ತುಮಕೂರು: ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿ ಹೋಂಡಾ ಆಕ್ಟೀವಾ ಸ್ಕೂಟರ್ ಒಳಗಿತ್ತು ಆ ನಾಗರಹಾವು- ಫೋಟೋ ವರದಿ
ತುಮಕೂರು ಸಮೀಪದ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟೀವಾ ಸ್ಕೂಟರ್ ಒಳಗೆ ಸೇರಿಕೊಂಡಿತ್ತು ಆ ನಾಗರಹಾವು. ಅದನ್ನು ರಕ್ಷಿಸಿ ಮತ್ತೆ ಅರಣ್ಯ ಬಿಟ್ಟುಬರುವ ಕೆಲಸವನ್ನು ವರಂಗಲ್ ಫೌಂಡೇಷನ್ ವನ್ಯಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಯ ದಿಲೀಪ್ ಮಾಡಿದ್ರು. ಅವರು HT ಕನ್ನಡದ ಜೊತೆ ಮಾತನಾಡಿದ್ದು, ಫೋಟೋ ವರದಿ ಇಲ್ಲಿದೆ.
(1 / 6)
ತುಮಕೂರು ಸಮೀಪದ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಎಂಬಲ್ಲಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್ ಒಳಗೆ ನಾಗರ ಹಾವು ಸೇರಿಕೊಂಡಿತ್ತು. ಭಾನುವಾರ (ಮೇ 5) ರಾತ್ರಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿತ್ತು.
(2 / 6)
ಹೊನ್ನುಡಿಕೆ ಹ್ಯಾಂಡ್ ಪೋಸ್ಟ್‌ನ ಮಾಯರಂಗಯ್ಯ ಎಂಬುವವರ ಮನೆಯ ಆವರಣದಲ್ಲಿ ರಾತ್ರಿ ವೇಳೆ ಈ ನಾಗರ ಹಾವು ಕಂಡುಬಂದಿತ್ತು. ಕೂಡಲೆ ಅವರು ಉರಗ ತಜ್ಞ ದಿಲೀಪ್ ಅವರಿಗೆ ಕರೆ (9916790692) ಮಾಡಿ ಹಾವು ಇರುವ ವಿಚಾರ ತಿಳಿಸಿದ್ದರು.
(3 / 6)
ದಿಲೀಪ್ ಅವರು ಈ ವಿಚಾರವಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ (HT ಕನ್ನಡ) ಜೊತೆಗೆ ಮಾತನಾಡಿದ್ದು, ಕಾರ್ಯಾಚರಣೆಯ ವಿವರ ನೀಡಿದ್ದಾರೆ. ನಾಗರ ಹಾವು ಕಂಡ ಮನೆಯ ಬಳಿ ಹೋದಾಗ ಅಲ್ಲಿ ಅದು ಕಾಣಸಿಗಲಿಲ್ಲ. ಕೊನೆಗೆ ಅಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟೀವಾ ಸ್ಕೂಟರ್ ಒಳಗೆ ಸೇರಿಕೊಂಡಿರಬಹುದು ಎಂಬ ಶಂಕೆಯಲ್ಲಿ ಅದನ್ನು ಬಿಚ್ಚಿ ನೋಡುತ್ತಿದ್ದಾಗ, ಹಿಂಬದಿ ನಂಬರ್ ಪ್ಲೇಟ್ ಹತ್ತಿರದಿಂದ ಹಾವು ತಲೆ ಹೊರಗೆ ಹಾಕಿತು ಎಂದು ದಿಲೀಪ್ ವಿವರಿಸಿದರು.
(4 / 6)
ಹಾವು ಹೋಂಡಾ ಆಕ್ಟೀವಾ ಒಳಗೆ ಸೇರಿಕೊಂಡಿರುವುದು ಖಚಿತವಾದ ಬಳಿಕ ಅದನ್ನು ಅಲ್ಲಿಂದ ಹೊರಗೆ ಬರುವಂತೆ ಮಾಡಿ ಹಿಡಿಯುವ ಪ್ರಯತ್ನ ಮಾಡಿದೆವು. ಒಂದು ಗಂಟೆ ಕಾರ್ಯಾಚರಣೆಯಲ್ಲಿ ಹಾವನ್ನು ಹಿಡಿದು ಬಟ್ಟೆ ಚೀಲಕ್ಕೆ ತುಂಬಿಸಿ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟುಬರಲಾಗಿದೆ ಎಂದು ದಿಲೀಪ್ ಹೇಳಿದರು.
(5 / 6)
ಸ್ಕೂಟರ್ ಒಳಗೆ ಸೇರಿದ್ದ ಹಾವು ಹಿಡಿಯುವ ಕಾರ್ಯಾಚರಣೆ ವೀಕ್ಷಿಸಲು ಸುತ್ತಮುತ್ತಲಿನ ಜನ ಬಂದು ಸೇರಿದ್ದರು. ಅವರ ನಡುವೆ ಸುರಕ್ಷಿತವಾಗಿ ಹಾವನ್ನು ದಿಲೀಪ್ ಮತ್ತು ತಂಡ ಹಿಡಿದಿದೆ.
(6 / 6)
ಅಂದ ಹಾಗೆ ದಿಲೀಪ್ ಅವರು ತುಮಕೂರಿನಲ್ಲಿ ವಾರಂಗಲ್ ಫೌಂಡೇಷನ್ ವನ್ಯಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಯನ್ನು ರಚಿಸಿಕೊಂಡಿದ್ದಾರೆ. ಹದಿನೈದು ಸದಸ್ಯರ ಅವರ ತಂಡ ವನ್ಯಜೀವಿ ರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದು, ತುಮಕೂರು ಸುತ್ತಮುತ್ತ ಮನೆಗಳಿಗೆ ನುಗ್ಗುವ ಹಾವು ಮತ್ತು ಇತರೆ ವನ್ಯಜೀವಿಗಳನ್ನು ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುವ ಕೆಲಸ ಮಾಡುತ್ತಿದ್ದಾರೆ.
ಇತರ ಗ್ಯಾಲರಿಗಳು