ನನ್ನನ್ನು ಬದುಕಿಸಲು ಪ್ರಯತ್ನಿಸಿ... ಅಂಗಲಾಚಿದರೂ ಕರಗಲಿಲ್ಲ ವಿಧಿ ಮನಸ್ಸು, ಮ್ಯಾಕ್ಸ್ ನಟ ಶ್ರೀಧರ್ ಇನ್ನಿಲ್ಲ
ಕಳೆದ ಹಲವು ತಿಂಗಳುಗಳಿಂದ ಅನಿರೀಕ್ಷಿತವಾಗಿ ಅನಾರೋಗ್ಯಕ್ಕೆ ತುತ್ತಾಗಿ ನೋವು ಅನುಭವಿಸುತ್ತಿದ್ದ ನಟ ಶ್ರೀಧರ್ ನಾಯ್ಕ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಸೋಮವಾರ) ನಿಧನರಾಗಿದ್ದಾರೆ. ಪಾರು, ಮಂಗಳ ಗೌರಿ ಮದುವೆ, ವಧು ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ, ಮ್ಯಾಕ್ಸ್ ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ಇವರು ನಟಿಸಿದ್ದರು.
(1 / 10)
ಕನ್ನಡದ ಪ್ರತಿಭಾನ್ವಿತ ಕಿರುತೆರೆ ನಟ ಶ್ರೀಧರ್ ನಾಯ್ಕ್ ನಿಧನರಾಗಿದ್ದಾರೆ. ಕಳೆದ ತಿಂಗಳು ಇವರ ಆರೋಗ್ಯ ಸ್ಥಿತಿಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿತ್ತು. ಹೇಗಿದ್ದ ನಟ ಹೇಗಾದ ಎಂದು ಇವರ ಕೃಶವಾದ ಫೋಟೋಗಳು ವೈರಲ್ ಆಗಿದ್ದವು. ರಂಗಭೂಮಿಯಿಂದ ಸಿನಿಮಾ, ಸೀರಿಯಲ್ ಕ್ಷೇತ್ರಕ್ಕೆ ಆಗಮಿಸಿದ್ದ ಇವರು ಪ್ರತಿಭಾನ್ವಿತ ನಟರಾಗಿದ್ದರು.
(2 / 10)
ಇದೀಗ ನಟ ಶ್ರೀಧರ್ ನಾಯ್ಕ್ ಅವರ ನಿಧನ ವಾರ್ತೆ ಬಂದಿದೆ. ಆಸ್ಪತ್ರೆಯಲ್ಲಿ ಪ್ರತಿನಿತ್ಯ ಹಲವು ಸಾವಿರ ರೂಪಾಯಿ ಖರ್ಚು ಮಾಡಿದರೂ ಇವರನ್ನು ಉಳಿಸಲಾಗದ ನೋವಿನಲ್ಲಿ ನಟನ ಆಪ್ತರು, ಬಂಧು ಬಳಗವಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಕಂಬನಿ ಮಿಡಿಯುತ್ತಿದ್ದಾರೆ.
(3 / 10)
ಸಿನಿಮಾ ಮತ್ತು ಸೀರಿಯಲ್ ಕ್ಷೇತ್ರಕ್ಕೆ ಹೇಳಿ ಮಾಡಿಸಿದಂತೆ ಸುರಸುಂದರಾಂಗನಂತೆ ಇದ್ದ ಈ ಪ್ರತಿಭಾನ್ವಿತ ಕಲಾವಿದನ ದೇಹ ಊದಿಕೊಳ್ಳಲು ಆರಂಭಿಸಿದ ಬಳಿಕ ಸಂಪೂರ್ಣ ಬದಲಾಗಿತ್ತು. ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಮಯದಲ್ಲಿ ಗುರುತೇ ಸಿಗದಂತೆ ದೇಹ ಕೃಶವಾಗಿತ್ತು.
(4 / 10)
ಈ ಸಮಯದಲ್ಲಿ ನನ್ನನ್ನು ಬದುಕಿಸಲು ಪ್ರಯತ್ನಿಸಿ. ನನಗೆ ಬದುಕಲು ಆಸೆಯಿದೆ. ನಾನು ಹುಷಾರಾಗಬೇಕು, ಮೊದಲಿನಂತೆ ಕಷ್ಟಪಟ್ಟು ಕೆಲಸ ಮಾಡುವೆ ಎಂದೆಲ್ಲ ನಟ ಹೇಳುತ್ತಿದ್ದರು. ಆದರೆ, ಇವರ ಕೂಗು ವಿಧಿಗೆ ಕೇಳಲಿಲ್ಲ. ಅಪಾರ ಕಿರುತೆರೆ ಅಭಿಮಾನಿಗಳನ್ನು ಮತ್ತು ಆಪ್ತರನ್ನು ಬಿಟ್ಟು ಹೋಗಿದ್ದಾರೆ.
(5 / 10)
ನಟ ಶ್ರೀಧರ್‌ಗೆ ತನ್ನ ಆರೋಗ್ಯ ಅನಿರೀಕ್ಷಿತವಾಗಿ ಕೈಕೊಟ್ಟಾಗ ಆಘಾತವಾಗಿತ್ತು. ಒಬ್ಬಂಟಿಯಾಗಿ ಸರಿಯಾಗಿ ಆಹಾರ ಸೇವಿಸದೆ ದೇಹವನ್ನು ಅನಾರೋಗ್ಯಕ್ಕೆ ಈಡಾಗಿಸಿದ್ದರು ಎಂದು ಈ ಸಮಯದಲ್ಲಿ ಸುದ್ದಿಯಾಗಿತ್ತು. ದೇಹದಲ್ಲಿ ವಿಟಮಿನ್, ಪ್ರೊಟೀನ್ ಕೊರತೆ ಇತ್ಯಾದಿಗಳು ಇವರ ಈ ಸ್ಥಿತಿಗೆ ಕಾರಣ ಎನ್ನಲಾಗಿತ್ತು. ಜತೆಗೆ, ಪತ್ನಿ ತ್ಯಜಿಸಿ ಹೋಗಿರುವುದು ಸೇರಿದಂತೆ ಮಾನಸಿಕ, ಭಾವುಕ, ಸಾಂಸಾರಿಕ ಕಾರಣಗಳೂ ವರದಿಯಾಗಿದ್ದವು.
(6 / 10)
"ನಮಸ್ತೇ, ನಾನು ಶ್ರೀಧರ್ ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದೇನೆ. ಆಸ್ಪತ್ರೆಯ ಖರ್ಚು ಭರಿಸಲಾಗದಷ್ಟು ತೊಂದರೆಯಾಗಿದೆ. ಬೆಂಗಳೂರಿನ ಹೆಬ್ಬಾಳದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೇನೆ. ದಿನಕ್ಕೆ ಆಸ್ಪತ್ರೆ ಮತ್ತು ಔಷಧ ಖರ್ಚು ಹತ್ತು ಹದಿನೈದು ಸಾವಿರ ಆಗುತ್ತಿದೆ. ತಾವೆಲ್ಲರೂ ಕೈಲಾದ ಹಣದ ಸಹಾಯ ಮಾಡಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ಶ್ರೀಧರನನ್ನು ಕಾಪಾಡಿ, ನನ್ನನ್ನು ಬದುಕಿಸಲು ಪ್ರಯತ್ನಿಸಿ" ಎಂದು ಅವರು ಭಾವುಕರಾಗಿ ಮನವಿ ಮಾಡಿದ್ದರು. ಆದರೆ, ಇವರ ಬದುಕುವ ಆಸೆ ಈಡೇರಿಲ್ಲ. ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
(7 / 10)
ಇವರು 2001ರಲ್ಲಿ ಅಭಿನಯ ತರಂಗ ಎಂಬ ರಂಗಭೂಮಿ ತರಬೇತಿ ಸಂಸ್ಥೆಯಲ್ಲಿ ನಟನೆ ಕಲಿತಿದ್ದರು. ಆರಂಭದಲ್ಲಿ ಅಲ್ಲಿ ವಿದ್ಯಾರ್ಥಿಯಾಗಿ ಮತ್ತು ಬಳಿಕ ಅಭಿನಯ ಹೇಳಿಕೊಡುವ ಶಿಕ್ಷಕರಾಗಿ ಕೆಲಸ ಮಾಡಿದ್ದರು.
(8 / 10)
ಸಿಹಿಕಹಿ ಚಂದ್ರು ಅವರ ಸೀರಿಯಲ್‌ಗಳಿಗೆ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಇವರು ಅಂಬಾರಿ ಸೀರಿಯಲ್ ಮೂಲಕ ಪೂರ್ಣ ಪ್ರಮಾಣದಲ್ಲಿ ಕಿರುತೆರೆಗೆ ಎಂಟ್ರಿ ನೀಡಿದ್ದರು.
(9 / 10)
ಪುನರ್ ವಿವಾಹ, ಮಧುಮಗಳು, ತ್ರಿವೇಣಿ ಸಂಗಮ, ಗೃಹಲಕ್ಷ್ಮಿ, ಮಹಾನದಿ, ಅಗ್ನಿಸಾಕ್ಷಿ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಪಾರು, ವಧು, ಮಂಗಳಗೌರಿ ಮದುವೆ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿ ಮನೆ ಮಾತಾಗಿದ್ದರು.
ಇತರ ಗ್ಯಾಲರಿಗಳು