ಕನ್ನಡ ಸುದ್ದಿ  /  Sports  /  Anushka Sharma On Virat Kohli Test Century In Over Three Years

Anushka Sharma on Virat: ಅನಾರೋಗ್ಯದ ನಡುವೆ ಆಡಿ ಶತಕ ಸಿಡಿಸಿದ ವಿರಾಟ್! ಪಂದ್ಯದ ಬಳಿಕ ಪತ್ನಿ ಅನುಷ್ಕಾ ಹೇಳಿದ್ದು ಹೀಗೆ

ವಿರಾಟ್ ಶತಕ ಸಿಡಿಸಿದ ವಿಡಿಯೋವನ್ನು ಹಂಚಿಕೊಂಡಿರುವ ಅನುಷ್ಕಾ, “ಅನಾರೋಗ್ಯವಿದ್ದರೂ ಪಂದ್ಯದಲ್ಲಿ ಹಿಡಿತ ಸಾಧಿಸಿ ಆಡುವುದು ನನಗೆ ಯಾವಾಗಲೂ ಸ್ಫೂರ್ತಿ ತುಂಬುತ್ತದೆ,” ಎಂದು ಬರೆದುಕೊಂಡಿದ್ದಾರೆ.

ವಿರಾಟ್‌-ಅನುಷ್ಕಾ
ವಿರಾಟ್‌-ಅನುಷ್ಕಾ (PTI)

ಇಂಡೋ ಆಸೀಸ್‌ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ವಿರಾಟ್‌ ಕೊಹ್ಲಿ ಶತಕ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಬರೋಬ್ಬರಿ 1205 ದಿನಗಳ ನಂತರ ಕಿಂಗ್‌ ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿಯಿತು. ಈ ವರ್ಷ ಏಕದಿನ ಕ್ರಕೆಟ್‌ನಲ್ಲಿ ಮೇಲಿಂದ ಮೇಲೆ ಸೆಂಚುರಿ ಸಿಡಿಸಿದ್ದ ವಿರಾಟ್‌, ಕಳೆದ ವರ್ಷ ನಡೆದ ಏಷ್ಯಾಕಪ್‌ನಲ್ಲಿಯೂ ಮೂರಂಕಿ ಮೊತ್ತ ದಾಖಲಿಸುವ ಮೂಲಕ ಶತಕದ ಬರ ನೀಗಿಸಿದ್ದರು. ಆದರೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಸೆಂಚುರಿ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಅದು ಇಂದು ನೆರವೇರಿದೆ. ಆದರೆ, ಕೊಹ್ಲಿ ಈ ಶತಕ ಸಿಡಿಸಿದ್ದು ಅನಾರೋಗ್ಯದ ನಡುವೆ ಎಂಬುದು ಪಂದ್ಯದ ಬಳಿಕ ಬಹಿರಂಗವಾಗಿದೆ.

ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದ ನಾಲ್ಕನೇ ದಿನದಂದು ತಾಳ್ಮೆಯ ಇನ್ನಿಂಗ್ಸ್ ಆಡಿದ ವಿರಾಟ್‌, ಮೂರಂಕಿ ಗಡಿ ದಾಟಿದರು. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮ್ಮ 28ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. 241 ಎಸೆತಗಳಲ್ಲಿ ನೂರು ರನ್‌ ಗಳಿಸಿದ ಕೊಹ್ಲಿ ಅಭಿಮಾನಿಗಳಿಗೆ ಖುಷಿಪಡಿಸಿದರು. ತಮ್ಮ ಸಾಧನೆಯನ್ನು ಸರಳವಾಗಿ ಸಂಭ್ರಮಿಸುತ್ತಾ, ಆ ಶತಕವನ್ನು ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ಅರ್ಪಿಸಿದರು. ತಮ್ಮ ಕೊರಳಲ್ಲಿದ್ದ ಸರದ ಲಾಕೆಟ್‌ಗೆ ಮುತ್ತು ಕೊಟ್ಟು ಭಾವನಾತ್ಮಕವಾಗಿ ಸಂಭ್ರಮವನ್ನಾಚರಿಸಿದರು.

ಪ್ರತಿ ಬಾರಿಯೂ ಆಟದಲ್ಲಿ ವಿಫಲವಾದಾಗ, ಟೀಕೆಗಳಿಗೆ ಗುರಿಯಾದಾಗಲೂ ತಮ್ಮ ಪತ್ನಿ ನನ್ನ ಜೊತೆಗದ್ದರು ಎಂದು ವಿರಾಟ್‌ ಹಲವು ಬಾರಿ ತಿಳಿಸಿದ್ದಾರೆ. ಮಾನಸಿಕವಾಗಿ ತನಗೆ ಧೈರ್ಯ ತುಂಬಿದ್ದು, ಸ್ಫೂರ್ತಿ ತುಂಬಿದ್ದು ಅನುಷ್ಕಾ ಎಂದು ಅವರು ಹೇಳಿದ್ದರು. ಇದೇ ಕಾರಣಕ್ಕೆ ತಮ್ಮ ಪ್ರತಿ ಸಾಧನೆಯ ವೇಳೆಯೂ ಕೊಹ್ಲಿ ತಮ್ಮ ಕೈಹಿಡಿದಾಕೆಯನ್ನು ಮರೆಯುವುದಿಲ್ಲ. ಕಳೆದ ವರ್ಷ ಏಷ್ಯಾಕಪ್‌ ವೇಳೆಗೆ ಅಫ್ಘಾನಿಸ್ತಾನದ ವಿರುದ್ಧ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಮೂರು ವರ್ಷಗಳ ಶತಕದ ಬರ ನೀಡಗಿಸಿದ್ದಾಗಲೂ, ವಿರಾಟ್‌ ಅನುಷ್ಕಾರನ್ನು ಸ್ಮರಿಸಿದ್ದರು. ಪ್ರತಿ ಹಂತದಲ್ಲೂ ಹಿನ್ನಡೆಯಾದಾಗ ಜೊತೆಗಿದ್ದ ಅರ್ಧಾಂಗಿಗೆ ಶತಕವನ್ನು ಅರ್ಪಿಸಿದ್ದರು. ಈ ಪಂದ್ಯದಲ್ಲಿ ಸಿಡಿಸಿದ ಶತಕದ ವೇಳೆಯೂ ಕೊಹ್ಲಿ ತಮ್ಮ ಪತ್ನಿಯನ್ನು ಸ್ಮರಿಸಿದ್ದಾರೆ.

ಅನಾರೋಗ್ಯವಿದ್ದರೂ ಆಡಿ ಶತಕ ಸಿಡಿಸಿದ ಕೊಹ್ಲಿ!

ಕೊಹ್ಲಿಯ ಈ ಶತಕ ಸುಲಭದಲ್ಲಿ ಬಂದಿಲ್ಲ. ಕೊಹ್ಲಿ ಈ ಪಂದ್ಯದಲ್ಲಿ ಎಲ್ಲಿಯೂ ಆಕ್ರೋಶದ ಆಟ ಪ್ರದರ್ಶಿಸಲಿಲ್ಲ. ಸ್ಫೋಟಕವಾಗಿ ಆಡಿ ರನ್‌ ಹೆಚ್ಚಿಸುವ ಪ್ರಯತ್ನಕ್ಕೂ ಕೈ ಹಾಕಲಿಲ್ಲ. ನಿಧಾನವಾಗಿ ಚಾಣಾಕ್ಷತನದಿಂದ ಟೆಸ್ಟ್ ಕ್ರಿಕೆಟ್‌ಗೆ ಸರಿಹೊಂದುವಂತೆ ಬ್ಯಾಟಿಂಗ್ ನಡೆಸಿದರು. ಇದಕ್ಕೆ ಕಾರಣವಿದೆ. ಕೊಹ್ಲಿಯ ಆರೋಗ್ಯ ಸರಿ ಇರಲಿಲ್ಲ. ಅನಾರೋಗ್ಯದ ನಡುವೆಯೂ ಅವರು ಬ್ಯಾಟಿಂಗ್‌ಗೆ ಇಳಿದಿದ್ದರು. ಇದನ್ನು ಅವರ ಪತ್ನಿ ಅನುಷ್ಕಾ ಶರ್ಮಾ ಬಹಿರಂಗಪಡಿಸಿದ್ದಾರೆ.

ಭಾನುವಾರದ ಟೆಸ್ಟ್ ಪಂದ್ಯದಿಂದ ವಿರಾಟ್ ಅವರ ವಿಡಿಯೋವನ್ನು ಹಂಚಿಕೊಂಡಿರುವ ಅನುಷ್ಕಾ, “ಅನಾರೋಗ್ಯವಿದ್ದರೂ ಶಾಂತವಾಗಿ ಪಂದ್ಯದಲ್ಲಿ ಹಿಡಿತ ಸಾಧಿಸಿ ಆಡುವುದು ನನಗೆ ಯಾವಾಗಲೂ ಸ್ಫೂರ್ತಿ ತುಂಬುತ್ತದೆ,” ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

ಈ ಟೆಸ್ಟ್ ಪಂದ್ಯಕ್ಕೂ ಮೊದಲು, ವಿರಾಟ್ ಮತ್ತು ಅನುಷ್ಕಾ ಉಜ್ಜಯಿನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ತಮ್ಮ ಮಗಳು ವಮಿಕಾ ಅವರೊಂದಿಗೆ ದಂಪತಿ ದೇವಸ್ಥಾನಗಳು ಮತ್ತು ಆಶ್ರಮಗಳಿಗೆ ಭೇಟಿ ನೀಡಿದ್ದಾರೆ. ಉಜ್ಜಯಿನಿ ದೇವಸ್ಥಾನಕ್ಕೆ ಭೇಟಿ ನೀಡಿದ ಕುರಿತು ಮಾತನಾಡಿದ್ದ ಅನುಷ್ಕಾ, “ನಾವು ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ. ಮಹಾಕಾಳೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದಿದ್ದೇವೆ” ಎಂದು ಹೇಳಿದ್ದರು.‌

ಅನುಷ್ಕಾ ಮತ್ತು ವಿರಾಟ್ ಕೆಲವು ವರ್ಷಗಳ ಡೇಟಿಂಗ್ ನಂತರ 2017ರಲ್ಲಿ ಇಟಲಿಯಲ್ಲಿ ವಿವಾಹವಾಗಿದ್ದರು. ಅವರು 2021ರ ಜನವರಿಯಲ್ಲಿ ತಮ್ಮ ಮಗಳು ವಮಿಕಾಳನ್ನು ಸ್ವಾಗತಿಸಿದರು.

ಅನುಷ್ಕಾ ಶರ್ಮಾ ಪೋಸ್ಟ್
ಅನುಷ್ಕಾ ಶರ್ಮಾ ಪೋಸ್ಟ್