ಪುತ್ತೂರು: ಅಭೀಷ್ಟಸಿದ್ಧಿ ಕಲ್ಪೋಕ್ತ ಶ್ರೀಲಕ್ಷ್ಮೀವೆಂಕಟರಮಣ ಪೂಜೆ; ಪೋಳ್ಯ ಶ್ರೀಲಕ್ಷ್ಮೀವೆಂಕಟರಮಣ ಮಠದಲ್ಲಿ ವಿಶೇಷ ಪೂಜೆ, ಚಿತ್ರನೋಟ
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸಮೀಪದ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ಸನ್ನಿಧಿನಿಯಲ್ಲಿ ಶನಿವಾರ (ಜನವರಿ 18) ದೇವರಿಗೆ ವಿಶೇಷ ರಂಗಪೂಜೆ ಮತ್ತು ಕಲ್ಪೋಕ್ತ ಶ್ರೀ ಲಕ್ಷ್ಮೀವೆಂಕಟರಮಣ ಪೂಜೆ ನೆರವೇರಿತು. ಏನಿದು ಕಲ್ಪೋಕ್ತ ಶ್ರೀಲಕ್ಷ್ಮೀವೆಂಕಟರಮಣ ಪೂಜೆ ಎಂಬ ಕುತೂಹಲ ಸಹಜ. ಪೂಜಾ ವಿಶೇಷ ಮತ್ತು ಆಕರ್ಷಕ ಚಿತ್ರನೋಟ ಇಲ್ಲಿದೆ.
(1 / 8)
ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದಲ್ಲಿ ಶನಿವಾರ (ಜನವರಿ 18) ಶ್ರೀ ದೇವರಿಗೆ ವಿಶೇಷ ರಂಗಪೂಜೆ ಮತ್ತು ಕಲ್ಪೋಕ್ತ ಶ್ರೀಲಕ್ಷ್ಮೀವೆಂಕಟರಮಣ ಪೂಜೆ ನೆರವೇರಿತು. ವಿಶೇಷ ಪೂಜೆ ನಿಮಿತ್ತ ಶನಿವಾರ ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಿಶೇಷ ಪೂಜೆಯ ವಿವರ ಮತ್ತು ಆಕರ್ಷಕ ಚಿತ್ರನೋಟ ಇಲ್ಲಿದೆ.
(2 / 8)
ಶ್ರೀಲಕ್ಷ್ಮೀವೆಂಕಟರಮಣ ದೇವರಿಗೆ ವಿಶೇಷ ರಂಗಪೂಜೆ ಮತ್ತು ಕಲ್ಪೋಕ್ತ ಶ್ರೀಲಕ್ಷ್ಮೀವೆಂಕಟರಮಣ ಪೂಜಾ ಕಾರ್ಯಕ್ರಮದ ಭಾಗವಾಗಿ ಶನಿವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀ ಮಹಾಗಣಪತಿ ಹವನ ನೆರವೇರಿತು. ಸಂಜೆ 5 ಗಂಟೆಗೆ ಶ್ರೀದೇವರಿಗೆ ಪೂಜೆ ಶುರುವಾಗಿದ್ದು, ರಾತ್ರಿ 9 ಗಂಟೆ ವೇಳೆಗೆ ಕಲ್ಪೋಕ್ತ ಶ್ರೀಲಕ್ಷ್ಮೀವೆಂಕಟರಮಣ ಪೂಜಾ ಕಾರ್ಯಕ್ರಮ ಸಂಪನ್ನಗೊಂಡಿದೆ.
(3 / 8)
ಕಲ್ಪೋಕ್ತ ಶ್ರೀಲಕ್ಷ್ಮೀವೆಂಕಟರಮಣ ಪೂಜೆ ನೆರವೇರಿಸುವುದಕ್ಕಾಗಿ, ತಾತ್ಕಾಲಿಕವಾಗಿ ಶ್ರೀ ವೆಂಕಟರಮಣಸ್ವಾಮಿ ದೇವರ ಮೂರ್ತಿ ಸ್ಥಾಪಿಸಿ ದೇವರ ರಂಗೋಲಿಯ ಮಂಡಲ ಬಿಡಿಸಲಾಗಿತ್ತು. ರಂಗೋಲಿ ಮಂಡಲವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ರಂಗೋಲಿ ಮಂಡಲ ಬಿಡಿಸುವುದಕ್ಕೆ ಪುರೋಹಿತರಿಗೆ 3 ತಾಸು ಬೇಕಾಯಿತು ಎಂದು ದೇವಸ್ಥಾನದ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
(4 / 8)
ಏನಿದು ಕಲ್ಪೋಕ್ತ ಶ್ರೀಲಕ್ಷ್ಮೀವೆಂಕಟರಮಣ ಪೂಜೆ ಎಂಬ ಕುತೂಹಲ ಸಹಜ. ಈ ವಿಶೇಷ ಪೂಜೆಯನ್ನು ನೆರವೇರಿಸಿದ ವೇದಮೂರ್ತಿ ಶ್ರೀಧರ ಭಟ್ ಅವರು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಜತೆಗೆ ಮಾತನಾಡಿದ್ದು, ಅಭೀಷ್ಟಗಳನ್ನು ಈಡೇರಿಸುವಂತೆ ಭಗವಂತನನ್ನು ಪ್ರಾರ್ಥಿಸುವ ಮತ್ತು ಪೂಜಿಸುವ ವಿಶೇಷ ವಿಧಾನ ಇದು. ಮೊದಲೇ ಸಂಕಲ್ಪ ಮಾಡಿಕೊಂಡು, ಕಾರ್ಯಗಳು ಈಡೇರಿದ ಬಳಿಕ ಕಲ್ಪೋಕ್ತ ಪೂಜೆಯನ್ನು ನೆರವೇರಿಸಲಾಗುತ್ತದೆ ಎಂದು ವಿವರಿಸಿದರು.
(5 / 8)
ಕಲ್ಪೋಕ್ತ ಪೂಜೆಯನ್ನು ಗಣಪತಿ ದೇವರು, ಸತ್ಯನಾರಾಯಣ ದೇವರು, ಶ್ರೀವರದಶಂಕರ ಕಲ್ಪೋಕ್ತ ಪೂಜೆ ಮಾಡುವ ಪರಿಪಾಠವಿದೆ. ಷೋಡಷೋಪಚಾರಗಳನ್ನು ಒಳಗೊಂಡ ಪೂಜೆ ಇದು. ಅದೇ ರೀತಿ ಈಗ ನಾವು ಶ್ರೀಲಕ್ಷ್ಮೀವೆಂಕಟರಮಣ ದೇವರ ಕಲ್ಪೋಕ್ತ ಪೂಜೆಯನ್ನು ನೆರವೇರಿಸಿದ್ದೇವೆ ಎಂದು ಶ್ರೀಧರ ಭಟ್ ವಿವರಿಸಿದರು.
(6 / 8)
ಬಹುತೇಕರು ಕಲ್ಪೋಕ್ತ ಪೂಜೆಯನ್ನು ತಮ್ಮ ತಮ್ಮ ಮನೆಗಳಲ್ಲಿ ವೈಯಕ್ತಿಕವಾಗಿ ತಮ್ಮ ಕುಟುಂಬದ ಕ್ಷೇಮಾಭಿವೃದ್ಧಿ, ಏಳಿಗೆ ಬಯಸಿ ಸಂಕಲ್ಪ ಮಾಡಿ, ಅದು ಈಡೇರಿದ ಬಳಿಕ ಕಲ್ಪೋಕ್ತ ಪೂಜೆಯನ್ನು ನೆರವೇರಿಸುತ್ತಾರೆ. ಶ್ರೀದೇವರ ಪೂಜೆ ವೇಳೆ ಮಹಿಳೆಯರು ಕನಕಧಾರಾ ಸ್ತೋತ್ರ ಪಠಿಸಿದರು.
(7 / 8)
ಕಲ್ಪೋಕ್ತ ಪೂಜೆ ಎಂದರೆ ಷೋಡಷೋಪಚಾರಗಳನ್ನು ಒಳಗೊಂಡ ಪೂಜೆ. ಪುರುಷ ಸೂಕ್ತ, ಶ್ರೀ ಸೂಕ್ತ, ಸಹಸ್ರನಾಮಾರ್ಚನೆ, ಅಂಗ ಪೂಜೆ, ಮಂತ್ರ ಪೂಜೆ, ಸಹಸ್ರನಾಮ ಪೂಜೆ, ಕಲಶ ಪ್ರತಿಷ್ಠಾಪನೆ ಮಾಡಿ ಪೂರ್ಣಾಹುತಿ ಪೂಜೆ ಇದು ಎಂದು ಶ್ರೀಧರ ಭಟ್ ವಿವರಿಸಿದರು.
ಇತರ ಗ್ಯಾಲರಿಗಳು