ಐಪಿಎಲ್ ಇತಿಹಾಸದ ಅತಿ ವೇಗದ ಶತಕ; ಮಿಲ್ಲರ್ ದಾಖಲೆ ಮುರಿದು ಯೂಸುಫ್ ಪಠಾಣ್ ರೆಕಾರ್ಡ್ ಸರಿಗಟ್ಟಿದ ಹೆನ್ರಿಚ್ ಕ್ಲಾಸೆನ್
ಐಪಿಎಲ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಅಗ್ರ 5 ಆಟಗಾರರ ಕ್ಲಬ್‌ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಆಟಗಾರ ಹೆನ್ರಿಚ್ ಕ್ಲಾಸೆನ್ ಸೇರಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟರ್, ಇದೀಗ ತಮ್ಮದೇ ದೇಶದ ಆಟಗಾರ ಡೇವಿಡ್ ಮಿಲ್ಲರ್ ದಾಖಲೆಯನ್ನು ಐಪಿಎಲ್‌ನಲ್ಲಿ ಮುರಿದಿದ್ದಾರೆ.
(1 / 5)
ಐಪಿಎಲ್ 2025ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಆಟಗಾರ ಹೆನ್ರಿಚ್ ಕ್ಲಾಸೆನ್ 39 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿದರು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅವರು 7 ಬೌಂಡರಿ ಮತ್ತು 9 ಸಿಕ್ಸರ್ ಸಿಡಿಸಿದರು. ಕೇವಲ 37 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಇದರೊಂದಿಗೆ ಐಪಿಎಲ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನಕ್ಕೇರಿದ್ದಾರೆ. ಐಪಿಎಲ್ 2010ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 37 ಎಸೆತಗಳಲ್ಲಿ ಶತಕ ಗಳಿಸಿದ ಯೂಸುಫ್ ಪಠಾಣ್ ಅವರ ದಾಖಲೆಯನ್ನು ದಕ್ಷಿಣ ಆಫ್ರಿಕಾ ಬ್ಯಾಟರ್ ಸರಿಗಟ್ಟಿದರು. ಆಗ ಯೂಸುಫ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರು.
(AP)(2 / 5)
ಡೇವಿಡ್ ಮಿಲ್ಲರ್ ದಾಖಲೆ ಬ್ರೇಕ್: ಕ್ಲಾಸೆನ್ ತಮ್ಮ ದೇಶದ ಸಹ ಆಟಗಾರ ಡೇವಿಡ್ ಮಿಲ್ಲರ್ ದಾಖಲೆ ಮುರಿದಿದ್ದಾರೆ. ಮಿಲ್ಲರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. 2013ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಿಲ್ಲರ್ 38 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಮಿಲ್ಲರ್ ಆಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದರು. ಈಗ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್‌ಜಿ) ಪರ ಆಡುತ್ತಿದ್ದಾರೆ.
(BCCI)(3 / 5)
ಎಸ್ಆರ್‌ಎಚ್ ತಂಡದ ಟ್ರಾವಿಸ್ ಹೆಡ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ ಜಂಟಿಯಾಗಿ ಐದನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರೂ ತಲಾ 39 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟರ್ ಹೆಡ್ 2024ರಲ್ಲಿ ಆರ್‌ಸಿಬಿ ವಿರುದ್ಧ ಸ್ಫೋಟಕ ಶತಕ ಗಳಿಸಿದರೆ, ಪ್ರಿಯಾಂಶ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶತಕ ಬಾರಿಸಿದರು.
(BCCI)(4 / 5)
ಐಪಿಎಲ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ, ವೆಸ್ಟ್ ಇಂಡೀಸ್ ದೈತ್ಯಗೇಲ್ 2013ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆರ್‌ಸಿಬಿ ಪರ ಆಡುವಾಗ ಪುಣೆ ವಾರಿಯರ್ಸ್ ವಿರುದ್ಧ ಅವರು ಈ ಸಾಧನೆ ಮಾಡಿದ್ದಾರೆ. ಇದು ಈವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.
ಇತರ ಗ್ಯಾಲರಿಗಳು