ಭಾರತಕ್ಕೆ ಬರಲಿದೆ ಅರ್ಜೆಂಟೀನಾ ಫುಟ್ಬಾಲ್ ತಂಡ, ಲಿಯೋನೆಲ್ ಮೆಸ್ಸಿ ಕೂಡಾ ಇರ್ತಾರೆ; ಯಾವಾಗ ನೋಡಿ
ಕನ್ನಡ ಸುದ್ದಿ  /  ಕ್ರೀಡೆ  /  ಭಾರತಕ್ಕೆ ಬರಲಿದೆ ಅರ್ಜೆಂಟೀನಾ ಫುಟ್ಬಾಲ್ ತಂಡ, ಲಿಯೋನೆಲ್ ಮೆಸ್ಸಿ ಕೂಡಾ ಇರ್ತಾರೆ; ಯಾವಾಗ ನೋಡಿ

ಭಾರತಕ್ಕೆ ಬರಲಿದೆ ಅರ್ಜೆಂಟೀನಾ ಫುಟ್ಬಾಲ್ ತಂಡ, ಲಿಯೋನೆಲ್ ಮೆಸ್ಸಿ ಕೂಡಾ ಇರ್ತಾರೆ; ಯಾವಾಗ ನೋಡಿ

2011ರಲ್ಲಿ ಭಾರತಕ್ಕೆ ಬಂದು ಕೋಲ್ಕತ್ತಾದಲ್ಲಿ ವೆನೆಜುವೆಲಾ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಡಿದ್ದ ಅರ್ಜೆಂಟೀನಾ ಫುಟ್ಬಾಲ್‌ ತಂಡ‌, 2025ರಲ್ಲಿ ಮತ್ತೆ ಭಾರತಕ್ಕೆ ಬರುತ್ತಿದೆ. ಈ ಬಾರಿ ಯಾವಾಗ ಬರುತ್ತೆ ಅನ್ನೋ ವಿವರ ಇಲ್ಲಿದೆ.

ಭಾರತಕ್ಕೆ ಬರಲಿದೆ ಅರ್ಜೆಂಟೀನಾ ಫುಟ್ಬಾಲ್ ತಂಡ, ಲಿಯೋನೆಲ್ ಮೆಸ್ಸಿ ಕೂಡಾ ಇರ್ತಾರೆ (ಸಂಗ್ರಹ ಚಿತ್ರ)
ಭಾರತಕ್ಕೆ ಬರಲಿದೆ ಅರ್ಜೆಂಟೀನಾ ಫುಟ್ಬಾಲ್ ತಂಡ, ಲಿಯೋನೆಲ್ ಮೆಸ್ಸಿ ಕೂಡಾ ಇರ್ತಾರೆ (ಸಂಗ್ರಹ ಚಿತ್ರ) (AFP)

ಭಾರತದಲ್ಲಿ ಕ್ರಿಕೆಟ್‌ಗೆ ಇರುವಷ್ಟು ಕ್ರೇಜ್‌ ಫುಟ್ಬಾಲ್‌ಗೆ ಇಲ್ಲ. ಆದರೆ, ವರ್ಷ ಕಳೆದಂತೆ ಕಾಲ್ಚೆಂಡು ಕ್ರೀಡೆ ಕೂಡಾ ಜನಪ್ರಿಯತೆ ಜತೆಗೆ ಜನಮನ್ನಣೆ ಗಳಿಸುತ್ತಿದೆ. ಅದರಲ್ಲೂ ಅರ್ಜೆಂಟೀನಾ, ಪೋರ್ಚುಗಲ್ ಫುಟ್ಬಾಲ್ ತಂಡಗಳಿಗೆ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಜೊತೆಗೆ ಲಿಯೋನೆಲ್‌ ಮೆಸ್ಸಿ, ರೊನಾಲ್ಡೊ ಅವರಂಥ ದಿಗ್ಗಜ ಆಟಗಾರರ ಅಭಿಮಾನಿಗಳ ಸಂಖ್ಯೆಯೂ ಸಾಕಷ್ಟಿದೆ. ಇದೀಗ ಮೆಸ್ಸಿ ಅಭಿಮಾನಿಗಳಿಗೆ ಭರ್ಜರಿ ಶುಭಸುದ್ದಿ ಸಿಕ್ಕಿದೆ. ಮೆಸ್ಸಿ ನೇತೃತ್ವದ ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡವು 2025ರ ಅಕ್ಟೋಬರ್‌ನಲ್ಲಿ ಭಾರತಕ್ಕೆ ಬರಲಿದೆ. ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರದರ್ಶನ ಪಂದ್ಯ ಆಡಲಿದ್ದು, ಎಲ್ಲಾ ಸಿದ್ದತೆಗಳು ನಡೆಯುತ್ತಿದೆ. ಈ ಕುರಿತು ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್ ​​(ಎಎಫ್‌ಎ) ಮಾರ್ಚ್‌ 26ರ ಬುಧವಾರ ಪ್ರಕಟಿಸಿದೆ.

2026ರ ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯಗಳಿಗೆ ಮುಂಚಿತವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅರ್ಜೆಂಟೀನಾ ಮುಂದಾಗಿದೆ. ಎಎಫ್‌ಎ ಅಧ್ಯಕ್ಷರಾದ ಕ್ಲಾಡಿಯೊ ಫ್ಯಾಬಿಯನ್ ಟ್ಯಾಪಿಯಾ, ಭಾರತ ಪ್ರವಾಸವು ಅರ್ಜೆಂಟೀನಾದ ಅಂತಾರಾಷ್ಟ್ರೀಯ ಬೆಳವಣಿಗೆಯಲ್ಲಿ ಒಂದು ಮೈಲಿಗಲ್ಲು ಎಂದು ಶ್ಲಾಘಿಸಿದ್ದಾರೆ.

“ನಮ್ಮ ತಂಡದ ವಿಸ್ತರಣೆಗೆ ಹೊಸ ಮೈಲಿಗಲ್ಲು ಸಾಧಿಸಲಾಗಿದೆ. ಭಾರತ ಮತ್ತು ಸಿಂಗಾಪುರದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. 2025 ಮತ್ತು 2026ರಲ್ಲಿ ನಾವು ಪ್ರಗತಿ ಹೊಂದುತ್ತಿದ್ದಂತೆ ಬಹು ಪ್ರದೇಶಗಳಲ್ಲಿ ನಮ್ಮ ಉಪಸ್ಥಿತಿಯನ್ನು ಕ್ರೋಢೀಕರಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದಾರೆ.

2021ರಿಂದಲೂ ಭಾರತದಲ್ಲಿ ತನ್ನ ಅಸ್ತಿತ್ವವನ್ನು ನಿರ್ಮಿಸಲು ಸಂಘವು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಇದು ದೇಶದ ಫುಟ್‌ಬಾಲ್‌ನ ಉತ್ಸಾಹವನ್ನು ಗುರುತಿಸುತ್ತದೆ.

“ಎಎಫ್‌ಎಯ ಜಾಗತಿಕ ವಿಸ್ತರಣೆಯಲ್ಲಿ ಇದು ಹೊಸ ಹೆಜ್ಜೆಯಾಗಿದೆ. 2021ರಿಂದ, ನಾವು ಭಾರತದಲ್ಲಿ ಪ್ರಮುಖ ಅವಕಾಶಗಳನ್ನು ಗುರುತಿಸಿದ್ದೇವೆ. ಅಲ್ಲದೆ ಸ್ಥಳೀಯ ಫುಟ್‌ಬಾಲ್ ಸಮುದಾಯದೊಂದಿಗೆ ಬಲವಾದ ಸಂಪರ್ಕವನ್ನು ನಿರ್ಮಿಸಿದ್ದೇವೆ. ಈ ಸಂಬಂಧಗಳನ್ನು ಬಲಪಡಿಸುವುದನ್ನು ಮುಂದುವರಿಸುವುದು ಮತ್ತು ಅಭಿಮಾನಿಗಳಿಗೆ ಅರ್ಜೆಂಟೀನಾದ ಫುಟ್‌ಬಾಲ್‌ನ ಅತ್ಯುತ್ತಮ ಆಟವನ್ನು ಪರಿಚಯಿಸುವುದು ನಮ್ಮ ಗುರಿಯಾಗಿದೆ” ಎಂದು ಎಎಫ್‌ಎಯ ಮುಖ್ಯ ವಾಣಿಜ್ಯ ಮತ್ತು ಮಾರುಕಟ್ಟೆ ಅಧಿಕಾರಿ ಲಿಯಾಂಡ್ರೊ ಪೀಟರ್ಸನ್ ಹೇಳಿದ್ದಾರೆ.

2011ರಲ್ಲಿ ಕೋಲ್ಕತ್ತಾದಲ್ಲಿ ಪಂದ್ಯ ಆಡಿದ್ದ ಅರ್ಜೆಂಟೀನಾ

ಈ ಹಿಂದೆ 2011ರಲ್ಲಿ ಅರ್ಜೆಂಟೀನಾ ಫುಟ್ಬಾಲ್‌ ತಂಡ ಭಾರತಕ್ಕೆ ಬಂದಿತ್ತು. ಕೋಲ್ಕತ್ತಾದಲ್ಲಿ ವೆನೆಜುವೆಲಾ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಡಿತ್ತು. ಆಗ ಕೂಡಾ ಮೆಸ್ಸಿ ಬಂದಿದ್ದರು. ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ತಂಡವು ಆ ಪಂದ್ಯವನ್ನು 1-0 ಅಂತರದಿಂದ ಗೆದ್ದುಕೊಂಡಿತ್ತು.

“ಫುಟ್‌ಬಾಲ್ ಜಗತ್ತಿನ ಅತ್ಯಂತ ಗೌರವಾನ್ವಿತ ತಂಡಗಳಲ್ಲಿ ಒಂದಾದ ಅರ್ಜೆಂಟೀನಾ, ಅಭಿಮಾನಿಗಳಿಗೆ ಮರೆಯಲಾಗದ ಅನುಭವಗಳನ್ನು ಸೃಷ್ಟಿಸಲು ಮತ್ತು 2026ರ ವಿಶ್ವಕಪ್ ಕಡೆಗೆ ಅರ್ಜೆಂಟೀನಾ ತಂಡವನ್ನು ಬೆಂಬಲಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಇಂಟರ್ನ್ಯಾಷನಲ್ ವೆಲ್ತ್ ಮತ್ತು ಪ್ರೀಮಿಯರ್ ಬ್ಯಾಂಕಿಂಗ್ ಎಚ್‌ಎಸ್‌ಬಿಸಿ ಇಂಡಿಯಾ ಮುಖ್ಯಸ್ಥ ಸಂದೀಪ್ ಬಾತ್ರಾ ಹೇಳಿದ್ದಾರೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.