ಕ್ವಿನ್ವೆನ್ ವಿರುದ್ಧ ಜಯಿಸಿ ಆಸ್ಟ್ರೇಲಿಯನ್ ಓಪನ್ ಕಿರೀಟಕ್ಕೆ ಮುತ್ತಿಕ್ಕಿ ದಾಖಲೆ ಬರೆದ ಅರಿನಾ ಸಬಲೆಂಕಾ
Aryna Sabalenka: ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಚೀನಾದ ಕ್ವಿನ್ವೆನ್ ಜಿಂಗ್ ಅವರನ್ನು ಸೋಲಿಸಿ ಸತತ 2ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಕಿರೀಟವನ್ನು ಅರಿನಾ ಸಬಲೆಂಕಾ ಮುಡಿಗೇರಿಸಿಕೊಂಡಿದ್ದಾರೆ.
ಜನವರಿ 27ರಂದು ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ (Australian Open 2024 womens singles) ಬೆಲಾರಸ್ನ ಟೆನಿಸ್ ತಾರೆ ಅರಿನಾ ಸಬಲೆಂಕಾ (Aryna Sabalenka) ಅವರು ಗೆದ್ದು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಆ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸಬಲೆಂಕಾ 11 ವರ್ಷಗಳಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಉಳಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೈನಲ್ ಪಂದ್ಯದಲ್ಲಿ ಚೀನಾದ ಕ್ವಿನ್ವೆನ್ ಜೆಂಗ್ (Qinwen Zheng) ಅವರ ಆತ್ಮವಿಶ್ವಾಸವನ್ನು ಕಸಿದ ಸಬಲೆಂಕಾ, ಒಂದು ಗಂಟೆಯಲ್ಲಿ 6-3, 6-2 ಸೆಟ್ಗಳಿಂದ ಗೆದ್ದು ಆಸ್ಟ್ರೇಲಿಯನ್ ಓಪನ್ ಕಿರೀಟವನ್ನು ಯಶಸ್ವಿಯಾಗಿ ಉಳಿಸಿಕೊಂಡರು. ಈ ಗೆಲುವಿನೊಂದಿಗೆ 2012 ಮತ್ತು 2013ರಲ್ಲಿ ವಿಕ್ಟೋರಿಯಾ ಅಜರೆಂಕಾ ನಂತರ ಮೆಲ್ಬರ್ನ್ ಪಾರ್ಕ್ನಲ್ಲಿ ಸತತ 2ನೇ ಮಹಿಳಾ ಪ್ರಶಸ್ತಿ ಗೆದ್ದ ಎರಡನೇ ಆಟಗಾರ್ತಿ ಎನಿಸಿಕೊಂಡರು.
ಮೆಲ್ಬರ್ನ್ನಲ್ಲಿ ತನ್ನ ಕೊನೆಯ 29 ಸೆಟ್ಗಳಲ್ಲಿ 28 ಸೆಟ್ಗಳನ್ನು ಗೆದ್ದಿರುವ ಸಬಲೆಂಕಾ, ಕಳೆದ ಹದಿನೈದು ದಿನಗಳಿಂದ ಒಂದೇ ಒಂದು ಸೆಟ್ ಕಳೆದುಕೊಳ್ಳದೆ ನೇರ ಸೆಟ್ಗಳಿಂದ ಜಯದ ನಗೆ ಬೀರುತ್ತಿದ್ದಾರೆ. ಈ ಪೈಕಿ 2023ರಲ್ಲಿ ಪ್ರಶಸ್ತಿ ಗೆದ್ದದ್ದು ಸೇರಿದೆ. 2022ರಲ್ಲಿ ಆಶ್ ಬಾರ್ಟಿ, 2017ರಲ್ಲಿ ಸೆರೆನಾ ವಿಲಿಯಮ್ಸ್, 2008ರಲ್ಲಿ ಮಾರಿಯಾ ಶರಪೋವಾ ಮತ್ತು 2000ರಲ್ಲಿ ಲಿಂಡ್ಸೆ ಡೆವನ್ಪೋರ್ಟ್ ನಂತರ ಒಂದು ಸೆಟ್ ಬಿಟ್ಟುಕೊಡದೆ ಗೆದ್ದ ಐದನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸಬಲೆಂಕಾ ಪಾತ್ರರಾದರು.
ಡಬ್ಲ್ಯುಟಿಎ ಸರ್ಕ್ಯೂಟ್ನಲ್ಲಿ ಸಕ್ರಿಯ ಆಟಗಾರ್ತಿಯರ ಪೈಕಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದವರ ಪೈಕಿ ಸಬಲೆಂಕಾ 10ನೇ ಆಟಗಾರ್ತಿ ಎನಿಸಿದ್ದಾರೆ. ಇಗಾ ಸ್ವಿಯಾಟೆಕ್, ನವೊಮಿ ಒಸಾಕಾ, ಗಾರ್ಬಿನೆ ಮುಗುರುಜಾ, ಸಿಮೋನಾ ಹಾಲೆಪ್, ಪೆಟ್ರಾ ಕ್ವಿಟೋವಾ, ಅಜರೆಂಕಾ, ಏಂಜೆಲಿಕ್ ಕೆರ್ಬರ್, ಸ್ವೆಟ್ಲಾನಾ ಕುಜ್ನೆಟ್ಸೋವಾ ಮತ್ತು ವೀನಸ್ ವಿಲಿಯಮ್ಸ್ ಅವರು ಸಕ್ರಿಯ ಆಟಗಾರ್ತಿಯರು.
ಗುರುವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸಬಲೆಂಕಾ 7-6, 6-4 ನೇರ ಸೆಟ್ಗಳ ಅಂತರದಿಂದ ಅಮೆರಿಕದ ಕೊಕೊ ಗೌಫ್ ಅವರನ್ನು ಸೋಲಿಸಿದ್ದರು. ಇದರೊಂದಿಗೆ ಫೈನಲ್ಗೆ ಎಂಟ್ರಿಕೊಟ್ಟಿದ್ದರು. ಮತ್ತೊಂದೆಡೆ ಕ್ವಿನ್ವೆನ್ ಜಂಗ್ 6-4, 6-4 ನೇರ ಸೆಟ್ಗಳಿಂದ ಉಕ್ರೇನ್ನ ಡಯಾನ ಯಾಸ್ಟ್ರೆಮ್ಸ್ಕಾ ಎದುರು ಜಯ ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ಆದರೀಗ ತಮ್ಮ ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದರು.
ರೋಹನ್ ಬೋಪಣ್ಣ ದಾಖಲೆ
ಮೆಲ್ಬೋರ್ನ್ (ಆಸ್ಟ್ರೇಲಿಯಾ): ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಅನ್ನೋದನ್ನು ಕನ್ನಡಿಗ ರೋಹನ್ ಬೋಪಣ್ಣ ಸಾಬೀತು ಮಾಡಿದ್ದಾರೆ. ಶನಿವಾರ (ಜನವರಿ 27) ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಪುರುಷರ ಡಬಲ್ಸ್ ಫೈನಲ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆ ಮೂಲಕ 43 ವರ್ಷದ ರೋಹನ್ ಬೋಪಣ್ಣ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡ ಅತಿ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantime.com).