Los Angeles 2028 Olympics: ಮುಂದಿನ ಒಲಿಂಪಿಕ್ಸ್‌ನಲ್ಲಿ ಈ 6 ಬದಲಾವಣೆಗಳಿಂದ ಭಾರತಕ್ಕಾಗುವ ಲಾಭವೇನು?
ಕನ್ನಡ ಸುದ್ದಿ  /  ಕ್ರೀಡೆ  /  Los Angeles 2028 Olympics: ಮುಂದಿನ ಒಲಿಂಪಿಕ್ಸ್‌ನಲ್ಲಿ ಈ 6 ಬದಲಾವಣೆಗಳಿಂದ ಭಾರತಕ್ಕಾಗುವ ಲಾಭವೇನು?

Los Angeles 2028 Olympics: ಮುಂದಿನ ಒಲಿಂಪಿಕ್ಸ್‌ನಲ್ಲಿ ಈ 6 ಬದಲಾವಣೆಗಳಿಂದ ಭಾರತಕ್ಕಾಗುವ ಲಾಭವೇನು?

2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕೆಲವು ಕ್ರೀಡೆಗಳ ಸೇರ್ಪಡೆಯಾಗಿದೆ. ಇನ್ನೂ ಕೆಲವು ಕ್ರೀಡೆಗಳ ನಿಯಮ ಬದಲಾಗಿದೆ. ಇದರಿಂದ ಭಾರತಕ್ಕೆ ಏನೆಲ್ಲಾ ಲಾಭಗಳಿವೆ ಎಂಬ ಮಾಹಿತಿ ಇಲ್ಲಿದೆ.

2028 Olympics: ಮುಂದಿನ ಒಲಿಂಪಿಕ್ಸ್‌ನಲ್ಲಿ ಈ 6 ಬದಲಾವಣೆಗಳಿಂದ ಭಾರತಕ್ಕಾಗುವ ಲಾಭವೇನು?
2028 Olympics: ಮುಂದಿನ ಒಲಿಂಪಿಕ್ಸ್‌ನಲ್ಲಿ ಈ 6 ಬದಲಾವಣೆಗಳಿಂದ ಭಾರತಕ್ಕಾಗುವ ಲಾಭವೇನು? (X)

ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ಮುಂದಿನ ಒಲಿಂಪಿಕ್ಸ್‌ ಕ್ರೀಡಾಕೂಟವು ಅಮೆರಿಕದಲ್ಲಿ ನಡೆಯಲಿದೆ. 2028ರಲ್ಲಿ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ (Los Angeles 2028 Olympic Games) ಪ್ರತಿಷ್ಠಿತ ಹಾಗೂ ಅದ್ಧೂರಿ ಕ್ರೀಡಾಕೂಟ ಆಯೋಜನೆಯಾಗಲಿದೆ. ಕ್ರೀಡಾಕೂಟಕ್ಕೂ ಮುನ್ನ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಕೆಲವು ಕ್ರೀಡೆಗಳ ಸೇರ್ಪಡೆ, ಹಾಗೂ ಅದರಲ್ಲಿ ಬದಲಾವಣೆ ತರಲಾಗಿದೆ. ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅನುಮೋದಿಸಲಾದ ಈವೆಂಟ್ ಪ್ರೋಗ್ರಾಂ ಅನ್ನು ನೋಡೋಣ. ಇದರಿಂದ ಭಾರತದ ಮೇಲೆ ಏನೆಲ್ಲಾ ಪರಿಣಾಮ ಬೀರಬಹುದು ಎಂಬ ಮಾಹಿತಿ ಇಲ್ಲಿದೆ.

ಕ್ರಿಕೆಟ್

ಮುಂದಿನ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಇರಲಿದೆ. ಟಿ20 ಸ್ವರೂಪದಲ್ಲಿ ಆಡಲಾಗುವ ಪುರುಷ ಮತ್ತು ವನಿತೆಯರ ಕ್ರಿಕೆಟ್‌ಗೆ ಆರು ತಂಡಗಳು ಅರ್ಹತೆ ಪಡೆಯಲಿವೆ. ಆದರೆ ಪಂದ್ಯಗಳ ಸ್ಥಳ ಮತ್ತು ಅರ್ಹತಾ ಮಾನದಂಡದ ಬಗ್ಗೆ ಮಾಹಿತಿ ಇಲ್ಲ. ಕ್ರಿಕೆಟ್‌ ಸೇರ್ಪಡೆಯು ಭಾರತದ ಪದಕದ ಕನಸಿಗೆ ನೆರವಾಗಲಿದೆ.

ಸ್ಕ್ವಾಶ್

ಮುಂಬರುವ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಸ್ಕ್ವಾಷ್‌ ಸೇರ್ಪಡೆಯಾಗಲಿದೆ. ಈ ಬಾರಿ ಪುರುಷರ ಸಿಂಗಲ್ಸ್ ಮತ್ತು ಮಹಿಳಾ ಸಿಂಗಲ್ಸ್‌ ಮಾತ್ರ ಇರಲಿದೆ. ಎರಡೂ ಈವೆಂಟ್‌ಗಳಲ್ಲಿ ತಲಾ ಕೇವಲ 16 ಆಟಗಾರರು ಇರುತ್ತಾರೆ. ಆದರೆ ಟೀಮ್ ಈವೆಂಟ್‌ ಮತ್ತು ಯಾವುದೇ ಡಬಲ್ಸ್ ಇಲ್ಲದಿರುವುದು ಭಾರತಕ್ಕೆ ತುಸು ನಿರಾಶೆ ಮೂಡಿಸಲಿದೆ.

ಬಾಕ್ಸಿಂಗ್

ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿಯೂ ಬಾಕ್ಸಿಂಗ್‌ ಇರಲಿದೆ. ಸಾಕಷ್ಟು ಗೊಂದಲಗಳ ನಡುವೆ ಇದನ್ನು ಮತ್ತೆ ಸೇರಿಸಲಾಗಿದೆ. ಈ ಬಾರಿ ಹೆಚ್ಚುವರಿ ಮಹಿಳಾ ತೂಕ ವಿಭಾಗ ಸೇರ್ಪಡೆಯಾಗಿದ್ದು, ಸಂಪೂರ್ಣ ಲಿಂಗ ಸಮಾನತೆಗೆ ಆದ್ಯತೆ ನೀಡಿದಂತಾಗಿದೆ. ಮಹಿಳೆಯರ 70 ಕೆಜಿ ವಿಭಾಗದಲ್ಲಿ ಭಾರತ ಸ್ಪರ್ಧಿಸಬಹುದಾಗಿದೆ.

ಬಿಲ್ಲುಗಾರಿಕೆ

ಸಂಯುಕ್ತ ಬಿಲ್ಲುಗಾರಿಕೆ (compound archery) ಕೊನೆಗೂ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗಿದೆ. ಇದು ಭಾರತಕ್ಕೆ ಖುಷಿ ತಂದಿದೆ. ಜಾಗತಿಕ ಬಿಲ್ಲುಗಾರಿಕೆಯಲ್ಲಿ ಭಾರತವು ಸಂಯುಕ್ತ ಸ್ಪರ್ಧೆಗಳಲ್ಲಿ ಬಲಿಷ್ಠವಾಗಿದೆ. ವಿಶೇಷವಾಗಿ ತಂಡ ಸ್ಪರ್ಧೆಗಳಲ್ಲಿ ಉತ್ತಮ ಯಶಸ್ಸು ಕಂಡಿದೆ.

ಶೂಟಿಂಗ್

ಶಾಟ್‌ಗನ್ ಮತ್ತು ಪುರುಷರ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್ ಈವೆಂಟ್ ಫೈನಲ್‌ಗಳಲ್ಲಿ ಕ್ರೀಡಾಪಟುಗಳ ಸಂಖ್ಯೆ ಆರರಿಂದ ಎಂಟಕ್ಕೆ ಏರಿದೆ. ಇದರಿಂದ ವಿಜಯವೀರ್ ಸಿಧು ಅವರಂತಹ ಆಟಗಾರರಿಗೆ ಅವಕಾಶಕ್ಕೆ ಕಾರಣವಾಗಬಹುದು. 50 ಮೀ ರೈಫಲ್ 3 ಭಂಗಿಗಳ ಫೈನಲ್‌ಗಳು ಕೇವಲ ಸ್ಟ್ಯಾಂಡಿಂಗ್ ಭಂಗಿ ಮಾತ್ರ ಒಳಗೊಂಡಿರುತ್ತವೆ. ಅರ್ಹತಾ ಸುತ್ತುಗಳಲ್ಲಿ ಎಂದಿನಂತೆ ಪ್ರೋನ್, ಮಂಡಿಯೂರಿ ಮತ್ತು ನಿಂತ ಭಂಗಿ ಇರಲಿದೆ.

ಟೇಬಲ್ ಟೆನಿಸ್

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವು ಪುರುಷರ ಮತ್ತು ಮಹಿಳೆಯರ ತಂಡದ ಈವೆಂಟ್‌ಗಳಿಗೆ ಅರ್ಹತೆ ಪಡೆದಿತ್ತು. ಆದರೆ ಲಾಸ್ ಏಂಜಲೀಸ್‌ ಕ್ರೀಡಾಕೂಟಕ್ಕೂ ಮೊದಲು ಕೆಲವು ಬದಲಾವಣೆಗಳಾಗಿವೆ. ಭಾರತಕ್ಕೆ ಇದರಿಂದ ಲಾಭವಾಗಲಿದೆ. 2028ರಲ್ಲಿ ಪುರುಷ ಮತ್ತು ಮಹಿಳಾ ಡಬಲ್ಸ್, ಮಿಶ್ರ ಡಬಲ್ಸ್ ಪ್ರತ್ಯೇಕ ಪದಕ ಈವೆಂಟ್‌ ನಡೆಯಲಿದೆ. ಮಿಶ್ರ ತಂಡದ ಈವೆಂಟ್‌ ಮೊದಲ ಬಾರಿಗೆ ನಡೆಯಲಿವೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.