ಚಿಪ್ ಆಧಾರಿತ 'ಇ-ಪಾಸ್‌ಪೋರ್ಟ್ ಸೇವೆ' ಪ್ರಾರಂಭಿಸಿದ ಕೇಂದ್ರ ಸರ್ಕಾರ; ಪ್ರಯೋಜನ, ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ!
ಡೇಟಾ ಕಳ್ಳತನ ಮತ್ತು ಭದ್ರತೆ ಒದಗಿಸುವ ಸಲುವಾಗಿ ಭಾರತ ಸರ್ಕಾರ ಇ-ಪಾಸ್‌ಪೋರ್ಟ್ ಸೇವೆ ಆರಂಭಿಸಿದೆ. ಇದೀಗ ಕೆಲವೇ ನಗರಗಳಲ್ಲಿ ಈ ಸೇವೆ ಜಾರಿಯಲ್ಲಿದೆ. ಶೀಘ್ರದಲ್ಲೇ ದೇಶಾದ್ಯಂತ ಸೇವೆ ಆರಂಭಿಸಲು ಭಾರತ ಸರ್ಕಾರ ಸಜ್ಜಾಗಿದೆ.
(1 / 10)
ಇತ್ತೀಚೆಗೆ ಪಾಸ್‌ಪೋರ್ಟ್ ಡೇಟಾ ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆ ಅದನ್ನು ತಪ್ಪಿಸುವ ಮತ್ತು ಭದ್ರತೆ ಒದಗಿಸುವ ಸಲುವಾಗಿ ಇ-ಪಾಸ್‌ಪೋರ್ಟ್ ಅನ್ನು ಭಾರತ ಸರ್ಕಾರ ಪರಿಚಯಿಸಿದೆ. ಹೈಟೆಕ್ ಟಚ್ನೊಂದಿಗೆ ಇ-ಪಾಸ್ಪೋರ್ಟ್ಗಳು ಸಾಂಪ್ರದಾಯಿಕ ಕಾಗದದ ಪಾಸ್ಪೋರ್ಟ್ಗಳನ್ನು ಆಧುನಿಕ ಎಲೆಕ್ಟ್ರಾನಿಕ್ ತಂತ್ರಜ್ಞಾನದ ಜೊತೆಗೆ ಸಂಯೋಜಿಸುತ್ತವೆ.
(2 / 10)
2024ರ ಏಪ್ರಿಲ್ 1ರಂದು ಪ್ರಾರಂಭವಾದ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ 2.0 ಆವೃತ್ತಿಯ ಅಡಿಯ ಜೊತೆಗೆ ಪ್ರಾಯೋಗಿಕ ಕಾರ್ಯಕ್ರಮವಾಗಿ ಇ-ಪಾಸ್‌ಪೋರ್ಟ್ ಉಪಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
(3 / 10)
ಪ್ರಸ್ತುತ, ಕೆಲವೇ ನಗರಗಳು ಇ-ಪಾಸ್‌ಪೋರ್ಟ್ ಸೇವೆ ಒದಗಿಸುತ್ತಿವೆ. ಮುಂಬರುವ ದಿನಗಳಲ್ಲಿ ಭಾರತದ ನಗರಗಳಿಗೆ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಯೋಜಿಸಿದೆ.
(4 / 10)
ಇ-ಪಾಸ್‌ಪೋರ್ಟ್ ಎಂಬುದು ಕಾಗದ ಮತ್ತು ಎಲೆಕ್ಟ್ರಾನಿಕ್ ಪಾಸ್‌ಪೋರ್ಟ್‌ನ ಸಂಯೋಜಿತ ಆವೃತ್ತಿಯಾಗಿದೆ. ಇದು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಚಿಪ್ ಹೊಂದಿರುತ್ತದೆ. ಇದು ಪಾಸ್‌ಪೋರ್ಟ್ ಹೊಂದಿರುವವರ ವೈಯಕ್ತಿಕ ವಿವರ, ಬಯೋಮೆಟ್ರಿಕ್ ಮಾಹಿತಿ ಹೊಂದಿರುತ್ತದೆ.
(5 / 10)
ಎಟಿಎಂ ಕಾರ್ಡ್ನಲ್ಲಿ ಇರುವ ಚಿನ್ನದ ಬಣ್ಣದ ಚಿಪ್ನಂತೆಯೇ ಪಾಸ್ಪೋರ್ಟ್ನಲ್ಲೂ ಇರುತ್ತದೆ. ಇ-ಪಾಸ್ಪೋರ್ಟ್ನಿಂದ ಡೇಟಾ ಭದ್ರತೆ ಪ್ರಯೋಜನ ಪಡೆಯಬಹುದು. ಸುರಕ್ಷಿತ ಮತ್ತು ಸುಗಮ ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಇ-ಪಾಸ್ಪೋರ್ಟ್ಗಳು ಜಾಗತಿಕವಾಗಿ ಅಗತ್ಯವಾಗಿವೆ.
(6 / 10)
ಇ-ಪಾಸ್ಪೋರ್ಟ್ಗಳಿಂದ ಇ-ಗೇಟ್ಗಳಲ್ಲಿ ಸಂಪರ್ಕರಹಿತ ಮತ್ತು ಸ್ವಯಂಚಾಲಿತ ಪರಿಶೀಲನೆ ವೇಗಗೊಳಿಸಲು ನೆರವಾಗುತ್ತದೆ. ಇದು ಸಮಯ ಉಳಿಸುವುದರ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡುತ್ತದೆ. ಮಾಹಿತಿ ಕಳ್ಳತನ, ಪಾಸ್‌ಪೋರ್ಟ್ ವಂಚನೆ ಮತ್ತು ಗಡಿಗಳಲ್ಲಿ ಇತರ ಭದ್ರತಾ ಸಮಸ್ಯೆ ತಡೆಗೂ ನೆರವಾಗುತ್ತದೆ.
(7 / 10)
ಇ-ಪಾಸ್‌ಪೋರ್ಟ್ ಕಿರುಪುಸ್ತಕದಲ್ಲಿ ಮುದ್ರಿತ ರೂಪದಲ್ಲಿ ಡೇಟಾ ಮತ್ತು ಡಿಜಿಟಲ್ ಸಹಿ ಮಾಡಿದ ಎಲೆಕ್ಟ್ರಾನಿಕ್ ಚಿಪ್ ಹೊಂದಿರುತ್ತದೆ. ಇದನ್ನು ವಿಶ್ವಾದ್ಯಂತ ಇಮಿಗ್ರೇಷನ್ ಅಧಿಕಾರಿಗಳು ಸುರಕ್ಷಿತವಾಗಿ ದೃಢೀಕರಿಸಲಿದ್ದಾರೆ. ಬಯೋಮೆಟ್ರಿಕ್ ಡೇಟಾದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಡಿಪಾಯವಾಗಿದೆ.
(8 / 10)
ನಾಗ್ಪುರ, ಭುವನೇಶ್ವರ, ಜಮ್ಮು, ಗೋವಾ, ಶಿಮ್ಲಾ, ರಾಯ್‌ಪುರ, ಅಮೃತಸರ , ಜೈಪುರ, ಚೆನ್ನೈ, ಹೈದರಾಬಾದ್, ಸೂರತ್ ಮತ್ತು ರಾಂಚಿಯಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳು ಪ್ರಸ್ತುತ ಭಾರತೀಯ ನಾಗರಿಕರಿಗೆ ಇ-ಪಾಸ್‌ಪೋರ್ಟ್ ಸೇವೆ ಒದಗಿಸುತ್ತಿವೆ. ಶೀಘ್ರದಲ್ಲೇ ಎಲ್ಲಾ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿಗೆ ಇ-ಪಾಸ್‌ಪೋರ್ಟ್ ಸೇವೆ ಒದಗಿಸುತ್ತವೆ.
(9 / 10)
2025ರ ಮಾರ್ಚ್ 3ರಿಂದಲೇ ತಮಿಳುನಾಡಿನಲ್ಲಿ ಈ ಸೇವೆ ಆರಂಭಿಸಿತು. ಚೆನ್ನೈನಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಇ-ಪಾಸ್‌ಪೋರ್ಟ್ ನೀಡಲು ಪ್ರಾರಂಭಿಸಿದ್ದು, ಮಾರ್ಚ್ 22ರ ಹೊತ್ತಿಗೆ 20,729 ಇ-ಪಾಸ್‌ಪೋರ್ಟ್ ಒದಗಿಸಿದೆ.
(10 / 10)
ಇ-ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವುದು ಸುಲಭ. ಈ ಪ್ರಕ್ರಿಯೆಯು ಸಾಮಾನ್ಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದಂತೆಯೇ ಇರುತ್ತದೆ. ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ಗೆ ಭೇಟಿ ನೀಡಿ, ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ಶುಲ್ಕ ಪಾವತಿಸಿ. ಪಾಸ್‌ಪೋರ್ಟ್ ಸೇವಾ ಕೇಂದ್ರ ಅಥವಾ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ. ಅಪಾಯಿಂಟ್‌ಮೆಂಟ್ ವೇಳೆ ನಿಮ್ಮ ಫೋಟೋ, ಫಿಂಗರ್‌ಪ್ರಿಂಟ್ ಪಡೆಯಬಹುದು.
ಇತರ ಗ್ಯಾಲರಿಗಳು