ಲೋಕಸಭಾ ಚುನಾವಣೆ; ಕಾಂಗ್ರೆಸ್ ಪ್ರಚಾರಕ್ಕೆ ಪಾನ್ ಶಾಪ್, ರಂಗು ರಂಗಾದ ಗಾಡಿಯಲ್ಲಿ ಬಿಜೆಪಿ, ಬಿಜೆಡಿ ನಾಯಕರ ಫೋಟೋಸ್, ಹಗರಣಗಳ ಪಾನ್
ಲೋಕಸಭಾ ಚುನಾವಣೆ; ಒಡಿಶಾದಲ್ಲಿ ಪ್ರಚಾರಕ್ಕೆ ಬಿಜೆಪಿ, ಬಿಜೆಡಿ ನಾಯಕರ ಫೋಟೋಗಳಿರುವ ಪಾನ್ ಭಂಡಾರವನ್ನು ಬಳಸಿದ ಕಾಂಗ್ರೆಸ್, ಹಗರಣಗಳ ಪಾನ್ ಮೂಲಕ ಜನರ ಗಮನಸೆಳೆಯಿತು. ಒಡಿಶಾ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಚಾರ ವೈಖರಿಯ ಚಿತ್ರನೋಟ ಇಲ್ಲಿದೆ.
(1 / 7)
ಯಾವುದೇ ಚುನಾವಣೆ ಇರಲಿ, ಪ್ರಚಾರವೇ ಗಮನಸೆಳೆಯುವುದು. ಅದರಲ್ಲೂ ಪ್ರಚಾರಕ್ಕೆ ಬಳಸುವ ತಂತ್ರಗಳು ಹೆಚ್ಚು ಪರಿಣಾಮಕಾರಿ ಆಗಿರುತ್ತವೆ. ಒಡಿಶಾದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಬಿಜೆಡಿ ವಿರುದ್ಧ ಪ್ರದೇಶ ಕಾಂಗ್ರೆಸ್ ಮಂಗಳವಾರ (ಏಪ್ರಿಲ್ 23) ಆರಂಭಿಸಿದ ಪ್ರತಿಭಟನಾ ಸ್ವರೂಪದ ಪ್ರಚಾರವು ಬಹುಬೇಗ ದೇಶದ ಗಮನಸೆಳೆದಿದೆ.
(2 / 7)
ಪಾನ್ ಭಂಡಾರ ಎಂಬ ಹೆಸರಿನ ಜೊತೆಗೆ ಬಿಜೆಪಿ, ಬಿಜೆಡಿ ನಾಯಕರ ಫೋಟೋಗಳು ಗಮನಸೆಳೆದವು. ಪಾನ್ ಬೀಡಾಗಳ ದರ ಪಟ್ಟಿಯೂ ಇದ್ದು, ಪಾನ್ ಬೀಡಾ ಹೆಸರುಗಳೇ ಗಮನಸೆಳೆಯುತ್ತಿದ್ದವು. ಈ ವಾಹನದಲ್ಲಿ ಇಬ್ಬರು ಪಾನ್ ಬೀಡಾ ಹಾಕಿ ಕೊಡುತ್ತಿದ್ದರು. ಸ್ಥಳೀಯ ಕಾಂಗ್ರೆಸ್ ನಾಯಕರು ಒಡಿಶಾದ ಆಡಳಿತಾರೂಢ ಬಿಜೆಡಿ ಮತ್ತು ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯ ಹಗರಣಗಳ ಕುರಿತು ಜನರ ಗಮನಸೆಳೆಯುತ್ತಿದ್ದರು.
(3 / 7)
ಒಡಿಶಾದ ಪ್ರದೇಶ ಕಾಂಗ್ರೆಸ್ ಘಟಕ ಪ್ರಚಾರ ವಾಹನವನ್ನೇ ಪಾನ್ ಬೀಡಾ ಅಂಗಡಿಯನ್ನಾಗಿ ಪರಿವರ್ತಿಸಿ ಮಂಗಳವಾರ ಜನರಿಗೆ ಉಚಿತವಾಗಿ ಬೀಡಾ ಹಂಚಿದರು. ವಿವಿಧ ಹಗರಣಗಳನ್ನು ಹೈಲೈಟ್ ಮಾಡುವ ಸಲುವಾಗಿ ಪಾನ್‌ಗೆ ಹಗರಣಗಳ ಹೆಸರುಗಳನ್ನು ಇಟ್ಟು ಗಮನಸೆಳೆದರು.
(4 / 7)
ಕಾಂಗ್ರೆಸ್ ಪಕ್ಷದ ಈ ಪಾನ್ ಶಾಪ್‌ನಲ್ಲಿರುವ ಪಾನ್ ದರ ಪಟ್ಟಿಯಲ್ಲಿರುವ ವಿವರ ಹೀಗಿದೆ- ಎಲೆಕ್ಟೋರಲ್ ಬಾಂಡ್ ಸ್ಕ್ಯಾಮ್ 9269.5 ಕೋಟಿ ರೂಪಾಯಿ, ಕೃಷಿ ಸಾಲ ಹಗರಣ ಪಾನ್ 800 ಕೋಟಿ ರೂ., ಗಣಿ ಹಗರಣ ಪಾನ್ 9 ಲಕ್ಷ ಕೋಟಿ ರೂಪಾಯಿ, ಚಿಟ್ ಫಂಡ್ ಹಗರಣ ಪಾನ್ 500 ಕೋಟಿ ರೂ., ಹೌಸಿಂಗ್ ಹಗರಣ ಪಾನ್ 1,000 ಕೋಟಿ ರೂ. ತೋಟಗಾರಿಕೆ ಹಗರಣ ಪಾನ್ 15,000 ಕೋಟಿ ರೂ., ಕೋವಿಡ್ ಹಗರಣ ಪಾನ್ 40,000 ಕೋಟಿ ರೂ. ಇದಲ್ಲದೇ ಇನ್ನೂ ಪಟ್ಟಿ ಉದ್ದ ಬೆಳೆದಿದೆ.
(5 / 7)
ಎಐಸಿಸಿ ಒಡಿಶಾ ಉಸ್ತುವಾರಿ ಅಜಯ್ ಕುಮಾರ್, ನಾವು ಪಾನ್ (PAANN - ಪಾಂಡಿಯನ್, ಅಮಿತ್ ಷಾ, ಅಶ್ವಿನಿ ವೈಷ್ಣವ್, ನವೀನ್ ಪಟ್ನಾಯಕ್, ನರೇಂದ್ರ ಮೋದಿ) ಶಾಪ್ ತೆರೆದಿದ್ದೀವೆ. ಈ ಜನರು ಒಡಿಶಾದ ಜನರನ್ನು ವಿವಿಧ ಹಗರಣಗಳ ಮೂಲಕ ವಂಚಿಸಿದ್ದಾರೆ. ಈ ಬಗ್ಗೆ ಜನರ ಗಮನಸೆಳೆಯಲು ಅವರಿಗೆ ಅದನ್ನು ಅರ್ಥಮಾಡಿಸಲು ಈ ಶಾಪ್ ತೆರೆದು ಎಲ್ಲರಿಗೂ ಉಚಿತ ಪಾನ್ ಹಂಚುತ್ತಿದ್ದೇವೆ ಎಂದು ಹೇಳಿದರು.
(6 / 7)
ನಿಜವಾದ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿ ನರೇಂದ್ರ ಮೋದಿ ಸರ್ಕಾರ ಮತ್ತು ಇಲ್ಲಿನ ಬಿಜೆಡಿ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಲೇ ಇದೆ. ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಸಮಸ್ಯೆಗಳಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ, ಈ ಎರಡೂ ಸರ್ಕಾರಗಳು ವಿವಿಧ ಹಗರಣಗಳ ಮೂಲಕ ಹಣವನ್ನು ಕೊಳ್ಳೆಹೊಡೆಯುತ್ತ ಬಂದಿವೆ ಎಂಧು ಅಜಯ್ ಕುಮಾರ್ ಟೀಕಿಸಿದರು.
ಇತರ ಗ್ಯಾಲರಿಗಳು