Sankranti 2024: ಸಂಕ್ರಾಂತಿ ದಿನ ರಾಸುಗಳಿಗೆ ಕಿಚ್ಚು ಹಾಯಿಸುವ ಖುಷಿ, ಮೈಸೂರು ಮಂಡ್ಯ ಭಾಗದಲ್ಲಿನ ಸಡಗರ ಹೀಗಿತ್ತು
- ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ವರ್ಷವಿಡೀ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ರಾಸುಗಳಿಗೆ ವಿಶೇಷ ಅಲಂಕಾರ, ಪೂಜೆ, ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ವೇಳೆ ಅವುಗಳಿಗೂ ಖುಷಿ ತುಂಬುವ ಸಡಗರ ಹಳೆ ಮೈಸೂರು ಭಾಗದಲ್ಲಿ ಜನಪ್ರಿಯ. ಮೈಸೂರು- ಮಂಡ್ಯದ ಹಲವು ಕಡೆಗಳಲ್ಲಿ ಕಿಚ್ಚು ಹಾಯಿಸುವ ಚಿತ್ರ ನೋಟ ಇಲ್ಲಿದೆ. (ಚಿತ್ರಗಳು: ಜೆ. ಪ್ರತಾಪ್ ಬೆಂಗಳೂರು)
- ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ವರ್ಷವಿಡೀ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ರಾಸುಗಳಿಗೆ ವಿಶೇಷ ಅಲಂಕಾರ, ಪೂಜೆ, ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ವೇಳೆ ಅವುಗಳಿಗೂ ಖುಷಿ ತುಂಬುವ ಸಡಗರ ಹಳೆ ಮೈಸೂರು ಭಾಗದಲ್ಲಿ ಜನಪ್ರಿಯ. ಮೈಸೂರು- ಮಂಡ್ಯದ ಹಲವು ಕಡೆಗಳಲ್ಲಿ ಕಿಚ್ಚು ಹಾಯಿಸುವ ಚಿತ್ರ ನೋಟ ಇಲ್ಲಿದೆ. (ಚಿತ್ರಗಳು: ಜೆ. ಪ್ರತಾಪ್ ಬೆಂಗಳೂರು)
(1 / 7)
ಹಳ್ಳಿಗಳಲ್ಲಿ ಇನ್ನೂ ಜಾನುವಾರು ಪೋಷಿಸುವ ಸಂಸ್ಕೃತಿ ಗಟ್ಟಿಯಾಗಿದೆ. ರಾಸುಗಳೇ ಬಹುತೇಕರಿಗೆ ಸಂಗಾತಿ. ಮನೆ ಮಕ್ಕಳಂತೆಯೇ ಅವುಗಳನ್ನೂ ನೋಡಿಕೊಳ್ಳುವ ಕುಟುಂಬಗಳೂ ಅಧಿಕ. ಹಸು, ಹೋರಿ, ಎತ್ತುಗಳಿರುವ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರೋ ಜೋರು. ಮೈ ಕೊರೆವ ಚಳಿಯನ್ನು ಲೆಕ್ಕಿಸದೇ ನಸುಕಿನಲ್ಲೇ ಜಾನುವಾರು ಮೈ ತೊಳೆಯಲು ಕೆರೆ–ಕಟ್ಟೆ, ನಾಲೆ ಹಾಗೂ ನೀರಿರುವ ಬಳಿ ಹೋಗುವ ಕುಟುಂಬದವರು ಹೋಗುತ್ತಾರೆ.
(2 / 7)
ಪುರುಷರು, ಯುವಕರು ಸಂಭ್ರಮದಿಂದ ರಾಸುಗಳನ್ನು ಸ್ವಚ್ಚ ಮಾಡುತ್ತಾರೆ. ಮೈ ತೊಳೆವ ವೇಳೆಯಲ್ಲೇ ಜಾನುವಾರುಗಳ ಕೊಂಬನ್ನು ಹಸನುಗೊಳಿಸಿ, ಬಣ್ಣ ಹಚ್ಚುತ್ತಾರೆ. ಕಾಲುಗಳು, ದೇಹಕ್ಕೂ ಬಣ್ಣದ ಲೇಪನ ಮಾಡಿ ಅಲಂಕಾರಗೊಳಿಸಿ ಸಂಭ್ರಮಿಸುತ್ತಾರೆ. ಬಹುಪಾಲು ಅರಿಶಿಣ ಇಲ್ಲವೇ ಹಳದಿ ಬಣ್ಣವನ್ನು ಲೇಪಿಸಿದರೆ, ಕೊಂಬುಗಳಿಗೆ ಮಾತ್ರ ಇತರೆ ಬಣ್ಣ ಹಚ್ಚುತ್ತಾರೆ. ಮರಳಿ ಮನೆಗೆ ಕರೆತಂದು ಕೊಂಬುಗಳಿಗೆ ಬಲೂನು, ಜಡೆಗೆ ಕಟ್ಟುವ ಅಲಂಕಾರಿಕ ವಸ್ತುಗಳನ್ನು ಕಟ್ಟಿ ಮೆರಗು ನೀಡುತ್ತಾರೆ.
(3 / 7)
ರಾಸುಗಳಿಗೆ ಹೊದಿಕೆ ಹೊದ್ದಿಸಿ ಹೂವುಗಳನ್ನು ಹಾಕುತ್ತಾರೆ. ನಾಲ್ಕೈದು ತಾಸು ನಿಂತು ಅಣಿಗೊಳಿಸುವ ಆ ರಾಸುಗಳ ಮಿಂಚುವ ಕ್ಷಣಗಳನ್ನುಕಣ್ತುಂಬಿಕೊಳ್ಳುವುದೇ ಚಂದ. ಕರುಗಳಿಗೂ ಅಲಂಕಾರ ಮಾಡಿ ಸಂತಸ ಪಟ್ಟರೆ, ಕೆಲವರು ಕುರಿ, ಮೇಕೆಗಳಿಗೂ ಹೀಗೆಯೇ ಅಲಂಕಾರ ಮಾಡುವುದೂ ಇದೆ.
(4 / 7)
ಮಧ್ಯಾಹ್ನದ ಊಟದ ನಂತರ ಶುರುವಾಗೋದು ಕಿಚ್ಚು ಹಾಯಿಸುವ ಖುಷಿ. ಗ್ರಾಮದ ದೇವಸ್ಥಾನದ ಬಳಿ ಕಿಚ್ಚು ಹಾಯಿಸೋದು ಹಿರಿಯರು, ಕಿರಿಯರನ್ನು ಒಟ್ಟಿಗೆ ಕರೆತಂದಿದ್ದು ನೋಡಲು ಚೆಂದ. ಎತ್ತುಗಳೊಂದಿಗೂ ತಾವು ಹೊಸ ಬಟ್ಟೆ ಹಾಕಿಕೊಂಡು ಬರುವವರೂ ಅಧಿಕ. ಈಗಲೂ ಇದು ಹಳೆ ಮೈಸೂರು ಭಾಗದಲ್ಲಿ ಬಲು ಜನಪ್ರಿಯ.ಅಲಂಕೃತ ಜಾನುವಾರುಗಳನ್ನು ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ.,
(5 / 7)
ಒಂದೆಡೆ ಹುಲ್ಲು ಹರಡಿ, ಅದಕ್ಕೆ ಬೆಂಕಿ ಹಾಕಿ, ಅದರಿಂದ ಹೊರ ಬರುವ ಕಿಚ್ಚು ಹಾಯಿಸುವುದು ಮೈಸೂರು ಭಾಗದ ಸಂಕ್ರಾಂತಿಯ ಸಂಭ್ರಮ–ವೈಶಿಷ್ಟ್ಯದಲ್ಲೊಂದು. ಎತ್ತುಗಳನ್ನು ಮೊದಲು ಬೆಂಕಿಯ ಮೇಲೆ ಹಾರುವಂತೆ ಮಾಡಲಾಗುತ್ತದೆ. ಎತ್ತುಗಳ ನಂತರ, ಹಸುಗಳು, ಎಮ್ಮೆಗಳು ಮತ್ತು ಕುರಿಗಳಂತಹ ಇತರ ಜಾನುವಾರುಗಳು ಬೆಂಕಿಯಲ್ಲಿ ಉಳಿದಿದ್ದನ್ನು ಅಡ್ಡಲಾಗಿ ನಡೆಯುವಂತೆ ಮಾಡಲಾಗುತ್ತದೆ. ಜಾನುವಾರುಗಳ ಮಾಲೀಕರು ಪ್ರಾಣಿಗಳೊಂದಿಗೆ ಬೆಂಕಿಯನ್ನು ದಾಟುತ್ತಾರೆ.
(6 / 7)
ರಾಸುಗಳಿಗೂ ಚಳಿಗಾಲದಲ್ಲಿ ತಗುಲಿರಬಹುದಾದ ಉಣ್ಣಿ ಮತ್ತು ಚಿಗಟಗಳನ್ನು ಸ್ವಚ್ಛಗೊಳಿಸಿ ಸಂಜೆ ಕಿಚ್ಚು ಹಾಯಿಸುವ ಮೂಲಕ ದೂರವಾಗಿಸುವ ಉದ್ದೇಶ ಕಿಚ್ಚು ಹಾಯಿಸುವ ಸಂಪ್ರದಾಯದ ಹಿಂದೆ ಇದೆ. ಬೆಂಕಿ ಮತ್ತು ಹೊಗೆಯು ಅವುಗಳ ದೇಹಕ್ಕೆ ಚೈತನ್ಯ ನೀಡಲಿ. ಮುಂದಿನ ವರ್ಷವಿಡೀ ನಮ್ಮ ಬದುಕನ್ನು ಹಸನು ಮಾಡುತ್ತಾ ರಾಸುಗಳೂ ಖುಷಿಯಾಗರಲಿ ಎನ್ನುವ ಸದಾಶಯವೂ ಇದೆ.
ಇತರ ಗ್ಯಾಲರಿಗಳು