ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿ; ಪುತ್ಥಳಿ ಮೆರವಣಿಗೆ, ಮಕ್ಕಳಿಗೆ ನಾಮಕರಣ, ಬೃಹತ್ ರಂಗೋಲಿ -Photos
- ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 118ನೇ ಜನ್ಮ ಜಯಂತಿಯನ್ನು ಶ್ರೀಮಠದಲ್ಲಿ ಮಾ.1ರ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಜಯಂತಿ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಗಣ್ಯಾತಿ ಗಣ್ಯರು ಹಾಗೂ ಸಹಸ್ರಾರು ಭಕ್ತಗಣ ಸಾಕ್ಷಿಯಾದರು.
- ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 118ನೇ ಜನ್ಮ ಜಯಂತಿಯನ್ನು ಶ್ರೀಮಠದಲ್ಲಿ ಮಾ.1ರ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಜಯಂತಿ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಗಣ್ಯಾತಿ ಗಣ್ಯರು ಹಾಗೂ ಸಹಸ್ರಾರು ಭಕ್ತಗಣ ಸಾಕ್ಷಿಯಾದರು.
(1 / 11)
ಡಾ.ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿ ಪ್ರಯುಕ್ತ ಭಕ್ತರೊಬ್ಬರು ರಂಗೋಲಿಯಲ್ಲಿ ಶ್ರೀಗಳ ಭಾವಚಿತ್ರ ಅರಳಿಸುವ ಮೂಲಕ ಭಕ್ತಿ ಮೆರೆದರು. ಶ್ರೀಮಠದ ಆವರಣದಲ್ಲಿ 125 ಅಡಿ ಉದ್ದದ, 65 ಅಗಲ ಸೇರಿ 8125 ಚದರ ಅಡಿ ವಿಸ್ತೀರ್ಣದ ರಂಗೋಲಿಯಲ್ಲಿ ಬಿಡಿಸಲಾಗಿರುವ ಶಿವಕುಮಾರ ಶ್ರೀಗಳ ಭಾವಚಿತ್ರ ನೋಡುಗರ ಕಣ್ಮನ ಸೆಳೆಯಿತು. ಮೈಸೂರಿನ ಕಲಾವಿದ ಪುನೀತ್, ಲಕ್ಷ್ಮಿ, ಆದಿತ್ಯ, ಸಂಪ್ರೀತ್, ಸಂಜಯ್ ಎಂಬ ಐವರು ಕಲಾವಿದರ ಕಲಾ ಕುಂಚದಿಂದ ಅರಳಿದ್ದು, ಇವರು ಬಿಡಿಸಲಾಗಿರುವ ಶ್ರೀಗಳ ಭಾವಚಿತ್ರದ ಚಿತ್ತಾಕರ್ಷಕ ಬೃಹತ್ ಗಾತ್ರದ ರಂಗೋಲಿ ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿರುವ ಸಹಸ್ರಾರು ಭಕ್ತಾದಿಗಳ ಗಮನ ಸೆಳೆದಿದೆ.
(2 / 11)
ಬೆಳಗ್ಗೆಯಿಂದಲೇ ಶ್ರೀಮಠಕ್ಕೆ ಭಕ್ತರು, ಗಣ್ಯರ ದಂಡು ಹರಿದು ಬಂದಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಬಿ. ಸುರೇಶ್ಗೌಡ, ಜ್ಯೋತಿಗಣೇಶ್, ಶ್ರೀನಿವಾಸಯ್ಯ ಸೇರಿದಂತೆ ವಿವಿಧ ಮಠಾಧೀಶರುಗಳು ಶ್ರೀಗಳ ಗದ್ದುಗೆ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.
(3 / 11)
ರಾಜ್ಯದ ವಿವಿಧೆಡೆಗಳಿಂದ ಶ್ರೀಮಠಕ್ಕೆ ಆಗಮಿಸಿದ್ದ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ವಸ್ತುಪ್ರದರ್ಶನ ಆವರಣ, ಪ್ರಾರ್ಥನಾ ಮಂದಿರ, ಹಳೆಯ ಮತ್ತು ಹೊಸ ಪ್ರಸಾದ ನಿಲಯ, ಸಾದರ ಕೊಪ್ಪಲು ಸೇರಿದಂತೆ 5 ಕಡೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಶ್ರೀಗಳ 118ನೇ ಜಯಂತಿ ಕಣ್ತುಂಬಿಕೊಳ್ಳಲು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಗಣ ಸರದಿಯ ಸಾಲಿನಲ್ಲಿ ನಿಂತು ಗದ್ದುಗೆ ದರ್ಶನ ಪಡೆದು, ಸಿದ್ದಪಡಿಸಿದ್ದ ಬಗೆಬಗೆಯ ಖಾದ್ಯಗಳ ಪ್ರಸಾದ ಸವಿದು ಪುನೀತರಾದರು.
(4 / 11)
ಡಾ.ಶಿವಕುಮಾರ ಮಹಾಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ ವತಿಯಿಂದ ಡಾ.ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತ್ಯುತ್ಸವದ ಅಂಗವಾಗಿ 118 ಮಕ್ಕಳಿಗೆ ಶಿ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ನಾಮಕರಣ ಮಾಡಲಾಯಿತು. ಈ ಉಚಿತ ನಾಮಕರಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವರಿಗೆ ಹೊಸ ತೊಟ್ಟಿಲು, ತೊಟ್ಟಿಲ ಹಾಸಿಗೆ, ತೊಟ್ಟಿಲ ದಿಂಬು ಹಾಗೂ ಶ್ರೀಗಳ ಭಾವಚಿತ್ರವನ್ನು ಉಚಿತವಾಗಿ ನೀಡಲಾಯಿತು.
(5 / 11)
ಶ್ರೀಗಳ 118ನೇ ಜಯಂತಿ ಪ್ರಯುಕ್ತ ತುಮಕೂರು ನಗರದಾದ್ಯಂತ ಭಕ್ತವೃಂದ ಪೆಂಡಾಲ್‌ಗಳನ್ನು ಹಾಕಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನದಾಸೋಹ ಏರ್ಪಡಿಸುವ ಮೂಲಕ ಭಕ್ತಿ ಸಮರ್ಪಿಸಿದರು.
(6 / 11)
ನಾಡಿನ ಭಕ್ತಾದಿಗಳ ಮನ ಮನೆಗಳ ದೈವೀ ಪ್ರಭೆಯಾಗಿದ್ದ ಲಿಂ.ಡಾ.ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು, ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ಭಜನಾ ಮಂತ್ರ ಘೋಷಗಳು ಮೊಳಗಿದವು. ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ, 108 ಅಷ್ಟೋತ್ತರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ, ಮಹಾಮಂಗಳಾರತಿ ನೆರವೇರಿಸಲಾಯಿತು.
(7 / 11)
ಸಿದ್ಧಗಂಗಾ ಮಠದಲ್ಲಿ ನಡೆದ ನಗರದ ಸಿದ್ಧಗಂಗಾ ಮಠದಲ್ಲಿ ನಡೆದ ಲಿಂ.ಡಾ.ಶಿವಕುಮಾರ ಸ್ವಾಮೀಜಿ ರವರ 118ನೇ ಜಯಂತಿ ಮತ್ತು ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ಸಂಸ್ಕೃತಿಯನ್ನು ಉತೃಷ್ಟಗೊಳಿಸುವ ಮೂಲಕ ವಿಶ್ವಗುರು ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
(8 / 11)
ಉತ್ತರ ಭಾರತ ದಕ್ಷಿಣ ಭಾರತದ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ದಕ್ಷಿಣ ಭಾರತದ ಆಧ್ಯಾತ್ಮಿಕತೆ ದೊಡ್ಡ ಮಾರ್ಗದರ್ಶನ ಮಾಡಿದೆ. ಅದಕ್ಕೆ ಸಿದ್ಧಗಂಗಾ ಶ್ರೀಗಳು ಹಾಗೂ ಶಂಕರಾಚಾರ್ಯರು ನಿದರ್ಶನವಾಗಿದ್ದಾರೆ ಎಂದರು. ಯುಗ ಪುರುಷ ಡಾ.ಶಿವಕುಮಾರಸ್ವಾಮೀಜಿ ರವರ 118ನೇ ಜನ್ಮ ಜಯಂತೋತ್ಸವದಲ್ಲಿ ಭಾಗವಹಿಸಿರುವುದು ನನ್ನ ಅದೃಷ್ಟ, ಶಿವಕುಮಾರಸ್ವಾಮೀಜಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಆಧ್ಯಾತ್ಮಿಕವಾಗಿ ನಮ್ಮೊಂದಿಗೆ ಇಲ್ಲೇ ಇದ್ದಾರೆ ಎನ್ನುವುದು ನನ್ನ ಅನುಭವಕ್ಕೆ ಬಂದಿದೆ ಎಂದರು.
(9 / 11)
ನಾಡಿನ ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ ಶಿಕ್ಷಣ ನೀಡಿ ಭವಿಷ್ಯದ ಮೂರ್ತ ಸ್ವರೂಪಗಳನ್ನಾಗಿ ತಯಾರು ಮಾಡಿದ ಮಹಾನ್ ಚೇತನ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ದೇಶದ ಅತ್ಯುತ್ತಮ ನಾಗರಿಕ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ವತಿಯಿಂದ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದರು.
(10 / 11)
ಡಾ.ಶಿವಕುಮಾರ ಸ್ವಾಮೀಜಿ ರವರ 118ನೇ ಜಯಂತಿ ಮತ್ತು ಗುರುವಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಕೆಶಿ, ಯಾವುದೇ ಜಾತಿ, ಧರ್ಮ, ಭೇದ-ಭಾವ ಇಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ಅನ್ನ, ವಿದ್ಯಾದಾನ ಮಾಡಿ ಇಡೀ ದೇಶಕ್ಕೆ ದೊಡ್ಡ ಸಂದೇಶ ನೀಡಿರುವ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಸಂಬಂಧ ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸುವಂತೆ ಕೇಂದ್ರ ರಕ್ಷಣಾ ಸಚಿವರಿಗೆ ಕೋರಿದರು. ಸಿದ್ಧಗಂಗಾ ಕ್ಷೇತ್ರ ಒಂದು ಪವಿತ್ರವಾದ ಕ್ಷೇತ್ರ. ಎಲ್ಲ ಧರ್ಮಗಳನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ಎಲ್ಲರಲ್ಲೂ ಧಾರ್ಮಿಕ ಭಕ್ತಿ ಭಾವವನ್ನು ಶ್ರೀಗಳು ಮೂಡಿಸಿದ್ದಾರೆ. ಶ್ರೀಗಳ ಆಚಾರ, ವಿಚಾರ, ಅವರು ಹಾಕಿಕೊಟ್ಟ ದಾರಿ ನಮ್ಮ ಬದುಕಿಗೆ ದೊಡ್ಡ ಶಕ್ತಿ ತುಂಬಿದೆ ಎಂದರು.
(11 / 11)
ದೇಹದ ಹಸಿವಿಗೆ ಅನ್ನ ನೀಡಿ, ಜ್ಞಾನದ ಹಸಿವಿಗೆ ಅಕ್ಷರ ನೀಡಿ ಲಕ್ಷಾಂತರ ಬಡ ಮಕ್ಕಳ ಬದುಕಿಗೆ ಆಶಾಕಿರಣವಾಗಿರುವ ಶ್ರೀಗಳ ಸಮಾಜ ಸೇವೆ, ದೂರದೃಷ್ಟಿ ಇಡೀ ವಿಶ್ವಕ್ಕೆ ಮಾರ್ಗದರ್ಶನವಾಗಿದೆ. ಶ್ರೀಮಠದಲ್ಲಿ ಯಾವುದೇ ರೀತಿಯ ಭೇದ-ಭಾವ ಇಲ್ಲದೆ ಎಲ್ಲ ವರ್ಗದ ಮಕ್ಕಳನ್ನು ಮೂರ್ತ ಸ್ವರೂಪರನ್ನಾಗಿ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಿದ್ಧಲಿಂಗಸ್ವಾಮೀಜಿ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ ಎಂದು ಡಿಕೆಶಿ ಹೇಳಿದರು.
ಇತರ ಗ್ಯಾಲರಿಗಳು













