WPL -an analysis: ಕ್ರಿಕೆಟ್ ಕುಬೇರನ ಮುಂದೆ ಹೊಸ ಸವಾಲು; ಗೆಲ್ಲುವ ಕುದುರೆಯ ಕೈ ಹಿಡಿಯುತ್ತಾ ಡಬ್ಲ್ಯೂಪಿಎಲ್?
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಟೈಲಿಶ್ ಆಟಗಾರ್ತಿ ಸ್ಮೃತಿ ಮಂಧನ, ಪೂನಂ ಯಾದವ್, ದೀಪ್ತಿ ಶರ್ಮಾ ಅವರಂತಹ ಆಟಗಾರರು ಈಗ ದೇಶದ ಹೆಚ್ಚಿನ ಜನರಿಗೆ ಗೊತ್ತಾಗಿದ್ದಾರೆ. ಇದನ್ನು ಮತ್ತಷ್ಟು ವಿಸ್ತರಿಸುವುದೇ ವಿಮೆನ್ಸ್ ಪ್ರೀಮಿಯರ್ ಲೀಗ್ ಗುರಿ.
ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಸುಗ್ಗಿಕಾಲ ಆರಂಭವಾಗಿದೆ. ಕಳೆದ ವರ್ಷ ಭಾರತ ವನಿತೆಯರ ಕ್ರಿಕೆಟ್‌ನಲ್ಲಿ ಕೆಲವೊಂದು ಐತಿಹಾಸಿಕ ಸನ್ನಿವೇಶಗಳು ಘಟಿಸಿದವು. ಹರ್ಮನ್‌ಪ್ರೀತ್ ಕೌರ್ ಬಳಗವು ಏಳನೇ ಬಾರಿ ಏಷ್ಯಾಕಪ್ ಗೆದ್ದು ಬೀಗಿತು. ಅದಕ್ಕೂ ಮೊದಲು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ನಡೆದ ಕ್ರಿಕೆಟ್‌ನಲ್ಲಿ ನಮ್ಮ ವನಿತೆಯರ ತಂಡವು ಬೆಳ್ಳಿ ಪದಕ ಗೆದ್ದುಕೊಂಡಿತು. ಈ ವರ್ಷದ ಆರಂಭದಲ್ಲೇ ಭಾರತದ ಕಿರಿಯ ವನಿತೆಯರು ಭಾರತ ಕ್ರೀಡಾಲೋಕಕ್ಕೆ ಮತ್ತೊಂದು ಶುಭಸುದ್ದಿ ನೀಡಿದರು. ಚೊಚ್ಚಲ ಅಂಡರ್ 19 ವಿಶ್ವಕಪ್ ಆವೃತ್ತಿಯಲ್ಲೇ ಕಪ್ ಗೆದ್ದು ಭಾರತದ ಬಾಲೆಯರು ಮಿಂಚಿದರು. ಹೀಗೆ ಭಾರತದಲ್ಲಿ ವನಿತೆಯರ ಕ್ರಿಕೆಟ್ ಯಶಸ್ಸಿನ ಏಣಿಯನ್ನು ಏರುತ್ತಲೇ ಇದೆ.
ಟ್ರೆಂಡಿಂಗ್ ಸುದ್ದಿ
ಕಳೆದ ವರ್ಷ ಬಿಸಿಸಿಐಯು ಮಹತ್ವದ ನಿರ್ಧಾರವೊಂದಕ್ಕೆ ಬಂದಿತು. ಪುರುಷರಷ್ಟೇ ಸಮಾನ ವೇತನವನ್ನು ಮಹಿಳಾ ಕ್ರಿಕೆಟಿಗರಿಗೂ ಘೋಷಿಸುವ ಮೂಲಕ, ಬಿಸಿಸಿಐಯು ಜಾಗತಿಕ ಕ್ರೀಡಾಕ್ಷೇತ್ರದಲ್ಲಿ ಐತಿಹಾಸಿಕ ನಿರ್ಧಾರಕ್ಕೆ ಸಾಕ್ಷಿಯಾಯ್ತು. ಆ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಪುರುಷ-ಮಹಿಳೆ ಎಂಬ ತಾರತಮ್ಯವೇ ಇಲ್ಲ, ಎಲ್ಲರೂ ಸಮಾನರು ಎಂಬ ಹೊಸ ಸಂದೇಶವನ್ನು ಜಗತ್ತಿಗೆ ಬಿಸಿಸಿಐ ರವಾನಿಸಿತು. ಭಾರತ ಹಾಗೂ ಜಾಗತಿಕ ಕ್ರೀಡಾ ರಂಗದಲ್ಲೇ ಇದೊಂದು ಮಹತ್ವದ ನಿರ್ಧಾರವಾಯ್ತು. ಈ ಐತಿಹಾಸಿಕ ನಿರ್ಧಾರವನ್ನು ದೇಶದ ಎಲ್ಲಾ ಹಿರಿಯ ಕ್ರೀಡಾಪಟುಗಳು ಮುಕ್ತಕಂಠದಿಂದ ಶ್ಲಾಘಿಸಿದರು.
ಇದರ ನಡುವೆ ಹೊಸತೊಂದು ಪ್ರಯತ್ನಕ್ಕೆ ಬಿಸಿಸಿಐ ಕೈ ಹಾಕಿದೆ. ಅದುವೇ ವಿಮೆನ್ಸ್ ಪ್ರೀಮಿಯರ್ ಲೀಗ್. ಅರ್ಥಾತ್ ಮಹಿಳೆಯರ ಐಪಿಎಲ್. ಈಗಾಗಲೇ ಪುರುಷರ ಐಪಿಎಲ್ ಐಶಸ್ವಿಯಾಗಿ ಆಯೋಜಿಸುತ್ತಾ ಬಂದು, ಜಾಗತಿಕ ಕ್ರಿಕೆಟ್ ಲೋಕದಲ್ಲಿ ಕುಬೇರನಿಗೆ ಸರಿಸಮನಾಗಿ ಬಿಸಿಸಿಐ ಮೆರೆಯುತ್ತಿದೆ. ಐಪಿಎಲ್ ಆರಂಭಿಸಿದಾಗಿನಿಂದ, ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯ ಗೆಲ್ಲುವ ಕುದುರೆ ತಿರುಗಿಯೂ ನೋಡಿಲ್ಲ. ವರ್ಷದಿಂದ ವರ್ಷಕ್ಕೆ ದುಪ್ಟಟ್ಟು ಆದಾಯದೊಂದಿಗೆ, ಭಾರತದಲ್ಲಿ ಚುಟುಕು ಮಾದರಿಯ ಕ್ರಿಕೆಟ್‌ನ ಜನಪ್ರಿಯತೆಯೂ ಹೆಚ್ಚುತ್ತಿದೆ. ಇದೇ ಯಶಸ್ಸಿನ ನಿರೀಕ್ಷೆಯಲ್ಲಿ ಬಿಸಿಸಿಐ ಕೈ ಹಾಕಿದ ಹೊಸ ಪ್ರಯತ್ನವೇ WPL.
ಭಾರತದಲ್ಲಿ ಕ್ರಿಕೆಟ್‌ಗೆ ಇರುವಷ್ಟು ಅಭಿಮಾನಿಗಳು ಬೇರೆ ಯಾವ ಕ್ರೀಡೆಗೂ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ಲಿಖಿತ ಸತ್ಯ. ಹಾಗಂತಾ, ವನಿತೆಯರ ಕ್ರಿಕೆಟ್‌ಗೆ ಪುರುಷರ ಕ್ರಿಕೆಟ್‌ನ ಮಾದರಿಯದ್ದೇ ಬೆಂಬಲ ನಿರೀಕ್ಷಿಸುವುದು ಕಷ್ಟ. ಕ್ರಿಕೆಟ್‌ನಲ್ಲಿ ಸಚಿನ್, ವಿರಾಟ್, ರೋಹಿತ್, ಧೋನಿ ಹೆಸರುಗಳನ್ನು ತಿಳಿದಿರುವಷ್ಟು ಪ್ರಮಾಣದ ಜನರಿಗೆ; ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧನಾ ಹೆಸರನ್ನು ತಿಳಿದಿಲ್ಲ. ಈ ಎರಡು ವರ್ಗಗಳ ನಡುವೆ ಹೆಚ್ಚೇನೂ ವ್ಯತ್ಯಾಸಗಳಿಲ್ಲ. ಲಿಂಗ ಬೇರೆ ಎನ್ನುವುದನ್ನು ಬಿಟ್ಟರೆ ಇವರೆಲ್ಲಾ ಹಾಲಿ ಹಾಗೂ ಮಾಜಿ ಕ್ರಿಕೆಟಿಗರೇ. ಆದರೆ, ಜನಪ್ರಿಯತೆಯ ಪ್ರಮಾಣ ಮಾತ್ರ ಕಡಿಮೆ. ಈ ಅಂತರವನ್ನು ಬದಲಾಯಿಸುವ ಪ್ರಯತ್ನವೇ ವಿಮಿನ್ಸ್ ಪ್ರೀಮಿಯರ್ ಲೀಗ್.
ಸದ್ಯ ಮೇಲಿಂದ ಮೇಲೆ ಯಶಸ್ಸನ್ನು ಗಳಿಸಿರುವ ಭಾರತ ವನಿತೆಯರ ಕ್ರಿಕೆಟ್ ತಂಡದ ಹಲವು ಆಟಗಾರ್ತಿಯರು ದೇಶದಲ್ಲಿ ಮನೆ ಮಾತಾಗಿದ್ದಾರೆ. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಟೈಲಿಶ್ ಆಟಗಾರ್ತಿ ಸ್ಮೃತಿ ಮಂಧನ, ಪೂನಂ ಯಾದವ್, ದೀಪ್ತಿ ಶರ್ಮಾ ಅವರಂತಹ ಆಟಗಾರರು ಈಗ ದೇಶದ ಹೆಚ್ಚಿನ ಜನರಿಗೆ ಗೊತ್ತಾಗಿದ್ದಾರೆ. ಇದನ್ನು ಮತ್ತಷ್ಟು ವಿಸ್ತರಿಸುವುದೇ ವಿಮೆನ್ಸ್ ಪ್ರೀಮಿಯರ್ ಲೀಗ್ ಗುರಿ.
ಪ್ರಸಾರದ ಹಕ್ಕುಗಳ ಮಾರಾಟ, ತಂಡದ ಮಾಲೀಕತ್ವದ ಸಂಖ್ಯೆ ಹಾಗೂ ತಂಡವನ್ನು ಕಣಕ್ಕಿಳಿಸಲು ಫ್ರಾಂಚೈಸಿಗಳು ತೋರಿದ ಆಸಕ್ತಿಯನ್ನು ಗಮನಿಸಿದರೆ, ಈ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ಸಿಕ್ಕಿರುವುದು ಸ್ಪಷ್ಟವಾಗುತ್ತಿದೆ. ವನಿತೆಯರ ಐಪಿಎಲ್‌ನ ಮಾಧ್ಯಮ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ವಯಾಕಾಮ್ 18(Viacom 18) ಪಡೆದುಕೊಂಡಿದೆ. 2023ರಿಂದ 2027ರವರೆಗೆ ಅನ್ವಯಿಸುವಂತೆ, ಮೊದಲ ಐದು ವರ್ಷಗಳ ಪ್ರಸಾರದ ಹಕ್ಕನ್ನು ಬರೋಬ್ಬರಿ 951 ಕೋಟಿ ರೂಪಾಯಿಗಳಿಗೆ ವಯಾಕಾಮ್ 18 ಪಡೆದುಕೊಂಡಿದೆ. ಅಂದರೆ, ಪ್ರತಿ ಪಂದ್ಯಕ್ಕೆ 7.09 ಕೋಟಿ ರೂಪಾಯಿಗಳಂತೆ ಒಟ್ಟು 134 ಪಂದ್ಯಗಳಿಗೆ 951 ಕೋಟಿ ರೂಪಾಯಿಯನ್ನು ಬಿಸಿಸಿಐಗೆ ವಯಾಕಾಮ್ ಪಾವತಿಸಲಿದೆ. ಈ ಮೊತ್ತ ಬಿಸಿಸಿಐ ಅಂದಾಜಿಸಿದ್ದ ಲೆಕ್ಕಕ್ಕೂ ಹೆಚ್ಚು ಎಂದು ಬಿಸಿಸಿಐ ಮೂಲಗಳೇ ಈ ಹಿಂದೆ ಬಾಯ್ಬಿಟ್ಟು ಹೇಳಿತ್ತು. ಇದರಲ್ಲೇ ಈ ಪಂದ್ಯಾವಳಿಯು ಎತ್ತ ಸಾಗಬಹುದು ಎಂಬುದನ್ನು ಲೆಕ್ಕ ಹಾಕಬಹುದು.
ವಿಮಿನ್ಸ್ ಪ್ರೀಮಿಯರ್ ಲೀಗ್‌ನ ತಂಡಗಳ ಈಗಿನ ಮೌಲ್ಯವು, ಕೆಲ ಪುರುಷರ ವಿದೇಶಿ ಕ್ರಿಕೆಟ್ ಲೀಗ್ ತಂಡಗಳಿಗಿಂತ ಹೆಚ್ಚು. ಉಳಿದ ತಂಡಗಳಿಗಿಂತ ಕಡಿಮೆ ಬ್ರಾಂಡ್ ಮೌಲ್ಯ ಹೊಂದಿರುವ ವಿಮಿನ್ಸ್ ಪ್ರೀಮಿಯರ್ ಲೀಗ್ ತಂಡವಾದ ಲಖನೌ(10 ವರ್ಷಗಳಿಗೆ 750 ಕೋಟಿ ರೂ.) ತಂಡ ಖರೀದಿಸಲು ಪಾವತಿಸಿದ ಮೊತ್ತವು, ವಿದೇಶಿ ಲೀಗ್‌ಗಳಲ್ಲಿ ಪುರುಷರ ತಂಡವನ್ನು ಹೊಂದಲು MI/ DC/ Royals/ KKR ಅಥವಾ ಸೂಪರ್‌ಜೈಂಟ್ ಫ್ರಾಂಚೈಸಿಗಳು ಪಾವತಿಸಿದ ಮೊತ್ತಕ್ಕಿಂತ ಹೆಚ್ಚು ದುಬಾರಿಯಾಗಿದೆ ಎನ್ನುವುದೇ ಇದಕ್ಕೆ ಸಾಕ್ಷಿ.
ಮಹಿಳಾ ಕ್ರಿಕೆಟ್ ತುಲನಾತ್ಮಕವಾಗಿ ಕಡಿಮೆ ಬೆಂಬಲ ಪಡೆದರೂ, ಹೂಡಿಕೆದಾರರು ಮಾತ್ರ ಇದರ ಮೇಲೆ ಭಾರಿ ಪ್ರಮಾಣದ ನಂಬಿಕೆ ತೋರಿಸಿದ್ದಾರೆ. ಐಪಿಎಲ್ ಈಗಾಗಲೇ ಭಾರತೀಯರು ಮತ್ತು ವಿದೇಶಿ ಪ್ರತಿಭೆಗಳನ್ನು ಗುರುತಿಸುವ ಮೂಲಕ, ಭಾರಿ ಅಭಿಮಾನಿ ಬಳಗವನ್ನು ಹೊಂದಿದೆ. ಆದರೆ, ಮಹಿಳಾ ಕ್ರಿಕೆಟ್‌ನಲ್ಲೂ ಆ ಮಾದರಿಯ ನಿರೀಕ್ಷೆ ಇಟ್ಟುಕೊಳ್ಳಲು ಆಗುವುದಿಲ್ಲ. ಮಹಿಳಾ ಕ್ರಿಕೆಟ್‌ನಲ್ಲಿ ಯಾವುದೇ ಕ್ಲಬ್ ಅಥವಾ ಟೂರ್ನಮೆಂಟ್ ವ್ಯವಸ್ಥೆ ಇಲ್ಲ. ಅಲ್ಲದೆ ಬಿಸಿಸಿಐನ ಹೊರಗೆ ಪ್ರಾಯೋಗಿಕವಾಗಿ ಯಾವುದೇ ಸಂಘಟಿತ ಕ್ರಿಕೆಟ್ ಇಲ್ಲ. ಅಲ್ಲದೆ ನುರಿತ ಆಟಗಾರ್ತಿಯರ ಸಂಖ್ಯೆ ಕೂಡಾ ಕಡಿಮೆ ಇದೆ. ಹೀಗಾಗಿ ಒಂದಕ್ಕಿಂತ ಹೆಚ್ಚು ಬಲಿಷ್ಠ ತಂಡವನ್ನು ಕಟ್ಟಿ ಯಶಸ್ಸನ್ನು ಹುಡುಕುವುದು ಕೊಂಚ ಮಟ್ಟಿಗೆ ಸವಾಲಾಗಿ ಪರಿಣಮಿಸಲಿದೆ.
ಮಹಿಳಾ ಕ್ರಿಕೆಟ್‌ನ ಅನೇಕ ಬೆಂಬಲಿಗರು ಕೂಡಾ, 10 ಪ್ರಮುಖ ಆಟಗಾರ್ತಿಯರನ್ನು ಹೆಸರಿಸಲು ಹೆಣಗಾಡುತ್ತಾರೆ. ಹರ್ಮನ್‌ಪ್ರೀತ್, ಸ್ಮೃತಿ, ಜೆಮಿಮಾ ಮತ್ತು ಶಫಾಲಿ ಹೆಸರು ಹೆಚ್ಚು ಸದ್ದು ಮಾಡಿದೆ. ಶ್ವೇತಾ ಸೆಹ್ರಾವತ್ ಮತ್ತು ಪಾರ್ಶವಿ ಚೋಪ್ರಾ ಅಂಡರ್ 19 ವಿಶ್ವಕಪ್‌ನಲ್ಲಿ ಅದ್ವಿತೀಯ ಪ್ರದರ್ಶನ ತೋರಿದ್ದಾರೆ. ಆದರೆ ಮಹಿಳಾ ಕ್ರಿಕೆಟ್ ಮಾತ್ರ, ಅನುಭವಿ ಹಾಗೂ ಕ್ರಿಕೆಟ್‌ನ ಆಳ ಅಗಲ ತಿಳಿದ ಆಟಗಾರ್ತಿಯರ ಹುಡುಕಾಟದಲ್ಲಿದೆ.
ಮಹಿಳೆಯರ ಪ್ರೀಮಿಯರ್ ಲೀಗ್ ಯಶಸ್ವಿಯಾಗಲು, 'ಷರತ್ತುಗಳು ಅನ್ವಯಿಸುತ್ತವೆ'. ಐವರು ವಿದೇಶಿ ಆಟಗಾರ್ತಿಯರು ಹಾಗೂ ಆರು ಭಾರತೀಯರು ಸೇರಿಕೊಂಡು ಸ್ಪರ್ಧಾತ್ಮಕ ಕ್ರಿಕೆಟ್ ಆಟ ಆಡಬಲ್ಲರೇ ಎಂಬ ಬಗ್ಗೆ ಹೆಚ್ಚಿನ ಚಿಂತೆ ಇದೆ. ಇದರೊಂದಿಗೆ ಆಟ, ವೀಕ್ಷಕರ ಬೆಂಬಲ, ಟಿವಿ ರೇಟಿಂಗ್‌ಗಳು, ಪ್ರಾಯೋಜಕರ ಆಸಕ್ತಿ ಹೀಗೆ ಎಲ್ಲವೂ ಈ ಕೂಟದ ಯಶಸ್ಸಿಗೆ ಅಗತ್ಯವಿದೆ.
ಐಪಿಎಲ್ ತಂಡಗಳನ್ನು ಸೇರಿಕೊಳ್ಳಲು 60 ಭಾರತೀಯ ಆಟಗಾರ್ತಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದು ಅವರ ಪಾಲಿಗೆ ನಿಜಕ್ಕೂ ಗೇಮ್ ಚೇಂಜರ್. ಫ್ರಾಂಚೈಸಿ ತಂಡಗಳಿಂದ ಆಯ್ಕೆಯಾಗುವ ಪ್ರತಿ ಭಾರತೀಯ ಆಟಗಾರ್ತಿಯರಿಗೆ, ಇದು ನಿರ್ಣಾಯಕ ಕ್ಷಣವಾಗಿದೆ. ವಿದ್ಯಾರ್ಥಿಯೊಬ್ಬ NEET/JEE ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆ, ಅದಕ್ಕೆ ಮಾಡುವ ಪ್ರಯತ್ನದಂತೆ ಈಗ ಆಟಗಾರ್ತಿಯರು ಪರೀಕ್ಷೆ ಎದುರಿಸುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಐಸಿಸಿಯ ಏಕದಿನ ಆಟಗಾರ್ತಿ ಹಾಗೂ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಅವರು 3 ರಿಂದ 4 ಕೋಟಿ ರೂಪಾಯಿಗಳನ್ನು ಸುಲಭವಾಗಿ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಹರ್ಮನ್‌ಪ್ರೀತ್, ಈ ಲೀಗ್ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇವರಂತೆಯೇ ಭಾರತದ ಎಲ್ಲಾ ಆಟಗಾರ್ತಿಯರು ಉತ್ಸಾಹದಿಂದ ಕಾಯುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ, ಭಾರತೀಯರಿಗೆ ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ. ಸದ್ಯಕ್ಕೆ ಯಶಸ್ಸು ಖಚಿತ. ಆದರೆ, ಅದು ಸಂಭವಿಸುವವರೆಗೆ ಕೇವಲ ಇಬ್ಬರು ಮಾತ್ರ ಸ್ಪಷ್ಟ ವಿಜೇತರು. ಒಂದು ಬಿಸಿಸಿಐ, ಮತ್ತೊಂದು ಭಾರತದ ಆಟಗಾರ್ತಿಯರು. ಇದನ್ನು ಹೊರತುಪಡಿಸಿ ತಂಡದ ಮಾಲೀಕರು, ಪ್ರಸಾರಕರು, ವಾಣಿಜ್ಯ ಪಾಲುದಾರರು ಸೇರಿದಂತೆ ವಿಮಿನ್ಸ್ ಪ್ರೀಮಿಯರ್ ಲೀಗ್‌ನ ಭವಿಷ್ಯ ಸದ್ಯಕ್ಕಂತೂ ಅನಿಶ್ಚಿತವಾಗಿದೆ. ಏಕೆಂದರೆ, ಬಾಲಿವುಡ್‌ನಂತೆ ಕ್ರಿಕೆಟ್‌ನ ಬಾಕ್ಸ್ ಆಫೀಸ್ ಕೂಡಾ ಅನಿಶ್ಚಿತವೇ. ಚೆಂಡು ಯಾವ ಕಡೆಗೆ ಹೋಗಿ ಬೀಳುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಅಲ್ಲಿಯವರೆಗೂ ಕಾಯಬೇಕು.