ಕನ್ನಡ ಸುದ್ದಿ  /  Sports  /  Ajinkya Rahane Says He Would Never Give Up

Ajinkya Rahane: 'ನಾನು ನಾನೇ, ನನ್ನ ಸಾಮರ್ಥ್ಯ ನನಗೆ ಚೆನ್ನಾಗಿ ತಿಳಿದಿದೆ'; ಎಂಐ ವಿರುದ್ಧ ಅಬ್ಬರಿಸಿದ ರಹಾನೆ ಮಾತುಗಳಿವು

ಕೇವಲ 27 ಎಸೆತಗಳಲ್ಲಿ ಭರ್ಜರಿ 61 ರನ್‌ ಸಿಡಿಸಿದ ರಹಾನೆ, ಸಿಎಸ್‌ಕೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ವೇಳೆ ಅವರು 2023ರ ಆವೃತ್ತಿಯಲ್ಲಿ ವೇಗದ ಅರ್ಧಶತಕವನ್ನು ಗಳಿಸಿದರು. ವಿಶೇಷವೆಂದರೆ, 2020ರ ಬಳಿಕ ಇದು ಅವರ ಮೊದಲ ಐಪಿಎಲ್ ಅರ್ಧಶತಕವಾಗಿದೆ.

ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ (IndianPremierLeague/Twitter)

ಭಾರತ ಕ್ರಿಕೆಟ್‌ ತಂಡದ ಅನುಭವಿ ಆಟಗಾರನಾಗಿರುವ ಅಜಿಂಕ್ಯ ರಹಾನೆ, 82 ಟೆಸ್ಟ್ ಸೇರಿದಂತೆ 192 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಉತ್ತಮ ಬೌಲಿಂಗ್ ದಾಳಿ ಹೊಂದಿರುವ ತಂಡಗಳ ವಿರುದ್ಧ ಕಠಿಣ ಪರಿಸ್ಥಿತಿಗಳಲ್ಲೂ ರನ್ ಮಳೆ ಹರಿಸಿದ್ದಾರೆ. 2013ರಿಂದ 2022ರವರೆಗೆ, ಸುಮಾರು ಒಂಬತ್ತು ವರ್ಷಗಳ ಕಾಲ ಅವರು ಭಾರತ ಟೆಸ್ಟ್ ತಂಡದಲ್ಲಿ ಶಾಶ್ವತ ಸದಸ್ಯರಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬುತ್ತಿದ್ದರು. ಆದರೆ, ಇತ್ತೀಚೆಗೆ ಭಾರತ ತಂಡದಲ್ಲಿ ರಹಾನೆ ಹೆಸರು ಕೇಳಿಬಂದಿರುವುದು ತುಂಬಾ ಕಡಿಮೆ.

ಏರುಪೇರುಗಳ ತಮ್ಮ ವಿಶಿಷ್ಟ ವೃತ್ತಿಜೀವನದಲ್ಲಿ, ರಹಾನೆ ಭಾರತ ಟೆಸ್ಟ್ ತಂಡದ‌ ನಾಯಕತ್ವ ಕೂಡಾ ವಹಿಸಿದ್ದರು. ಅದು ಕೂಡಾ ನಿರ್ಣಾಯಕ ಪಂದ್ಯಗಳಲ್ಲಿ. ಆಸ್ಟ್ರೇಲಿಯಾ ವಿರುದ್ಧದ ಎರಡು ಸರಣಿಗಳಲ್ಲಿ‌ ತಂಡವನ್ನು ಮುನ್ನಡೆಸಿದ್ದ ಅವರು, ಗೆಲುವಿನತ್ತ ಭಾರತವನ್ನು ಗೆಲ್ಲಿಸಿದ್ದರು. ಅದುವೇ 2017ರಲ್ಲಿ ತವರಿನಲ್ಲಿ ನಡೆದ ಸರಣಿ ಮತ್ತು 2021ರಲ್ಲಿ ಆಸೀಸ್‌ ನೆಲದಲ್ಲಿ ನಡೆದ ಸೀರೀಸ್. ‌

ಈವರೆಗೆ 150ಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿರುವ ರಹಾನೆ, ನಾಯಕತ್ವವನ್ನೂ ವಹಿಸಿದ್ದಾರೆ. ಆದರೂ, 34 ವರ್ಷದ ಆಟಗಾರ ಐಪಿಎಲ್‌ ಜೀವನದಲ್ಲೂ ಏರುಪೇರುಗಳನ್ನು ಎದುರಿಸಿದ್ದಾರೆ.

ಕಳೆದ ಮೂರು ಐಪಿಎಲ್ ಸೀಸನ್‌ಗಳಲ್ಲಿ ರಹಾನೆ ಸ್ಥಾನಮಾನ ಗಣನೀಯ ಕುಸಿತ ಕಂಡಿದೆ. 2019ರಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕತ್ವವನ್ನು ಕಳೆದುಕೊಂಡ ನಂತರ, ಅವರು ತಂಡದಿಂದಲೇ ಹೊರಗುಳಿದರು. ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ಪರ ಮೂರು ಆವೃತ್ತಿಗಳಲ್ಲಿ ಆಡಿದರೂ, ರಹಾನೆ ಹೆಸರು ಮುನ್ನೆಲೆಗೆ ಬಂದಿದ್ದು ತುಂಬಾ ಕಡಿಮೆ. 2022ರ ಆರಂಭದಲ್ಲಿ ಭಾರತ ಟೆಸ್ಟ್ ತಂಡದಲ್ಲೂ ತಮ್ಮ ಸ್ಥಾನವನ್ನು ಕಳೆದುಕೊಂಡರು.

ಈಗ ರಹಾನೆ ಅವರನ್ನು ನೆನೆಪಿಸಿಕೊಳ್ಳಲು ಕಾರಣ, ಶನಿವಾರ ರಾತ್ರಿ ವಾಂಖೆಡೆ ಮೈದಾನದಲ್ಲಿ ಅವರು ತೋರಿದ ಪ್ರದರ್ಶನ. ಕೇವಲ 27 ಎಸೆತಗಳಲ್ಲಿ ಭರ್ಜರಿ 61 ರನ್‌ ಸಿಡಿಸಿದ ರಹಾನೆ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ವೇಳೆ ಅವರು 2023ರ ಆವೃತ್ತಿಯಲ್ಲಿ ವೇಗದ ಅರ್ಧಶತಕವನ್ನು ಗಳಿಸಿದರು. ವಿಶೇಷವೆಂದರೆ, 2020ರ ಬಳಿಕ ಇದು ಅವರ ಮೊದಲ ಐಪಿಎಲ್ ಅರ್ಧಶತಕವಾಗಿದೆ.

ಪಂದ್ಯದ ಬಳಿಕ ತಮ್ಮ ಆಟದ ಬಗ್ಗೆ ಮಾತನಾಡಿದ ಅವರು, “ನಾನು ಈಗಲೂ ಸಿಕ್ಸರ್‌ಗಳನ್ನು ಹೊಡೆಯುತ್ತಿದ್ದೇನೆ. ಅದು ಕೂಡಾ ಹೆಚ್ಚು ಪವರ್ ಹಿಟ್‌ಗಳಿಲ್ಲದೆ ಎಂಬುದು ಮುಖ್ಯ. ಪ್ರತಿಯೊಬ್ಬ ಆಟಗಾರನೂ ವಿಭಿನ್ನ. ಅವರ ಸಾಮರ್ಥ್ಯಗಳು ಕೂಡಾ ವಿಭಿನ್ನವಾಗಿರುತ್ತವೆ. ನಾನು ಬೇರೆಯವರಾಗಲು ಬಯಸುವುದಿಲ್ಲ. ನಾನು ಅಜಿಂಕ್ಯ ರಹಾನೆ ಆಗಲು ಮಾತ್ರವೇ ಬಯಸುತ್ತೇನೆ. ನನಗೆ ಹೇಗೆ ಆಡಬೇಕೆಂದು ತಿಳಿದಿದೆ. ನನ್ನ ಸಾಮರ್ಥ್ಯ, ನನ್ನ ದೌರ್ಬಲ್ಯ ಮತ್ತು ಬ್ಯಾಟ್‌ ಬೀಸುವ ಸಮಯದ ಬಗ್ಗೆಯೂ ತಿಳಿದಿದೆ. ನಾನು ನನ್ನನ್ನು ಸಮರ್ಥಿಸಲು ಬಯಸುತ್ತೇನೆ. ನಾನು ಎಂದಿಗೂ ಬೇರೊಬ್ಬರಾಗಲು ಪ್ರಯತ್ನಿಸಿಲ್ಲ. ನಾನು ಅಜಿಂಕ್ಯ ರಹಾನೆ ಆಗಿದ್ದುಕೊಂಡು, ಅಜಿಂಕ್ಯ ರಹಾನೆಯಂತೆ ಆಡಬಹುದಲ್ಲವೇ ಎಂಬುದನ್ನು ನನಗೆ ನಾನೇ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ," ಎಂದು ಅವರು ಹೇಳಿದ್ದಾರೆ.

ಕಳೆದ ಪಂದ್ಯದಲ್ಲಿ ಅವರ ಪ್ರಭಾವಿ ಇನ್ನಿಂಗ್ಸ್ ಸಿಎಸ್‌ಕೆ ಗೆಲುವಿಗೆ ಕಾರಣವಾಗಿದೆ. ಚೆನ್ನೈ ಫ್ರಾಂಚೈಸಿಯು ಅನುಕೂಲಕರ ವಾತಾವರಣವನ್ನು ಒದಗಿಸಲು ಹೆಸರುವಾಸಿಯಾಗಿದೆ. ಉತ್ತಮ ಆಟಗಾರರಿಗೆ ಸಂಭಾವ್ಯ ಪ್ರದರ್ಶನ ನೀಡಲು ಅವಕಾಶ ನೀಡುತ್ತದೆ ಎಂದು ರಹಾನೆ ಹೇಳಿಕೊಂಡಿದ್ದಾರೆ

“ಸಿಎಸ್‌ಕೆ ನನ್ನನ್ನು ಆಯ್ಕೆ ಮಾಡಿದಾಗ ನನಗೆ ತುಂಬಾ ಸಂತೋಷವಾಯಿತು. ಅವರು ಪ್ರತಿಯೊಬ್ಬ ವ್ಯಕ್ತಿಯನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಇದಕ್ಕೂ ಮೊದಲು ನಾನು ಅನೇಕ ಆಟಗಾರರಿಂದ ಕೇಳಿದ್ದೆ. ಅದು ನಿಜವಾಗಿಯೂ ಒಂದು ಕುಟುಂಬದಂತೆ. ನಾನು ಮಾಹಿ ಅವರ ನಾಯಕತ್ವದಲ್ಲಿ ಸಾಕಷ್ಟು ಆಡಿದ್ದೇನೆ. ಅದು ಭಾರತ ತಂಡದಲ್ಲಿ. ಸಿಎಸ್‌ಕೆ ತಂಡದಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿದ್ದೇನೆ. ನಾನು ನಿಜವಾಗಿಯೂ ಇಲ್ಲಿ ಆಟವನ್ನು ಆನಂದಿಸುತ್ತಿದ್ದೇನೆ. ನಾವು ಗೆದ್ದರೂ ಅಥವಾ ಸೋತರೂ ಒಂದೇ ರೀತಿಯ ವಾತಾವರಣವಿದೆ,” ಎಂದು ರಹಾನೆ ಹೊಗಳಿದ್ದಾರೆ.

ಕಳೆದ ಮೂರು ಐಪಿಎಲ್ ಸೀಸನ್‌ಗಳಲ್ಲಿ ರಹಾನೆ ಅವರ ಅನುಭವದ ಬಗ್ಗೆ ಕೇಳಿದಾಗ, “ಮಿಂಚಿ ಹೋದ ಕಾಲದ ಬಗ್ಗೆ ನಾನು ಯೋಚಿಸುವುದಿಲ್ಲ. ನಾನು ಮಾಡಿದ ತಪ್ಪುಗಳಿಂದ ಕಲಿಯಲು ಪ್ರಯತ್ನಿಸುತ್ತೇನೆ. ಈ (CSK) ವಾತಾವರಣವು ಕ್ರಿಕೆಟಿಗನಿಗೆ ಮೈದಾನದಲ್ಲಿ ಅತ್ಯುತ್ತಮವಾದುದನ್ನು ನೀಡಲು ಸಹಾಯ ಮಾಡುತ್ತದೆ. ನಾವು ಚೆನ್ನೈಗೆ ಬಂದು ಮಾರ್ಚ್ 3ರಿಂದ ನಮ್ಮ ಶಿಬಿರವನ್ನು ಪ್ರಾರಂಭಿಸಿದ್ದೇವೆ. ಮಾಹಿ ಅಲ್ಲಿದ್ದರು. ಅವರ ಸೂಚನೆಗಳು ತುಂಬಾ ಸರಳವಾಗಿದ್ದವು. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಿ, ನಿಮಗೆ ಅವಕಾಶ ಸಿಕ್ಕಾಗ ನಿಮ್ಮ ಆಟವನ್ನು ಪ್ರದರ್ಶಿಸಿ ಎಂದು ಹೇಳಿದ್ದರು”, ಎಂದು ರಹಾನೆ ತಿಳಿಸಿದ್ದಾರೆ.