ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡ ಐವರು ಸ್ಟಾರ್ ಆಟಗಾರರು
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಈ ಸ್ಟಾರ್ ಆಟಗಾರರನ್ನು ಹೊರತುಪಡಿಸಿಯೂ, ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಲ್ಲಿ ಆಡಿದ್ದ ಕ್ರಿಕೆಟಿಗರನ್ನು ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಸ್ಟಾರ್ ಆಟಗಾರರನ್ನು ಬಿಸಿಸಿಐ ಕೈಬಿಟ್ಟಿದೆ.
(1 / 6)
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಕರುಣ್ ನಾಯರ್, ಸಾಯಿ ಸುದರ್ಶನ್, ಅರ್ಷದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ, ಆದರೆ, ನಿರೀಕ್ಷೆ ಇದ್ದ ಕೆಲವು ಆಟಗಾರರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
(2 / 6)
ಸರ್ಫರಾಜ್ ಖಾನ್ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ಯಶಸ್ವಿಯಾಗಿದ್ದಾರೆ. ಅದಕ್ಕಾಗಿಯೇ ಅವರು ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. ಸರ್ಫರಾಜ್ ಆಶ್ಚರ್ಯಕರ ರೀತಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡರು. ಆದರೂ, ಬಿಜಿಟಿ ಸರಣಿ ವೇಳೆ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖರು ಇದ್ದ ಕಾರಣಿದಂದ ಅವರನ್ನು ಆಡುವ ಬಳಗದಿಂದ ಕೈಬಿಡಲಾಯಿತು. ಅಂತಿಮವಾಗಿ, ಮುಂಬೈನ ಮಧ್ಯಮ ಕ್ರಮಾಂಕದ ಬ್ಯಾಟರ್ ತಂಡದಿಂದಲೇ ಹೊರಗಿಡಲಾಗಿದೆ. ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತದ ಟೆಸ್ಟ್ ತಂಡದಲ್ಲಿ ಅವರನ್ನು ಸೇರಿಸಿಕೊಳ್ಳಲಾಗಿಲ್ಲ. ಚಿತ್ರ ಕೃಪೆ: ಬಿಸಿಸಿಐ.
(3 / 6)
ಹರ್ಷಿತ್ ರಾಣಾ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪರ್ತ್ ಮತ್ತು ಅಡಿಲೇಡ್‌ನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಅವರು 4 ವಿಕೆಟ್ ಕೂಡಾ ಪಡೆದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶನವೆಂದರೆ 48 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದಿರುವುದು. ಕೆಕೆಆರ್ ವೇಗಿ ಮೂರು ಸ್ವರೂಪಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆದರೆ, ಇದೀಗ ಇಂಗ್ಲೆಂಡ್ ಪ್ರವಾಸಕ್ಕಾಗಿ ರಾಣಾ ಅವರನ್ನು ಟೆಸ್ಟ್ ತಂಡದಲ್ಲಿ ಸೇರಿಸಲಾಗಿಲ್ಲ. ಫೋಟೋ: ಎಪಿ.
(4 / 6)
ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲಿ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ತನುಷ್ ಕೋಟ್ಯಾನ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳಲಾಯಿತು. ಮುಂಬೈ ಸ್ಪಿನ್ನರ್ ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲರು. ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಕರ್ನಾಟಕ ಕರಾವಳಿ ಮೂಲದ ಆಟಗಾರನನ್ನು ಭಾರತ ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಚಿತ್ರ ಕೃಪೆ ಪಿಟಿಐ.
(5 / 6)
ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ರಾಷ್ಟ್ರೀಯ ಆಯ್ಕೆದಾರರು ಸಾಯಿ ಸುದರ್ಶನ್ ಮತ್ತು ದೇವದತ್ ಪಡಿಕ್ಕಲ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಆಗ ಕನ್ನಡಿಗ ಪಡಿಕ್ಕಲ್‌ಗೆ ಆದ್ಯತೆ ನೀಡಿದ್ದರು. ಅವರು ಆಸೀಸ್ ಪ್ರವಾಸದಲ್ಲಿ 1 ಟೆಸ್ಟ್ ಆಡಿದರು. ಆದಾಗ್ಯೂ, ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತದ ಟೆಸ್ಟ್ ತಂಡದಲ್ಲಿ ದೇವದತ್ ಅವರನ್ನು ಹೆಸರಿಸಲಾಗಿಲ್ಲ. ವಾಸ್ತವವಾಗಿ, ಪಡಿಕ್ಕಲ್ ಗಾಯದಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದ ಅವರು ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಫೋಟೋ: ಎಪಿ.
(6 / 6)
ರೋಹಿತ್ ಮತ್ತು ಕೊಹ್ಲಿಯಂತಹ ಇಬ್ಬರು ಹಿರಿಯ ಆಟಗಾರರು ಒಟ್ಟಿಗೆ ನಿವೃತ್ತರಾಗಿರುವುದರಿಂದ, ಶ್ರೇಯಸ್ ಅಯ್ಯರ್ ಅವರಿಗೆ ಮುಂದೆ ಟೆಸ್ಟ್ ತಂಡದ ಬಾಗಿಲು ತೆರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ವಿಶೇಷವಾಗಿ ಕೆಂಪು ಚೆಂಡಿನ ದೇಶೀಯ ಕ್ರಿಕೆಟ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಆದರೂ, ಆಯ್ಕೆದಾರರು ಸದ್ಯಕ್ಕೆ ಶ್ರೇಯಸ್ ಅವರನ್ನು ವೈಟ್-ಬಾಲ್ ಸ್ಪೆಷಲಿಸ್ಟ್ ಎಂದಷ್ಟೇ ಪರಿಗಣಿಸುತ್ತಿದ್ದಾರೆ. ಹೀಗಾಗಿ ಅಯ್ಯರ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಟೆಸ್ಟ್ ತಂಡದಿಂದ ಕಡೆಗಣಿಸಲಾಗಿದೆ. ಚಿತ್ರ ಕೃಪೆ ಪಿಟಿಐ.
(AFP)ಇತರ ಗ್ಯಾಲರಿಗಳು