ಮಂಡ್ಯ ಬಾಲಕಿ ಸಾವು ಪ್ರಕರಣ; ನಾನೇ 10 ಲಕ್ಷ ರೂ ಕೊಡ್ತೀನಿ ಸ್ವಾಮಿ, ನನ್ನ ಮಗಳ ತಂದು ಕೊಡ್ತೀರಾ, ನೊಂದ ತಂದೆಯ ಪ್ರಶ್ನೆ
ಮಂಡ್ಯದಲ್ಲಿ ಸಂಚಾರ ಪೊಲೀಸರ ಅಸಡ್ಡೆಯಿಂದಾಗಿ ಸಂಭವಿಸಿದ್ದು ಎನ್ನಲಾದ ಅಪಘಾತದಲ್ಲಿ 3 ವರ್ಷದ ಬಾಲಕಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸೋಮವಾರ( ಮೇ 26) ಬೆಳಿಗ್ಗೆ ನಡೆದಿದೆ. ಈ ಘಟನೆ ಬಳಿಕ ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ವಿಚಾರ ಮುನ್ನೆಲೆಗೆ ಬಂತು. ಆದರೆ, ಬಾಲಕಿಯ ತಂದೆ ನೋವಿನೊಂದಿಗೆ, ನನ್ನ ಮಗಳು ವಾಪಸ್ ಬರುತ್ತಾಳಾ ಎಂದು ಪ್ರಶ್ನಿಸಿದ್ದಾರೆ.
(1 / 7)
ಮಂಡ್ಯದ ಸ್ವರ್ಣಸಂದ್ರ ಸಮೀಪ ಪೊಲೀಸರ ಅಸಡ್ಡೆಯಿಂದ ಸಂಭವಿಸಿದ್ದು ಎನ್ನಲಾದ ಅಪಘಾತದಲ್ಲಿ ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಳು. ಬಾಲಕಿಯ ಪಾಲಕರು, ಕುಟುಂಬ ಸದಸ್ಯರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದರು. ಪರಿಹಾರದ ವಿಚಾರ ಬಂದಾಗ, ಬಾಲಕಿಯ ತಂದೆ ಬಹಳ ನೋವಿನೊಂದಿಗೆ, ನನ್ನ ಮಗಳು ವಾಪಸ್ ಬರುತ್ತಾಳಾ ಎಂದು ಅಲ್ಲಿದ್ದವರನ್ನು ಕೇಳಿದ್ದಾರೆ.
(2 / 7)
ಸ್ವರ್ಣಸಂದ್ರ ಹತ್ತಿರ ಮಂಡ್ಯ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಕೇಸ್‌ಗಳನ್ನು ಪರಿಶೀಲಿಸಿ, ದಂಡ ವಸೂಲಿ ಮಾಡುತ್ತಿದ್ದರು. ಆಗ, ಮದ್ದೂರು ಭಾಗದಿಂದ ಬಂದ ಬೈಕ್ ಅನ್ನು ತಡೆಗಟ್ಟಿದ್ದರು. ಅವರು ಆಸ್ಪತ್ರೆಗೆ ಚಿಕಿತ್ಸೆಗೆ ಹೊರಟವರು ಎಂದು ತಿಳಿಸಿದ ಬಳಿಕ ಬಿಟ್ಟುಬಿಟ್ಟಿದ್ದರು ಎಂದು ಎಸ್‌ಪಿ ಮಾಧ್ಯಮಗಳಿಗೆ ತಿಳಿಸಿದರು.
(3 / 7)
ಘಟನೆ ಬಳಿಕ ಬಾಲಕಿಯ ಶವವನ್ನು ಆಸ್ಪತ್ರೆ ಎದುರು ರಸ್ತೆಯಲ್ಲಿಟ್ಟು ಕುಟುಂಬ ಸದಸ್ಯರು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಪ್ಪಿತಸ್ಥ ಪೊಲೀಸರನ್ನು ಅಮಾನತುಗೊಳಿಸಿರುವುದಾಗಿ ಘೋಷಿಸಿದರು. ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
(4 / 7)
ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ ಪೊಲೀಸ್ ವರಿಷ್ಠಾಧಿಕಾರಿ, ಕುಟುಂಬ ಸದಸ್ಯರ ಮನವೊಲಿಸಿ ಪ್ರತಿಭಟನೆ ನಿಲ್ಲಿಸುವಂತೆ ಮನವೊಲಿಸಿದರು.
(5 / 7)
ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅವರು ಸ್ಥಳದಲ್ಲಿ ತಪಾಸಣೆ ಮಾಡಿದ್ದ ಮೂವರು ಎಎಸ್ಐಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾಗಿ ತಿಳಿಸಿದರು. ಜಯರಾಮ್, ನಾಗರಾಜ್, ಗುರುದೇವ್ ಅಮಾನತಾದವರು.
(6 / 7)
ಸಿಕ್ಕಸಿಕ್ಕಲ್ಲಿ ಬೇಕಾಬಿಟ್ಟಿ ವಾಹನ ತಡೆದು ತಪಾಸಣೆ ನಡೆಸುವ ಪೊಲೀಸರ ಕ್ರಮದ ಬಗ್ಗೆ ಪ್ರತಿಭಟನಾ ನಿರತರು,ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇನ್ನೊಂಧೆಡೆ ನೊಂದ ತಂದೆ ಅಶೋಕ್ ಅವರು, ಪಾಪುಗೆ ನಾಯಿ ಕಚ್ಚಿತ್ತು. ಮಂಡ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಮದ್ದೂರಿನಿಂದ ಬಂದಿದ್ದೆವು. ಸರ್ವೀಸ್ ರಸ್ತೆಯಲ್ಲಿ ಪೊಲೀಸರು ಗಾಡಿ ಅಡ್ಡ ಹಾಕಿದರು. ಆಸ್ಪತ್ರೆಗೆ ಹೋಗಲು ಹೊರಟಾಗ ಅಡ್ಡ ಹಾಕಿದ್ದರು. ಬೈಕ್ ಸ್ಕಿಡ್ ಆಗಿದೆ. ಆಗ ಮಗು ಬಿದ್ದಿದೆ. ಕೂಡಲೇ ಬೇರೆ ವಾಹನ ಮಗುವಿನ ಮೇಲೆ ಹರಿದು ಹೋಗಿದೆ. ನನ್ನ ಮಗಳ ಜೀವ ಹೋಗೋದಕ್ಕೆ ಇವರೇ ಕಾರಣ ಸ್ವಾಮಿ ಎಂದು ಗದ್ಗದಿತರಾದರು.
ಇತರ ಗ್ಯಾಲರಿಗಳು