ಕನ್ನಡ ಸುದ್ದಿ  /  Sports  /  Alyssa Healy Leads Upw To 10 Wicket Win Over Rcb

Women's Premier League 2023: ಆರ್‌ಸಿಬಿಗೆ ಸತತ ನಾಲ್ಕನೇ ಹೀನಾಯ ಸೋಲು; ಟೂರ್ನಿಯಿಂದ ಬಹುತೇಕ ಹೊರಕ್ಕೆ

ಸದ್ಯ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಯುಪಿ, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಮತ್ತೊಂದೆಡೆ‌ ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡ ಆರ್‌ಸಿಬಿ ಕೊನೆಯ ಸ್ಥಾನದಲ್ಲಿದೆ.

ಅಲಿಸಾ ಹೀಲಿ ಬ್ಯಾಟಿಂಗ್
ಅಲಿಸಾ ಹೀಲಿ ಬ್ಯಾಟಿಂಗ್

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಚೊಚ್ಚಲ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಸತತ ನಾಲ್ಕನೇ ಸೋಲು ಕಂಡಿದೆ. ಯುಪಿ ವಾರಿಯರ್ಸ್‌ ತಂಡದ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಹೀನಾಯವಾಗಿ ಸೋಲುವ ಮೂಲಕ ಡಬ್ಲ್ಯೂಪಿಎಲ್‌ನಲ್ಲಿ ಕಳಪೆ ದಾಖಲೆ ಬರೆದಿದೆ.

ಮೊದಲ ಮೂರು ಸೋಲುಗಳ ಬಳಿಕ ನಾಲ್ಕನೇ ಪಂದ್ಯದಲ್ಲಿ ಗೆದ್ದು ಪುನರಾಗಮನ ಮಾಡುವ ಲೆಕ್ಕಾಚಾರ ಹಾಕಿಕೊಂಡಿದ್ದ ಮಂಧನ ಪಡೆಗೆ ಅಲಿಸ್ಸಾ ಹೀಲಿ ಪಡೆ ಅಡ್ಡಗಾಲು ಹಾಕಿದೆ. ಆ ಮೂಲಕ ಪ್ಲೇಆಫ್‌ ಹಂತಗಳಿಗೆ ಲಗ್ಗೆ ಹಾಕುವ ಆರ್‌ಸಿಬಿ ಕನಸು ಬಹುತೇಕ ಕಮರಿದೆ. ಮುಂದಿನ ನಾಲ್ಕು ಪಂದ್ಯಗಳನ್ನು ಮಂಧನಾ ಪಡೆ ಗೆದ್ದರೂ, ಮುಂದಿನ ಹಂತ ಪ್ರವೇಶಿಸುವುದು ಕಷ್ಟವಾಗಲಿದೆ.

ಟಾಸ್‌ ಗೆದ್ದು ಬೃಹತ್‌ ಮೊದಲು ಬ್ಯಾಟಿಂಗ್‌ ನಡೆಸಿದ ಬೆಂಗಳೂರು, ಭರ್ಜರಿ ಆರಂಭದ ಹೊರತಾಗಿಯೂ ಉತ್ತಮ ಮೊತ್ತ ಪೇರಸುವಲ್ಲಿ ವಿಫಲವಾಯ್ತು. ಕೊನೆಯ ಐದು ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡ ತಂಡವು ಅಂತಿಮವಾಗಿ 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟ್‌ ಆಯ್ತು. ಇದಕ್ಕೆ ಪ್ರತಿಯಾಗಿ ಅಬ್ಬರಿಸಿದ ಯುಪಿ, ನಾಯಕಿ ಅಲಿಸಾ ಹೀಲಿ ಮತ್ತು ದೇವಿಕಾ ವೈದ್ಯ ಅಜೇಯ ಆಟದ ನೆರವಿನಿಂದ ಭರ್ಜರಿಯಾಗಿ ಗೆದ್ದು ಬೀಗಿದೆ. ಕೇವಲ 13 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ನಷ್ಟವಿಲ್ಲದೆ 139 ರನ್‌ ಗಳಿಸಿದೆ. ಸ್ಫೋಟಕ ಆಟವಾಡಿದ ನಾಯಕಿ ಹೀಲಿ ಕೇವಲ 47 ಎಸೆತಗಳಲ್ಲಿ 18‌ ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ ಅಜೇಯ 96 ರನ್‌ ಗಳಿಸಿದರು. ತಂಡವು ಅದಾಗಲೇ ಗೆಲುವು ಸಾಧಿಸಿದ್ದರಿಂದ ಶತಕ ವಂಚಿತರಾದರು.

ಸದ್ಯ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಯುಪಿ, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಮತ್ತೊಂದೆಡೆ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡ ಆರ್‌ಸಿಬಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿತ್ತು. ಸ್ಮೃತಿ ಕೇವಲ ನಾಲ್ಕು ರನ್‌ ಗಳಿಸಿ ಔಟಾದರೂ, ಸೋಫಿ ಡಿವೈನ್‌ ಹಾಗೂ ಎಲಿಸ್‌ ಪೆರ್ರಿ ಅಮೋಘ ಆಟವಾಡಿದರು. ಪೆರ್ರಿ ಅರ್ಧಶತಕ ಸಿಡಿಸಿ ಮಿಂಚಿದರು. ಅವರ ಹೊರತಾಗಿ ಯಾರೂ ಉತ್ತಮವಾಗಿ ಬ್ಯಾಟಿಂಗ್‌ ಮಾಡಲಿಲ್ಲ. ಮೊದಲ ಹತ್ತು ಓವರ್‌ಗಳಲ್ಲಿ ಭರ್ಜರಿ ಪ್ರದರ್ಶನ ನೀಡದ ಆರ್‌ಸಿಬಿ, ಪೆರ್ರಿ ಔಟಾದ ಬಳಿಕ ಸಂಪೂರ್ಣವಾಗಿ ಕುಗ್ಗಿತು. ಹೆದರ್‌ ನೈಟ್‌ ಮತ್ತು ರಿಚಾ ಘೋಷ್‌ ರನೌಟ್‌ ಆದರೆ, ಕನಿಕಾ ಕೂಡಾ ಕಡಿಮೆ ರನ್‌ ಗಳಿಸಿ ನಿರ್ಗಮಿಸಿದರು. ಕಳೆದ ಪಂದ್ಯದಂತೆ ಕೆಲ ಹೊತ್ತು ಆಡಿದ ಕನ್ನಡತಿ ಶ್ರೇಯಾಂಕ ಕೂಡಾ 15 ರನ್‌ ಗಳಿಸಿ ಔಟಾದರು. ಕೆಳ ಕ್ರಮಾಂಕದಲ್ಲಿ ಬಂದ ಬ್ಯಾಟರ್‌ಗಳು ಬಂದ ವೇಗದಲ್ಲೇ ಪೆವಿಲಿಯನ್‌ಗೆ ನಡೆದರು.

ಆರ್‌ಸಿಬಿ ನೀಡಿದ ಗುರಿ ಯುಪಿ ತಂಡಕ್ಕೆ ಲೆಕ್ಕಕ್ಕೆ ಸಿಗಲಿಲ್ಲ. ಆರಂಭದಲ್ಲೂ ಹೊಡಿಬಡಿ ಆಟಕ್ಕೆ ಮುಂದಾದ ಹೀಲಿ, ವೇಗವಾಗಿ ಗುರಿ ತಲುಪಿದರು. ಅಲ್ಲದೆ ತಂಡವನ್ನು ಅಜೇಯವಾಗಿ ಗೆಲುವಿನತ್ತ ಮುನ್ನಡೆಸಿದರು.