ವಿ ಶ್ರಿನಿವಾಸ್ ಪ್ರಸಾದ್ ಯಾರು?; ಚಾಮರಾಜನಗರ ಸಂಸದರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಚಿತ್ರನೋಟ
ಕೇಂದ್ರದ ಮಾಜಿ ಸಚಿವ, ಚಾಮರಾಜನಗರದ ಹಾಲಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಸೋಮವಾರ (ಏಪ್ರಿಲ್ 29) ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಅವರು ಬಳಲಿದ್ದರು. ಚಾಮರಾಜನಗರ ಸಂಸದರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮೈಸೂರಿನಲ್ಲಿ ವ್ಯವಸ್ಥೆ ಆಗಿದೆ. ವಿ ಶ್ರಿನಿವಾಸ್ ಪ್ರಸಾದ್ ಯಾರು?, ಅವರ ಕಿರುಪರಿಚಯದ ಜೊತೆಗಿನ ಚಿತ್ರನೋಟ ಇಲ್ಲಿದೆ.
(1 / 7)
ವಿ ಶ್ರಿನಿವಾಸ್ ಪ್ರಸಾದ್ ಯಾರು?; ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಎಬಿವಿಪಿ ಕಾರ್ಯಕರ್ತರಾಗಿ ಬೆಳೆದ ವಿ ಶ್ರೀನಿವಾಸ ಪ್ರಸಾದ್ ರಾಜಕೀಯವಾಗಿ ಸಂಯುಕ್ತ ಜನತಾದಳ, ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ರಾಜಕಾರಣ ಮಾಡಿ ಸುದೀರ್ಘ 5 ದಶಕಗಳ ರಾಜಕಾರಣ ನಡೆಸಿದ್ದನ್ನು ಕಳೆದ ಮಾರ್ಚ್ 17ಕ್ಕೆ ಆಚರಿಸಿಕೊಂಡು ಅದೇ ದಿನ ರಾಜಕೀಯ ನಿವೃತ್ತಿ ಘೋಷಿಸಿದ ಅಪರೂಪದ ರಾಜಕೀಯ ಮುತ್ಸದ್ದಿ ವಿ ಶ್ರೀನಿವಾಸ ಪ್ರಸಾದ್. ಮೈಸೂರಿನ ಅಶೋಕಪುರಂನಲ್ಲಿ ಎಂ ವೆಂಕಟಯ್ಯ ಮತ್ತು ಡಿವಿ ಪುಟ್ಟಮ್ಮ ಅವರ ಪುತ್ರನಾಗಿ 1947ರ ಜುಲೈ 6 ರಂದು ಜನಿಸಿದರು.
(2 / 7)
ವಿ ಶ್ರೀನಿವಾಸ್ ಪ್ರಸಾದ್ ಅವರು 1972 ರ ತನಕವೂ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸ್ವಯಂಸೇವಕರಾಗಿದ್ದರು. ಅವರು ಜನಸಂಘ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಎರಡರಲ್ಲೂ ಸಕ್ರಿಯರಾಗಿದ್ದರು. 1974ರ ಮಾರ್ಚ್ 17ರಂದು ಉಪಚುನಾವಣೆಯ ಮೂಲಕ ಚುನಾವಣಾ ರಾಜಕೀಯಕ್ಕೆ ಇಳಿದರು. ಕೃಷ್ಣರಾಜ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅವರು ಚುನಾವಣೆ ಎದುರಿಸಿ ಗೆಲುವು ಕಂಡಿದ್ದರು. ಬಳಿಕ 1976ರಲ್ಲಿ ಜನತಾ ಪಾರ್ಟಿ ಸೇರಿದರು. ತರುವಾಯ 1979ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಸಂಯುಕ್ತ ಜನತಾದಳ, ಸಮತಾ ಪಾರ್ಟಿ, ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷಗಳಲ್ಲೂ ರಾಜಕಾರಣ ಮಾಡಿದ್ದರು.
(3 / 7)
ಮೈಸೂರಿನ ನಿವಾಸದಲ್ಲಿ ವಿ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇರಿಸಿರುವುದು. (ಫೋಟೋ). ವಿ ಶ್ರೀನಿವಾಸ್ ಪ್ರಸಾದ್ ಅವರು ಬಳಿಕ 1996ರಲ್ಲಿ ಮತ್ತೆ ಕಾಂಗ್ರೆಸ್ ಸೇರಿದರು. ಆ ಸಂದರ್ಭದಲ್ಲಿ ಲೋಕಸಭೆಗೆ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. 1999ರಲ್ಲಿ ಮತ್ತು 2004ರಲ್ಲಿ ಸಂಸದರಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾದರು.
(4 / 7)
ಮೈಸೂರಿನಲ್ಲಿ ಜಿಟಿ ದೇವೇಗೌಡ ಅವರು ವಿ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. (ಫೋಟೋ). ಪಕ್ಷಾಂತರ ಮಾಡುತ್ತಲೇ ರಾಜಕಾರಣ ಮಾಡಿದ ವಿ ಶ್ರೀನಿವಾಸ ಪ್ರಸಾದ್ ದಲಿತ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಕರ್ನಾಟಕದ ದಲಿತ ಸೂರ್ಯ ಎಂಬ ವರ್ಣನೆಗೂ ಅವರು ಪಾತ್ರರಾಗಿದ್ದರು.
(5 / 7)
ಮೈಸೂರಿನಲ್ಲಿ ವಿ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸುತ್ತೂರು ಸ್ವಾಮೀಜಿ, (ಫೋಟೋ). ಅವರ ವಿಸ್ತೃತ 5 ದಶಕದ ರಾಜಕೀಯ ಜೀವನದಲ್ಲಿ, ಶ್ರೀನಿವಾಸ ಪ್ರಸಾದ್, 2016 ರಲ್ಲಿ ಕಾಂಗ್ರೆಸ್‌ನಿಂದ ಉಚ್ಚಾಟಿತರಾದ ಬಳಿಕ ಬಿಜೆಪಿ ಸೇರಿದ್ದರು. 2019ರಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದರು. ಕಳೆದ ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಅಳಿಯನಿಗೆ ಟಿಕೆಟ್ ಕೊಡಿಸಲು ಶ್ರಮಿಸಿ ಸೋತಿದ್ದರು. ಇದಾದ ಬಳಿಕ ಅವರ ಒಲವು ಕಾಂಗ್ರೆಸ್ ಕಡೆಗೆ ತಿರುಗಿತ್ತು.
(6 / 7)
ವಿ ಶ್ರೀನಿವಾಸ್ ಪ್ರಸಾದ್ ಅವರ ಪುತ್ರಿ ಜೊತೆಗೆ ಜಿಟಿ ದೇವೇಗೌಡ ಅವರನ್ನು ಸಂತೈಸಿದರು. (ಫೋಟೋ). ಶ್ರೀನಿವಾಸ್ ಪ್ರಸಾದ್ ಅವರು ಪತ್ನಿ ಭಾಗ್ಯಲಕ್ಷ್ಮಿ, ಮೂವರು ಪುತ್ರಿಯರನ್ನು- ಪ್ರತಿಮಾ ಪ್ರಸಾದ್, ಪೂರ್ಣಿಮಾ ಮತ್ತು ಪೂನಂ ಅವರನ್ನು ಅಗಲಿದ್ದಾರೆ.
ಇತರ ಗ್ಯಾಲರಿಗಳು