ಹುಸ್ಕೂರು ಮದ್ದೂರಮ್ಮ ಜಾತ್ರೆ; ಅತಿ ಎತ್ತರದ ರಂಗು ರಂಗಿನ ತೇರುಗಳೇ ಆನೇಕಲ್ ಮದ್ದೂರಮ್ಮ ಜಾತ್ರೆಯ ಆಕರ್ಷಣೆ, ಇಲ್ಲಿದೆ ಚಿತ್ರನೋಟ
Huskur Madduramma Jatre: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿರುವ ಹುಸ್ಕೂರು ಮದ್ದೂರಮ್ಮ ದೇವಿ ದೇವಸ್ಥಾನದಲ್ಲಿ ಈ ಬಾರಿ ಮಾರ್ಚ್ 22, 23 ರಂದು ಜಾತ್ರೆ ಸಂಭ್ರಮ ಈ ಜಾತ್ರೆಯ ಆಕರ್ಷಣೆಯೇ ಅತಿ ಎತ್ತರದ ಬಣ್ಣ ಬಣ್ಣದ ತೇರುಗಳು. ಈ ದೇವಸ್ಥಾನದ ಜಾತ್ರಾ ವಿಶೇಷ ಚಿತ್ರನೋಟ ಇಲ್ಲಿದೆ.
(1 / 10)
ಆನೇಕಲ್ ಹುಸ್ಕೂರು ಮದ್ದೂರಮ್ಮ ಜಾತ್ರೆ ಅಂದರೆ ಕುರುಜುಗಳದ್ದೇ ಆಕರ್ಷಣೆ. ಕುರುಜುಗಳು ಅಂದರೆ ತೇರುಗಳು. ಹಿಂದೆಲ್ಲ 15 -16 ತೇರುಗಳು ಜಾತ್ರೆಯಲ್ಲಿ ಪಾಲ್ಗೊಂಡ ಇತಿಹಾಸವಿದೆ. ಈ ಬಾರಿ 6 ತೇರುಗಳಷ್ಟೇ ಇದ್ದವು. ದೇವಸ್ಥಾನದ ಇತಿಹಾಸ, ಕುರುಜುಗಳ ವಿಶೇಷ ಅಂಶಗಳ ವಿವರ ಇಲ್ಲಿದೆ.
(2 / 10)
ಬೆಂಗಳೂರು ನಗರದಿಂದ 15 ಕಿಮೀ ದೂರದಲ್ಲಿರುವ ಆನೇಕಲ್ ತಾಲೂಕು ಹುಸ್ಕೂರು ಗ್ರಾಮದಲ್ಲಿದೆ ಈ ಐತಿಹಾಸಿಕ ಮದ್ದೂರಮ್ಮ ದೇವಿ ದೇವಸ್ಥಾನ. ಗ್ರಾಮೀಣ ಸೊಗಡು ಹೊಂದಿರುವ ಈ ಜಾತ್ರೆಯಲ್ಲಿ ತೇರುಗಳೇ ಪ್ರಮುಖ ಆಕರ್ಷಣೆ. ಮದ್ದೂರಮ್ಮ ದೇವಿ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮದ ಜನರು ತೇರು ಕಟ್ಟಿ ದೇವಸ್ಥಾನದ ಆವರಣಕ್ಕೆ ತಂದು ಜಾತ್ರೆ ನಡೆಸುವುದು ವಾಡಿಕೆ.
(3 / 10)
ಹುಸ್ಕೂರು ಮದ್ದೂರಮ್ಮ ದೇವಾಲಯ 11ನೇ ಶತಮಾನದ್ದು ಎನ್ನುತ್ತಿವೆ ಐತಿಹ್ಯಗಳು, ಹೈದರಾಲಿ, ಟಿಪ್ಪು ಸುಲ್ತಾನ್ ಈ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ ಚಿನ್ನಾಭರಣಗಳನ್ನು ಆಡಳಿತ ಮಂಡಳಿ ದಾಖಲೆಯಾಗಿ ಇಟ್ಟುಕೊಂಡಿದೆ. ಟಿಪ್ಪು ಮತ್ತು ಸೈನಿಕರು ಯಾತ್ರೆ ಮಾಡುವಾಗ ಹುಸ್ಕೂರು ಮದ್ದೂರಮ್ಮ ದೇವಾಲಯದ ಬಳಿ ತಂಗಿದ್ದರು. ಆಗ ಊಟ ಮಾಡಿದ್ದ ಸೈನಿಕರು ವಾಂತಿ ಮಾಡಲಾರಂಭಿಸಿದರು. ದೇವಿಗೆ ಹರಕೆ ಹೊತ್ತುಕೊಂಡ ಬಳಿಕ ಸೈನಿಕರ ಆರೋಗ್ಯ ಸುಧಾರಿಸಿತು ಎಂಬ ಪ್ರತೀತಿ. ಆಗಲೇ ಈ ಚಿನ್ನಾಭರಣ ಕೊಟ್ಟದ್ದು ಎಂದು ಆಡಳಿತ ಮಂಡಳಿ ವಿವರಿಸಿದೆ. ಭದ್ರತಾ ದೃಷ್ಟಿಯಿಂದ ಜಾತ್ರೆ ಮುಗಿದ ಬಳಿಕ ಚಿನ್ನಾಭರಣವನ್ನು ತಾಲೂಕು ಖಜಾನೆಯಲ್ಲಿ ಠೇವಣಿ ಇರಿಸಲಾಗುತ್ತದೆ.
(4 / 10)
ಸಾಮಾನ್ಯವಾಗಿ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಒಂದು ತಿಂಗಳು ಮುಂಚಿತವಾಗಿ ಸುತ್ತಮುತ್ತಲಿನ ಗ್ರಾಮದವರು ತೇರು ಕಟ್ಟಲು ಶುರುಮಾಡುತ್ತಾರೆ. ಇದು ಗ್ರಾಮೀಣ ಸೊಗಡಿನ ಜಾತ್ರೆ. ಗ್ರಾಮೀಣ ಸಂಸ್ಕೃತಿಯ ಪ್ರತೀಕ.
(5 / 10)
ಪ್ರತಿ ತೇರು ಕೂಡ 20 ರಿಂದ 25 ಅಂತಸ್ತು ಇದ್ದು, 100 ಅಡಿಗೂ ಹೆಚ್ಚು ಎತ್ತರವಿರುತ್ತದೆ. ಈ ತೇರನ್ನು ದೇವಸ್ಥಾನದ ಆವರಣಕ್ಕೆ ಎಳೆದು ತರಲು ಎತ್ತುಗಳನ್ನು ಬಳಸಲಾಗುತ್ತದೆ. 50 ರಿಂದ 60 ಜತೆ ಎತ್ತುಗಳನ್ನು ಬಳಸಲಾಗುತ್ತದೆ. ತೇರುಗಳು ದೇವಸ್ಥಾನಕ್ಕೆ ಬರುವುದನ್ನು ನೋಡುವುದೇ ಒಂದು ಆಕರ್ಷಣೆ.
(6 / 10)
ಮದ್ದೂರಮ್ಮ ಜಾತ್ರೆಯ ಮೆರವಣಿಗೆ ಜಾನಪದ ಕಲಾತಂಡಗಳೂ ಇರುತ್ತವೆ. ವೀರಗಾಸೆ ನೃತ್ಯಗಾರರು ಕೂಡ ಇರುತ್ತಾರೆ. ಬಂದೋಬಸ್ತ್ ನೀಡಲು ಬರುವ ಪೊಲೀಸ್ ಸಿಬ್ಬಂದಿ ಕೂಡ ಖುಷಿಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ.
(7 / 10)
ಹಿಂದೊಮ್ಮೆ 15 ತೇರುಗಳು ದೇವಸ್ಥಾನದ ಜಾತ್ರೆಯಲ್ಲಿ ಪಾಲ್ಗೊಂಡ ಇತಿಹಾಸವಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತೇರುಗಳ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಕಾರಣ ಹಲವು. ಈ ಬಾರಿ ಆರು ತೇರುಗಳಷ್ಟೇ ಭಾಗವಹಿಸಿದ್ದವು.
(8 / 10)
ಈ ಬಾರಿ ಶನಿವಾರ ದೇವಸ್ಥಾನದ ಆವರಣ ತಲುಪಿದ ತೇರುಗಳ ಸಂಖ್ಯೆ 2 ಮಾತ್ರ. ಗಟ್ಟಹಳ್ಳಿ, ಸಂಜೀವನಗರ ಗ್ರಾಮದ ತೇರು ಜಾತ್ರೆಯಲ್ಲಿ ಪಾಲ್ಗೊಂಡಿದ್ದವು. ಗಟ್ಟಹಳ್ಳಿ ತೇರು ಇದೇ ಮೊದಲ ಬಾರಿ ಜಾತ್ರೆಯಲ್ಲಿ ಪಾಲ್ಗೊಂಡಿದೆ. ಲಕ್ಷ್ಮೀನಾರಾಯಣಪುರದ ಕುರ್ಜು ಗಾಳಿ–ಮಳೆ ಕಾರಣಕ್ಕೆ ದೇವಾಲಯ ತಲುಪಲು ತಡವಾಗಿದೆ ಎಂದು ಸ್ಥಳೀಯರು ತಿಳಿಸಿದರು. ಕೊಡತಿ ಗ್ರಾಮದ ಕುರ್ಜು ಮಳೆ ಗಾಳಿಯಿಂದಾಗಿ ಚಕ್ರದ ಸಮಸ್ಯೆಯಾಗಿದ್ದರಿಂದ ರಾತ್ರಿ 7ರ ಸುಮಾರಿನ ವರೆಗೂ ಚಕ್ರ ಸರಿಪಡಿಸಲಾಗುತ್ತಿತ್ತು. ಒಟ್ಟು ಐದು ಗ್ರಾಮಗಳ ಕುರ್ಜು ದೇವಾಲಯದ ಆವರಣಕ್ಕೆ ಬರಬೇಕಾಗಿತ್ತು. ಆದರೆ ರಾತ್ರಿ 8ರ ಸುಮಾರಿಗೆ ಎರಡು ಗ್ರಾಮಗಳ ಕುರುಜುಗಳು ತಲುಪಿದ್ದವು.
(9 / 10)
ಹುಸ್ಕೂರು ಮದ್ದೂರಮ್ಮನ ಜಾತ್ರೆ ವೇಳೆ ಶನಿವಾರ (ಮಾರ್ಚ್ 22) ಸಂಜೆ ಭಾರಿ ಗಾಳಿ ಬೀಸಿದ ಕಾರಣ ದೊಡ್ಡನಾಗಮಂಗಲ ಮತ್ತು ರಾಯಸಂದ್ರದ ರಥಗಳು ಧರೆಗೆ ಉರುಳಿದವು. ಈ ದುರಂತದಲ್ಲಿ ಇಬ್ಬರು ಭಕ್ತರು ಮೃತಪಟ್ಟರು.
ಇತರ ಗ್ಯಾಲರಿಗಳು