ಗಜೇಂದ್ರಗಡ ಪಟ್ಟೇದಂಚು ಸೀರೆ ಬಹಳ ವಿಶೇಷ, ಹೆಸರು ಹೇಗೆ ಬಂತು, ಕೈಮಗ್ಗದ ಕಾಟನ್ ಸೀರೆ ದರ ಮತ್ತು ಇತರೆ ವಿವರ- ಚಿತ್ರನೋಟ
ಭೌಗೋಳಿಕ ಗುರುತು ಅಂದರೆ ಜಿಐ ಟ್ಯಾಗ್ ಪಡೆದುಕೊಂಡ ಗದಗ ಜಿಲ್ಲೆ ಗಜೇಂದ್ರ ಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘದ ಪಟ್ಟೇದಂಚು ಸೀರೆ ಬಹಳ ಜನಪ್ರಿಯವಾಗಿವೆ. ಕೈಮಗ್ಗದ ಪರಿಶುದ್ಧ ಕಾಟನ್ ಸೀರೆ ದರ ಮತ್ತು ಇತರೆ ವಿವರ ಮತ್ತು ಚಿತ್ರನೋಟ ಇಲ್ಲಿದೆ.
(1 / 13)
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟೇದಂಚು ಸೀರೆಗೆ ಈಗ ಜಿಐ ಟ್ಯಾಗ್ (ಭೌಗೋಳಿಕ ಗುರುತು) ಪಡೆದುಕೊಂಡ ಸಂಭ್ರಮ. ಅಪ್ಪಟ ಕೈಮಗ್ಗದ ಪರಿಶುದ್ಧ ಕಾಟನ್ ಸೀರೆಗೆ 400 ವರ್ಷಗಳ ಇತಿಹಾಸವಿದೆ. ಈ ಕಾಟನ್ ಸೀರೆ ಅದರ ಅಚ್ಚುಕಟ್ಟಾದ ನೇಯ್ಗೆಗೆ ಹೆಸರುವಾಸಿ. ಗದಗ ಸುತ್ತಮುತ್ತ ಮಹಿಳೆಯರು ಇಷ್ಟುಪಟ್ಟು ಉಡುವ ಸೀರೆ ಇದು. ಪಟ್ಟೇದಂಚು ಸೀರೆ ಅಂತ ಹೆಸರು ಯಾಕೆ ಬಂತು, ದರ ಮತ್ತು ಇತರೆ ವಿವರ ತಿಳಿಯೋಣ.
(2 / 13)
ಗದಗ ಜಿಲ್ಲೆಯ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘ ನಮ್ಮ ದೇಶದ ಸ್ವಾತಂತ್ರ್ಯಪೂರ್ವದಲ್ಲೇ ಅಂದರೆ 1944ರಲ್ಲಿ ಸ್ಥಾಪನೆಯಾಗಿದೆ. ಅಂದಿನಿಂದ ಇಂದಿನವರೆಗೂ ಇಲ್ಲಿ ನೇಕಾರರು ಕೈಮಗ್ಗದಲ್ಲೇ ಪರಿಶುದ್ಧ ಹತ್ತಿಯ ನೂಲನ್ನೇ ನೇಯ್ದು ಸೀರೆ ಮಾಡಿ ಮಾರುಕಟ್ಟೆಗೆ ತಲುಪಿಸುತ್ತಿರುವುದು ವಿಶೇಷ. ಇಂತಹ ಕೈಮಗ್ಗದ ಪರಂಪರೆ ಗಜೇಂದ್ರಗಡ ಪಟ್ಟೇದಂಚು ಸೀರೆಗಳದ್ದು.
(3 / 13)
ಗಜೇಂದ್ರಗಡ ಪಟ್ಟೇದಂಚು ಸೀರೆಗಳ ಇತಿಹಾಸ ಕೆದಕಿದರೆ 400 ವರ್ಷಗಳ ಇತಿಹಾಶ ಇದೆ ಎನ್ನುತ್ತದೆ ಸಂಘ. ಸದ್ಯ ಚಾಲ್ತಿಯಲ್ಲಿರುವ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೂ ಮೊದಲೇ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಕೆಲಸವನ್ನು ಇಲ್ಲಿನ ನೇಕಾರರು ಮಾಡುತ್ತ ಬಂದಿದ್ದಾರೆ.
(4 / 13)
ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘದಲ್ಲಿ 130ಕ್ಕೂ ಹೆಚ್ಚು ನೇಕಾರರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 50ಕ್ಕೂ ಹೆಚ್ಚು ಮಹಿಳೆಯರು ಈ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ವಿಶೇಷ. ಕೈಮಗ್ಗದಲ್ಲಿ ಒಂದೊಂದು ಸೀರೆ ನೇಯೋದಕ್ಕೆ 2 ಅಥವಾ ಮೂರು ದಿನ ಬೇಕಾಗುತ್ತದೆ.
(5 / 13)
ಪರಿಶುದ್ಧ ಅಂದರೆ ಶೇಕಡ 100 ಹತ್ತಿ ನೂಲನ್ನೇ ಬಳಸಿಕೊಂಡು ನೇಯ್ಗೆ ಮಾಡಿರುವ ಸೀರೆಗಳಿವು. ಹಗುರ ಹಾಗೂ ಬೇಸಿಗೆಗೆ ಉಡುವುದಕ್ಕೆ ಹೇಳಿ ಮಾಡಿಸಿದಂತೆ ಇರುತ್ತವೆ. ಪೂರ್ಣ ಪ್ರಮಾಣದಲ್ಲಿ ಕುಣಿಮಗ್ಗದಲ್ಲೇ ತಯಾರಿಸಲಾದ ಸೀರೆಗಳಾಗಿದ್ದು ಉತ್ತಮ ಫಿನಿಷಿಂಗ್ ಕೂಡ ಹೊಂದಿರುತ್ತವೆ.
(6 / 13)
ಸುಡು ಬಿಸಿಲು, ಬಿರು ಬೇಸಿಗೆಗೆ ಉಡುವುದಕ್ಕೆ ಹೇಳಿ ಮಾಡಿಸಿದ ಕಾಟನ್ ಸೀರೆಗಳಿವು. ಕಾಟನ್ ಸೀರೆಗಳು ಎಂದರೆ ಕೇಳಬೇಕೆ, ಸರ್ವ ಋತುಗಳಲ್ಲೂ ಶರೀರವನ್ನು ಬೆಚ್ಚಗಿಡುತ್ತವೆ.
(7 / 13)
ಗಜೇಂದ್ರಗಡ ಸೀರೆಗೆ ಪಟ್ಟೇದಂಚು ಸೀರೆ ಹೆಸರಿನ ಖ್ಯಾತಿ ಬಂದದ್ದು ಹೀಗೆ. ಈ ಸೀರೆಗಳ ವಿನ್ಯಾಸ ಗಮನಿಸಿ. ಸಣ್ಣ ಚಚ್ಛೌಕಗಳೊಂದಿಗೆ ದಪ್ಪ ಬಾರ್ಡರ್, ಹೀಗೆ ಪಟ್ಟಿಯ ಅಂಚನ್ನು ಹೊಂದಿರುವ ಸೀರೆಯೇ “ಪಟ್ಟೇದಂಚು” ಸೀರೆ ಎಂದು ಕರೆಯಿಸಿಕೊಂಡಿದೆ.
(8 / 13)
ಕೈಮಗ್ಗದಲ್ಲಿ ಪರಿಶುದ್ಧ ಕಾಟನ್ ಪಟ್ಟೆದಂಚು ಸೀರೆ ಉತ್ಪಾದನೆಗೆ ಸಂಬಂಧಿಸಿದ ಜಿಐ ಟ್ಯಾಗ್ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘಕ್ಕೆ ಸಿಕ್ಕಿದೆ. ಇದು ಸೀರೆಯ ಅಧಿಕೃತ ಗುರುತನ್ನು ದೃಢೀಕರಿಸಿದೆ ಮತ್ತು ಸಂಘದ ಇತಿಹಾಸದ ಹೆಗ್ಗುರುತಾಗಿ ಮೈಲಿಗಲ್ಲು ಸ್ಥಾಪಿಸಲು ನೆರವಾಗಿದೆ ಎಂದು ಸಂಘದ ಅಧ್ಯಕ್ಷ ಅಶೋಕ .ಹನಮಂತಪ್ಪ ವನ್ನಾಲ ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.
(9 / 13)
ಸಿಂಥೆಟಿಕ್ ಡೈಗಳನ್ನು ಅಥವಾ ಯಾಂತ್ರಿಕ ಪ್ರಕ್ರಿಯೆಗೆ ಒಳಗಾಗದೇ ಈ ಪಟ್ಟೇದಂಚು ಸೀರೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಪರಿಸರ ಸ್ನೇಹಿ ಎಂಬ ಕಾರಣಕ್ಕೆ ಮಹಿಳೆಯರು ಇಂದಿಗೂ ಈ ಸೀರೆಗಳನ್ನು ಹುಡುಕಿ ಖರೀದಿಸುತ್ತಿರುತ್ತಾರೆ.
(10 / 13)
ಇಂತಹ ಪರಿಸರ ಸ್ನೇಹಿ ಗಜೇಂದ್ರಗಡ ಪಟ್ಟೇದಂಚು ಸೀರೆಗಳು ದುಬಾರಿಯಲ್ಲ. ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘದಲ್ಲೇ ನೀವು ಖರೀದಿಸುವುದಾದರೆ 900 ರೂಪಾಯಿ ದರದಲ್ಲಿ ಲಭ್ಯವಿದೆ. ಹೊರಗಾದರೆ ಸಾಮಾನ್ಯ ಪಟ್ಟೇದಂಚು ಸೀರೆಗಳು 1200 ರೂಪಾಯಿ ಆಸುಪಾಸಲ್ಲಿ ಹಾಗೂ ಪ್ರೀಮಿಯಂ ಅಥವಾ ಹೇಳಿ ಮಾಡಿಸುವ ನೇಯ್ಗೆ ಸೀರೆಗಳಿಗೆ 1,500 ರೂಪಾಯಿಯಿಂದ 3,000 ರೂಪಾಯಿ ತನಕ ಚಾಲ್ತಿಯಲ್ಲಿದೆ.
(11 / 13)
ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘದ ಸೀರೆಗಳಿಗೆ ಪೈಪೋಟಿ ನೀಡುವುದಕ್ಕೆ ಗಜೇಂದ್ರ ಗಡದಲ್ಲಿ ಖಾಸಗಿ ಕೈಮಗ್ಗಗಳೂ ಇವೆ. ಗಜೇಂದ್ರಗಡ ಪಟ್ಟಣ ಕೈಮಗ್ಗದ ಕಾರಣಕ್ಕೂ ಹೆಸರುವಾಸಿಯಾಗಿದೆ.
(12 / 13)
ಗಜೇಂದ್ರಗಡ ಪಟ್ಟೇದಂಚು ಸೀರೆ 6.2 ಮೀಟರ್ ಉದ್ದ 47 ಇಂಚು ಅಗಲ ಹಾಗೂ ಪಟ್ಟಿ ಸೆರಗು ಹೊಂದಿದೆ. ಸೀರೆ ಸೆರಗಿನ ನಂತರ ಗೊಂಡೆ ಕಟ್ಟು ನೂಲು ಬಿಟ್ಟಿರುವುದು ವಿಶೇಷ. ಸೀರೆಯ ಬಾರ್ಡರ್ ಪಟ್ಟಿಯಾಕಾರದ ಅಂಚು ಗಮನಸೆಳೆಯುತ್ತದೆ. ಇನ್ನು ಬಾಡಿಯಲ್ಲಿ ಸಣ್ಣಕಡ್ಡಿ, ರಾಗಾವಳಿ ಡಿಸೈನ್‌ಗಳು ಗಮನಸೆಳೆಯುತ್ತವೆ. ಉತ್ಕೃಷ್ಟಮಟ್ಟದ ಕೈಮಗ್ಗದ ಕಾಟನ್ ಸೀರೆಯ ತೂಕ 530 ರಿಂದ 560 ಗ್ರಾಂ. 38 ನಮೂನೆಯ ಪಟ್ಟೇದಂಚು ಹೊಂದಿರುವ ಸೀರೆಗಳನ್ನು ಸಂಘ ತಯಾರಿಸುತ್ತಿದೆ.
(13 / 13)
ಗಜೇಂದ್ರಗಡ ಪಟ್ಟೇದಂಚು ಸೀರೆಗಳಿಗೆ ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮಬಂಗಾಳ, ತಮಿಳುನಾಡು, ಕೇರಳ, ಗುಜರಾತ, ಉತ್ತರಪ್ರದೇಶ, ಮಹಾನಗರಗಳಾದ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಮುಂತಾದ ಕಡೆ ಉತ್ತಮ ಮಾರುಕಟ್ಟೆ ಇದೆ ಎಂದು ಸಂಘದ ಕಾರ್ಯದರ್ಶಿ ಮಾರುತಿ ಕಳಕಪ್ಪ ಶಾಬಾದಿ ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ತಿಳಿಸಿದರು. ಸಂಘವನ್ನು ಸಂಪರ್ಕಿಸುವುದಕ್ಕೆ 08123596840 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಇತರ ಗ್ಯಾಲರಿಗಳು