ಕನ್ನಡ ಸುದ್ದಿ  /  Sports  /  All You Need To Know About Border Gavaskar Trophy

Border-Gavaskar Trophy: ಏನಿದು ಬಾರ್ಡರ್‌ ಗವಾಸ್ಕರ್‌ ಟ್ರೋಫಿ? ಇತಿಹಾಸವೇನು? ಯಾವ ತಂಡ ಬಲಿಷ್ಠ? ಬೆರಳ ತುದಿಯಲ್ಲಿ ವಿವರ

ಕೊನೆಯ ಬಾರಿಗೆ, ಅಂದರೆ 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯನ್ನು ಭಾರತ ಗೆದ್ದಿದೆ. ಹೀಗಾಗಿ ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಯು ಭಾರತದ ಕೈಯಲ್ಲಿದೆ. ಒಂದು ವೇಳೆ ಈ ಬಾರಿ ನಡೆಯುವ ಸರಣಿ ಡ್ರಾಗೊಂಡರೆ, ಈಗಾಗಲೇ ಟ್ರೋಫಿಯನ್ನು ಹೊಂದಿರುವ ಭಾರತವೇ ಅದನ್ನು ಉಳಿಸಿಕೊಳ್ಳುತ್ತದೆ.

ಭಾರತ ಮತ್ತು ಅಸೀಸ್‌ ಆಟಗಾರರು
ಭಾರತ ಮತ್ತು ಅಸೀಸ್‌ ಆಟಗಾರರು (ICC)

ವಿಶ್ವದ ಎರಡು ಬಲಿಷ್ಠ ಕ್ರಿಕೆಟ್‌ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಟೆಸ್ಟ್‌ ಸರಣಿಗೆ ದಿನಗಣನೆ ಆರಂಭವಾಗಿದೆ. ಉಭಯ ತಂಡಗಳ ನಡುವೆ ನಡೆಯುತ್ತಿರುವುದು ಟೆಸ್ಟ್‌ ಸರಣಿಯಾದರೂ, ಇದು ಟಿ20 ಕದನದಷ್ಟು ರೋಚಕತೆ ಸೃಷ್ಟಿಸಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸ್ಥಾನ ಪಡೆಯಲಿರುವ ಪ್ರಮುಖ ತಂಡಗಳಾಗಿರುವ ಉಭಯ ತಂಡಗಳ ಕದನಕ್ಕೆ ವೇದಿಕೆ ಸಿದ್ಧವಾಗಿದೆ.

ಐಸಿಸಿ ಪುರುಷರ ಟೆಸ್ಟ್ ಶ್ರೇಯಾಂಕದ ಪ್ರಕಾರ, ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಸದ್ಯ ಕ್ರಮವಾಗಿ ನಂಬರ್‌ 1 ಮತ್ತು 2ನೇ ಸ್ಥಾನದಲ್ಲಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023ರಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಭಾರತ ಈ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಟೆಸ್ಟ್‌ ಸರಣಿಯನ್ನು ಗೆಲ್ಲಬೇಕಿದೆ. ಹೀಗಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಪ್ರಾಮುಖ್ಯತೆ ಪಡೆದಿದೆ. ಈ ಸರಣಿಯ ಹೆಸರು ಬಾರ್ಡರ್‌ ಗವಾಸ್ಕರ್‌ ಟ್ರೋಫಿ. ಸರಣಿಯ ಮೊದಲ ಟೆಸ್ಟ್ ಪಂದ್ಯವು ಫೆಬ್ರವರಿ 9ರಿಂದ 13ರವರೆಗೆ ನಾಗ್ಪುರದಲ್ಲಿ ನಡೆಯಲಿದೆ.

ಏನಿದು ಬಾರ್ಡರ್‌ ಗವಾಸ್ಕರ್‌ ಟ್ರೋಫಿ?

ಉಭಯ ತಂಡಗಳು 1947-48 ಮತ್ತು 1991-92ರ ನಡುವೆ ನಡೆದ ಒಟ್ಟು 12 ಸರಣಿಗಳಲ್ಲಿ ಬರೋಬ್ಬರಿ 50 ಟೆಸ್ಟ್‌ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆ ಬಳಿಕ ಬಳಿಕ, ಇಬ್ಬರು ದಿಗ್ಗಜ ಕ್ರಿಕೆಟರ್‌ಗಳಾದ ಸುನಿಲ್ ಗವಾಸ್ಕರ್(Sunil Gavaskar) ಮತ್ತು ಅಲನ್ ಬಾರ್ಡರ್(Allan Border) ಅವರಿಗೆ ಗೌರವ ಸೂಚಕವಾಗಿ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯನ್ನು ಆರಂಭಿಸಲಾಯ್ತು. ಅಲನ್ ಬಾರ್ಡರ್ ಅವರು ಆಸ್ಟ್ರೇಲಿಯಾದ ಮಾಜಿ ನಾಯಕರಾಗಿದ್ದರು. ಸುನಿಲ್ ಗವಾಸ್ಕರ್ ಭಾರತ ತಂಡದ ನಾಯಕರಾಗಿದ್ದರು. ಭಾರತ ಮತ್ತು ಆಸ್ಟ್ರೇಲಿಯಾವು ಮೊದಲ ಬಾರಿಗೆ 1996-97ರಲ್ಲಿ ಈ ಬಾರ್ಡರ್-ಗವಾಸ್ಕರ್ ಟ್ರೋಫಿ(Border-Gavaskar Trophy)ಗಾಗಿ ಆಡಿದವು.

ಕೊನೆಯ ಬಾರಿಗೆ, ಅಂದರೆ 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯನ್ನು ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ಗೆದ್ದಿದೆ. ಹೀಗಾಗಿ ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಯು ಭಾರತದ ಕೈಯಲ್ಲಿದೆ. ಒಂದು ವೇಳೆ ಈ ಬಾರಿ ನಡೆಯುವ ಸರಣಿ ಡ್ರಾಗೊಂಡರೆ, ಈಗಾಗಲೇ ಟ್ರೋಫಿಯನ್ನು ಹೊಂದಿರುವ ಭಾರತವೇ ಅದನ್ನು ಉಳಿಸಿಕೊಳ್ಳುತ್ತದೆ.

ಇಲ್ಲಿಯವರೆಗೆ ನಡೆದ ಸರಣಿಯ ಫಲಿತಾಂಶ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 1947-48ರಲ್ಲಿ ಮೊದಲ ಬಾರಿಗೆ ಮುಖಾಮುಖಿಯಾದಂದಿನಿಂದ, ಒಟ್ಟಾರೆಯಾಗಿ(ಬಾರ್ಡರ್‌ ಗವಾಸ್ಕರ್‌ ಸರಣಿ ಅಲ್ಲದೆ) ಈವರೆಗೆ 27 ಟೆಸ್ಟ್ ಸರಣಿಗಳಲ್ಲಿ ಆಡಿವೆ. ಇದರಲ್ಲಿ ಆಸ್ಟ್ರೇಲಿಯ ತಂಡವು 12 ಸರಣಿಗಳನ್ನು ಗೆದ್ದರೆ, ಭಾರತವು 10ರಲ್ಲಿ ಗೆಲುವು ಸಾಧಿಸಿದೆ. ಉಳಿದ ಐದು ಸರಣಿಗಳು ಡ್ರಾಗೊಂಡಿವೆ.

ಭಾರತವು ಆಸೀಸ್‌ ವಿರುದ್ಧ ಒಟ್ಟು 14 ಟೆಸ್ಟ್ ಸರಣಿಗಳಲ್ಲಿ ಆತಿಥ್ಯ ವಹಿಸಿದ್ದು, ಅದರಲ್ಲಿ 8 ಸರಣಿಯನ್ನು ವಶಪಡಿಸಿಕೊಂಡಿದೆ. 4 ಸರಣಿಯಲ್ಲಿ ಆಸೀಸ್‌ ಗೆದ್ದರೆ, ಉಳಿದ ಎರಡು ಸರಣಿಗಳು ಡ್ರಾಗೊಂಡಿವೆ. ಭಾರತದಲ್ಲಿ ಎಂಟು ಟೆಸ್ಟ್ ಸರಣಿಗಳನ್ನು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಡಲಾಗಿದೆ. ಇದರಲ್ಲಿ ಆತಿಥೇಯರು 7 ಸರಣಿಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ತವರು ನೆಲದಲ್ಲಿ ಭಾರತವು ಬಲಿಷ್ಠವಾಗಿದ್ದು, ಒಟ್ಟು 25 ಟೆಸ್ಟ್‌ ಪಂದ್ಯಗಳಲ್ಲಿ 16ರಲ್ಲಿ ಜಯ ಗಳಿಸಿದೆ. 5ರಲ್ಲಿ ಸೋಲು ಅನುಭವಿಸಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಪರಸ್ಪರ ಮುಖಾಮುಖಿ

ಪಂದ್ಯಗಳು: 102

ಭಾರತದ ಗೆಲುವು 30 ಪಂದ್ಯಗಳು (ಶೇ. 29.41 ಗೆಲುವು)

ಆಸ್ಟ್ರೇಲಿಯಾ ಗೆದ್ದಿದೆ: 43 (ಶೇ. 42.15ಹೆಲುವು)

ಡ್ರಾ: 28

ಟೈ: 1

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಭಾರತದ ಟೆಸ್ಟ್ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್(ವಿಕೆಟ್‌ ಕೀಪರ್), ಇಶಾನ್ ಕಿಶನ್ (ವಿಕೆಟ್‌ ಕೀಪರ್), ಆರ್ ಅಶ್ವಿನ್ , ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.

ಆಸ್ಟ್ರೇಲಿಯಾ ಟೆಸ್ಟ್ ತಂಡ:

ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್‌ ಕೀಪರ್), ಕ್ಯಾಮರೂನ್ ಗ್ರೀನ್, ಪೀಟರ್ ಹ್ಯಾಂಡ್ಸ್ಕಾಂಬ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್(ಉಪನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.