ಡಾಕ್ಟರ್ ಆಗಬೇಕು ಎಂದು ಕನಸು ಕಂಡಿದ್ದ ಅರವಿಂದ್ ಕೇಜ್ರಿವಾಲ್, 3 ಸಲ ದೆಹಲಿ ಮುಖ್ಯಮಂತ್ರಿಯಾದರು, ಇಲ್ಲಿವೆ 10 ಆಸಕ್ತಿದಾಯಕ ವಿಷಯಗಳು
ದೆಹಲಿಯ ಜನಸಾಮಾನ್ಯರಲ್ಲಿ ತಾನೂ ಒಬ್ಬ ಎಂದು ನಂಬಿಸಿದ್ದ ಅರವಿಂದ್ ಕೇಜ್ರಿವಾಲ್ ಇಂದು (ಫೆ 8) ಭಾರಿ ಸೋಲು ಕಂಡಿದ್ದಾರೆ. ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅವರ ಬದುಕಿನ ಏಳು ಬೀಳುಗಳ ಪ್ರಮುಖ 10 ಅಂಶಗಳು ಇಲ್ಲಿವೆ.
(1 / 14)
ರಾಜಕೀಯವಾಗಿ ಮಹತ್ವಾಕಾಂಕ್ಷಿಯಾಗಿದ್ದ ಅರವಿಂದ್ ಕೇಜ್ರಿವಾಲ್ ರಾಜಕಾರಣಕ್ಕೆ ಇಳಿಯುವ ಮೊದಲು ನಾಗರಿಕ ಸೇವಾ ಅಧಿಕಾರಿಯಾಗಿದ್ದರು. ಸಾಮಾಜಿಕ ಕಾರ್ಯಕರ್ತರಾಗಿ ಕೂಡ ಗುರುತಿಸಿಕೊಂಡಿದ್ದರು. ಜನ ಲೋಕಪಾಲ ಕಾಯಿದೆ ಜಾರಿಯಾಗಬೇಕು, ಭ್ರಷ್ಟಾಚಾರ ಮುಕ್ತ ಆಡಳಿತ ಬರಬೇಕು ಎಂದು ಜನಸಾಮಾನ್ಯರಂತೆ ಹೇಳುತ್ತ ಆಮ್ ಆದ್ಮಿ ಪಾರ್ಟಿ ಸ್ಥಾಪಿಸಿದ್ದರು. ಅವರ ಬದುಕಿನ ಆಸಕ್ತಿದಾಯಕ 10 ಅಂಶಗಳು ಇಲ್ಲಿವೆ.
(PTI)(2 / 14)
ಅರವಿಂದ್ ಕೇಜ್ರಿವಾಲ್ ಹರಿಯಾಣದ ಹಿಸಾರ್‌ನಲ್ಲಿ 1968ರ ಆಗಸ್ಟ್ 16 ರಂದು ಜನಿಸಿದರು. ಗೋವಿಂದ ರಾಮ್ ಕೇಜ್ರಿವಾಲ್ (ಎಲೆಕ್ಟ್ರಿಕಲ್ ಎಂಜಿನಿಯರ್) ಮತ್ತು ಗೀತಾ ದೇವಿ ದಂಪತಿಯ ಮೂವರು ಮಕ್ಕಳ ಪೈಕಿ ಮೊದಲನೇಯವರು ಅರವಿಂದ್.
(@AamAadmiParty)(3 / 14)
1985 ರಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ನಂತರ, ಅರವಿಂದ್ ಕೇಜ್ರಿವಾಲ್ ತನ್ನ ಮೊದಲ ಪ್ರಯತ್ನದಲ್ಲಿ ಐಐಟಿ ಪ್ರವೇಶ ಪರೀಕ್ಷೆ ಉತ್ತೀರ್ಣರಾದರು. ಅವರ ಶೈಕ್ಷಣಿಕ ಪ್ರಯಾಣವು ಅವರನ್ನು ಐಐಟಿ ಖರಗ್‌ಪುರಕ್ಕೆ ಕರೆದೊಯ್ಯಿತು, ಅಲ್ಲಿ ಅವರು ತಮ್ಮ ಎಂಜಿನಿಯರಿಂಗ್ ಪದವಿಯನ್ನು ಪಡೆದರು.
(@AamAadmiParty)(4 / 14)
ಅರವಿಂದ್ ಕೇಜ್ರಿವಾಲ್ ಆರಂಭದಲ್ಲಿ ವೈದ್ಯರಾಗಬೇಕೆಂದು ಕನಸು ಕಂಡರು. ಆದರೆ, ಬದುಕಿನ ಬದಲಾದ ಸನ್ನಿವೇಶದಲ್ಲಿ ವ್ಯಾಸಂಗಕ್ಕಾಗಿ ಎಂಜಿನಿಯರಿಂಗ್ ಆಯ್ಕೆ ಮಾಡಿದರು. ಅವರು ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ 1989 ರಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಪದವಿ ಪಡೆದರು.
(PTI)(5 / 14)
ಎಂಜಿನಿಯರಿಂಗ್ ಪದವಿ ಬಳಿಕ ಅರವಿಂದ್ ಕೇಜ್ರಿವಾಲ್ 1989 ರಿಂದ ಮೂರು ವರ್ಷ ಟಾಟಾ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡಿದರು. 1992 ರಲ್ಲಿ, ಅವರು ತಮ್ಮ ಕಾರ್ಪೊರೇಟ್ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ತಮ್ಮ ಮೊದಲ ಪ್ರಯತ್ನದಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯನ್ನು (ಯುಪಿಎಸ್ಸಿ) ಯಶಸ್ವಿಯಾಗಿ ಉತ್ತೀರ್ಣರಾದರು.
(@AamAadmiParty)(6 / 14)
ಆದಾಯ ತೆರಿಗೆ ಇಲಾಖೆಯಲ್ಲಿ ಕಂದಾಯ ಸೇವಾ ಅಧಿಕಾರಿಯಾಗಿ ಕೆಲಸ ಶುರು ಮಾಡಿದ ಅರವಿಂದ್ ಕೇಜ್ರಿವಾಲ್, ಸಾಮಾಜಿಕ ಕಾರ್ಯಕರ್ತರಾಗಿ ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಪರಿವರ್ತನ್ ಎಂಬ ಎನ್‌ಜಿಒ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಪರಿವರ್ತನ್ ಜನರಿಗೆ ಸರ್ಕಾರಿ ಸೇವೆ ಪಡೆಯಲು ನೆರವಾಗುತ್ತಿತ್ತು.
(PTI)(7 / 14)
ಮಾಹಿತಿ ಹಕ್ಕುಕಾಯಿದೆ ಪರವಾಗಿ ಕೆಲಸ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೆ ಈ ಕಾರ್ಯಕ್ಕಾಗಿ 2006ರಲ್ಲಿ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿ (Ramon Magsaysay Award for Emergent Leadership) ಪಡೆದುಕೊಂಡರು.
(PTI)(8 / 14)
2006ರ ಫೆಬ್ರವರಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿದರು. ಪೂರ್ಣ ಪ್ರಮಾಣದಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸುವುದಾಗಿ ಹೇಳಿದರು. ಪಬ್ಲಿಕ್ ಕಾಸ್ ರೀಸರ್ಚ್ ಫೌಂಡೇಶನ್ ಅನ್ನು ಸ್ಥಾಪಿಸಿದರು. ಆರಂಭಿಕ ಹಣವಾಗಿ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿಯ ಹಣವನ್ನು ಬಳಸಿಕೊಂಡರು.
(@AamAadmiParty)(9 / 14)
2011-12ರಲ್ಲಿ ಜನ್ ಲೋಕಪಾಲ್ ಕಾಯಿದೆ ಜಾರಿಗೊಳಿಸಬೇಕು, ಭ್ರಷ್ಟಾಚಾರ ನಿಗ್ರಹಿಸಬೇಕು ಎಂದು ಆಗ್ರಹಿಸಿದ್ದ ಅಣ್ಣಾ ಹಜಾರೆ ಅವರ ಚಳವಳಿಗೆ ಸೇರ್ಪಡೆಯಾದ ಅರವಿಂದ್ ಕೇಜ್ರಿವಾಲ್ ಬಹುಬೇಗ, ಚಳವಳಿಯ ಮುಂಚೂಣಿಗೆ ಬಂದರು. ಜನಸಾಮಾನ್ಯರ ಪರವಾಗಿರುವ ಅಣ್ಣಾ ಹಜಾರೆ ಅವರ ಉತ್ತರಾಧಿಕಾರಿಯಂತೆ ಕಂಡುಬಂದರು.
(Ishant)(10 / 14)
2012ರಲ್ಲಿ ರಾಜಕೀಯ ಪ್ರವೇಶ ಇಂಗಿತ ವ್ಯಕ್ತಪಡಿಸಿದ ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಾರ್ಟಿ (ಎಎಪಿ) ಸ್ಥಾಪಿಸಿದರು. ರಾಜಕಾರಣಿಯಾಗಿ ತಮ್ಮನ್ನು ಬದಲಾಯಿಸಿಕೊಂಡು, ಆಡಳಿತದಲ್ಲಿ ಬದಲಾವಣೆ ತರಲು ಮುಂದಾದರು. ಬಹುಬೇಗ ಜನ ಸಾಮಾನ್ಯರ ಬೆಂಬಲ ಗಿಟ್ಟಿಸಿಕೊಂಡರು.
(AAP-X)(11 / 14)
2013ರ ದೆಹಲಿ ಚುನಾವಣೆಯಲ್ಲಿ ಜನ ಕೇಂದ್ರಿತ ನಾಯಕತ್ವದ ಮೂಲಕ ಗಮನಸೆಳೆದರು. ಅಧ್ಯಕ್ಷ ಸ್ಥಾನದ ಬದಲು ಎಎಪಿಯ ರಾಷ್ಟ್ರೀಯ ಸಂಚಾಲಕರಾದರು. ಪಕ್ಷ ಸಂಘಟನೆಯಲ್ಲೂ ಜನ ಸಾಮಾನ್ಯರ ಕೇಂದ್ರಿತವಾಗಿಯೇ ಮುಂದುವರಿದರು.
(PTI)(12 / 14)
ಮೊದಲ ಚುನಾವಣೆಯಲ್ಲೇ 70 ಸ್ಥಾನಗಳ ಪೈಕಿ 28 ಸ್ಥಾನ ಗೆದ್ದು ಎರಡನೇ ಅತಿದೊಡ್ಡ ಪಕ್ಷವಾಯಿತು ಎಎಪಿ. 2015ರ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನ ಗೆದ್ದು ಇತಿಹಾಸ ನಿರ್ಮಿಸಿತು. ಅವರ ಆಡಳಿತವು ಸಾರ್ವಜನಿಕ ಕಲ್ಯಾಣಕ್ಕೆ ಆದ್ಯತೆ ನೀಡಿದೆ, ಮೂಲಭೂತ ಅಗತ್ಯಗಳನ್ನು ಪೂರೈಸುವ ಮತ್ತು ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
(Hindustan Times)(13 / 14)
ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವದಲ್ಲಿ, ದೆಹಲಿ ಸರ್ಕಾರವು ಆರೋಗ್ಯ ಮತ್ತು ಶಿಕ್ಷಣಕ್ಕೆ ಸಾಕಷ್ಟು ಹಣವನ್ನು ವ್ಯಯಿಸಿತು. ಶಾಲೆಗಳನ್ನು ನಿರ್ಮಿಸಲು ಮತ್ತು ವೈದ್ಯಕೀಯ ಸೇವೆಗಳನ್ನು ಹೆಚ್ಚಿಸುವತ್ತ ಗಮನಹರಿಸಿತು. ಆದರೆ ಬಳಿಕ ಕೋವಿಡ್ ಸಂಕಷ್ಟದ ವೇಳೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವ್ಯಾಪಕ ಟೀಕೆಗೆ ಒಳಗಾದರು. ಅಬಕಾರಿ ನೀತಿ ಜಾರಿಗೊಳಿಸಿ ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟು ಭ್ರಷ್ಟಾಚಾರ ಕೇಸ್‌ನಲ್ಲಿ ಜೈಲು ಸೇರಿದ್ದರು.
(ArvindKejriwal-X)ಇತರ ಗ್ಯಾಲರಿಗಳು