Maha Shivratri 2025: ಶಿವರಾತ್ರಿಗೆ ನೀವು ಭೇಟಿ ನೀಡಬಹುದಾದ ದಕ್ಷಿಣ ಕನ್ನಡದ ಪ್ರಮುಖ 5 ಶಿವಸಾನಿಧ್ಯಗಳು ಇವು
- Maha Shivratri 2025: ಈ ಬಾರಿಯ ಶಿವರಾತ್ರಿ ವೇಳೆ ನೀವು ದಕ್ಷಿಣ ಕನ್ನಡ ಜಿಲ್ಲೆಯತ್ತ ಪ್ರವಾಸ ಕೈಗೊಳ್ಳುವುದಾದರೆ ಪ್ರಮುಖ ಶಿವ ದೇವಾಲಯ ನೋಡಬಹುದು.
- ಮಾಹಿತಿ: ಹರೀಶ ಮಾಂಬಾಡಿ ಮಂಗಳೂರು
- Maha Shivratri 2025: ಈ ಬಾರಿಯ ಶಿವರಾತ್ರಿ ವೇಳೆ ನೀವು ದಕ್ಷಿಣ ಕನ್ನಡ ಜಿಲ್ಲೆಯತ್ತ ಪ್ರವಾಸ ಕೈಗೊಳ್ಳುವುದಾದರೆ ಪ್ರಮುಖ ಶಿವ ದೇವಾಲಯ ನೋಡಬಹುದು.
- ಮಾಹಿತಿ: ಹರೀಶ ಮಾಂಬಾಡಿ ಮಂಗಳೂರು
(1 / 6)
ಮಂಗಳೂರು: ಶಿವರಾತ್ರಿ ಸಂದರ್ಭ ಕರ್ನಾಟಕ ಕರಾವಳಿಗೇನಾದರೂ ಆಗಮಿಸುವುದಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಈ ಶಿವಸಾನಿಧ್ಯಗಳಿಗೆ ನೀವು ಹೋಗಲೇಬೇಕು. ವಿಶ್ವವಿಖ್ಯಾತವಾದ ಪುಣ್ಯಕ್ಷೇತ್ರವೆನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಪಶ್ಚಿಮ ಘಟ್ಟ ಇಳಿದ ಕೂಡಲೇ ಸಿಕ್ಕರೆ, ಅಲ್ಲೇ ಮುಂದಕ್ಕೆ ಸಾಗಿದರೆ, ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರನ ದರ್ಶನ ಮಾಡಬಹುದು. ಹಾಗೆಯೇ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿ ಸಮೀಪದಲ್ಲಿದೆ. ಪುತ್ತೂರಿನಿಂದ ಮುಂದೆ ಸಾಗಿದರೆ, ವಿಟ್ಲದಲ್ಲಿ ಪಂಚಲಿಂಗೇಶ್ವರ ದೇವಸ್ಥಾನ ತನ್ನ ಗಜಪೃಷ್ಟಾಕೃತಿಯ ಆಲಯದ ಮೂಲಕ ಪ್ರಸಿದ್ಧವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರಿಗೆ ತೆರಳಿದರೆ, ಕದಿರೆ ಶ್ರೀ ಮಂಜುನಾಥೇಶ್ವರ ಸನ್ನಿಧಿಗೆ ಹೋಗಲೇಬೇಕು. ಕರಾವಳಿಯಲ್ಲಿ ಈ ದೇವಸ್ಥಾನಗಳಲ್ಲದೆ, ಹಲವು ಕಡೆಗಳಲ್ಲಿ ಮಹಾಲಿಂಗೇಶ್ವರ ಸಹಿತ ಶಿವಸಾನಿಧ್ಯಗಳಿದ್ದು, ಈ ಐದು ಶಿವಸಾನಿಧ್ಯಗಳು ಪ್ರಮುಖವಾಗಿ ಗಮನ ಸೆಳೆಯುತ್ತವೆ.
(2 / 6)
1.ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಧರ್ಮಸ್ಥಳ ಹೆಸರೇ ಹೇಳುವಂತೆ ಧರ್ಮದ ಸನ್ನಿಧಿಯಾಗಿದ್ದು, ಹಿಂದು, ಜೈನ ಧರ್ಮೀಯರ ಒಗ್ಗಟ್ಟನ್ನೂ ಸೂಚಿಸುತ್ತದೆ. ಇದರ ಧರ್ಮಾಧಿಕಾರಿಯಾಗಿ ಜೈನ ಧರ್ಮೀಯರಾದ ಹೆಗ್ಗಡೆ ಕುಟುಂಬ ಮಾಡುತ್ತಿರುವುದು ಇದಕ್ಕೆ ಕಾರಣ. ಸುಮಾರು 800 ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಮಂದಿ ಆಗಮಿಸುವ ಶಿವನ ಸನ್ನಿಧಿ. ಇಲ್ಲಿನ ಕತೆಯೊಂದರ ಪ್ರಕಾರ, ಧರ್ಮದೇವತೆಗಳು ಮಾನವ ರೂಪಗಳನ್ನು ಧರಿಸಿ, ಸಂಚರಿಸುವ ಹೊತ್ತಿಗೆ ಧರ್ಮಭೀರುಗಳಾದ ಹೆಗ್ಗಡೆ ಕುಟುಂಬವನ್ನು ಕಂಡು, ಮಂಜುನಾಥ ದೇವಾಲಯ ನಿರ್ಮಿಸಲು ಸೂಚಿಸಿದರು. ಬಳಿಕ ಹೆಗ್ಗಡೆ ಕುಟುಂಬವೇ ಅದರ ಆಡಳಿತದಾರರಾಗಿ ದೇವಸ್ಥಾನದ ಆಡಳಿತ ನಿರ್ವಹಿಸಿಕೊಂಡು ಬಂದಿದೆ. ಶಿವರಾತ್ರಿ ಸಂದರ್ಭ ಇಲ್ಲಿಗೆ ರಾಜ್ಯದ ನಾನಾ ಭಾಗಗಳಿಂದ ಕಾಲ್ನಡಿಗೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಲ್ಲದೆ, ಓಂ ನಮಃ ಶಿವಾಯ ಮಂತ್ರ ಪಠಣದೊಂದಿಗೆ ಅಹೋರಾತ್ರಿ ಶಿವನ ಸನ್ನಿಧಿಯಲ್ಲಿದ್ದು, ಪುನೀತರಾಗುತ್ತಾರೆ.
(3 / 6)
2. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನನೇತ್ರಾವತಿ ಮತ್ತು ಕುಮಾರಧಾರಾ ನದಿಯ ಸಂಗಮ ಕ್ಷೇತ್ರ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು ಮಂಗಳೂರು ರಸ್ತೆಯ ಪಕ್ಕವೇ ಇದೆ. ಇಲ್ಲಿನ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಸಂದರ್ಭ ವಿಶೇಷ ಆಚರಣೆಗಳು ನಡೆಯುತ್ತವೆ. ಪಿಂಡಪ್ರಧಾನಕ್ಕೆ ಹೆಸರುವಾಸಿಯಾಗಿರುವ ಈ ಕ್ಷೇತ್ರದಲ್ಲಿ ಮಹಾಶಿವನ ಪಕ್ಕವೇ ಮಹಾಕಾಳಿ ದೇವಸ್ಥಾನವೂ ಇದ್ದು, ಶಿವ ಮತ್ತು ದೇವಿಯ ಆರಾಧನಾ ಸನ್ನಿಧಿಯಾಗಿ ಗುರುತಿಸಿಕೊಂಡಿದೆ. ನೇತ್ರಾವತಿ-ಕುಮಾರಧಾರಾ ನದಿ ಸಂಗಮ ಸನ್ನಿಧಿಯಾದ ಕಾರಣ, ಇಲ್ಲಿ ಅಪರಕ್ರಿಯೆಗಳು ಹೆಚ್ಚಾಗಿ ನಡೆಯುತ್ತವೆ. ಕಾಶಿ, ಪ್ರಯಾಗಕ್ಕೆ ಇರುವಂಥ ಮಹತ್ವವನ್ನೂ ಉಪ್ಪಿನಂಗಡಿಯ ಈ ಸಂಗಮ ಕ್ಷೇತ್ರಕ್ಕೆ ನೀಡಲಾಗಿದ್ದು, ಗಯಾಪದ ಕ್ಷೇತ್ರ ಎಂಬ ಹೆಸರು ಪಡೆದಿದೆ.
(4 / 6)
3. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಈಗ ಅಭಿವೃದ್ಧಿಯ ಹೊಸ್ತಿಲಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಪುತ್ತೂರಿನಲ್ಲಿದೆ. ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ಎಂದೇ ಪ್ರತಿತಿ ಇದೆ. ಶಿವರಾತ್ರಿಯಂದು ರಾತ್ರಿ, ಹಗಲು ದೇವಸ್ಥಾನದ ಬಾಗಿಲು ತೆರೆದಿರುತ್ತದೆ. ಇಲ್ಲದಿದ್ದರೆ, ಬೆಳಗ್ಗೆ 5.30ಕ್ಕೆ ತೆರೆದರೆ, 1 ಗಂಟೆಗೆ ಮುಚ್ಚುತ್ತದೆ, ಸಂಜೆ 4ಕ್ಕೆ ತೆರೆದರೆ, 8ಕ್ಕೆ ಮುಚ್ಚುತ್ತದೆ. ಮೈಸೂರು ಮಂಗಳೂರು ರಸ್ತೆಯಲ್ಲಿ ಪುತ್ತೂರು ಪೇಟೆಯಲ್ಲೇ ಈ ದೇವಸ್ಥಾನವಿದೆ. ಕಾಶಿಯನ್ನು ಬಿಟ್ಟರೆ, ದೇವಾಲಯದ ಎದುರು ಸ್ಮಶಾನವಿರುವ ದೇವಸ್ಥಾನಗಳು ವಿರಳ ಅವುಗಳಲ್ಲಿ ಪುತ್ತೂರು ಒಂದು.
(5 / 6)
4. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಒಂದು ಸಾವಿರ ವರ್ಷಗಳಷ್ಟು ಪ್ರಾಚೀನವಾದದ್ದೆಂದು ಹೇಳಲಾದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತನ್ನ ಗಜಪೃಷ್ಟಾಕೃತಿಯ ರಚನೆಯಿಂದ ಗಮನ ಸೆಳೆದಿದೆ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮಾ ಅರಸು ಮನೆತನದವರ ಆಡಳಿತಕ್ಕೊಳಪಟ್ಟಿದ್ದು, ಸುತ್ತಮುತ್ತಲಿನ ಜನರು ಇಲ್ಲಿಗೆ ಆಗಮಿಸುವಲ್ಲದೆ, ಹತ್ತೂರಿನಿಂದಲೂ ಇದರ ಮಹಿಮೆಯನ್ನು ಗುರುತಿಸಿ ಬರುತ್ತಾರೆ..ವಿಟ್ಲದ ಜಾತ್ರೆ ಇಲ್ಲಿನ ಮುಖ್ಯ ಉತ್ಸವ. ಶಿವರಾತ್ರಿಯಂದೂ ಇಲ್ಲಿ ಹಬ್ಬದ ವಾತಾವರಣವಿರುತ್ತದೆ.
(6 / 6)
5. ಕದ್ರಿ ಶ್ರೀ ಮಂಜುನಾಥ ಸನ್ನಿಧಿಸುಮಾರು 10 ಅಥವಾ 11ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಲಾಗುವ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಮಂಗಳೂರಿನ ಪ್ರಸಿದ್ಧ ದೇವಸ್ಥಾನವಾಗಿದೆ. ಅದರಲ್ಲೂ ಪ್ರಸಿದ್ಧ ಶಿವಸಾನಿಧ್ಯವಾಗಿ ರೂಪುಗೊಂಡಿದೆ. ಇಲ್ಲಿನ ಸಪ್ತತೀರ್ಥಗಳು ಹಾಗೂ ಪಕ್ಕದಲ್ಲೇ ಇರುವ ಕದಳೀವನ ಎಲ್ಲವೂ ಪ್ರಮುಖವಾದುದು. ಇಲ್ಲಿಗೆ ನೂರಾರು ಭಕ್ತರು ಶಿವರಾತ್ರಿ ದಿನ ಆಗಮಿಸಿ, ಶಿವನ ದರ್ಶನ ಪಡೆಯುತ್ತಾರೆ.--
ಇತರ ಗ್ಯಾಲರಿಗಳು