ಪ್ರೀತಿಗೆ 'ಸೈ' ಎನ್ನುವ ಮೊದಲು ಯೋಚಿಸಿ, ಗ್ಯಾಸ್ ಸಿಲಿಂಡರ್ ಬಳಸುವಾಗ ಇರಲಿ ಎಚ್ಚರ; ಈ 8 ಕಾಳಜಿ ಮಾತುಗಳು ನಿಮಗಾಗಿ
- ಬೇಸಿಗೆ ಆರಂಭವಾಗಿದೆ. ಹಕ್ಕಿಗಳಿಗೆ ನೀರಿಡಿ. ರಸ್ತೆ ಅಪಘಾತದ ಸಮಯದಲ್ಲಿ ಗಾಯಗೊಂಡವರ ಕುರಿತು ಕಾಳಜಿ ವಹಿಸಿ. ಹಿರಿಯರನ್ನು ಕಡೆಗಣಿಸಬೇಡಿ. ಹೀಗೆ, ಪ್ರತಿನಿತ್ಯ ನಾವು ಕಾಳಜಿ ವಹಿಸಬೇಕಾದ ವಿವಿಧ ಅಂಶಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
- ಬೇಸಿಗೆ ಆರಂಭವಾಗಿದೆ. ಹಕ್ಕಿಗಳಿಗೆ ನೀರಿಡಿ. ರಸ್ತೆ ಅಪಘಾತದ ಸಮಯದಲ್ಲಿ ಗಾಯಗೊಂಡವರ ಕುರಿತು ಕಾಳಜಿ ವಹಿಸಿ. ಹಿರಿಯರನ್ನು ಕಡೆಗಣಿಸಬೇಡಿ. ಹೀಗೆ, ಪ್ರತಿನಿತ್ಯ ನಾವು ಕಾಳಜಿ ವಹಿಸಬೇಕಾದ ವಿವಿಧ ಅಂಶಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
(1 / 9)
ಪ್ರತಿನಿತ್ಯ ನಾವು ವಿವಿಧ ಅಂಶಗಳ ಕುರಿತು ಕಾಳಜಿ ವಹಿಸುವ ಮೂಲಕ ಈ ಜಗತ್ತನ್ನು ನಾವು ಇನ್ನಷ್ಟು ಸುಂದರಗೊಳಿಸಬಹುದು. ನಾವು ನಮ್ಮ ಬಗ್ಗೆ ಮಾತ್ರ ಯೋಚಿಸದೆ ನಮ್ಮ ಸುತ್ತಮುತ್ತ ಇರುವ ಪರಿಸರ, ಜನರ ಕಡೆಗೂ ಗಮನ ನೀಡಬೇಕು. ಇದೇ ರೀತಿ ನಮ್ಮ ವೈಯಕ್ತಿಕ ಬದುಕಿನ ಕುರಿತು ಕಾಳಜಿ ವಹಿಸಬೇಕು. ಬನ್ನಿ ಎಂಟು ಕಾಳಜಿ ವಿಷಯಗಳನ್ನು ತಿಳಿದುಕೊಳ್ಳೋಣ.
(2 / 9)
ರಸ್ತೆ ಅಪಘಾತ- ಸಹಾಯ ಮಾಡಲು ಹಿಂಜರಿಯಬೇಡಿ: ರಸ್ತೆ ಅಪಘಾತದ ಸಮಯದಲ್ಲಿ ಗಾಯಾಳುಗಳಿಗೆ ಸಹಾಯ ಮಾಡಲು ಹಿಂಜರಿಯಬೇಡಿ. ಆಸ್ಪತ್ರೆ, ಅಂಬ್ಯುಲೆನ್ಸ್ ಸಹಾಯವಾಣಿಗೆ ಕರೆ ಮಾಡಿ. ಅಪಘಾತಗೊಂಡ ವಾಹನ ಚಾಲು ಸ್ಥಿತಿಯಲ್ಲಿದ್ದರೆ ಇಗ್ನಿಷನ್ ಆಫ್ ಮಾಡಿ. ಇತರ ಜನರ ಸಹಾಯ ಪಡೆಯಿರಿ. ಗಾಯಾಳುಗಳ ಸ್ಥಿತಿ ನೋಡಿಕೊಂಡು ಆರೈಕೆ ಮಾಡುವ ಪ್ರಾಥಮಿಕ ಮಾಹಿತಿ ಇರುವವರು ಪ್ರಾಥಮಿಕ ಚಿಕಿತ್ಸೆ ನೀಡಬಹುದು.
(3 / 9)
ಪ್ರೀತಿಗೆ 'ಸೈ' ಎನ್ನುವ ಮೊದಲು ಯೋಚಿಸಿ: ಕಾಲೇಜುಗಳಲ್ಲಿ ವ್ಯಾಲಂಟೈನ್ ದಿನದ ಕಾವು ಕಾಣಿಸುತ್ತಿರುವ ದಿನಗಳಿವು. ಯಾರೋ ಗುಲಾಬಿ ಹಿಡಿದು ಬಂದರು ಎಂದು ಏಕಾಏಕಿ 'ಸೈ' ಎನ್ನದಿರಿ. ಹೀಗೆ ಹೂ ಕೊಡುವ ಎಲ್ಲರೂ ಯೋಗ್ಯರಲ್ಲ. ನಿಮ್ಮ ಮೇಲೆಯೇ ಜೀವ ಇಟ್ಟುಕೊಂಡಿರುವ ಅಪ್ಪ-ಅಮ್ಮನ ಬಗ್ಗೆ ಯೋಚಿಸಿ. ಪ್ರೀತಿಗೆ, ಮದುವೆಗೂ ಒಂದು ಕಾಲವಿದೆ. ಆದರೆ ಅದು ಈಗಲ್ಲ. ಸಾವಧಾನ, ಸಮಾಧಾನದಿಂದ ಮಾತ್ರ ಉತ್ತಮ ಬದುಕು ನಿಮ್ಮದಾಗಲು ಸಾಧ್ಯ.
(4 / 9)
ಬಸ್, ಮೆಟ್ರೋದಲ್ಲಿ ಮಾನವೀಯತೆ ಮರೆಯಬೇಡಿ: ಬಸ್, ಮೆಟ್ರೋ, ರೈಲು ಪ್ರಯಾಣದ ಸಮಯದಲ್ಲಿ ಹಿರಿಯ ನಾಗರಿಕರಿಗೆ, ವಿಶೇಷಚೇತನರಿಗೆ ಮೀಸಲಿಟ್ಟ ಸೀಟುಗಳಲ್ಲಿ ಕುಳಿತುಕೊಳ್ಳಬೇಡಿ. ಮೀಸಲಿಟ್ಟ ಸೀಟುಗಳು ಖಾಲಿ ಇಲ್ಲದೆ ಇದ್ದಾಗ ಹಿರಿಯ ನಾಗರಿಕರು, ವಿಶೇಷ ಚೇತನರು ಬಂದಾಗ "ಅವರನ್ನು ನೋಡದಂತೆ ಕುಳಿತುಕೊಳ್ಳಬೇಡಿ". ಅವರಿಗೆ ಸೀಟು ಬಿಟ್ಟು ಮಾನವೀಯತೆ ಮೆರೆಯಿರಿ.
(5 / 9)
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪರಿಸರ ಉಳಿಸಿ: ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಎಷ್ಟು ಹಾನಿ ಇದೆ ಎಂದು ನಿಮಗೆ ಗೊತ್ತು. ಹೀಗಿದ್ದರೂ, ಅಂಗಡಿಗೆ ಹೋಗುವಾಗ ಕೈಚೀಲ ಏಕೆ ನೀವು ತೆಗೆದುಕೊಂಡು ಹೋಗುತ್ತಿಲ್ಲ. ಅಂಗಡಿಯವರಲ್ಲಿ ಪ್ರತಿಬಾರಿ ಪ್ಲಾಸ್ಟಿಕ್ ಬ್ಯಾಕ್ ಪಡೆಯುವುದೇಕೆ? ಈಗಿನಿಂದಲೇ ದಿನನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಿರುವಷ್ಟು ಕಡಿಮೆ ಮಾಡಿ. ಪರಿಸರ ಉಳಿಸಿ.
(6 / 9)
ಬಾಯಾರಿವೆ ಬಾನಾಡಿಗಳು: ಬೇಸಿಗೆ ಶುರುವಾಗಿದೆ. ಬಿಸಿಲಿನಲ್ಲಿ ನೀರಿಲ್ಲದೆ ಹಕ್ಕಿಗಳು ಪರಿತಪಿಸದಿರಲಿ. ಹಕ್ಕಿಗಳಿಗೆ ನೀರುಣಿಸುವ ಮೂಲಕ, ಪಕ್ಷಿ ಸಂಕುಲವನ್ನು ಉಳಿಸಬಹುದು. ಮನೆಯ ಮೇಲೆ ಹಾರಿ ಬರುವ ಹಕ್ಕಿಗಳಿಗೆ ಅಗಲವಾದ ಪಾತ್ರೆಗಳಲ್ಲಿ ನೀರು ಇಡಬಹುದು, ಸುತ್ತಲೂ ಕಾಳು ಹಾಕಬಹುದು.
(7 / 9)
ಹಿರಿಯರನ್ನು ಕಡೆಗಣಿಸಬೇಡಿ: ಅಜ್ಜಿ, ಅಜ್ಜ, ವಯಸ್ಸಾದ ಅಮ್ಮ, ಅಪ್ಪ ಸೇರಿದಂತೆ ದೂರದ ಊರಿನಲ್ಲಿರುವ ಹಿರಿಯರಲ್ಲಿ ದಿನನಿತ್ಯ ಮಾತನಾಡಲು ಸಮಯ ಮೀಸಲಿಡಿ. ಮನೆಯಲ್ಲಿ ಹಿರಿಯರಿದ್ದರೆ "ನೀವು ಕೆಲಸ/ಶಾಲೆ/ಕಾಲೇಜು/ ಮುಗಿಸಿಕೊಂಡು ಮನೆಗೆ ಬಂದಾಗ ಅವರಲ್ಲಿ ಮಾತನಾಡಿ. ಮನೆಯಲ್ಲಿದ್ದು ಅವರಿಗೆ "ಮಾತಿನ ಹಸಿವು" ಆಗಿರುತ್ತದೆ. ವೃದ್ಧಾಪ್ಯದಲ್ಲಿ ಹಿರಿಯರಿಗೆ ಒಂಟಿತನ, ಖಿನ್ನತೆ ಕಾಡದಂತೆ ಜತನದಿಂದ ನೋಡಿಕೊಳ್ಳಿ. ಮನೆಯ ಹೊರಗಡೆ ಎದುರಾಗುವ ಹಿರಿಯರಲ್ಲಿಯೂ ಆತ್ಮೀಯತೆ ಬೆಳೆಸಿಕೊಳ್ಳಿ.
(8 / 9)
ಗ್ಯಾಸ್ ಸಿಲಿಂಡರ್ ಬಳಸುವಾಗ ಎಚ್ಚರ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವಾಗ ಸದಾ ಎಚ್ಚರಿಕೆಯ ಸ್ಥಿತಿಯಲ್ಲಿ ಇರಬೇಕು. ಏನಾದರೂ ಲೀಕೇಜ್, ಸ್ಮೆಲ್ ಇರುವುದೇ ಎಂದು ಪರಿಶೀಲಿಸಿ. ವಿಶೇಷವಾಗಿ ಬೆಳಗ್ಗೆ ನಿದ್ದೆಗಣ್ಣಿನಲ್ಲಿ ಗ್ಯಾಸ್ ಆನ್ ಮಾಡಿ ಬೆಂಕಿ ಹಚ್ಚುವಾಗ ಎಚ್ಚರಿಕೆ ಇರಬೇಕು. ಲೀಕೇಜ್ ಇದ್ದರೆ ಕಿಟಕಿ ಬಾಗಿಲು ತೆರೆಯಿರಿ, ತೆರೆದ ಪ್ರದೇಶದಲ್ಲಿ ಸಿಲಿಂಡರ್ ತಂದಿಡಿ. ಗ್ಯಾಸ್ ಕಂಪನಿ ಸಹಾಯವಾಣಿಗೆ ಕರೆ ಮಾಡಿ.
(9 / 9)
ಹೆಲ್ಮೆಟ್ ಧರಿಸದೆ ಪ್ರಯಾಣಿಸಬೇಡಿ: ದ್ವಿಚಕ್ರವಾಹನ ರೈಡ್ ಮಾಡುವಾಗ ಅಥವಾ ಹಿಂಬದಿ ಸವಾರಿ ಮಾಡುವ ಸಮಯದಲ್ಲಿ ಗುಣಮಟ್ಟದ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ. ಟ್ರಾಫಿಕ್ ಪೊಲೀಸರಿಗಾಗಿ ಹೆಲ್ಮೆಟ್ ಧರಿಸಬೇಡಿ. ನಿಮ್ಮ ತಲೆ, ನಿಮ್ಮ ಪ್ರಾಣ ಉಳಿಸುವ ಸಲುವಾಗಿ "ನಿಮಗಾಗಿ" ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ. ರಸ್ತೆ ಅಪಘಾತದಲ್ಲಿ ಸಂಭವಿಸುವ ಸಾವುಗಳಿಗೆ ಹೆಲ್ಮೆಟ್ ಧರಿಸದೆ ಪ್ರಯಾಣಿಸುವುದು ಪ್ರಮುಖ ಕಾರಣವಾಗಿದೆ.
ಇತರ ಗ್ಯಾಲರಿಗಳು