FIFA World Cup 2022: ಮೆಸ್ಸಿ ಮ್ಯಾಜಿಕ್, ಅರ್ಜೆಂಟೀನಾ ವಿಶ್ವಕಪ್ ಆಸೆ ಜೀವಂತ; ಮುಂದಿನ ಸುತ್ತು ಪ್ರವೇಶಿಸಿದ ಫ್ರಾನ್ಸ್
ಸದ್ಯ ಅರ್ಜೆಂಟೀನಾ ತಂಡವು C ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಪೋಲೆಂಡ್‌ಗಿಂತ ಒಂದು ಪಾಯಿಂಟ್ ಹಿಂದಿರುವ ತಂಡಕ್ಕೆ ಇನ್ನೊಂದು ಪಂದ್ಯವಿದೆ.
ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದ ಅರ್ಜೆಂಟೀನಾ, ತಮ್ಮ ಪಾಳಿಯ ಎರಡನೇ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿದೆ. ಈ ಮೂಲಕ ಮೆಸ್ಸಿ ತಂಡ ಗೆಲುವಿನ ಲಯಕ್ಕೆ ಮರಳುವುದರೊಂದಿಗೆ 16ರ ಸುತ್ತಿಗೆ ಅರ್ಹತೆ ಪಡೆಯಲು ದಾರಿ ಸುಗಮವಾಗಿಸಿದೆ. ಮೆಸ್ಸಿ ಅಮೋಘ ಆಟವಾಡುವುದರ ಮೂಲಕ ತಮ್ಮ ತಂಡದ ವಿಶ್ವಕಪ್ ಆಸೆಯನ್ನು ಜೀವಂತವಾಗಿರಿಸಿದರು.
ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು ಸೌದಿ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಹೀಗಾಗಿ ಮೆಕ್ಸಿಕೋ ವಿರುದ್ಧದ ಪಂದ್ಯ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿತ್ತು. ಭಾರತ ಸೇರಿದಂತೆ ಅರ್ಜೆಂಟೀನಾ ತಂಡಕ್ಕೆ ಜಾಗತಿಕವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹೀಗಾಗಿ ಲಿಯೋನೆಲ್ ಮೆಸ್ಸಿ ಅವರ ಅಮೋಘ ದೀರ್ಘಶ್ರೇಣಿಯ ಸ್ಟ್ರೈಕ್ ಮತ್ತು ಎಂಜೊ ಫೆರ್ನಾಂಡಿಸ್ ಅವರ ಅದ್ಭುತ ಗೋಲಿನ ನೆರವಿನಿಂದ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ಸಿ ಪಂದ್ಯದಲ್ಲಿ ಮೆಕ್ಸಿಕೊ ವಿರುದ್ಧ ಅರ್ಜೆಂಟೀನಾ 2-0 ಗೋಲುಗಳಿಂದ ಪ್ರಾಬಲ್ಯ ಮೆರೆಯಿತು.
ಸದ್ಯ ಅರ್ಜೆಂಟೀನಾ ತಂಡವು C ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಪೋಲೆಂಡ್‌ಗಿಂತ ಒಂದು ಪಾಯಿಂಟ್ ಹಿಂದಿರುವ ತಂಡಕ್ಕೆ ಇನ್ನೊಂದು ಪಂದ್ಯವಿದೆ.
ಫ್ರಾನ್ಸ್ 16ರ ಸುತ್ತಿಗೆ ಎಂಟ್ರಿ
ಸ್ಟಾರ್ ಆಟಗಾರ ಕೈಲಿಯನ್ ಬಪ್ಪೆ, ಹಾಲಿ ಚಾಂಪಿಯನ್ ತಂಡವನ್ನು 16ರ ಸುತ್ತಿಗೆ ಕರೆದೊಯ್ದಿದ್ದಾರೆ. ಒಂದು ಬಾರಿ ಗೋಲು ಗಳಿಸಿದಾಗ, ಡೆನ್ಮಾರ್ಕ್ ಜತೆಗೆ ತಂಡ ಸಮಬಲ ಸಾಧಿಸಿತು. ಹೀಗಾಗಿ ಮತ್ತೊಂದು ಗೋಲು ಬಾರಿಸುವ ಮೂಲಕ ಫ್ರಾನ್ಸ್ ಪಂದ್ಯ ಗೆದ್ದಿತು. ಸ್ಟೇಡಿಯಂ 974ರಲ್ಲಿ ನಡೆದ ಪಂದ್ಯದಲ್ಲಿ ಬಪ್ಪೆ ಗರ್ಜಿಸಿದರು. ಇದು 2022ರ ವಿಶ್ವಕಪ್‌ನ ಸತತ ಎರಡು ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್‌ನ ಆಟಗಾರ ಗಳಿಸಿದ ಮೂರನೇ ಗೋಲು.
ಬಪ್ಪೆ 61ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ಎರಡನೇ ಗೋಲು 86ನೇ ನಿಮಿಷದಲ್ಲಿ ಆಂಟೊನಿ ಗ್ರೀಜ್‌ಮನ್ ಎಸೆತದಿಂದ ಬಂದಿತು. ಅದನ್ನು ಬಪ್ಪೆ ಅವರು ಜಿಗಿತದ ಮೂಲಕ ಎದುರಿಸಿದರು.
68ನೇ ನಿಮಿಷದಲ್ಲಿ ಆಂಡ್ರಿಯಾಸ್ ಕ್ರಿಸ್ಟೇನ್ಸನ್ ನೆರವಿನಿಂದ ಡೆನ್ಮಾರ್ಕ್ ಕೂಡಾ ಗೋಲು ಗಳಿಸಿ ಸಮಬಲ ಸಾಧಿಸಿತು. ಆ ಬಳಿಕ ಅಂಕ ಗಳಿಸಲು ಕೆಲವು ಉತ್ತಮ ಅವಕಾಶಗಳನ್ನು ಹೊಂದಿತ್ತು. ಆದರೆ ಇದಕ್ಕೆ ಫ್ರಾನ್ಸ್ ಅವಕಾಶ ನೀಡಲಿಲ್ಲ. ಸತತ ಎರಡು ಪಂದ್ಯಗಳ ಬಳಿಕ ಡೆನ್ಮಾರ್ಕ್ ಕೇವಲ ಒಂದು ಪಾಯಿಂಟ್‌ನಲ್ಲಿ ಗಳಿಸಿದರೆ, ಫ್ರಾನ್ಸ್ ಆರು ಅಂಕ ಪಡೆದಿದೆ.
ಖಾತೆ ತೆರೆದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಫಿಫಾ ವಿಶ್ವಕಪ್ ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ತುನಿಷಿಯಾ ವಿರುದ್ಧದ ಪಂದ್ಯದಲ್ಲಿ 1-0 ಅಂತರದಿಂದ ಜಯಗಳಿಸಿದೆ. ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 1-4 ಅಂತರದ ಸೋಲು ಕಂಡಿದ್ದ ಆಸೀಸ್, ಈ ಗೆಲುವಿನೊಂದಿಗೆ 16ನೇ ಸುತ್ತಿನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅಲ್ಲದೆ, ಡಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.
ತುನಿಷಿಯಾ ವಿರುದ್ಧದ ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ-ಡಿ ಗುಂಪಿನ ಅಂಕಪಟ್ಟಿಯಲ್ಲಿ ಮೇಲಕ್ಕೇರಿದೆ. ಮತ್ತೊಂದೆಡೆ, ಡೆನ್ಮಾರ್ಕ್ ವಿರುದ್ಧ ತುನಿಷಿಯಾದ ಮೊದಲ ಪಂದ್ಯ ಡ್ರಾಗೊಂಡ ನಂತರ ತಂಡದ ರೌಂಡ್-16 ಭರವಸೆ ಹೆಚ್ಚು ಜಟಿಲವಾಗಿದೆ. ಈ ಪಂದ್ಯದಲ್ಲಿ ಸೋಲನುಭವಿಸುವುದರೊಂದಿಗೆ ಮುಂದಿನ ಹಂತಕ್ಕೆ ಮುನ್ನಡೆಯುವ ಸಾಧ್ಯತೆಗಳು ಬಹುತೇಕ ಕೈತಪ್ಪಿದಂತೆ ಕಂಡುಬರುತ್ತಿದೆ.
ಪೋಲೆಂಡ್ ವಿರುದ್ಧ ಸೋತ ಸೌದಿ ಅರೇಬಿಯಾ
ಮೊದಲ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ದ ಸೌದಿ ಅರೇಬಿಯಾ, ಎರಡನೇ ಪಂದ್ಯದಲ್ಲಿ ಸೋಲೊಪ್ಪಿದೆ. ಪೋಲೆಂಡ್ ವಿರುದ್ಧ 2-0 ಗೋಲುಗಳಿಂದ ಸೋತಿದೆ. ಅರ್ಜೆಂಟೀನಾ ವಿರುದ್ಧ ಮೇಲುಗೈ ಸಾಧಿಸಿದ ತಂಡಕ್ಕೆ ಪೋಲೆಂಡ್ ಪುಟಿದೇಳಲು ಎಲ್ಲೂ ಅವಕಾಶ ನೀಡಲಿಲ್ಲ. ಹೀಗಾಗಿ ಸೌದಿ ಆಟಗಾರರಿಂದ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅತ್ತ ಪೋಲೆಂಡ್ ಎರಡು ಗೋಲು ಬಾರಿಸಿ ಸುಲಭ ವಿಜಯ ಸಾಧಿಸಿತು.