Signs vs Scams: ಮೀನವೋ ಮೇಷವೋ, ನಿಮ್ಮ ರಾಶಿ ಯಾವುದೇ ಇದ್ದರೂ ಸೈಬರ್ ವಂಚಕರ ಬಳಿ ಇರುತ್ತೆ ಹಣಕಾಸು ಜಾತಕ, 2025ರ ಸೈಬರ್ ವಂಚನೆಗಳಿವು
Zodiac Signs vs Scams: ನಿತ್ಯವೂ ದ್ವಾದಶ ರಾಶಿ ಭವಿಷ್ಯ ಗಮನಿಸದೇ ಇರುವವರ ಸಂಖ್ಯೆ ಕಡಿಮೆ. ಅದೇನೇ ಇರಲಿ, ಮೀನವೋ ಮೇಷವೋ, ಒಟ್ಟಿನಲ್ಲಿ ನಿಮ್ಮ ರಾಶಿ ಯಾವುದೇ ಇದ್ದರೂ ಸೈಬರ್ ವಂಚಕರ ಬಳಿ ಹಣಕಾಸು ಜಾತಕ ಇದ್ದೇ ಇರುತ್ತೆ. ಹಾಗಾಗಿ 2025ರ ಸೈಬರ್ ವಂಚನೆ ವಿಧಾನಗಳ ಬಗ್ಗೆ, ವಂಚನೆಗೆ ಒಳಗಾದರೆ ಏನು ಮಾಡಬೇಕು ಎಂಬುದನ್ನು 12 ರಾಶಿಯವರೂ ತಿಳ್ಕೊಂಡಿರಬೇಕಾದ್ದು ಅಗತ್ಯ.
(1 / 14)
ಹೊಸ ವರ್ಷದ ಅಂದರೆ 2025 ಸೈಬರ್ ವಂಚನೆಯ ಭವಿಷ್ಯ ತಿಳ್ಕೊಂಡಿಲ್ಲ ಅಲ್ವ, ಗ್ರಹಗತಿಗಳಿಗೆ ಅನುಗುಣವಾಗಿ ರಾಶಿಚಕ್ರಗಳ ಮೇಲೆ ಪರಿಣಾಮ ಬೀರುವಾಗ ವಂಚನೆಗೆ ಒಳಗಾಗಬಹುದು ಎಂಬ ಜ್ಯೋತಿಷ್ಯದ ವಿಚಾರವನ್ನು ಒಪ್ಪಿಕೊಳ್ಳಬಹುದಾದರೂ, ನಾವು ಜಾಗೃತರಾಗಿ ಇರಬೇಕಾದ್ದು ಮುಖ್ಯ. ಸೈಬರ್ ವಂಚಕರ ಬಳಿ ಹಲವರ ಹಣಕಾಸು ಜಾತಕ ಇರಬಹುದು. ನಾನಾ ವಿಧಾನಗಳ ಮೂಲಕ ಆ ವಂಚಕರು ಹಣ ದೋಚುವ ಕೆಲಸ ಮಾಡುತ್ತಾರೆ. ಆದ್ದರಿಂದ ಇಲ್ಲಿ ರಾಶಿಗನುಗುಣವಾಗಿ ವಿಧಾನಗಳ ಕಿರುಪರಿಚಯ ನೀಡಿದ್ದರೂ, ಎಲ್ಲ ರಾಶಿಯವರಿಗೂ ಅನ್ವಯಿಸುವಂಥದ್ದು ಎಂಬುದನ್ನು ಗಮನಿಸಬೇಕು.
(2 / 14)
ಮೇಷ ರಾಶಿ: ಇದು ಯಶಸ್ಸಿನ ವರ್ಷ, ಆದರೆ, ನೀವು ಲಾಟರಿ ಗೆದ್ದುಕೊಂಡಿದ್ದೀರಿ, ಹಣ ಪಡ್ಕೊಳ್ಳಿ ಎಂಬ ಸಂದೇಶ ನಿಮ್ಮ ಮೊಬೈಲ್‌ಗೆ ಬಂದರೆ ಖುಷಿಯಲ್ಲಿ ಮೈಮರೆಯಬೇಡಿ, ಎಚ್ಚರದಿಂದಿರಿ! ನೀವು ಲಾಟರಿ ಖರೀದಿಸದೇ ಇದ್ದರೆ, ನೀವು ಗೆಲ್ಲುವುದು ಹೇಗೆ, ಒಮ್ಮೆ ನಿಧಾನವಾಗಿ ಆಲೋಚಿಸಿ. ಮತ್ತೂ ಅವರು ಲಾಟರಿ ಗೆದ್ದಿರುವುದಾಗಿ ಹೇಳಿದರೆ ಅದು ಸೈಬರ್ ವಂಚನೆ ಆಗಿರಬಹುದು, ನಿಮ್ಮ ದುಡ್ಡು ಜೋಪಾನ ಮಾಡಿಕೊಳ್ಳಿ
(3 / 14)
ವೃಷಭ ರಾಶಿ: ದೊಡ್ಡ ಗಳಿಕೆಯ ಆಮಿಷಗಳು ಎದುರಾಗಬಹುದು. ಆ ಬಗ್ಗೆ ನೀವು ಜಾಗರೂಕರಾಗಿದ್ದರೆ ಈ ವರ್ಷ ನಿಮ್ಮ ಭವಿಷ್ಯ ಉಜ್ವಲವಾಗಿರಬಹುದು. ಲಕ್ಷ ರೂಪಾಯಿ ಹೂಡಿಕೆ ಮಾಡಿ, ಕೋಟಿ ರೂಪಾಯಿ ಗಳಿಸಿ ಎಂಬಿತ್ಯಾದಿ ಎಸ್‌ಎಂಎಸ್, ವಾಟ್ಸ್‌ಆಪ್ ಮೆಸೇಜ್ ಬಂತು ಎಂದು ತೆರೆದು ನೋಡಬೇಡಿ. ಅಪರಿಚಿತರ ಹೂಡಿಕೆ ಸಲಹೆಗಳಿಂದ, ಅಪರಿಚಿತ ಹೂಡಿಕೆ ಗುಂಪುಗಳಿಂದ ದೂರ ಇರಿ. ಬುದ್ಧಿವಂತಿಕೆಯಿಂದ ಸೆಬಿ ಪ್ರಮಾಣಿಸಿದ ಪ್ಲಾಟ್‌ಫಾರಂಗಳಲ್ಲಿ ಮಾತ್ರ ಹೂಡಿಕೆ ಮಾಡಿ. ವಂಚನೆಗೆ ಒಳಗಾಗದಂತೆ ಜಾಗರೂಕರಾಗಿರಿ,
(4 / 14)
ಮಿಥುನ ರಾಶಿ: 2025ರ ಈ ವರ್ಷವು ನಿಮಗೆ ಉತ್ತಮ ಫಲಗಳನ್ನೇ ನೀಡುವಂಥದ್ದು. ಹಾಗಾಗಿ ನಿಮ್ಮಲ್ಲಿ ಶಕ್ತಿ, ಜೀವನೋತ್ಸಾಹ ಹೆಚ್ಚಿರಬಹುದು. ಗಮನಿಸಬೇಕಾದ ವಿಷಯ ಇಷ್ಟೆ - ಅಪರಿಚಿತ ಸಂಖ್ಯೆಗಳಿಂದ ವಿಡಿಯೋ ಕರೆ ಬಂದರೆ ಸ್ವೀಕರಿಸಬೇಡಿ. ಅಥವಾ ಐವಿಆರ್ ಕರೆ ಬಂದರೆ ಅದನ್ನು ಮುಂದುವರಿಸಬೇಡಿ. ವಿಡಿಯೋ ಕರೆ ಸ್ವೀಕರಿಸಿದರೆ, ಕರೆ ಮಾಡಿದವರು ತಮ್ಮನ್ನು ತಾವು ಸಿಬಿಐ, ಪೊಲೀಸ್, ನಾರ್ಕೋಟಿಕ್ಸ್, ಕಸ್ಟಮ್ಸ್ ಅಥವಾ ಇನ್ಯಾವುದೋ ಇಲಾಖೆಯ ಅಧಿಕಾರಿಗಳೆಂದು ಬಿಂಬಿಸಿಕೊಂಡು ಹಣ ದೋಚಬಹುದು. ಇದು ಡಿಜಿಟಲ್ ಅರೆಸ್ಟ್ ಎಂದು ಕರೆಯಿಸಿಕೊಳ್ಳುತ್ತಿರುವ, ಚಾಲ್ತಿಯಲ್ಲಿರುವ ದೊಡ್ಡ ವಂಚನೆ ಎಂಬುದನ್ನು ಮೊದಲೇ ತಿಳಿದುಕೊಂಡು ಜಾಗರೂಕರಾಗಿರಿ.
(5 / 14)
ಸಿಂಹ ರಾಶಿ: ಈ ವರ್ಷ ಅನೇಕ ಮದುವೆಯ ಆಮಂತ್ರಣಗಳು ಬರಬಹುದು. ಆದರೆ, ಸಾಮಾಜಿಕ ಮಾಧ್ಯಮಗಳ ಮೂಲಕ, ವಿಶೇಷವಾಗಿ ವಾಟ್ಸ್‌ಆಪ್ ಮೂಲಕ ನೀವು ಪಡೆಯುವ ಯಾವುದೇ ಆಹ್ವಾನವನ್ನು ಕುರುಡಾಗಿ ನಂಬಬೇಡಿ! ಅಪರಿಚಿತ ಫೈಲ್‌ಗಳನ್ನು (ವಿಶೇಷವಾಗಿ ಎಪಿಕೆ ಫೈಲ್) ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ, ಅಂತಹ ಫೈಲ್‌ಗಳು ಡೌನ್‌ಲೋಡ್ ಆದರೆ ನಿಮ್ಮ ಫೋನ್‌ನ ನಿಯಂತ್ರಣ ವಂಚಕರ ಕೈಗೆ ಸಿಕ್ಕು, ಅವರು ನಿಮ್ಮ ಡೇಟಾವನ್ನು ಕದಿಯಬಹುದು. ಪ್ರತಿ ಫೈಲ್‌ನ ಸತ್ಯಾಸತ್ಯವನ್ನು ಪರಿಶೀಲಿಸಿ.
(6 / 14)
ಕನ್ಯಾ ರಾಶಿ: ನಿಮಗೆ ಲಕ್ಕಿಡಿಪ್ ಗೆದ್ದ ಸಂದೇಶ ಬರಬಹುದು. ಗಿಫ್ಟ್ ಪಡೆಯಲು ಲಿಂಕ್ ಕ್ಲಿಕ್ ಮಾಡುವಂತೆ ಮೆಸೇಜ್ ಬರಬಹುದು. ಕೊರಿಯರ್ ನೆಪದಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಲು ಯಾರಾದರೂ ನಿಮ್ಮನ್ನು ಕೇಳಿದರೆ, ಜಾಗರೂಕರಾಗಿರಿ! ಅಂತಹ ಲಿಂಕ್‌ಗಳನ್ನು ನಿರ್ಲಕ್ಷಿಸಿ ಮತ್ತು ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಯಾವುದು ಎಂಬುದನ್ನು ಪರಿಶೀಲಿಸಿ, ನಂತರ ಮುಂದುವರಿಯಿರಿ.
(7 / 14)
ತುಲಾ ರಾಶಿ: ಅಪರಿಚಿತ ಕರೆ ಅಥವಾ ಸಂದೇಶದಿಂದ ನೀವು KYC ಅಪ್‌ಡೇಟ್ ಮಾಡಬೇಕು. ಒಟಿಪಿ ಹೇಳಿ ಎಂದು ಫೋನ್ ಕರೆ ಬಂದರೆ ಅದನ್ನು ಸ್ವೀಕರಿಸಬೇಡಿ, ಅದು ನಿಮ್ಮನ್ನು ವಂಚಿಸುವ ವಂಚಕರ ಜಾಲವಿರಬಹುದು. KYC ಅನ್ನು ನವೀಕರಿಸಲು ನಿಮಗೆ ಇದ್ದಕ್ಕಿದ್ದಂತೆ ಒತ್ತಡವಿದ್ದರೆ, ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಅಥವಾ ಸಂಬಂಧಪಟ್ಟ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಿ. ಯಾವುದೇ ಅನುಮಾನಾಸ್ಪದ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಮತ್ತು ನಿಮ್ಮ ದಾಖಲೆಗಳನ್ನು ಅಥವಾ OTP ಅನ್ನು ಎಂದಿಗೂ ಹಂಚಿಕೊಳ್ಳಬೇಡಿ.
(8 / 14)
ವೃಶ್ಚಿಕ ರಾಶಿ: ಆನ್‌ಲೈನ್‌ನಲ್ಲಿ ಯಾರಾದರೂ ನಿಮ್ಮನ್ನು ಸಂಪರ್ಕಿಸುವ ಆಫರ್ ನೀಡಿದರೆ, ಜಾಗರೂಕರಾಗಿರಿ. ಅದು ಹಗರಣವಾಗಿರಬಹುದು! ನಿಮ್ಮ ಆಳ ತಿಳಿವಳಿಕೆ ಮತ್ತು ಜಾಗೃತ ಕಣ್ಣುಗಳು ನಿಮ್ಮ ದೊಡ್ಡ ಶಕ್ತಿಗಳಾಗಿವೆ. ಅಪರಿಚಿತರಿಂದ ಬರುವ ಆಫರ್‌ಗಳ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ಅವುಗಳು ಡೇಟಿಂಗ್ ವಂಚನೆಯ ಜಾಲವಾಗಿರಬಹುದು.
(9 / 14)
ಧನು ರಾಶಿ: ನಿಮಗೆ ವಿದೇಶದಿಂದ ಉದ್ಯೋಗದ ಪ್ರಸ್ತಾಪವಿದ್ದರೆ, ಅದನ್ನು ಕೂಲಂಕಷವಾಗಿ ಪರಿಶೀಲಿಸಿ. ಬಂದ ಇಮೇಲ್ ಅಡ್ರೆಸ್ ಗಮನಿಸಿ. ಅದು ನಕಲಿಯಾಗಿರುವ ಸಾಧ್ಯತೆ ಇದೆ. ಉದ್ಯೋಗ ಪಡೆಯಲು ಹಣ ಪಾವತಿಸಿ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ, ನಕಲಿ ಉದ್ಯೋಗ ಆಫರ್‌ಗಳಿಗೆ ಸಂಬಂಧಿಸಿದ ಆನ್‌ಲೈನ್ ವಂಚನೆಗಳೂ ಹೆಚ್ಚುತ್ತಿವೆ.
(10 / 14)
ಕರ್ಕಾಟಕ ರಾಶಿ: 2025 ಹೊಸ ಸಾಧ್ಯತೆಗಳನ್ನು ತೆರೆದುಬಿಡುವ ವರ್ಷವಾಗಿದ್ದರೂ, ಜಾಗರೂಕರಾಗಿರುವುದು ಮುಖ್ಯ. ಸೋಷಿಯಲ್ ಮೀಡಿಯಾಗಳಲ್ಲಿ ಐಡೆಂಟಿಟಿ ಥೆಫ್ಟ್ ಬಗ್ಗೆ ಎಚ್ಚರದಿಂದಿರಿ. ಆನ್‌ಲೈನ್ ಸುರಕ್ಷತೆ ಬಗ್ಗೆ ಗಮನಹರಿಸಿ. ಸೈಬರ್ ವಂಚಕರು ನಂಬಲರ್ಹ ವ್ಯಕ್ತಿಗಳಂತೆ ನಟಿಸಿ ಹಣ ಕೇಳಬಹುದು. ಅಂತಹ ಕರೆ ಅಥವಾ ಸಂದೇಶ ಬಂದರೆ, ಸರಿಯಾಗಿ ಪರಿಶೀಲಿಸಿ, ಕಣ್ಣು ಮುಚ್ಚಿ ನಂಬಿ ಹಣಕೊಡಬೇಡಿ. ತರಾತುರಿಯಲ್ಲಿ ಯಾವುದೇ ಹಣಕಾಸಿನ ವ್ಯವಹಾರದ ನಿರ್ಧಾರಗಳನ್ನು ಕೈಗೊಳ್ಳಬೇಡಿ.
(11 / 14)
ಮಕರ ರಾಶಿ: ನಿಮ್ಮ ಕನಸುಗಳನ್ನು ಪೂರೈಸಲು ನೀವು ಸಾಲವನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಜಾಗರೂಕರಾಗಿರಿ ಯಾವುದೇ "ಇನ್‌ಸ್ಟಂಟ್ ಲೋನ್" ಕೊಡುಗೆಯು ಆಕರ್ಷಕವಾಗಿ ಕಾಣಿಸಬಹುದು, ಆದರೆ ಇದು ದೊಡ್ಡ ವಂಚನೆಯ ಜಾಲವೂ ಆಗಿರಬಹುದು. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅಚ್ಚುಕಟ್ಟಾಗಿ ಹೂಡಿಕೆ ಮಾಡಿ ಮತ್ತು ಸರಿಯಾದ ಹಣಕಾಸು ಸಲಹೆಗಾರರಿಂದ ಮಾರ್ಗದರ್ಶನ ಪಡೆಯಿರಿ. ಕಡಿಮೆ ಲೋನ್ ಪಡೆದರೂ ಅದನ್ನು ಪಾವತಿಸಲಾಗದೇ ನಾನಾ ರೀತಿಯ ಕಿರುಕುಳ ಎದುರಿಸಿ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಹೀಗಾಗಿ ಹುಷಾರಾಗಿರಿ.
(12 / 14)
ಕುಂಭ ರಾಶಿ: ಡೀಪ್ ಫೇಕ್ ಡಿಜಿಟಲ್ ಜಗತ್ತಿನಲ್ಲಿ ಹೊಸ ಮತ್ತು ಅಪಾಯಕಾರಿ ಸವಾಲಾಗಿ ಹೊರಹೊಮ್ಮುತ್ತಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಅಪರಿಚಿತರು ವೀಡಿಯೊ ಅಥವಾ ಸಂದೇಶದ ಮೂಲಕ ನಿಮ್ಮ ಅಭಿಪ್ರಾಯವನ್ನು ಬದಲಾಯಿಸಲು ಪ್ರಯತ್ನಿಸಿದರೆ, ಪರಿಶೀಲಿಸದೆ ಅದನ್ನು ಸ್ವೀಕರಿಸಬೇಡಿ. ಸ್ಕ್ಯಾಮರ್‌ಗಳು ನಕಲಿ ವೀಡಿಯೊಗಳನ್ನು ರಚಿಸಲು ಡೀಪ್ ಫೇಕ್ ತಂತ್ರಜ್ಞಾನವನ್ನು ಬಳಸಬಹುದು ಅಥವಾ ನಿಜವಾಗಿಯೂ ಅದು ನಮ್ಮದೇ ವಿಡಿಯೋದಂತೆ ಕಾಣಬಹುದು. ಇತ್ತೀಚೆಗೆ ನಟಿ ರಶ್ಚಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಬಂದದ್ದು ನೆನಪಿರಬಹುದು.
(13 / 14)
ಮೀನ ರಾಶಿ: ನೀವು ಪ್ರಯಾಣಿಸಲು ಯೋಜಿಸುತ್ತಿದ್ದರೆ, ನಕಲಿ ವೆಬ್‌ಸೈಟ್‌ಗಳು ಮತ್ತು ಸಂಖ್ಯೆಗಳ ಬಗ್ಗೆ ಎಚ್ಚರದಿಂದಿರಿ! ಪ್ರವಾಸ, ಪ್ರಯಾಣದ ವೇಳೆ ಸರಿಯಾದ ವೆಬ್‌ಸೈಟ್, ಸಹಾಯವಾಣಿ ಸಂಖ್ಯೆಗಳನ್ನು ದಾಖಲು ಮಾಡಿಕೊಂಡಿರಿ. ನಕಲಿ ವೆಬ್‌ಸೈಟ್, ಸಹಾಯವಾಣಿ ಸಂಪರ್ಕಿಸಿದರೆ ಹಣ ಕಳೆದುಕೊಳ್ಳಬೇಕಾದೀತು ಜೋಪಾನ. ಮಹಾ ಕುಂಭಮೇಳಕ್ಕೆ ಹೋಗುವಿರಾದರೆ, ಅದಕ್ಕೆ ಸಂಬಂಧಿಸಿದ ವಾಟ್ಸ್‌ಆಪ್ ಚಾಟ್‌ಬೋಟ್ "ಕುಂಭ ಸಹಾಯ್" ಇದೆ. ಅಧಿಕೃತ ವೆಬ್‌ಸೈಟ್ ಕೂಡ ಇದೆ ಅದನ್ನು ಗಮನಿಸಿ.
(14 / 14)
ಗಮನಿಸಿ: ಮೀನವೋ ಮೇಷವೋ, ನಿಮ್ಮ ರಾಶಿ ಯಾವುದೇ ಇದ್ದರೂ 2025ರಲ್ಲಿ ಸೈಬರ್ ವಂಚನೆ ತಿಳ್ಕೊಂಡಿರಿ. ಸೈಬರ್ ವಂಚಕರ ಬಳಿ ನಿಮ್ಮ ಹಣಕಾಸಿನ ಜಾತಕವಿರಬಹುದು. ಸೈಬರ್ ವಂಚನೆಗೆ ಒಳಗಾಗದಂತೆ ಜಾಗೃತಿ ಮೂಡಿಸುವುದಕ್ಕಾಗಿ ಸೈಬರ್ ದೋಸ್ತ್ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡ ಮಾಹಿತಿಯನ್ನು ಇಲ್ಲಿ ಕನ್ನಡದ ಓದುಗರಿಗಾಗಿ ಒದಗಿಸಲಾಗಿದೆ. ಸೈಬರ್ ವಂಚನೆಗೊಳಗಾದರೆ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ ಅಥವಾ cybercrime.gov.in ತಾಣದಲ್ಲಿ ದೂರು ಸಲ್ಲಿಸಿ. ಇನ್ನಷ್ಟು ಡಿಜಿಟಲ್ ಜಾಗೃತಿ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
ಇತರ ಗ್ಯಾಲರಿಗಳು