬ್ಬಣ ಸಾಗಿಬಂದು ಅರಮನೆ ಮೈದಾನ ಸೇರಿತ್ತು. ವೈಟ್ ಪೆಟಲ್ಸ್ ಆವರಣದಲ್ಲಿ ಎತ್ತಿನಗಾಡಿ, ಕಂಬಳದ ಕೋಣ, ತೇರು, ಯಕ್ಷಗಾನ ವೇಷ, ಪಂರ್ಜುಲಿ ಮುಖವರ್ಣಿಕೆ, ಸೇರಿದಂತೆ ಕರಾವಳಿ ವಿವಿಧ ಸಂಸ್ಕೃತಿಯ ಸೊಬಗು ಕಣ್ಮನ ಸೆಳೆಯುವಂತಿತ್ತು. ಮೊದಲ ದಿನ ಕಾರ್ಯಕ್ರಮದಲ್ಲಿ ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರಿಗೆ ಹುಟ್ಟೂರ ಗೌರವ ಸನ್ಮಾನ ನೆರವೇರಿತ್ತು. ಯಕ್ಷಗಾನ ಜೋಡಾಟಕ್ಕಂತೂ ಜನ ಕಿಕ್ಕಿರಿದು ಸೇರಿದ್ದರು. ಕಾರ್ಯಕ್ರಮದಲ್ಲಿ ಇನ್ನು ಏನೆಲ್ಲಾ ಇತ್ತು ಎಂದು ನೋಡಲು ಬಯಸುವವರು ಮುಂದಿನ ಫೋಟೊಗಳನ್ನು ನೋಡಿ. (ಚಿತ್ರಗಳು: ರೇಷ್ಮಾ ಶೆಟ್ಟಿ)
(2 / 11)
ಬೆಂಗಳೂರಿನ ಅರಮನೆ ಮೈದಾನ ಗೇಟ್ 3ರ ಮುಖದ್ವಾರದಲ್ಲೇ ಕುಂದಾಪ್ರ ಕನ್ನಡ ಹಬ್ಬಕ್ಕೆ ನಿಮ್ಮನ್ನು ಆಹ್ವಾನಿಸುವ ಸ್ವಾಗತ ಗೋಪುರ ಕಾಣುತ್ತದೆ. ನಂತರ ಜಗಮಗಿಸುವ ಬೆಳಕಿನ ಹಾದಿಯಲ್ಲಿ ನೀವು ಮುಂದೆ ಸಾಗಬಹುದು.
(3 / 11)
5ನೇ ವರ್ಷದ ಕುಂದಾಪ್ರ ಕನ್ನಡ ಹಬ್ಬದಲ್ಲಿ ಕಾಂತಾರ ಖ್ಯಾತಿ, ರಾಷ್ಟ್ರಪ್ರಶಸ್ತಿ ವಿಜೇತ ನಟ ರಿಷಭ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಯಿತು.
(4 / 11)
ಕುಂದಾಪ್ರ ಕನ್ನಡ ಹಬ್ಬದಲ್ಲಿ ಕಂಬಳದ ಕೋಣಗಳ ಪ್ರತಿಮೆಯನ್ನು ಇರಿಸಲಾಗಿತ್ತು. ಕರಾವಳಿ ಸಂಸ್ಕೃತಿಯಲ್ಲಿ ಬಿಂಬಿಸುವ ಕೋಣಗಳ ಮೂಗುದಾರ ಹಿಡಿದು ಫೋಟೊ ತೆಗೆಸಿಕೊಳ್ಳಲು ಜನ ನಾ ಮುಂದು, ತಾ ಮುಂದು ಎಂದು ಪೈಪೋಟಿ ನಡೆಸಿದ್ದರು.
(5 / 11)
ಎತ್ತಿನಗಾಡಿ ಹೆಸರು ಕೂಡ ಮರೆತು ಹೋಗಿದ್ದ ಈ ದಿನಗಳಲ್ಲಿ ಕುಂದಾಪ್ರ ಕನ್ನಡ ಹಬ್ಬದಲ್ಲಿ ಎತ್ತಿನಗಾಡಿ ಪ್ರತಿಮೆ ವಿಶೇಷವಾಗಿ ಕಂಡಿತ್ತು. ಪುಟ್ಟ ಮಕ್ಕಳಂತೂ ಎತ್ತಿನಗಾಡಿ ಹತ್ತಿ ಸಂಭ್ರಮಿಸಿದರು, ಮಕ್ಕಳ ಸಂಭ್ರಮಕ್ಕೆ ಅಪ್ಪಂದಿರೂ ಸಾಥ್ ನೀಡಿದ್ದು ಕಂಡು ಬಂದಿತು. ಹಳ್ಳಿ ಸೊಗಡು ನೆನಪಿಸುವ ಎತ್ತಿನಗಾಡಿಯನ್ನು ಮಕ್ಕಳಿಗೆ ತೋರಿಸಿ ಪೋಷಕರು ಖುಷಿಪಟ್ಟರು.
(6 / 11)
ಮಹಾನಗರಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆದ ಯಕ್ಷಗಾನ ಜೋಡಾಟದ ಸಂಭ್ರಮವಂತೂ ಕುಂದಾಪ್ರ ಕನ್ನಡ ಹಬ್ಬದ ಮೊದಲ ದಿನದ ಹೈಲೈಟ್ ಎನ್ನಬಹುದು. ಯಕ್ಷದಿಗ್ಗಜರಿಂದ ಕೂಡಿದ ರಂಗಸ್ಥಳದ ಮುಂದೆ ಜನ ಕಿಕ್ಕಿರಿದು ತುಂಬಿರುವುದು ಕಂಡು ಬಂದಿತು
(7 / 11)
ಕರಾವಳಿ ಕಾರ್ಯಕ್ರಮ ಎಂದ ಮೇಲೆ ಕರಾವಳಿ ಸೊಗಡಿನ ತಿನಿಸುಗಳು ಎಲ್ಲ ಎಂದರೆ ಹೇಗೆ? ಪತ್ರೊಡೆ, ಕೊಟ್ಟೆ ಕುಡುಬು, ಗೋಲಿ ಬಜೆ, ಅಕ್ಕಿರೊಟ್ಟಿ ಸೇರಿದಂತೆ ಕರಾವಳಿ ಭಾಗವ ವಿವಿಧ ಸಸ್ಯಹಾರಿ, ಮಾಂಸಾಹಾರಿ ಖಾದ್ಯಗಳು ಆಹಾರೋತ್ಸವದ ಭಾಗವಾಗಿದ್ದವು. ಕರಾವಳಿ ಖಾದ್ಯ ರುಚಿ ಸವಿಯಲು ಜನ ಕಾದು ನಿಂತಿರುವುದು ಕಂಡು ಬಂದಿತು.
(8 / 11)
ಯಕ್ಷಗಾನ ಜೋಡಾಟ ನಡೆಯುವಾಗ ವೇದಿಕೆ ಸಂಪೂರ್ಣ ಭರ್ತಿಯಾಗಿದ್ದು, ವೇದಿಕೆ ಇಕ್ಕೆಲಗಳಲ್ಲಿ ಜನರು ನಿಂತು ಯಕ್ಷವೈಭವವನ್ನು ಕಣ್ತುಂಬಿಕೊಳ್ಳುವ ದೃಶ್ಯ ಕಂಡು ಬಂದಿತ್ತು
(9 / 11)
ಇಷ್ಟೆಲ್ಲಾ ಆಯ್ತ್, ʼಹಬ್ಬ ಅಂತ್ರಿ ತೇರ್ ಇಲ್ಯಾʼ ಅಂತ ಕೇಣ್ಬೇಡಿ. ಕುಂದಾಪ್ರ ಕನ್ನಡ ಹಬ್ಬದಲ್ಲಿ ಜಾತ್ರೆಯ ತೇರು ಕೂಡ ಹಬ್ಬದ ಸಂಭ್ರಮಕ್ಕೆ ಜೊತೆಯಾಗಿತ್ತು. ತೇರಿನ ಜೊತೆ ಮೈಸೂರು ದಸರಾದ ಅಂಬಾರಿ ಆನೆಯ ಪ್ರತಿರೂಪ, ಪಂಜರ್ಲಿ ಮುಖವರ್ಣಿಕೆ, ಗುಳಿಗ, ಯಕ್ಷಗಾನ ಪ್ರತಿಮೆಗಳು ಸೊಬಗು ಹೆಚ್ಚಿಸಿದ್ದವು.
(10 / 11)
ಕುಂದಾಪ್ರ ಕನ್ನಡ ಹಬ್ಬ ಒಂದೇ ದಿನಕ್ಕೆ ಮುಗಿದಿಲ್ಲ, ಇವತ್ತು (ಆಗಸ್ಟ್ 18) ಇದೆ. ಇಂದು ಏನೆಲ್ಲಾ ಕಾರ್ಯಕ್ರಮಗಳು ಇರುತ್ತೆ, ಈ ವಿವರ ನೋಡಿ. ಆಗಸ್ಟ್ 18ರ ಕಾರ್ಯಕ್ರಮಗಳು: ಬೆಳಗ್ಗೆ 10: ಬಯಲಾಟ- ಗ್ರಾಮೀಣ ಉತ್ಸವ, ಬೆಳಗ್ಗೆ 10: ತಾರೆಯರ ಜೊತೆ ಮಾತುಕತೆ, ಕವಿತೆ, ಬೆಳಗ್ಗೆ 11: ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ʼಡಾನ್ಸ್ ಕುಂದಾಪ್ರ ಡಾನ್ಸ್ʼ, ಬೆಳಗ್ಗೆ 11.15: ಕುಂದಾಪುರ ಭಾಷೆ ಬದುಕು ಬರಹ ಕುರಿತ ನುಡಿಚಾವಡಿ, ಮಧ್ಯಾಹ್ನ 12: ಮನು ಹಂದಾಡಿ ಅವರಿಂದ ʼಹಂದಾಡ್ತಾ ನೆಗ್ಯಾಡಿʼ ಹಾಸ್ಯ ಕಾರ್ಯಕ್ರಮ, ಮಧ್ಯಾಹ್ನ 1.30: ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ ʼಪೆಟ್ ಒಂದೇ, ಸ್ವರ ಬೇರೆʼ, ಮಧ್ಯಾಹ್ನ 2.30: ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ ʼಮಂದಾರ್ತಿ ಮಾದೇವಿʼ, ಸಂಜೆ 4.30: ರಥೋತ್ಸವ, ರಾತ್ರಿ 7.30: ʼರವಿ ಬಸ್ರೂರ್ ನೈಟ್ಸ್ʼ ವಿಶೇಷ ಸಂಗೀತ ಸಂಜೆ
ಇತರ ಗ್ಯಾಲರಿಗಳು