Kannada News  /  Sports  /  All You Need To Know About India Vs Sri Lanka Series
ಟೀಮ್‌ ಇಂಡಿಯಾ ಆಟಗಾರರು
ಟೀಮ್‌ ಇಂಡಿಯಾ ಆಟಗಾರರು

India vs Sri Lanka: ತಂಡಗಳು, ಲೈವ್ ಸ್ಟ್ರೀಮಿಂಗ್, ಪಂದ್ಯದ ವೇಳಾಪಟ್ಟಿ... ಲಂಕಾ ಸರಣಿಯ ಸಂಪೂರ್ಣ ವಿವರ ಇಲ್ಲಿದೆ

26 December 2022, 19:13 ISTHT Kannada Desk
26 December 2022, 19:13 IST

ಶನಕಾ ನೇತೃತ್ವದ ಲಂಕಾ ತಂಡವು ಮುಂದಿನ ತಿಂಗಳು ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿದೆ. ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತ ಹಾಗೂ ಲಂಕಾ ತಂಡಗಳು ತಲಾ 3 ಟಿ20 ಹಾಗೂ ಏಕದಿನ ಪಂದ್ಯಗಳನ್ನು ಆಡಲಿವೆ.

ಈ ವರ್ಷದ ಭಾರತದ ಕೊನೆಯ ಸರಣಿಯು ಬಾಂಗ್ಲಾದೇಶ ಪ್ರವಾಸದೊಂದಿಗೆ ಅಂತ್ಯವಾಯ್ತು. ಏಕದಿನ ಸರಣಿ ಸೋಲು ಹಾಗೂ ಟೆಸ್ಟ್‌ ಸರಣಿ ಕ್ಲೀನ್‌ಸ್ವೀಪ್‌ನೊಂದಿಗೆ ಮಿಶ್ರ ಫಲಿತಾಂಶ ಪಡೆದು ಭಾರತ ತವರಿಗೆ ಮರಳಿದೆ. ಇದೀಗ ಹೊಸ ವರ್ಷದ ಮೊದಲ ಸರಣಿಗೆ ಟೀಮ್ ಇಂಡಿಯಾ ಸಿದ್ಧತೆ ನಡೆಸಿದೆ. ಭಾರತ ತಂಡವು ಶ್ರೀಲಂಕಾ ವಿರುದ್ಧ ತವರಿನಲ್ಲಿ ಆಡುವ ಮೂಲಕ ಹೊಸ ವರ್ಷವನ್ನು ಪ್ರಾರಂಭಿಸಲಿದೆ.

ಟ್ರೆಂಡಿಂಗ್​ ಸುದ್ದಿ

ಶನಕಾ ನೇತೃತ್ವದ ಲಂಕಾ ತಂಡವು ಮುಂದಿನ ತಿಂಗಳು ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿದೆ. ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತ ಹಾಗೂ ಲಂಕಾ ತಂಡಗಳು ತಲಾ 3 ಟಿ20 ಹಾಗೂ ಏಕದಿನ ಪಂದ್ಯಗಳನ್ನು ಆಡಲಿವೆ.

ಮುಂದಿನ ವರ್ಷ ಭಾರತದಲ್ಲೇ ಏಕದಿನ ವಿಶ್ವಕಪ್ ನಡೆಯಲಿರುವುದರಿಂದ, ಏಕದಿನ ಕ್ರಿಕೆಟ್‌ನತ್ತ ಭಾರತದ ಆಟಗಾರರು ಹೆಚ್ಚು ಗಮನ ಹರಿಸಲಿದ್ದಾರೆ. ಭಾರತ ತಂಡವು ಆರು ಏಕದಿನ ಪಂದ್ಯಗಳು ಸೇರಿದಂತೆ ಜನವರಿ ತಿಂಗಳಲ್ಲಿ ಬರೋಬ್ಬರಿ 11 ಪಂದ್ಯಗಳನ್ನು ಆಡಲಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಹಣಾಹಣಿಯು, ಮೂರು ಪಂದ್ಯಗಳ ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಆ ನಂತರ ಅಷ್ಟೇ ಪಂದ್ಯಗಳನ್ನೊಳಗೊಂಡ ಏಕದಿನ ಸರಣಿ ನಡೆಯಲಿದೆ.

ಟಿ20 ಮುಖಾಮುಖಿಯು ಜನವರಿ 3ರಂದು ಮುಂಬೈನಲ್ಲಿ ಪ್ರಾರಂಭವಾಗಲಿದೆ. ಅಂತಿಮ ಟಿ20ಯು ಜನವರಿ 7ರಂದು ನಡೆಯಲಿದೆ. ಆ ಬಳಿಕ, ಏಕದಿನ ಸರಣಿಯು ಜನವರಿ 10 ರಿಂದ ಜನವರಿ 15ರವರೆಗೆ ನಡೆಯಲಿದೆ. ಇದಾದ ಬಳಿಕ ಭಾರತವು ನ್ಯೂಜಿಲೆಂಡ್ ತಂಡವನ್ನು ಸ್ವಾಗತಿಸಲಿದೆ.

ಶ್ರೀಲಂಕಾ - ಭಾರತದ ಪ್ರವಾಸದ ವೇಳಾಪಟ್ಟಿ

ಹಾಲಿ ಏಷ್ಯಾಕಪ್ ಚಾಂಪಿಯನ್‌ಗಳು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲ ಟಿ20 ಪಂದ್ಯದ ಮೂಲಕ ಕಣಕ್ಕಿಳಿಯಲಿದ್ದಾರೆ. ಎರಡನೇ ಟಿ20 ಪಂದ್ಯ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಏಕದಿನ ಸರಣಿಯು ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ನಂತರ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್‌ನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಶ್ರೀಲಂಕಾ ಪ್ರವಾಸದ ಕೊನೆಯ ಪಂದ್ಯವು ತಿರುವನಂತಪುರದ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ.

ತಂಡಗಳು ಹೇಗಿವೆ?

ಮುಂಬರುವ ಪ್ರವಾಸಕ್ಕಾಗಿ ಎರಡೂ ತಂಡಗಳು ತಮ್ಮ ತಂಡವನ್ನು ದೃಢಪಡಿಸಿಲ್ಲ. ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ. ಅಲ್ಲದೆ ಆಯ್ಕೆ ಸಮಿತಿ ಕೂಡಾ ಹೊಸತಾಗಿದ್ದು, ಅಳೆದು ತೂಗಿ ಆಟಗಾರರನ್ನು ಆಯ್ಕೆ ಮಾಡಬೇಕಿದೆ.

ನಾಯಕ ರೋಹಿತ್ ಶರ್ಮಾ, ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಗಾಯಗೊಂಡು ಹೊರಬಿದ್ದಿದ್ದರು. ಕೆಲ ವರದಿಗಳ ಪ್ರಕಾರ; ರೋಹಿತ್ ಶ್ರೀಲಂಕಾ ವಿರುದ್ಧದ ಸರಣಿಯ ವೇಳೆಗೆ ಫಿಟ್ ಆಗುವ ಸಾಧ್ಯತೆಯಿಲ್ಲ. ಹೀಗಾಗಿ ಈ ಸರಣಿಗೆ ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕರಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. ಇನ್ನೊಂದೆಡೆ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಬಹುತೇಕ ಫಿಟ್‌ ಆಗಿದ್ದು, ಉಭಯ ಸರಣಿಯಲ್ಲಿ ಸ್ಥಾನ ಪಡೆಯಯುವ ಸಾಧ್ಯತೆ ಇದೆ.

ಲೈವ್ ಸ್ಟ್ರೀಮಿಂಗ್

ಟೀಮ್ ಇಂಡಿಯಾದ ತವರಿನ ಪಂದ್ಯಗಳ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಹೊಂದಿದೆ. ಹೀಗಾಗಿ ಸಂಪೂರ್ಣ ಶ್ರೀಲಂಕಾ ಪ್ರವಾಸವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಮೊಬೈಲ್‌ ಮೂಲಕ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ನೋಡಬಹುದು. ಅಭಿಮಾನಿಗಳು ಡಿಡಿ ಸ್ಪೋರ್ಟ್ಸ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.

ಭಾರತ vs ಶ್ರೀಲಂಕಾ ಮುಖಾಮುಖಿ ದಾಖಲೆ

ದಕ್ಷಿಣ ಏಷ್ಯಾದ ಎರಡು ಬಲಿಷ್ಠ ತಂಡಗಳು ಸುದೀರ್ಘ ಕಾಲದಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುತ್ತಿವೆ. ಟಿ20ಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಒಟ್ಟು 26 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಮೆನ್ ಇನ್ ಬ್ಲೂ 17 ಪಂದ್ಯಗಳನ್ನು ಗೆದ್ದಿದ್ದರೆ, ಲಂಕಾ 8 ಬಾರಿ ಮೇಲುಗೈ ಸಾಧಿಸಿದೆ. 1 ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ವಿಶೇಷವೆಂದರೆ, ಉಭಯ ತಂಡಗಳು ಈವರೆಗೆ ಒಟ್ಟು 162 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತವು 93 ಗೆಲುವುಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದೆ. ಇದೇ ವೇಳೆ ಶ್ರೀಲಂಕಾ 57 ಬಾರಿ ವಿಜಯಶಾಲಿಯಾಗಿ ಹೊರಹೊಮ್ಮಿದೆ.