Family Politics: ಕರ್ನಾಟಕದ ಸಚಿವ, ಶಾಸಕರ ಮಕ್ಕಳು, ಸಂಬಂಧಿಗೆ ಬಹುತೇಕ ಕಾಂಗ್ರೆಸ್ ಟಿಕೆಟ್ ಪಕ್ಕಾ, ಯಾರಿದ್ದಾರೆ ಪಟ್ಟಿಯಲ್ಲಿ? Photos
ಕುಟುಂಬವಿಲ್ಲದೇ ರಾಜಕಾರಣವಿಲ್ಲ. ಎಲ್ಲಾ ಪಕ್ಷಗಳು ಇದಕ್ಕೆ ತಲೆಬಾಗಿವೆ. ಅದರಲ್ಲೂ ಹಳೆಯ ಪಕ್ಷ ಕಾಂಗ್ರೆಸ್‌ನಲ್ಲಿ ಇದು ಕೊಂಚ ಹೆಚ್ಚೇ. ಈ ಬಾರಿ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ತಮಗೆ ಸ್ಪರ್ಧಿಸಿ ಎಂದು ಹೇಳಿದರೆ ಮಕ್ಕಳಿಗೆ ಅವಕಾಶ ಕೊಡಿ ಎಂದು ಹಲವು ಸಚಿವರು ಟಿಕೆಟ್ ಪಡೆಯುತ್ತಿದ್ದಾರೆ. ನಾಯಕರ ಸಂಬಂಧಿಕರೂ ಕಣಕ್ಕಿಳಿಯುತ್ತಿದ್ದಾರೆ. ಇಲ್ಲಿದೆ ಅದರ ವಿವರ.
(1 / 10)
ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಪುತ್ರ ಮೃಣಾಲ್ ಹೆಬ್ಬಾಳಕರ್ ಅವರು ಬೆಳಗಾವಿ ಕ್ಷೇತ್ರದಿಂದ ಲೋಕಸಭೆ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಈ ಹಿಂದೆ ಲಕ್ಷ್ಮಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಹಾಲಿ ಪರಿಷತ್ ಸದಸ್ಯ,
(2 / 10)
ಬೆಳಗಾವಿ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಅವರು ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವರು. ಸತೀಶ್ ತಮ್ಮಿಬ್ಬರು ಮಕ್ಕಳಿಗೆ ರಾಹುಲ್ ಹಾಗೂ ಪ್ರಿಯಾಂಕ ಎನ್ನುವ ಹೆಸರಿಟ್ಟಿದ್ದಾರೆ. ಈಗಾಗಲೇ ಸತೀಶ್ ಮೂವರು ಸಹೋದರರು ಶಾಸಕರು.
(3 / 10)
ರಾಮನಗರ ಉಸ್ತುವಾರಿ ಸಚಿವ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗಲಿದೆ. ಒಮ್ಮೆ ಶಾಸಕರಾಗಿದ್ದ ಸೌಮ್ಯ ಈ ಬಾರಿ ಕಡಿಮೆ ಅಂತರದಲ್ಲಿ ಜಯನಗರ ಕ್ಷೇತ್ರದಲ್ಲಿ ಸೋತಿದ್ದರು.
(4 / 10)
ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂ ಸಕ್ಕರೆ, ಜವಳಿ, ಎಪಿಎಂಸಿ ಸಚಿವ ಶಿವಾನಂದಪಾಟೀಲ್ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಅವರಿಗೆ ಬಾಗಲಕೋಟೆ ಕ್ಷೇತ್ರದ ಟಿಕೆಟ್ ಅಂತಿಮವಾಗಿದೆ ಎನ್ನಲಾಗುತ್ತಿದೆ. ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಸಂಯುಕ್ತ ಪಾಟೀಲ್ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
(5 / 10)
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಹೆಸರುಬೀದರ್ ಕ್ಷೇತ್ರಕ್ಕೆ ಪ್ರಬಲವಾಗಿದೆ. ಈ ಹಿಂದೆ ಈಶ್ವರ ಖಂಡ್ರೆ ಇದೇ ಕ್ಷೇತ್ರದಿಂದ ಲೋಕಸಭೆ ಸ್ಥಾನಕ್ಕೆ ನಿಂತು ಸೋತವರು. ಈಶ್ವರ್ ಅವರ ತಂದೆ ಭೀಮಣ್ಣ ಖಂಡ್ರೆ ಕೂಡ ಹಿರಿಯ ನಾಯಕರು ಹಾಗೂ ಸಚಿವರಾಗಿದ್ದವರು.
(6 / 10)
ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಗಬಹುದು. ಇದೇ ಕ್ಷೇತ್ರದಲ್ಲಿ ಮೂರು ದಶಕದ ಹಿಂದೆ ಮಹದೇವಪ್ಪ ಸೋತಿದ್ದರು.
(7 / 10)
ಸಂಡೂರು ಶಾಸಕ ಹಾಗೂ ಮಾಜಿ ಸಚಿವ ಇ.ತುಕಾರಾಂ ಅವರ ಪುತ್ರಿ ಚೈತನ್ಯ ತುಕಾರಾಂ ಅವರಿಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿವೆ.
(8 / 10)
ಕಲಬುರಗಿಯಲ್ಲಿ ಎರಡು ಬಾರಿ ಸಂಸದರಾಗಿ ನಂತರ ಸೋತು ರಾಜ್ಯಸಭಾ ಸದಸ್ಯರಾಗಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ನೀಡುವುದು ಅಂತಿಮವಾಗಿದೆ. ರಾಧಾಕೃಷ್ಣ ಅವರು ಅಧಿಕಾರಿಯಾಗಿ ಹೆಸರು ಮಾಡಿದವರು.
(9 / 10)
ಕೊಪ್ಪಳದಲ್ಲಿ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಸಹೋದರ ರಾಜಶೇಖರ ಹಿಟ್ನಾಳ ಕಾಂಗ್ರೆಸ್ ಅಭ್ಯರ್ಥಿಯಾಗುವರು. ಕಳೆದ ಬಾರಿಯೂ ಅವರೇ ಸ್ಪರ್ಧಿಸಿ ಸೋತಿದ್ದರು. ಹತ್ತು ವರ್ಷದ ಹಿಂದೆ ಇವರ ತಂದೆ ಬಸವರಾಜ ಹಿಟ್ನಾಳ ಕೂಡ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು.
ಇತರ ಗ್ಯಾಲರಿಗಳು