WTC: ಸ್ಥಾನ ಗಟ್ಟಿಗೊಳಿಸಿದ ಭಾರತ; ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಗೆಲುವಿನ ಬಳಿಕ ಡಬ್ಲ್ಯೂಟಿಸಿ ಅಂಕಪಟ್ಟಿ ಹೀಗಿದೆ
- WTC Points Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಭಾರತವು ಐದನೇ ಗೆಲುವು ಸಾಧಿಸಿದೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನೊಂದಿಗೆ ಟೀಮ್ ಇಂಡಿಯಾದ ಶೇಕಡಾವಾರು ಅಂಕಗಳು 64.58ಕ್ಕೆ ಏರಿದೆ. ಸದ್ಯ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ರೋಹಿತ್ ಪಡೆ ಎರಡನೇ ಸ್ಥಾನದಲ್ಲಿದೆ.
- WTC Points Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಭಾರತವು ಐದನೇ ಗೆಲುವು ಸಾಧಿಸಿದೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನೊಂದಿಗೆ ಟೀಮ್ ಇಂಡಿಯಾದ ಶೇಕಡಾವಾರು ಅಂಕಗಳು 64.58ಕ್ಕೆ ಏರಿದೆ. ಸದ್ಯ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ರೋಹಿತ್ ಪಡೆ ಎರಡನೇ ಸ್ಥಾನದಲ್ಲಿದೆ.
(1 / 6)
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಅಂಕಪಟ್ಟಿಯಲ್ಲಿ ಭಾರತವು ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ 192 ರನ್‌ಗಳ ಗುರಿ ಪಡೆದ ರೋಹಿತ್ ಪಡೆ, ಯಶಸ್ವಿಯಾಗಿ ಗುರಿ ತಲುಪಿತು. ಆ ಮೂಲಕ ಇನ್ನೂ ಒಂದು ಟೆಸ್ಟ್ ಬಾಕಿ ಇರುವಂತೆಯೇ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತು. ಮುಂದೆ ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಟೆಸ್ಟ್‌ನಲ್ಲಿಯೂ ಭಾರತ ಗೆದ್ದರೆ, ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುವ ಅವಕಾಶವಿದೆ.
(2 / 6)
ಪ್ರಸಕ್ತ ಡಬ್ಲ್ಯುಟಿಸಿ ಆವೃತ್ತಿಯಲ್ಲಿ ಎಂಟು ಪಂದ್ಯಗಳಲ್ಲಿ ಭಾರತವು ಐದನೇ ಗೆಲುವು ತನ್ನದಾಗಿಸಿದೆ. ಇದೀಗ ಟೀಮ್ ಇಂಡಿಯಾದ ಶೇಕಡಾವಾರು ಅಂಕಗಳು 64.58ಕ್ಕೆ ಏರಿದೆ. ಸದ್ಯ ತಂಡವು ಎರಡನೇ ಸ್ಥಾನದಲ್ಲಿ ಮುಂದುವರೆದಿದೆ. ಅತ್ತ ಈ ಸೋಲಿನಿಂದ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಅಂಕಪಟ್ಟಿಯಲ್ಲಿ ಆಂಗ್ಲರು ಎಂಟನೇ ಸ್ಥಾನದಲ್ಲಿದ್ದಾರೆ. ಬೆನ್ ಸ್ಟೋಕ್ಸ್ ಬಳಗದ ಶೇಕಡಾವಾರು ಅಂಕಗಳು ಕೂಡಾ 19.44ಕ್ಕೆ ಕುಸಿದಿದೆ. ಆಡಿದ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಇದು ಇಂಗ್ಲೆಂಡ್ ಎದುರಿಸಿದ ಐದನೇ ಸೋಲು.
(3 / 6)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ ತಂಡವು ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ತಂಡದ ಶೇಕಡಾವಾರು ಅಂಕ 75.00 ಆಗಿದ್ದು, ಆಡಿದ ನಾಲ್ಕು ಪಂದ್ಯಗಳಲ್ಲಿ ಕಿವೀಸ್ ಮೂರನ್ನು ಗೆದ್ದಿದೆ. ಒಂದು ಪಂದ್ಯವನ್ನು ಸೋತಿದೆ. ಅತ್ತ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. ಕಾಂಗರೂಗಳ ಶೇಕಡಾವಾರು ಅಂಕಗಳು 55.00 ಆಗಿದೆ.
(4 / 6)
ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನದಲ್ಲಿವೆ. ಬಾಂಗ್ಲಾದೇಶ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ತಲಾ ಒಂದು ಸೋಲು ಹಾಗೂ ಗೆಲುವುಗಳು. ತಂಡದ ಶೇಕಡಾವಾರು ಅಂಕವು 50.00 ಆಗಿದೆ. ಪಾಕಿಸ್ತಾನವು 5 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 2 ಗೆಲುವು ಮತ್ತು 3 ಸೋಲು ಕಂಡಿದೆ. ತಂಡದ ಶೇಕಡಾವಾರು ಅಂಕ 36.66 ಆಗಿದೆ. ವೆಸ್ಟ್ ಇಂಡೀಸ್ ತಂಡವು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡರಲ್ಲಿ ಸೋತು 1 ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ ಕೆರಿಬಿಯನ್ನರ ಬಳಿ 33.33 ಶೇಕಡಾ ಅಂಕಗಳಿವೆ.
(5 / 6)
ದಕ್ಷಿಣ ಆಫ್ರಿಕಾ ಏಳನೇ ಸ್ಥಾನದಲ್ಲಿದೆ. ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿರುವ ಹರಿಣಗಳು ಕೇವಲ ಒಂದು ಪಂದ್ಯ ಗೆದ್ದಿದ್ದಾರೆ. ಉಳಿದ ಮೂರು ಪಂದ್ಯಗಳಲ್ಲಿ ತಂಡ ಸೋತಿದೆ. ದಕ್ಷಿಣ ಆಫ್ರಿಕಾದ ಶೇಕಡಾವಾರು ಅಂಕಗಳು 25 ಮಾತ್ರ. ಇಂಗ್ಲೆಂಡ್ ತಂಡ 8 ಹಾಗೂ ಶ್ರೀಲಂಕಾ ಒಂಬತ್ತನೇ ಸ್ಥಾನದಲ್ಲಿದೆ. ಲಂಕಾ ತಂಡಕ್ಕೆ ಇನ್ನೂ ಪಾಯಿಂಟ್ಸ್ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ಇತರ ಗ್ಯಾಲರಿಗಳು