ಕೇಂದ್ರ ಬಜೆಟ್ 2025: ಭಾರತದ ಮೊದಲ ಬಜೆಟ್ ಮಂಡನೆ ದಿನಾಂಕ ಸೇರಿ ಕೇಂದ್ರ ಮುಂಗಡಪತ್ರಕ್ಕೆ ಸಂಬಂಧಿಸಿದ 10 ಆಸಕ್ತಿದಾಯಕ ವಿಚಾರಗಳಿವು
Union Budget Interesting Facts: ಕೇಂದ್ರ ಬಜೆಟ್ 2025 ಮಂಡನೆ ಫೆ 1 ರಂದು ನಡೆಯಲಿದೆ. ಕೇಂದ್ರ ಬಜೆಟ್ ಇತಿಹಾಸ ಬಹಳ ಕುತೂಹಲಕಾರಿಯಾದುದು. ಭಾರತದ ಮೊದಲ ಬಜೆಟ್ ಮಂಡನೆಯಾದ ದಿನಾಂಕ ಸೇರಿ ಕೇಂದ್ರ ಮುಂಗಡಪತ್ರಕ್ಕೆ ಸಂಬಂಧಿಸಿದ 10 ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.
(1 / 10)
ಭಾರತದ ಮೊದಲ ಬಜೆಟ್ ಅನ್ನು 1860ರ ಏಪ್ರಿಲ್ 7 ರಂದು ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ ಮಂಡಿಸಿದರು. ಇದೇ ಬಜೆಟ್‌ನಲ್ಲಿ ಆದಾಯ ತೆರಿಗೆ ಪರಿಚಯಿಸಲ್ಪಟ್ಟಿತು. ಈ ತೆರಿಗೆ ಈಗಲೂ ಸರ್ಕಾರದ ಆದಾಯದ ಪ್ರಮುಖ ಮೂಲವಾಗಿ ಮುಂದುವರಿದಿದೆ.
(2 / 10)
ಸ್ವತಂತ್ರ ಭಾರತದ ಮೊದಲ ಬಜೆಟ್: ಸ್ವತಂತ್ರ ಭಾರತದ ಮೊದಲ ಬಜೆಟ್ 1947ರ ನವೆಂಬರ್ 26 ರಂದು ಮಂಡಿಸಲ್ಪಟ್ಟಿತು. ಇದನ್ನು ಆ ಕಾಲದ ಹಣಕಾಸು ಸಚಿವ ಆರ್ ಕೆ ಷಣ್ಮುಖಂ ಚೆಟ್ಟಿ ಮಂಡಿಸಿದರು. ಈ ಬಜೆಟ್ ಕೇವಲ 4 ತಿಂಗಳ ಮಟ್ಟಿಗೆ ಮಾತ್ರ ಅನ್ವಯವಾಗುವಂಥದ್ದಾಗಿತ್ತು.
(3 / 10)
ಬಜೆಟ್ ಭಾಷಣ ಸಮಯದ ದಾಖಲೆ: ಭಾರತದ ಬಜೆಟ್ ಮಂಡನೆ ಇತಿಹಾಸದಲ್ಲಿ ಸುದೀರ್ಘ ಬಜೆಟ್ ಭಾಷಣ ಮಾಡಿದ ದಾಖಲೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿದೆ. 2020ರ ಫೆ 1 ರಂದು 2020-21 ರ ಬಜೆಟ್ ಭಾಷಣ 2 ಗಂಟೆ 42 ನಿಮಿಷ ಮಾಡಿದ್ದರು. ಇದಕ್ಕೂ ಮೊದಲು 2019ರ ಜುಲೈನಲ್ಲಿ 2 ಗಂಟೆ 19 ನಿಮಿಷ ಬಜೆಟ್ ಭಾಷಣ ಮಾಡಿದ್ದರು.ನಿರ್ಮಲಾ ಸೀತಾರಾಮನ್ ಅವರು ಮೊದಲ ಪೂರ್ಣಕಾಲಿಕ ಮಹಿಳಾ ವಿತ್ತ ಸಚಿವರು ಎಂಬ ಕೀರ್ತಿಗೂ ಭಾಜನರು. ಅವರು ಈ ಬಾರಿ 8 ನೇ ಸಲ ಬಜೆಟ್ ಮಂಡಿಸುತ್ತಿದ್ದಾರೆ. ಇಂದಿರಾ ಗಾಂಧಿ ಅವರ ಬಳಿಕ ಬಜೆಟ್ ಮಂಡಿಸಿದ ಎರಡನೇ ಮಹಿಳೆ ನಿರ್ಮಲಾ ಸೀತಾರಾಮನ್.
(4 / 10)
ಪ್ರಧಾನಿಯೇ ಬಜೆಟ್ ಮಂಡಿಸಿದ ಸಂದರ್ಭ: ಭಾರತದಲ್ಲಿ ಹಣಕಾಸು ಸಚಿವರ ಬದಲು ಪ್ರಧಾನ ಮಂತ್ರಿಯೇ ಬಜೆಟ್ ಮಂಡಿಸಿದ ಮೂರು ಸಂದರ್ಭಗಳಿವೆ. 1958ರಲ್ಲಿ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು, 1970ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ( ಜವಾಹರಲಾಲ್ ನೆಹರೂ ಪುತ್ರಿ), 1987ರಲ್ಲಿ ರಾಜೀವ್ ಗಾಂಧಿ (ಇಂದಿರಾ ಗಾಂಧಿ ಪುತ್ರ) ಪ್ರಧಾನಿಯಾಗಿದ್ದುಕೊಂಡು ಕೇಂದ್ರ ಬಜೆಟ್ ಮಂಡಿಸಿದ್ದರು.
(5 / 10)
ಬಜೆಟ್ ಭಾಷಣದಲ್ಲಿ ಪದಗಳ ದಾಖಲೆ: ಕೇಂದ್ರ ಬಜೆಟ್ ಭಾಷಣದಲ್ಲಿ ಬಳಕೆಯಾಗಿರುವ ಪದಗಳ ಸಂಖ್ಯೆ ವಿಚಾರದಲ್ಲೂ ದಾಖಲೆ ನಿರ್ಮಾಣವಾಗಿದೆ. 1991ರಲ್ಲಿ ನರಸಿಂಹರಾವ್ ಸರ್ಕಾರ ಇದ್ದಾಗ, ಅಂದಿನ ವಿತ್ತ ಸಚಿವ ಡಾ ಮನಮೋಹನ್ ಸಿಂಗ್ ಅವರು 18,604 ಪದಗಳ ಬಜೆಟ್ ಮಂಡಿಸಿದ್ದರು. ಇದಾಗಿ, ಅರುಣ್ ಜೇಟ್ಲಿ ಅವರು ವಿತ್ತ ಸಚಿವರಾಗಿದ್ದಾಗ ಬಜೆಟ್ ಭಾಷಣದಲ್ಲಿ 18604 ಪದಗಳ ಬಜೆಟ್ ಮಂಡಿಸಿದ ಎರಡನೇ ದಾಖಲೆ ಬರೆದಿದ್ದಾರೆ. ಅವರು ಒಂದು ಗಂಟೆ 49 ನಿಮಿಷ ಭಾಷಣ ಮಾಡಿದ್ದರು.
(6 / 10)
ಕನಿಷ್ಠ ಪದಗಳ ಬಜೆಟ್ ಭಾಷಣ: 1977ರಲ್ಲಿ ಮೊರಾರ್ಜಿ ದೇಸಾಯಿ ಅವರ ಸರ್ಕಾರ ಇದ್ದಾಗ ಹಣಕಾಸು ಸಚಿವರಾಗಿದ್ದ ಹಿರೂಭಾಯಿ ಮುಲ್ಜಿಭಾಯ್ ಪಟೇಲ್ ಅವರು ಸಣ್ಣ ಬಜೆಟ್ ಭಾಷಣ ಮಾಡಿದರು. ಅವರ ಬಜೆಟ್ ಭಾಷಣದಲ್ಲಿ 800 ಪದಗಳಷ್ಟೇ ಇದ್ದವು.
(7 / 10)
ಕೇಂದ್ರ ಬಜೆಟ್ ಭಾಷಣ ಮುದ್ರಿತ ಪ್ರತಿಯ ಭಾಷೆ: 1955 ರವರೆಗೆ ಕೇಂದ್ರ ಬಜೆಟ್ ಅನ್ನು ಇಂಗ್ಲಿಷ್‌ನಲ್ಲಿ ಮಾತ್ರ ಮುದ್ರಿಸಲಾಗುತ್ತಿತ್ತು. 1955ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಬಜೆಟ್ ಭಾಷಣವನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮುದ್ರಿಸಲಾರಂಭಿಸಿತು
(8 / 10)
ಅತಿ ಹೆಚ್ಚು ಬಜೆಟ್ ಮಂಡಿಸಿದವರು: ಭಾರತದ ಬಜೆಟ್ ಭಾಷಣ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ. 1962 ರಿಂದ 1969 ರವರೆಗೆ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಅವರು 10 ಬಜೆಟ್‌ಗಳನ್ನು ಮಂಡಿಸಿದರು, ನಂತರದ ಸ್ಥಾನಗಳಲ್ಲಿ ಪಿ ಚಿದಂಬರಂ (9), ಪ್ರಣಬ್ ಮುಖರ್ಜಿ (8) ಮತ್ತು ಯಶವಂತ್ ಸಿನ್ಹಾ (8) ಅವರಿದ್ದಾರೆ. ಈಗ ನಿರ್ಮಲಾ ಸೀತಾರಾಮನ್ ಅವರೂ 8ನೇ ಬಜೆಟ್ ಮಂಡಿಸುತ್ತಿದ್ದಾರೆ.
(9 / 10)
ಬಜೆಟ್ ಮಂಡನೆ ಸಮಯ, ದಿನ ಬದಲಾವಣೆ: 1999ರ ತನಕ ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ ಕೊನೆಯ ದಿನ ಸಂಜೆ 5 ಗಂಟೆಗೆ ನಡೆಯುತ್ತಿತ್ತು. 1999ರಿಂದ ಫೆಬ್ರವರಿ 28ರ ಬೆಳಿಗ್ಗೆ 11 ಗಂಟೆಗೆ ಬದಲಾಯಿಸಲಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಇದ್ದಾಗ ಹಣಕಾಸು ಸಚಿವ ಯಶವಂತ ಸಿನ್ಹಾ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸಿದರು. ಅದಾಗಿ, 2017ರಲ್ಲಿ ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸುವ ಪರಿಪಾಠ ಶುರುವಾಯಿತು. ಅಂದು ಅರುರ್ಣ ಜೇಟ್ಲಿ ಅವರು ಫೆ 1ರಂದು ಬಜೆಟ್ ಮಂಡಿಸುವ ಪರಿಪಾಠ ಶುರುಮಾಡಿದರು.
(10 / 10)
ಪೇಪರ್‌ಲೆಸ್ ಕೇಂದ್ರ ಬಜೆಟ್: ಕೋವಿಡ್ 19 ಸಂಕಷ್ಟ ಎದುರಾದ ಬಳಿಕ 2020ರಲ್ಲಿ ಕೇಂದ್ರ ಬಜೆಟ್ 2021-22ರ ಬಜೆಟ್ ಮಂಡಿಸುವಾಗ ಮುದ್ರಿತ ಪ್ರತಿ ಬಳಸಲಿಲ್ಲ. ಬದಲಾಗಿ ಡಿಜಿಟಲ್ ಪ್ರತಿಯನ್ನು ಬಳಸಿಕೊಂಡು ಬಜೆಟ್ ಭಾಷಣ ಮಾಡಿದ್ದರು. ಭಾರತದ ಬಜೆಟ್ ಇತಿಹಾಸದಲ್ಲಿ ಪೇಪರ್‌ಲೆಸ್ ಬಜೆಟ್ ಮಂಡನೆಯಾಗಿದ್ದು ಇದೇ ಮೊದಲು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಪೇಪರ್‌ಲೆಸ್ ಬಜೆಟ್ ಮಂಡಿಸಿದರು.
ಇತರ ಗ್ಯಾಲರಿಗಳು