IPL 2023: ಕುಲ್ದೀಪ್​, ಮಾರ್ಷ್ ಪರಿಣಾಮಕಾರಿ​​ ಬೌಲರ್ಸ್​​​; ಅಕ್ಷರ್​​ ಪಟೇಲ್​ಗೆ ಬೌಲಿಂಗ್​ ನೀಡದ ಕುರಿತು ವಾರ್ನರ್​ ಸಮರ್ಥನೆ
ಕನ್ನಡ ಸುದ್ದಿ  /  ಕ್ರೀಡೆ  /  Ipl 2023: ಕುಲ್ದೀಪ್​, ಮಾರ್ಷ್ ಪರಿಣಾಮಕಾರಿ​​ ಬೌಲರ್ಸ್​​​; ಅಕ್ಷರ್​​ ಪಟೇಲ್​ಗೆ ಬೌಲಿಂಗ್​ ನೀಡದ ಕುರಿತು ವಾರ್ನರ್​ ಸಮರ್ಥನೆ

IPL 2023: ಕುಲ್ದೀಪ್​, ಮಾರ್ಷ್ ಪರಿಣಾಮಕಾರಿ​​ ಬೌಲರ್ಸ್​​​; ಅಕ್ಷರ್​​ ಪಟೇಲ್​ಗೆ ಬೌಲಿಂಗ್​ ನೀಡದ ಕುರಿತು ವಾರ್ನರ್​ ಸಮರ್ಥನೆ

DC vs GT: ಗುಜರಾತ್ ಟೈಟಾನ್ಸ್​​​ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸೋಲಿಗೆ ಕಾರಣ ಏನೆಂಬುದನ್ನು ನಾಯಕ ಡೇವಿಡ್​ ವಾರ್ನರ್​​​​ ಬಹಿರಂಗಪಡಿಸಿದ್ದಾರೆ. ಜೊತೆಗೆ ಅಕ್ಷರ್​ ಪಟೇಲ್​ಗೆ ಬೌಲಿಂಗ್​​​​​​​​ ನೀಡದಿರುವ ಕುರಿತು ಸಹ ಮಾಹಿತಿ ನೀಡಿದ್ದಾರೆ.

ಡೇವಿಡ್​ ವಾರ್ನರ್​
ಡೇವಿಡ್​ ವಾರ್ನರ್​

ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals)​ ವಿರುದ್ಧ ಗುಜರಾತ್​ ಟೈಟಾನ್ಸ್​ (Gujarat Titans) ತಂಡ 6 ವಿಕೆಟ್​ಗಳ ಜಯ ಸಾಧಿಸಿದೆ. ಆ ಮೂಲಕ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಡೇವಿಡ್​ ವಾರ್ನರ್​ ನೇತೃತ್ವದ ಡೆಲ್ಲಿ, ಸೋಲಿಗೆ ಶರಣಾಗಿದೆ. ಇದರೊಂದಿಗೆ ಟೂರ್ನಿಯಲ್ಲಿ ಸತತ 2ನೇ ಸೋಲು ಕಂಡಿದೆ. ಗುಜರಾತ್​ ಬೌಲರ್​​ಗಳ ದಾಳಿಗೆ ನಡುಗಿದ ಕ್ಯಾಪಿಟಲ್ಸ್​ ಬ್ಯಾಟರ್ಸ್​​​, ರನ್​ ಗಳಿಸಲು ಪರದಾಡಿದರು. ಡೇವಿಡ್​ ವಾರ್ನರ್​ (David Warner) ಡೆಲ್ಲಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಡೆಲ್ಲಿ ನೀಡಿದ್ದ 163 ರನ್​ಗಳ ಗುರಿಯನ್ನು ಗುಜರಾತ್​ ಟೈಟಾನ್ಸ್​ ಸುಲಭವಾಗಿ ಬೆನ್ನಟ್ಟಿತು. ಸಾಯಿ ಸುದರ್ಶನ್ (Sai Sudharsan)​​​​ ಅಜೇಯ 62 ರನ್​ ಸಿಡಿಸಿ ಗಮನ ಸೆಳೆದರು. ಪಂದ್ಯದ ಮುಗಿದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್​​​​ ಸೋಲಿಗೆ ಕಾರಣ ಏನೆಂಬುದರ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಭಾರಿ ಟೀಕೆಯೂ ವ್ಯಕ್ತವಾಗಿದೆ. ಬೌಲಿಂಗ್ ವೇಳೆ ಕ್ಯಾಪ್ಟನ್​​​​​ ವಾರ್ನರ್ ತೆಗೆದುಕೊಂಡ ತಪ್ಪು ನಿರ್ಧಾರಗಳೇ ಪಂದ್ಯದ ಸೋಲಿಗೆ ಕಾರಣ ಎಂಬುದು ಕ್ರಿಕೆಟ್​ ತಜ್ಞರ ಅಭಿಪ್ರಾಯವಾಗಿದೆ. ಅಕ್ಷರ್​ ಪಟೇಲ್​ಗೆ (Axar Patel) ಯಾಕೆ ಬೌಲಿಂಗ್​ ನೀಡಲಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂದ್ಯ ಮುಗಿದ ನಂತರ ಅಕ್ಷರ್​ಗೆ ಬೌಲಿಂಗ್ ನೀಡದ ಕುರಿತ ಪ್ರಶ್ನೆಗೆ ಡೆಲ್ಲಿ ಕ್ಯಾಪಿಟಲ್ಸ್​ ಕ್ಯಾಪ್ಟನ್​ ಉತ್ತರಿಸಿದ್ದಾರೆ. ಜೊತೆಗೆ ಸಮರ್ಥನೆ ಕೂಡ ಮಾಡಿಕೊಂಡಿದ್ದಾರೆ. ಪಿಚ್‌ನಲ್ಲಿ ಚೆಂಡು ಹೆಚ್ಚು ಸ್ವಿಂಗ್ ಆಗುತ್ತಿತ್ತು. ವಿಕೆಟ್ ಮತ್ತು ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್​ ಬಳಸಿಕೊಂಡಿದ್ದೇನೆ. ಆದರೆ ಗುಜರಾತ್​ ಆರಂಭದಲ್ಲಿ 3 ವಿಕೆಟ್​ ಕಳೆದುಕೊಂಡರೂ ಸಾಯಿ ಸುದರ್ಶನ್​ ಮತ್ತು ಡೇವಿಡ್​ ಮಿಲ್ಲರ್​ ಅದ್ಭುತ ಪ್ರದರ್ಶನ ತೋರಿದರು ಎಂದು ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ತಿಳಿಸಿದ್ದಾರೆ.

ಆರಂಭದಲ್ಲಿ ಗುಜರಾತ್‌ ಬೌಲರ್‌ಗಳ ಚೆಂಡಿನ ಚಲನೆ ಹೆಚ್ಚಾಗಿತ್ತು. ನಿರೀಕ್ಷೆಯಂತೆ ಹೆಚ್ಚು ಸ್ವಿಂಗ್ ಆಗುತ್ತಿತ್ತು. ಆದರೆ ಮತ್ತೊಂದು ತುದಿಯಲ್ಲಿ ಚೆಂಡು ತುಂಬಾ ಕೆಳಗೆ ಬರುತ್ತಿತ್ತು ಎಂದು ಹೇಳಿದ ವಾರ್ನರ್​, ಇದರ ಜೊತೆಗೆ ಇಬ್ಬನಿ ಇದ್ದಿದ್ದರಿಂದ ಎದುರಾಳಿ ತಂಡವನ್ನು ನಿಯಂತ್ರಿಸುವುದು ಸವಾಲು ಆಗಿತ್ತು. ಇಲ್ಲಿನ ಪಿಚ್‌ಗೆ ತಕ್ಕಂತೆ ಬೌಲರ್​​​ಗಳನ್ನು ಬಳಸಿಕೊಳ್ಳಲಾಗಿದೆ. ಹಾಗಾಗಿ ಅಕ್ಷರ್​​​ಗೆ ಬೌಲಿಂಗ್‌ ನೀಡಿರಲಿಲ್ಲ ಎಂದು ವಾರ್ನರ್‌ ತಿಳಿಸಿದ್ದಾರೆ.

ಅಲ್ಲದೆ, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ವಾರ್ನರ್​, 'ಕುಲ್​ದೀಪ್​ ಯಾದವ್​ ಮತ್ತು ಮಿಚೆಲ್ ಮಾರ್ಷ್ ಅವರು, ಅಕ್ಷರ್ ಪಟೇಲ್​​ ಅವರಿಗಿಂತ ಹೆಚ್ಚು ಪರಿಣಾಮಕಾರಿ ಬೌಲರ್​ಗಳೆಂದು ಎಂದು ನಾನು ಭಾವಿಸಿದೆ. ಹಾಗಾಗಿ ಪಟೇಲ್‌ಗೆ ಬೌಲಿಂಗ್ ಅವಕಾಶ ನೀಡದಿರಲು ನಾನು ನಿರ್ಧಾರ ತೆಗೆದುಕೊಂಡೆ ಎಂದು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ವಾರ್ನರ್​ ವಿರುದ್ಧ ಭಾರಿ ಟೀಕೆಗಳು ಕೇಳಿ ಬರುತ್ತಿವೆ.

ಇದೇ ವೇಳೆ ಗುಜರಾತ್ ವಿರುದ್ಧದ ಬ್ಯಾಟಿಂಗ್‌ನಲ್ಲಿ ಅಕ್ಷರ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. 22 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 36 ರನ್ ಗಳಿಸಿ ಗಮನ ಸೆಳೆದರು. ಆದರೆ, ಡೇವಿಡ್ ವಾರ್ನರ್ ಅವರಿಗೆ ಬೌಲಿಂಗ್‌ನಲ್ಲಿ ಅವಕಾಶ ನೀಡದ ತಪ್ಪು ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಕಾರಣವಾಯಿತು. ವಾಸ್ತವವಾಗಿ ಯಾವುದೇ ನಾಯಕ ತನ್ನ ತಂಡದಲ್ಲಿ ಅಕ್ಷರ್ ಪಟೇಲ್‌ನಂತಹ ಆಟಗಾರನನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬಯಸುತ್ತಾರೆ. ಆದರೆ, ಒಬ್ಬ ಅನುಭವಿ ನಾಯಕನಾಗಿ ಡೇವಿಡ್ ವಾರ್ನರ್ ಈ ಆಲ್​​ರೌಂಡರ್ ಅನ್ನು ಕೈ ಬಿಟ್ಟಿದ್ದು ಎಷ್ಟು ಸರಿ?

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.