ಮುಂಗಾರು ಆರಂಭಕ್ಕೂ ಮುನ್ನವೇ ಕರ್ನಾಟಕದಲ್ಲಿ ತುಂಬಿ ಹೊರ ಹರಿವು ಆರಂಭಿಸಿದ ಜಲಾಶಯ; ಯಾವುದು ಈ ಆಣೆಕಟ್ಟೆ, ಎಲ್ಲಿದೆ
ಕರ್ನಾಟಕದಲ್ಲಿ ಮುಂಗಾರು ಆರಂಭವಾಗುವ ಮುನ್ನ ಪೂರ್ವ ಮುಂಗಾರು ಮಳೆಗೆ ಜಲಾಶಯವೊಂದು ಭರ್ತಿಯಾಗಿ ನೀರು ಹೊರ ಬಿಡಲಾಗುತ್ತಿದೆ. ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆಯಾಗಿ ಹಾಸನ ಜಿಲ್ಲೆಯ ಯಗಚಿ ಜಲಾಶಯ ತುಂಬಿ ನೀರು ಹೊರ ಹರಿಸಲಾಗುತ್ತಿದೆ. ಇಲ್ಲಿದೆ ಚಿತ್ರನೋಟ.
(1 / 9)
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಯಗಚಿ ನದಿಗೆ ಕಟ್ಟಲಾಗಿರುವ ಯಗಚಿ ಜಲಾಶಯವು ಪೂರ್ವ ಮುಂಗಾರಿನ ಭಾರೀ ಮಳೆಗೆ ಈ ಬಾರಿ ತುಂಬಿದೆ. ಪ್ರತಿ ವರ್ಷ ಮುಂಗಾರು ಆರಂಭಗೊಂಡ ಒಂದು ತಿಂಗಳ ಬಳಿಕ ತುಂಬುತ್ತಿದ್ದ ಯಗಚಿ ಜಲಾಶಯ ಈ ಬಾರಿ ಬೇಗನೇ ತುಂಬಿದೆ.
(2 / 9)
ಯಗಚಿ ಜಲಾಶಯಕ್ಕೆ ಚಿಕ್ಕಮಗಳೂರು ಭಾಗದಿಂದ ಭಾರೀ ನೀರು ಹರಿದು ಬಂದಿದ್ದರಿಂದ ಭರ್ತಿಯಾಗಿ ಸುಮಾರು 500 ಕ್ಯೂಸೆಕ್ ನೀರನ್ನು ಶನಿವಾರ ಮಧ್ಯಾಹ್ನದಿಂದಲೇ ನದಿ ಮೂಲಕ ಹೊರಬಿಡಲಾಗುತ್ತಿದೆ. ಯಗಚಿ ನದಿ ಗೊರೂರು ಬಳಿ ಹೇಮಾವತಿ ನದಿ ಸೇರಿಕೊಳ್ಳಲಿದೆ.
(3 / 9)
ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನಗಿರಿ ಬೆಟ್ಟದಲ್ಲಿ ಉಗಮವಾಗುವ ಯಗಚಿ ನದಿ ಹಾಸನ ಜಿಲ್ಲೆ ಪ್ರವೇಶಿಸಿ ಬೇಲೂರು ಪಟ್ಟಣದ ಸಮೀಪವೇ ಹಾದು ಹೋಗುತ್ತದೆ. ಈ ನದಿಗೆ ಬದರಿ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಈ ನದಿಗೆ ನಿರ್ಮಿಸಿರುವ ಆಣೆಕಟ್ಟೆಯ ಹೆಸರು ಯಗಚಿ.
(4 / 9)
ಯಗಚಿ ಜಲಾಶಯವು ನಿರ್ಮಾಣವಾಗಿದ್ದು 2001 ರಲ್ಲಿ. ಬಳಕೆ ಶುರುವಾಗಿ ಎರಡು ದಶಕವೇ ಕಳೆದಿದೆ. ಬೇಲೂರು ತಾಲ್ಲೂಕಿನಲ್ಲಿ ನೀರಾವರಿಗೆ ಸಹಾಯಕವಾಗಲಿ ಎನ್ನುವ ಕಾರಣದಿಂದ ಯಗಚಿ ಜಲಾಶಯವನ್ನು ಕಾವೇರಿ ನೀರಾವರಿ ನಿಗಮದಡಿ ನಿರ್ಮಿಸಲಾಗಿದೆ. ಕುಡಿಯುವ ನೀರಿಗೂ ಜಲಾಶಯ ಉಪಯೋಗವಾಗುತ್ತಿದೆ. ಇದು ಜಲ ಕ್ರೀಡೆ ಸೇರಿ ವಿವಿಧ ಮನರಂಜನಾ ಚಟುವಟಿಕೆಗಳಿಂದಲೂ ಆಕರ್ಷಿಸುತ್ತದೆ.
(5 / 9)
ಬೇಲೂರು ಯಗಚಿ ಜಲಾಶಯವು ಕಿರಿಯದಾದರೂ ಇಲ್ಲಿ ಸುಮಾರು 3.60 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಉತ್ತಮ ನೀರು ಹರಿದು ಬಂದರೆ ಬೇಗನೇ ಜಲಾಶಯ ಭರ್ತಿಯಾಗಲಿದೆ. ಈ ಬಾರಿ ಜಲಾಶಯದಲ್ಲಿ ನೀರು ಕೂಡ ಇತ್ತು. ಚಿಕ್ಕಮಗಳೂರು ಭಾಗದಲ್ಲಿ ವಾರದಿಂದ ಮಳೆಯಾದ ಪರಿಣಾಮ ಜಲಾಶಯಕ್ಕೆ ನೀರು ಬಂದಿದೆ.
(6 / 9)
ಚಿಕ್ಕಮಗಳೂರು ಹಾಗೂ ಬೇಲೂರು ತಾಲ್ಲೂಕಿನ ಬೆಟ್ಟಗುಡ್ಡಗಳ ಸಾಲು, ಹಸಿರು ವಾತಾವರಣದ ನಡುವೆ ಬೇಲೂರು ತಾಲ್ಲೂಕಿನ, ಚಿಕ್ಕಬ್ಯಾಡಗೆರೆ ಗ್ರಾಮದಲ್ಲಿರುವ ಯಗಚಿ ಜಲಾಶಯವೀಕ್ಷಣೆಗೆ ನಿತ್ಯ ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಮಳೆಗಾಲದಲ್ಲಂತೂ ವೈಭವ ಚೆನ್ನಾಗಿಯೇ ಇರುತ್ತದೆ.
(7 / 9)
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಜೀವ ನದಿ ಎನ್ನಿಸಿರುವ ಯಗಚಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ, ಅಣೆಕಟ್ಟು ಭದ್ರತೆ ಹಿತದೃಷ್ಟಿಯಿಂದ ನೀರನ್ನು ಹೊರ ಹರಿಸಲಾಯಿತು. ಸಂದರ್ಭದಲ್ಲಿ ಸಂಪ್ರದಾಯದಂತೆ ʼಗಂಗಾಮಾತೆಗೆ ಪೂಜೆ ಮತ್ತು ಬಾಗಿನ ಅರ್ಪಿಸಿʼ ಐದು ಕ್ರಸ್ಟ್ ಗೇಟುಗಳ ಮೂಲಕ ಇಂದು 510 ಕ್ಯೂಸಕ್ ನೀರನ್ನು ನದಿಗೆ ಹೊರ ಬಿಡಲಾಯತು,
(8 / 9)
ಒಂದು ವಾರದಿಂದ ಮಲೆನಾಡಿನ ಚಿಕ್ಕಮಗಳೂರು,ಮೂಡಿಗೆರೆ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಯಗಚಿ ಜಲಾಶಯ ಭರ್ತಿಯಾಗಿರುವುದರಿಂದ ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಅವರು ಶನಿವಾರ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಇತರ ಗ್ಯಾಲರಿಗಳು