ಪುತ್ತೂರು ಜಾತ್ರೆ 2025: ಮೊದಲ ದಿನ ಬೊಳುವಾರು, ಕರ್ಮಲ ಕಡೆಗೆ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ- ಆಕರ್ಷಕ ಚಿತ್ರನೋಟ
Puttur Jatre 2025: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗುರುವಾರ (ಏಪ್ರಿಲ್ 10) ಶುರುವಾಗಿದ್ದು, ಮೊದಲ ದಿನ ಸಂಜೆ ಬೊಳುವಾರು, ಕರ್ಮಲ ಕಡೆಗೆ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ನಡೆಯಿತು. ಅದರ ಆಕರ್ಷಕ ಚಿತ್ರನೋಟ ಇಲ್ಲಿದೆ.
(1 / 11)
ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ನಿನ್ನೆ (ಏಪ್ರಿಲ್ 10) ಶುರುವಾಗಿದೆ. ಶ್ರೀ ದೇವರ ಮೊದಲ ದಿನದ ಪೇಟೆ ಸವಾರಿ ನೆಹರೂ ನಗರದ ಬೊಳುವಾರು, ಶ್ರೀ ರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲವರೆಗೆ ಹೋಗಿ ವಾಪಸ್ ದೇವಸ್ಥಾನದಲ್ಲಿ ಸಂಪನ್ನವಾಯಿತು.
(Shimladka)(2 / 11)
ಮಹಾಲಿಂಗೇಶ್ವರ ದೇವರು ಮೊದಲ ದಿನ ಕೆರೆ ಸಮೀಪದ ದ್ವಾರದ ಮೂಲಕ ಪೇಟೆ ಸವಾರಿ ಶುರು ಮಾಡಿದ್ದು, ದಾರಿಯುದ್ದಕ್ಕೂ ದೇವರನ್ನು ಬರಮಾಡಿಕೊಳ್ಳಲು ಭಕ್ತರು ಹಣ್ಣು ಕಾಯಿ, ಮಲ್ಲಿಗೆ ಹೂವಿನ ಮಾಲೆ ಮುಂತಾದವುಗಳನ್ನು ಸಿದ್ಧಮಾಡಿಟ್ಟುಕೊಂಡು ಕಾಯುತ್ತಿದ್ದರು.
(Shimladka)(3 / 11)
ದಾರಿಯುದ್ದಕ್ಕೂ ಅಲ್ಲಲ್ಲಿ ನೆಲ ಸಾರಿಸಿ ರಂಗೋಲಿ ಬಿಡಿಸಿ ದೇವರನ್ನು ಬರಮಾಡಿಕೊಂಡ ದೃಶ್ಯ ಭಕ್ತಿಭಾವನೆಯನ್ನು ಉದ್ದೀಪಿಸುವಂತೆ ಇತ್ತು.
(Shimladka)(4 / 11)
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂಜೆ ದೇವರ ದರ್ಶನ ಬಲಿ ನಡೆದ ಬಳಿಕ, ಶ್ರೀ ದೇವರು ಪೇಟೆ ಸವಾರಿ ಹೊರಡುವುದು ವಾಡಿಕೆ. ಇದರಂತೆ, ಜಾತ್ರೆಯ ಮೊದಲ ದಿನ (ಏಪ್ರಿಲ್ 10) ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ಹೊರಟಾಗ ದೇವಸ್ಥಾನದ ನಂದಿ ಮುಂಚೂಣಿಯಲ್ಲಿದ್ದು ಗಮನಸೆಳೆಯಿತು.
(Shimladka)(5 / 11)
ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ಹೊರಟಾಗ ಬೇತಾಳ ಬೊಂಬೆಗಳು ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿ ಗೋಚರಿಸಿದವು.
(Shimladka)(6 / 11)
ಮಂಗಳೂರು, ಉಪ್ಪಿನಂಗಡಿ ಭಾಗದಿಂದ ಪುತ್ತೂರು ಬಸ್ ನಿಲ್ದಾಣಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಬೊಳುವಾರು ಮೂಲಕ ಶ್ರೀ ದೇವರ ಸವಾರಿ ಸಾಗಿದ್ದು, ಅಂಗಡಿ ಮುಂಗಟ್ಟುಗಳವರು ಕೂಡ ತಮ್ಮ ಅಂಗಡಿಗಳ ಎದುರು ಟೇಬಲ್ ಇಟ್ಟು ದೀಪ ಹಚ್ಚಿ ದೇವರನ್ನು ಬರಮಾಡಿಕೊಳ್ಳಲು ನಿಂತಿದ್ದ ದೃಶ್ಯ ಇದು.
(Shimladka)(7 / 11)
ಭಕ್ತರು ಎಲ್ಲೆಲ್ಲಿ ಆರತಿ ಬೆಳಗುವುದಕ್ಕೆ ವ್ಯವಸ್ಥೆ ಮಾಡಿದ್ದಾರೋ ಅಲ್ಲೆಲ್ಲ ದೇವರು ನಿಂತು ಆರತಿ ಸ್ವೀಕರಿಸಿ, ಹೂವು ಮುಡಿಗೇರಿಸಿಕೊಂಡು, ನೈವೇದ್ಯ ತಗೊಂಡು, ಪ್ರಸಾದ ಕೊಡುತ್ತ ಮುಂದೆ ಸವಾರಿ ಮುಂದುವರಿಸಿದರು.
(Shimladka)(8 / 11)
ಮಯೂರ, ಬೊಳುವಾರು, ಕರ್ಮಲ ಸೇರಿ ಕೆಲವು ಕಡೆ ಮಹಾಲಿಂಗೇಶ್ವರ ದೇವರ ಕಟ್ಟೆಗಳಿದ್ದು ಅಲ್ಲಿ ದೇವರು ಕೆಲ ನಿಮಿಷ ವಿರಮಿಸಿ ಪೂಜೆ ಸ್ವೀಕರಿಸಿ ಮುಂದುವರಿಯುವುದು ವಾಡಿಕೆ. ಹಾಗೆ ಮಯೂರ ಕಟ್ಟೆಗೆ ದೇವರು ಪ್ರವೇಶಿಸುತ್ತಿದ್ದ ಸಂದರ್ಭದ ನೋಟ.
(Shimladka)(10 / 11)
ಬೊಳುವಾರು ಸಮೀಪ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರ ಪೈಕಿ ಒಬ್ಬರಾಧ ಉದಯ ಭಟ್ ಅವರ ಮನೆ ಆವರಣದ ದೇವರ ಕಟ್ಟೆಯಲ್ಲಿ ಪೂಜೆ ಸ್ವೀಕರಿಸಿದರು.
(Shimladka)ಇತರ ಗ್ಯಾಲರಿಗಳು