ಕನ್ನಡ ಸುದ್ದಿ  /  Sports  /  Afghanistan Script Landmark Series Win Against Pakistan

Afghanistan vs Pakistan: ಪಾಕ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಸರಣಿ ಜಯ

ಐಸಿಸಿ ಶ್ರೇಯಾಂಕದ ಅಗ್ರ ಆರು ತಂಡದ ವಿರುದ್ಧ ಅಫ್ಘಾನಿಸ್ತಾನವು ಸರಣಿ ಗೆದ್ದಿರುವುದು ಇದೇ ಮೊದಲು. ಹೀಗಾಗಿ ಈ ಸರಣಿ ವಿಜಯವು ಕ್ರಿಕೆಟ್‌ ಶಿಶುಗಳಿಗೆ ಐತಿಹಾಸಿಕ.

ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಜಯ
ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಜಯ (ICC)

ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಮತ್ತೊಂದು ಆಕರ್ಷಕ ರನ್ ಚೇಸ್ ಪ್ರದರ್ಶಿಸಿದೆ. ಪಾಕಿಸ್ತಾನ ವಿರುದ್ಧದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದ ರಶೀದ್‌ ಖಾನ್‌ ಬಳಗವು, ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. ಕೊನೆಯ ಓವರ್‌ನಲ್ಲಿ ರೋಚಕತೆ ಹೆಚ್ಚಿಸಿದ್ದ ಪಂದ್ಯದಲ್ಲಿ ಅಂತಿಮವಾಗಿ ಪಾಕ್ ತಂಡವನ್ನು ಇನ್ನೂ ಒಂದು ಎಸೆತ ಉಳಿದಿರುವಂತೆಯೇ ಅಫ್ಘಾನ್ ಸೋಲಿಸಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿತು. ಅಲ್ಲದೆ ಇನ್ನೂ ಒಂದು ಪಂದ್ಯ ಉಳಿದಿರುವಂತೆಯೇ ಸರಣಿ ವಶಪಡಿಸಿಕೊಂಡಿದೆ.

ಐಸಿಸಿ ಶ್ರೇಯಾಂಕದ ಅಗ್ರ ಆರು ತಂಡದ ವಿರುದ್ಧ ಅಫ್ಘಾನಿಸ್ತಾನವು ಸರಣಿ ಗೆದ್ದಿರುವುದು ಇದೇ ಮೊದಲು. ಹೀಗಾಗಿ ಈ ಸರಣಿ ಜಯಭೇರಿಯು ಕ್ರಿಕೆಟ್‌ ಶಿಶುಗಳಿಗೆ ಐತಿಹಾಸಿಕ.

ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಪಾಕಿಸ್ತಾನದ ಲೆಕ್ಕಾಚಾರ ಸರಿ ಹೋಗಲಿಲ್ಲ. ಅನುಭವಿ ಆಟಗಾರರ ಅನುಪಸ್ಥಿತಿಯೊಂದಿಗೆ ಕಣಕ್ಕಿಳಿದಿರುವ ಪಾಕಿಸ್ತಾನದ ಬ್ಯಾಟಿಂಗ್‌ ಲೈನಪ್‌ ಮತ್ತೊಮ್ಮೆ ತಂಡಕ್ಕೆ ಕೈಕೊಟ್ಟಿತು. ಅನನುಭವಿ ಅಗ್ರ ಕ್ರಮಾಂಕವು ನಿರಾಸೆ ಮೂಡಿಸಿತು. ತಂಡಕ್ಕೆ ಉತ್ತಮ ಕೊಡುಗೆ ನೀಡಿದ ಏಕೈಕ ಆಟಗಾರ ಇಮಾದ್ ವಾಸಿಮ್. 57 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದ ಅವರು ತಂಡದ ಮೊತ್ತ ಸ್ಪರ್ಧಾತ್ಮಕವಾಗಿಸುವಲ್ಲಿ ನೆರವಾದರು. ಮತ್ತೊಂದೆಡೆ ನಾಯಕ ಶಾದಾಬ್ ಖಾನ್ 32 ರನ್ ಗಳಿಸಿ ಅಂತಿಮವಾಗಿ ತಂಡದ ಮೊತ್ತವನ್ನು 130ಕ್ಕೆ ಹೆಚ್ಚಿಸಿದರು.

ಈ ಮೊತ್ತ ಅಫ್ಘಾನ್‌ ತಂಡಕ್ಕೆ ದೊಡ್ಡದಾಗಿ ಕಾಣಿಸಲಿಲ್ಲ. ವಿಕೆಟ್‌ ಕೀಪರ್‌ ರಹಮಾನುಲ್ಲಾ ಗುರ್ಬಾಜ್ (44) ಮತ್ತು ಇಬ್ರಾಹಿಂ ಝದ್ರಾನ್ (38) ಅಫ್ಘಾನಿಸ್ತಾನದ ಚೇಸಿಂಗ್‌ ಸುಲಭಗೊಳಿಸಿದರು. ನಜಿಬುಲ್ಲಾ ಝದ್ರಾನ್ ಅಜೇಯ 23 ರನ್ ಗಳಿಸಿದರು. ಇದೇ ವೇಳೆ ಮೊಹಮ್ಮದ್ ನಬಿ ಔಟಾಗದೆ 14 ರನ್ ಸಿಡಿಸಿ ತಂಡದ ಮೊತ್ತವನ್ನು 133ಕ್ಕೆ ಕೊಂಡೊಯ್ದರು. ಆ ಮೂಲಕ ಕೇವಲ ಮೂರು ವಿಕೆಟ್ ಕಳೆದುಕೊಂಡು ತಂಡವು ಇನ್ನೂ ಒಂದು ಎಸೆತ ಉಳಿದಿರುವಂತೆಯೇ ಗುರಿ ಬೆನ್ನಟ್ಟಿತು.

“ಈ ಅದ್ಭುತ ತಂಡವನ್ನು ಮುನ್ನಡೆಸಿರುವುದು ನಿಜಕ್ಕೂ ಸಂತೋಷವಾಗಿದೆ” ಎಂದು ಅಫ್ಘಾನಿಸ್ತಾನ ನಾಯಕ ರಶೀದ್ ಖಾನ್ ಹೇಳಿದ್ದಾರೆ. “ಬೌಲಿಂಗ್‌ನಲ್ಲಿ ತಂಡದ ಪ್ರಯತ್ನ ಉತ್ತಮವಾಗಿತ್ತು. ಪಂದ್ಯವನ್ನು ಫಿನಿಶ್‌ ಮಾಡಲು ನಮ್ಮಲ್ಲಿ ನಬಿ ಮತ್ತು ನಜೀಬ್ ಅವರಂತಹ ಬಲಿಷ್ಠ ಆಟಗಾರರಿದ್ದಾರೆ,” ಎಂದು ಅವರು ಹೇಳಿದ್ದಾರೆ.

ಕೊನೆಯ ಎರಡು ಓವರ್‌ಗಳಲ್ಲಿ ಅಫ್ಘಾನ್‌ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು. ನಸೀಮ್ ಷಾ ಅವರ ಓವರ್‌ನಲ್ಲಿ ನಜಿಬುಲ್ಲಾ ಮತ್ತು ನಬಿ ತಲಾ ಒಂದು ಸಿಕ್ಸರ್ ಹೊಡೆದರು. ಆ ಓವರ್‌ನಲ್ಲಿ 17 ರನ್‌ ಹರಿದು ಬಂತು. ಅಲ್ಲದೆ ಪಾಕಿಸ್ತಾನದ ಗೆಲುವಿನ ಭರವಸೆ ಕೂಡಾ ಕಮರಿತು.

ಕಳೆದ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿಯೂ ತಂಡ ಭರ್ಜರಿ ಗೆಲುವು ದಾಖಲಿಸಿತ್ತು. ಪಾಕ್‌ ತಂಡವನ್ನು 92 ರನ್‌ಗಳಿಗೆ ಕಟ್ಟಿ ಹಾಕಿ, ಸುಲಭವಾಗಿ ಚೇಸಿಂಗ್‌ ಪೂರ್ಣಗೊಳಿಸಿತ್ತು.

ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಸೇರಿದಂತೆ ಪಾಕ್‌ ತಂಡದ ಐವರು ಪ್ರಮುಖ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಮುಂಚೂಣಿ ಆಟಗಾರರ ಅನುಪಸ್ಥಿತಿಯಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನ್‌ ಪ್ರಾಬಲ್ಯ ಮೆರೆಯಿತು. ನಿಧಾನಗತಿಯ ವಿಕೆಟ್‌ಗಳಲ್ಲಿ ಅಫ್ಘಾನಿಸ್ತಾನದ ವೇಗ ಮತ್ತು ಸ್ಪಿನ್ ವಿರುದ್ಧ ಪಾಕಿಸ್ತಾನ ಬ್ಯಾಟ್‌ ಬೀಸಲು ಹೆಣಗಾಡಿತು.

ಸೋಲಿನ ಬಳಿಕ ಮಾತನಾಡಿದ ಪಾಕ್‌ ನಾಯಕ ಶಾದಾಬ್, “ನಾವು ಮತ್ತೆ ಪುಟಿದೇಳುತ್ತೇವೆ” ಎಂದು ಹೇಳಿದರು. “ಪವರ್‌ಪ್ಲೇಯಲ್ಲಿ ತಂಡವು ಮೂರು ವಿಕೆಟ್‌ಗಳನ್ನು ಕಳೆದುಕೊಂಡಾಗ, 70 ಶೇಕಡ ಆಟವನ್ನು ತಂಡ ಕಳೆದುಕೊಳ್ಳುತ್ತದೆ. ನಮ್ಮ ಯುವ ಆಟಗಾರರು ಆತಂಕಕ್ಕೊಳಗಾಗಿದ್ದರು. ಅವರು ಪಾಕಿಸ್ತಾನದ ಪರ ಮೊದಲ ಬಾರಿಗೆ ಆಡುತ್ತಿದ್ದಾರೆ. ಆದರೆ ನಾವು ಅವರನ್ನು ಬೆಂಬಲಿಸಬೇಕಾಗಿದೆ," ಎಂದು ತಂಡವನ್ನು ಸಮರ್ಥಿಸಿಕೊಂಡರು.

ಉಭಯ ತಂಡಗಳ ನಡುವಿನ ಮೂರನೇ ಟಿ20 ಸೋಮವಾರ ನಡೆಯಲಿದೆ.