Asian Games: ಆರ್ಚರಿಯಲ್ಲಿ 2 ಚಿನ್ನ; ಸ್ಕ್ವಾಷ್ ಮಿಶ್ರ ಡಬಲ್ಸ್‌ನಲ್ಲಿ ಐತಿಹಾಸಿಕ ಬಂಗಾರ ಗೆದ್ದ ಭಾರತ
Asian Games 2023: ಸ್ಕ್ವಾಷ್ ಮಿಶ್ರ ಡಬಲ್ಸ್ ತಂಡ ವಿಭಾಗದಲ್ಲಿ ಭಾರತದ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಮಲೇಷ್ಯಾವನ್ನು ಸೋಲಿಸಿ ಚಿನ್ನ ಗೆದ್ದಿದ್ದಾರೆ.

ಏಷ್ಯನ್ ಗೇಮ್ಸ್‌ನ (Asian Games) 12ನೇ ದಿನದಾಟದಲ್ಲೂ ಭಾರತೀಯರು ಚಿನ್ನದ ಬೇಟೆ ಮುಂದುವರೆಸಿದ್ದಾರೆ. ಗುರುವಾರ ಸಂಜೆಯವರೆಗೆ ಭಾರತ ಒಟ್ಟು ಮೂರು ಚಿನ್ನದ ಪದಕಗಳನ್ನು ಗೆದ್ದಿದೆ. ಆರ್ಚರಿಯಲ್ಲಿ ಎರಡು ಬಂಗಾರ ಒಲಿದರೆ, ಸ್ಕ್ವಾಷ್ ತಂಡ ಕೂಡಾ ಸ್ವರ್ಣ ಗೆದ್ದಿದೆ.
ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಅವರು ಸ್ಕ್ವಾಷ್ ಏಷ್ಯನ್ ಗೇಮ್ಸ್ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಜೋಡಿ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸ್ಕ್ವಾಷ್ ಕ್ರೀಡೆಯಲ್ಲಿ ಇದು ಮೊದಲ ಮಿಶ್ರ ಡಬಲ್ಸ್ ಸ್ಪರ್ಧೆಯಾಗಿದೆ. ಇದರಲ್ಲಿ ಭಾರತವೇ ಬಂಗಾರ ಗೆದ್ದ ಸಾಧನೆ ಮಾಡಿದೆ.
ಅತ್ತ ಭಾರತ ಪುರುಷರ ಸ್ಕ್ವಾಷ್ ತಂಡ ಕೂಡಾ ಅಗ್ರ ಸ್ಥಾನ ಗಳಿಸಿ ಬಂಗಾರ ಗೆದ್ದುಕೊಂಡಿತ್ತು. ಅದಾದ ಬಳಿಕ 19ನೇ ಗೇಮ್ಸ್‌ನಲ್ಲಿ ಸ್ಕ್ವಾಷ್‌ನಲ್ಲಿ ಭಾರತದ ಮಿಶ್ರ ಡಬಲ್ಸ್ ತಂಡ ಕೂಡಾ ಚಿನ್ನಕ್ಕೆ ಮುತ್ತಿಟ್ಟಿದೆ. ಭಾರತದ ಜೋಡಿ ಮಲೇಷ್ಯಾದ ಐಫಾ ಬಿಂಟಿ ಅಜ್ಮಾನ್ ಮತ್ತು ಮೊಹಮ್ಮದ್ ಕಮಲ್ ಅವರನ್ನು ಸೋಲಿಸಿದೆ.
ಬಿಲ್ಲುಗಾರಿಕೆಯಲ್ಲಿ ಭಾರತವೇ ಬಲಿಷ್ಠ
ಮತ್ತೊಂದೆಡೆ ಭಾರತದ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರ ವನಿತೆಯರ ತಂಡವು ಆರ್ಚರಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಈ ಜೋಡಿಯು ಚೈನೀಸ್ ತೈಪೆಯ ಯಿ-ಹ್ಸುವಾನ್ ಚೆನ್, ಐ-ಜೌ ಹುವಾಂಗ್ ಮತ್ತು ಲು-ಯುನ್ ವಾಂಗ್ ಜೋಡಿಯನ್ನು ಸೋಲಿಸಿ ಚಿನ್ನ ಗೆದ್ದಿದ್ದಾರೆ. ಮತ್ತೊಂದೆಡೆ ಮಿಶ್ರ ತಂಡ ಸ್ಪರ್ಧೆಯಲ್ಲಿಯೂ ಭಾರತ ಬಂಗಾರ ಗೆದ್ದಿದೆ.
ಇದೇ ವೇಳೆ ಭಾರತ ಮಹಿಳಾ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ 0-4 ಗೋಲುಗಳ ಅಂತರದಿಂದ ಸೋತಿದೆ. ಮುಂದೆ ಕಂಚಿನ ಪದಕ್ಕಾಗಿ ಹೋರಾಡಲಿದೆ. ಅತ್ತ ಪುರುಷರ ಸಿಂಗಲ್ಸ್ ಸ್ಕ್ವಾಷ್ ಫೈನಲ್‌ನಲ್ಲಿ ಅನುಭವಿ ಆಟಗಾರ ಸೌರವ್ ಘೋಸಲ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
12ನೇ ದಿನದ ಪ್ರಮುಖ ಫಲಿತಾಂಶಗಳು
ಆರ್ಚರಿ
- ಮಹಿಳಾ ತಂಡಕ್ಕೆ ಚಿನ್ನ
- ಪುರುಷರ ತಂಡಕ್ಕೆ ಚಿನ್ನ
ಸ್ಕ್ವಾಷ್
- ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಭಾರತಕ್ಕೆ ಚಿನ್ನ
- ಪುರುಷರ ಸಿಂಗಲ್ಸ್ ಸ್ಕ್ವಾಷ್‌ನಲ್ಲಿ ಸೌರವ್ ಘೋಸಲ್ ಬೆಳ್ಳಿ ಪಡೆದರು
ಪುರುಷರ ಮ್ಯಾರಥಾನ್
- ಭಾರತದ ಮಾನ್ ಸಿಂಗ್ ಎಂಟನೇ ಸ್ಥಾನ ಪಡೆದರು
- ಅಪ್ಪಚಂಗಡ ಬೋ ಬೆಳ್ಳಿಯಪ್ಪ 13ನೇ ಸ್ಥಾನ ಪಡೆದರು
ಬ್ಯಾಡ್ಮಿಂಟನ್
- ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ಧ ಪಿವಿ ಸಿಂಧು 16-21 12-21 ಅಂತರದಲ್ಲಿ ಸೋತು ಹೊರಬಿದ್ದರು.
ರೋಲರ್ ಸ್ಕೇಟಿಂಗ್
- ಚಾರ್ಲ್ಸ್ ಪ್ರಾಥಮಿಕ ಎರಡನೇ ಓಟದಲ್ಲಿ 12ನೇ ಸ್ಥಾನ ಪಡೆದರು
- ಶ್ರೇಯಸಿ ಪ್ರಾಥಮಿಕ ಎರಡನೇ ಓಟದಲ್ಲಿ 13ನೇ ಸ್ಥಾನ ಪಡೆದರು
ಸೆಪಕ್ಟಕ್ರಾ (Sepaktakraw)
- ಪುರುಷರ ವಿಭಾಗದ ‘ಬಿ’ ಗುಂಪಿನ ಪ್ರಾಥಮಿಕ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್ ವಿರುದ್ಧ 0-2 ಅಂತರದಲ್ಲಿ ಸೋಲು ಕಂಡಿದೆ.
- ಮಹಿಳೆಯರ ಪ್ರಿಲಿಮಿನರಿ ಎ ಗುಂಪಿನ ಪಂದ್ಯದಲ್ಲಿ ಭಾರತವು ಚೀನಾ ವಿರುದ್ಧ 2-1 ಅಂತರದ ಜಯ ಸಾಧಿಸಿದೆ.
ಸಾಫ್ಟ್ ಟೆನಿಸ್
- ಮಿಶ್ರ ಡಬಲ್ಸ್ ಗುಂಪು 1ರಲ್ಲಿ ಭಾರತವು ಚೈನೀಸ್ ತೈಪೆ ವಿರುದ್ಧ ಸೋತಿದೆ
ಕುಸ್ತಿ
- ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ವಿಭಾಗದಲ್ಲಿ ಆಂಟಿಮ್ ಕಂಚು ಗೆದ್ದಿದ್ದಾರೆ
- ಮಹಿಳೆಯರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಮಾನ್ಸಿ ಜಪಾನ್‌ನ ಸುಗುಮಿ ಸಕುರೇನ್ ವಿರುದ್ಧ ಸೋಲು ಕಂಡಿದ್ದಾರೆ.
- ಮಹಿಳೆಯರ ಫ್ರೀಸ್ಟೈಲ್ ಕುಸ್ತಿ 50 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಪೂಜಾ ಗೆಹ್ಲೋಟ್ ಮಂಗೋಲಿಯಾದ ನಮುಂಟ್‌ಸೆಟ್ಸೆಗ್ ತ್ಸೊಗ್ಟ್-ಒಚಿರ್ ಅವರನ್ನು ಸೋಲಿಸಿದ್ದಾರೆ.
- ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಆಂಟಿಮ್ ಪಂಗಲ್ ಜಪಾನ್‌ನ ಅಕಾರಿ ಫುಜಿನಾಮಿ ವಿರುದ್ಧ ಸೋತರು.
ಹಾಕಿ
- ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತ ತಂಡ ಚೀನಾ ವಿರುದ್ಧ ಸೋತಿದೆ.