ಒಲಿಂಪಿಕ್ಸ್ ಆಡಬೇಕಿದ್ದ ಭಾರತದ ಗಾಲ್ಫರ್ ದೀಕ್ಷಾ ದಾಗರ್ ಕಾರು ಅಪಘಾತ!
ಭಾರತದ ಗಾಲ್ಫ್ ಆಟಗಾರ್ತಿ ದೀಕ್ಷಾ ದಾಗರ್ ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಕಾರು ಪ್ಯಾರಿಸ್‌ನಲ್ಲಿ ಅಪಘಾತಕ್ಕೀಡಾಗಿದೆ. ಆದರೆ ದೀಕ್ಷಾ ಸದ್ಯ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ಯಾರಿಸ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತದ ಗಾಲ್ಫ್ ಆಟಗಾರ್ತಿ ದೀಕ್ಷಾ ದಾಗರ್ (Diksha Dagar) ಗಾಯಗೊಂಡಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿದ್ದ ಭಾರತದ ಗಾಲ್ಫ್ ಆಟಗಾರ್ತಿ ದೀಕ್ಷಾ, ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಆದರೆ ದೀಕ್ಷಾ ಸದ್ಯ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ನಡೆಯಲಿರುವ ಗೋಲ್ಫ್ ಈವೆಂಟ್‌ನಲ್ಲಿಯೂ ಆಡಲಿದ್ದಾರೆ.
ದೀಕ್ಷಾ, ಅವರ ತಂದೆ-ತಾಯಿ ಮತ್ತು ಸಹೋದರ ಮಂಗಳವಾರ ರಾತ್ರಿ ಇಂಡಿಯಾ ಹೌಸ್‌ನಲ್ಲಿ ನಡೆದ ಸಮಾರಂಭದಿಂದ ಹಿಂದಿರುಗುತ್ತಿದ್ದಾಗ ಮತ್ತೊಂದು ವಾಹನವು ಇವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯ ದೀಕ್ಷಾ ಆರೋಗ್ಯವಾಗಿದ್ದಾರೆ. ಹೀಗಾಗಿ, ಪ್ಯಾರಿಸ್ ಒಲಿಂಪಿಕ್ಸ್ ವೇಳಾಪಟ್ಟಿಯ ಪ್ರಕಾರ ಆಗಸ್ಟ್ 7ರಿಂದ ನಡೆಯಲಿರುವ ಈವೆಂಟ್‌ನಲ್ಲಿ ಆಡಲಿದ್ದಾರೆ. ಅಲ್ಲದೆ ಅಭ್ಯಾಸಕ್ಕೂ ಹೋಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದೀಕ್ಷಾ ಅವರ ತಾಯಿಗೆ ಬೆನ್ನುಮೂಳೆಯ ಭಾಗದಲ್ಲಿ ಗಾಯಗಳಾಗಿರುವ ಸಾಧ್ಯತೆ ಮೇಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳವರೆಗೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.
ದೀಕ್ಷಾ ಅವರ ಪಾಲಿಗೆ ಇದು ಎರಡನೇ ಒಲಿಂಪಿಕ್ ಕ್ರೀಡಾಕೂಟವಾಗಿದೆ. ಮಹಿಳಾ ಗೋಲ್ಫ್ ಸ್ಪರ್ಧೆ ಆಗಸ್ಟ್ 7ರಿಂದ ಆಗಸ್ಟ್ 10 ರವರೆಗೆ ನಡೆಯಲಿದೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 6ನೇ ದಿನವಾದ ಇಂದು ಭಾರತ ಒಂದು ಪದಕ ಗೆದ್ದಿದೆ. ಸ್ವಪ್ನಿಲ್ ಕುಸಾಲೆ ಅವರು ಪುರುಷರ 50 ಮೀಟರ್ ಶೂಟಿಂಗ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದರೊಂದಿಗೆ ಶೂಟಿಂಗ್‌ನಲ್ಲಿ ಭಾರತ ಹ್ಯಾಟ್ರಿಕ್ ಸಾಧನೆ ಮಾಡಿದೆ. ಅತ್ತ ಭಾರತದ ಪುರುಷರ ಹಾಕಿ ತಂಡವು ಬೆಲ್ಜಿಯಂ ವಿರುದ್ಧ 2-1 ಅಂತರದಿಂದ ಸೋಲು ಕಂಡಿದೆ. ಮತ್ತೊಂದೆಡೆ ಮಹಿಳೆಯರ 50 ಕೆಜಿ ವಿಭಾಗದ ಬಾಕ್ಸಿಂಗ್ 16ರ ಸುತ್ತಿನಲ್ಲಿ ಭಾರತದ ನಿಖತ್ ಜರೀನ್ ಸೋತಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಅವರ ಅಭಿಯಾನ ಅಂತ್ಯಗೊಂಡಿದೆ.
ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ, ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡು ನಿರಾಶೆ ಮೂಡಿಸಿದ್ದಾರೆ. ಅತ್ತ ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ.