ಕೊಡಗಿನಲ್ಲಿ ಹಾಕಿಗಿದೆ 140 ವರ್ಷಗಳ ಇತಿಹಾಸ; ಕೊಡವ ಹಾಕಿ ಉತ್ಸವ ಇತಿಹಾಸ, ಹಿನ್ನೆಲೆಯ ವಿವರ ಹೀಗಿದೆ
Kodava Hockey Festival: ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ 140 ವರ್ಷಗಳ ಇತಿಹಾಸ ಇದೆ. ಕೊಡವ ಹಾಕಿ ಹಬ್ಬದ ಇತಿಹಾಸ, ಹಿನ್ನೆಲೆಯ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದ ಕಾಶ್ಮೀರ ಎಂದು ಕರೆಯುವ ಕೊಡಗಿನಲ್ಲಿ ಮಾರ್ಚ್ 28ರಿಂದ ಏಪ್ರಿಲ್ 27ರ ತನಕ ಕೊಡವ ಹಾಕಿ ಉತ್ಸವ (Kodava Hockey Festival) ನಡೆಯಲಿದೆ. ಈ ವರ್ಷ ಕೊಡಗು ಹಾಕಿ ಉತ್ಸವ ಬೆಳ್ಳಿ ಹಬ್ಬ ಆಚರಿಸಲಿದೆ. ಈಗಾಗಲೇ ಲೋಗೋ ಕೂಡ ಬಿಡುಗಡೆ ಮಾಡಲಾಗಿದೆ. ಇಲ್ಲಿ ಕಾಫಿಯಷ್ಟೇ ಹಾಕಿಯೂ ಜನಪ್ರಿಯ. ಕೊಡಗಿನ ಹಾಕಿಗೆ 140 ವರ್ಷಗಳ ಇತಿಹಾಸ ಇದೆ. ಹಾಕಿ ಇತಿಹಾಸ ಸಾವಿರಾರು ವರ್ಷಗಳಷ್ಟು ಹಳೆಯದು. 4 ಸಾವಿರ ವರ್ಷಗಳಿಗೂ ಹಿಂದೆ ಹಾಕಿ ಬೇರಿದೆ ಎಂದು ಇತಿಹಾಸಕಾರರು ಹೇಳಿದ್ದುಂಟು. ಇಥಿಯೋಪಿಯಾ ಸೇರಿ ಹಲವು ನಾಗರಿಕತೆಗಳಲ್ಲೂ ಹಾಕಿ ಬೇರುಗಳಿವೆ ಎಂದು ಇತಿಹಾಸಕಾರರು ಹೇಳಿದ್ದಾರೆ.
ಇತಿಹಾಸಕಾರರ ಪ್ರಕಾರ ಸಾವಿರಾರು ವರ್ಷಗಳ ಹಳೆಯದಾಗಿರುವ ಹಾಕಿ ಕ್ರೀಡೆಯು 1861ರಲ್ಲಿ ಯುರೋಪಿನಲ್ಲಿ ಪ್ರಾರಂಭವಾಯಿತು. ಬ್ರಿಟಿಷರು ಆರಂಭದಲ್ಲಿ ಮುಂಬೈ, ಕೊಲ್ಕತ್ತಾ, ಪಂಜಾಬ್ಗಳಲ್ಲಿ ಪರಿಚಯ ಮಾಡಿದರು. ಆದರೆ ಹೆಚ್ಚು ಜನಪ್ರಿಯವಾಗಿದ್ದು, ಪಂಜಾಬ್ ಮತ್ತು ಕೊಡಗಿನಲ್ಲಿ. ಕೊಡಗಿಗೆ ಹಾಕಿ ಕಾಲಿಟ್ಟಿದ್ದು 1885-86ರಲ್ಲಿ. ಹಾಕಿಯನ್ನು ಪ್ರಸಿದ್ಧಿಗೊಳಿಸಿದ ಕೊಡವರು, 1997ರಲ್ಲಿ ಕೊಡಗಿನಲ್ಲಿ ಕೌಟುಂಬಿಕ ಹಾಕಿ ಉತ್ಸವ ಆರಂಭಿಸಿದರು. ಇದೀಗ ಇದು 25 ವರ್ಷಕ್ಕೆ ಕಾಲಿಟ್ಟಿದ್ದು, ಅತ್ಯಂತ ಜನಪ್ರಿಯ ಕ್ರೀಡೆಯಾಗಿ ಮಾರ್ಪಟ್ಟಿದೆ.
ಒಲಿಂಪಿಕ್ಸ್ ಇತಿಹಾಸದಲ್ಲಿ ಹಾಕಿಯಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿ ಕೊಡಗಿನವರ ಕಾಣಿಕೆಯೂ ಇದೆ. ಮೇಜರ್ ಧ್ಯಾನ್ ಚಂದ್ ನೇತೃತ್ವದಲ್ಲಿ ಫೀಲ್ಡ್ ಹಾಕಿಯಲ್ಲಿ ಸತತ ಚಿನ್ನ ಗೆಲ್ಲಲು ನೆರವಾಗಿದ್ದಾರೆ. ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕೊಡವರ ಸಂಖ್ಯೆಯು 50ಕ್ಕೂ ಹೆಚ್ಚು. ಇವರಲ್ಲಿ ಎಂಪಿ ಗಣೇಶ್, ಎಂಎಂ ಸೋಮಯ್ಯ, ಚೆಪ್ಪುಡಿರ ಎಸ್ ಪೂಣಚ್ಚ, ಮೊದಲಾದವರೂ ಸೇರಿ 7 ಮಂದಿ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಕೊಡಗಿನ ಹಾಕಿ ಉತ್ಸವದ ಇತಿಹಾಸ
ಮಾಳೆಯಂಡ ಮುತ್ತಪ್ಪ, ಗೋವಿಂದ, ಪೈಕೇರ ಕಾಳಯ್ಯ ಅಂಜಪರವಂಡ ಸುಬ್ಬಯ್ಯ, ಅರ್ಜುನ್ ಹಾಲಪ್ಪ, ಮನೆಯಪಂಡ ಸೋಮಯ್ಯಮೊಳ್ಳೆರ ಗಣೇಶ್, ರಘುನಾಥ್, ಸುನಿಲ್, ಚೆಪ್ಪುಡಿರ ಪೂಣಚ್ಚ... ಹೀಗೆ ಕೊಡಗಿನ ಪ್ರತಿಭೆಗಳು ಹಲವು. ವಿಶ್ವ ಮಟ್ಟದಲ್ಲಿ ಭಾರತ ಹಾಕಿ ತಂಡ ಖ್ಯಾತಿ ಪಡೆಯಲು ದಿಗ್ಗಜ ಆಟಗಾರರೇ ಕಾರಣ ಎಂದು ಹೇಳಿದರೆ ತಪ್ಪಾಗಲ್ಲ. ಕೊಡಗು ಜಿಲ್ಲೆಯು ಭಾರತೀಯ ಹಾಕಿ ಆಟದ ತವರು ಎನ್ನುವದು ಜನಜನಿತವಾದದು. ಕೊಡಗಿನಲ್ಲಿ 1997ರಿಂದ ಹಾಕಿ ಉತ್ಸವ ಆರಂಭವಾಯಿತು.
ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಹಾಗೂ ಪ್ರಥಮ ದರ್ಜೆಯ ಹಾಕಿ ಆಟದ ತೀರ್ಪುಗಾರರಾಗಿದ್ದ 69 ವರ್ಷದ ಪಾಂಡಂಡ ಕುಟ್ಟಪ್ಪ ಎನ್ನುವವರ ಕನಸಿನ ಕೂಸಾಗಿ ಹಾಕಿ ಹಬ್ಬವು 1997ರಲ್ಲಿ ಜನ್ಮ ತಾಳಿತು. ಕೊಡವರ ಎಲ್ಲಾ ಮನೆತನಗಳೂ ಒಂದೆಡೆ ಒಟ್ಟಾಗಿ ಸೇರುವ ಕಲ್ಪನೆ ಕಂಡ ಕುಟ್ಟಪ್ಪ ಅವರು, ಕೊಡಗಿನ ಯುವ ಹಾಕಿ ಆಟಗಾರರ ಶೋಚನೀಯ ಬೆಳೆವಣಿಗೆಯನ್ನು ಕಂಡಿದ್ದರು. ಈ ಟೂರ್ನಿ ಆಯೋಜಿಸುವ ಮೂಲಕ ತಮ್ಮ ಕಲ್ಪನೆ ಸಾಕಾರಗೊಳಿಸಬಯಸಿದರು. ಈ ಉದ್ಭಾಟನಾ ಸಮಾರಂಭದ ಆರ್ಥಿಕ ವೆಚ್ಚವನ್ನು ಕುಟ್ಟಪ್ಪನವರೇ ಭರಿಸಿದ್ದರು.
ವಿರಾಜಪೇಟೆಯ ಸಮೀಪದ ಕರಡ ಗ್ರಾಮದ ಮೈದಾನದಲ್ಲಿ ಪಾಡಂಡ ಕಪ್ ಎಂದು ಕರೆಯಲ್ಪಟ್ಟ ಈ ಸ್ಪರ್ಧೆಯಲ್ಲಿ ಕೊಡವರ 200ಕ್ಕಿಂತಲೂ ಹೆಚ್ಚು ಮನೆತನಗಳ ಪೈಕಿ 60 ಮನೆತನಗಳು ಮಾತ್ರ ಭಾಗವಹಿಸಿದ್ದವು. 200 ಹೆಚ್ಚು ಮನೆತನಗಳು ಒಟ್ಟಾಗಿ ಪ್ರತಿವರ್ಷ ಹಾಕಿ ಟೂರ್ನಿಯಲ್ಲಿ ಹಬ್ಬದೋಪಾದಿಯಲ್ಲಿ ಆಚರಿಸುತ್ತಿರುವುದು ಅವರಲ್ಲಿರುವ ಹಾಕಿಯ ಮೇಲಿರುವ ಮಮತೆಗೆ ಸಾಕ್ಷಿಯಾಗಿದೆ. ವಿಶ್ವದ ಅತಿದೊಡ್ಡ ಸ್ಪರ್ಧೆಗಳಲ್ಲಿ ಒಂದಾಗಿರುವ ಈ ಹಾಕಿ ಹಬ್ಬವು ಗಿನ್ನಿಸ್, ಲಿಮ್ಕಾ ದಾಖಲೆಗೂ ಸೇರ್ಪಡೆಯಾಗಿದೆ.
ಪ್ರತಿ ವರ್ಷ ಒಂದೊಂದು ಮನೆತನ ಆಯೋಜನೆ
ಒಂದು ತಂಡದ ಆಟಗಾರರೆಲ್ಲರೂ ಒಂದೇ ಮನೆತನಕ್ಕೆ ಸೇರಿದವರು ಆಗಿರಬೇಕು. ಸ್ತ್ರೀಯರೂ ಆಟದಲ್ಲಿ ಭಾಗವಹಿಸಬಹುದು, ವಿವಾಹಿತ ಮಹಿಳೆಯರು ತಾವು ತವರು ಅಥವಾ ಗಂಡನ ಮನೆತನವನ್ನೋ ಪ್ರತಿನಿಧಿಸಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕು ಎಂಬ ನಿಯಮಗಳನ್ನು ಅಳವಡಿಸಲಾಗಿದೆ. ಕೊಡವ ಹಾಕಿ ಅಕಾಡಮಿ ಎಂಬ ಹೆಸರಿನ ಪರಿಷತ್ತು ಸ್ಥಾಪಿಸಲಾಗಿದೆ. ವರ್ಷಕ್ಕೊಮ್ಮೆ ಒಂದೊಂದು ಮನೆತನದವರು ಸ್ಪರ್ಧೆ ಆಯೋಜಿಸಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಯಾವ ಮನೆತನ ಸ್ಪರ್ಧೆ ಆಯೋಜಿಸುತ್ತದೋ, ಅವರೇ ಆರ್ಥಿಕ ವೆಚ್ಚ ಭರಿಸಬೇಕು.
ಸ್ಪರ್ಧೆಯ ಪ್ರಾಯೋಜಕರೇ ಆರ್ಥಿಕ ಸಹಾಯ ನೀಡುವವರಲ್ಲದೆ, ಲಾಟರಿ ಟಿಕೆಟ್ಗಳನ್ನು ಮಾರುವದರ ಮೂಲಕ ವೆಚ್ಚ ಭರಿಸಬೇಕು. ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಮನೆತನಗಳೂ ತಮ್ಮ ಇಷ್ಟ ಮತ್ತು ಶಕ್ತ್ಯಾನುಸಾರ ಧನಸಹಾಯ ಮಾಡಬೇಕು. ವರ್ಷದಿಂದ ವರ್ಷಕ್ಕೆ ಈ ಹಾಕಿ ಹಬ್ಬದಲ್ಲಿ ಪಾಲ್ಗೊಳ್ಳುವ ಮನೆತನಗಳ ಸಂಖ್ಯೆ ಹೆಚ್ಚಿತು. ಜಿಲ್ಲೆಯ ಹೊರಗಿರುವ ಸದಸ್ಯರೂ ತಮ್ಮ ಕುಟುಂಬದ ಆಟದಲ್ಲಿ ಭಾಗವಹಿಸಲು ತಮ್ಮ ನೌಕರಿಗೆ ರಜೆ ಹಾಕಿ ಬರುತ್ತಾರೆ. ಹಬ್ಬದ ಉದ್ಘಾಟನಾ, ಸಮಾರೋಪ ಸಮಾರಂಭಗಳು ಕೊಡವರ ವಿವಿಧ ನೃತ್ಯ ಮತ್ತು ಕೋಲಾಟಗಳಿಂದ ಕೂಡಿದ್ದು ಬಹಳ ಆಡಂಬರ ಮತ್ತು ವೈಭವದಿಂದ ಜರುಗುತ್ತವೆ.
ಮಾಹಿತಿ: ವಿಕಿಪೀಡಿಯ
