ಏಷ್ಯನ್ ಗೇಮ್ಸ್: ಬಾಂಗ್ಲಾದೇಶವನ್ನು 12-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
Asian Games 2023: ಬಾಂಗ್ಲಾದೇಶವನ್ನು 12-0 ಗೋಲುಗಳ ಅಂತರದಿಂದ ಸೋಲಿಸಿದ ಭಾರತ ಹಾಕಿ ತಂಡವು, ಏಷ್ಯನ್ ಗೇಮ್ಸ್ ಸೆಮಿಫೈನಲ್ ಪ್ರವೇಶಿಸಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಕಿ (hockey) ತಂಡವು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂದು ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭರ್ಜರಿ 12-0 ಗೋಲುಗಳ ಅಂತರದಿಂದ ಸೋಲಿಸಿದ ಭಾರತವು, ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ.
ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ (Harmanpreet Singh) ಮತ್ತು ಮನ್‌ದೀಪ್ ಸಿಂಗ್ ಇಬ್ಬರೂ ತಲಾ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದರು. ಹರ್ಮನ್‌ಪ್ರೀತ್ ಪಂದ್ಯದ 2ನೇ, 4ನೇ ಮತ್ತು 32ನೇ ನಿಮಿಷದಲ್ಲಿ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿಸರು. ಅತ್ತ ಮನ್‌ದೀಪ್ 18ನೇ, 24ನೇ ಮತ್ತು 46ನೇ ನಿಮಿಷದಲ್ಲಿ ಮೂರು ಗೋಲು ಗಳಿಸಿದ ಕಾರಣ ಭಾರತ ಪೂಲ್‌ಎನಲ್ಲಿ ಅಜೇಯವಾಗಿ ಮುನ್ನಡೆಯಿತು.
ಭಾರತದ ಪರ ಲಲಿತ್ ಕುಮಾರ್ ಉಪಾಧ್ಯಾಯ 23ನೇ ನಿಮಿಷ, ಅಮಿತ್ ರೋಹಿದಾಸ್ 28ನೇ ನಿಮಿಷ, ಅಭಿಷೇಕ್ 41 ಹಾಗೂ 57ನೇ ನಿಮಿಷ, ನೀಲಕಂಠ ಶರ್ಮಾ 47ನೇ ನಿಮಿಷ ಮತ್ತು ಗುರ್ಜಂತ್ ಸಿಂಗ್ 56ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ, ಭಾರತದ ಒಟ್ಟು ಅಂಕಗಳನ್ನು 12ಕ್ಕೇರಿಸಿದರು. ಅಲ್ಲದೆ ಎದುರಾಳಿ ತಂಡಕ್ಕೆ ಒಂದೇ ಒಂದು ಗೋಲು ಗಳಿಸಲು ಕೂಡಾ ಭಾರತ ಅವಕಾಶ ನೀಡಲಿಲ್ಲ.
ಮುಂದೆ ಭಾರತವು ಅಕ್ಟೋಬರ್ 4ರ ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಪೂಲ್ ಬಿ ಯ ಎರಡನೇ ಬಲಿಷ್ಠ ತಂಡವನ್ನು ಹರ್ಮನ್‌ಪ್ರೀತ್ ಬಳಗ ಎದುರಿಸಲಿದೆ.
ಭಾರತವು ಪೆನಾಲ್ಟಿ ಕಾರ್ನರ್ ಮತ್ತು ಫೀಲ್ಡ್ ಪ್ಲೇ ಎರಡರಿಂದಲೂ ಗೋಲುಗಳ ಸುರಿಮಳೆ ಗಳಿಸಿತು. ಏಳು ಫೀಲ್ಡ್ ಗೋಲುಗಳನ್ನು ಗಳಿಸಿದರೆ, ಪಂದ್ಯದಲ್ಲಿ ಗಳಿಸಿದ 11 ಪೆನಾಲ್ಟಿ ಕಾರ್ನರ್‌ಗಳಲ್ಲಿ ಐದನ್ನು ಗೋಲಾಗಿ ಪರಿವರ್ತಿಸಿದರು. ಪಂದ್ಯದ ಆರಂಭದಿಂದ ಕೊನೆಯವರೆಗೂ ಬಾಂಗ್ಲಾದೇಶ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.
ಪಾಕ್ ವಿರುದ್ಧ ದಾಖಲೆಯ 10-2 ಅಂತರದ ಗೆಲುವು ದಾಖಲಿಸಿದ ಭಾರತ
ಇತ್ತೀಚೆಗೆ ನಡೆದ ಪೂಲ್ ಎ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೋಲುಗಳ ಸುರಿಮಳೆಗೈದ ಭಾರತ ಐತಿಹಾಸಿಕ ಜಯ ಸಾಧಿಸಿತು. ಅದು ಬರೋಬ್ಬರಿ 10-2 ಗೋಲುಗಳ ಅಂತರದಿಂದ. 2017ರಲ್ಲಿ ಭಾರತವು ಪಾಕಿಸ್ತಾನ ವಿರುದ್ಧದ 7-1 ಅಂತರದಲ್ಲಿ ಈ ಹಿಂದೆ ದೊಡ್ಡ ಅಂತರದಲ್ಲಿ ಗೆದ್ದಿತ್ತು. ಅದಕ್ಕೂ ಹಿಂದೆ 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ 7-1 ಅಂತರದಿಂದ ಗೆಲುವು ಸಾಧಿಸಿತ್ತು. ಅದಕ್ಕಿಂತ ದೊಡ್ಡ ಅಂತರದ ಗೆಲುವು ಭಾರತಕ್ಕೆ ಈವರೆಗೆ ಸಾಧ್ಯವಾಗಿರಲಿಲ್ಲ. ಸದ್ಯ 41 ವರ್ಷಗಳ ಹಿಂದಿನ ಹೀನಾಯ ಸೋಲಿಗೆ ಶನಿವಾರ ಭಾರತ ಸೇಡು ತೀರಿಸಿಕೊಂಡಿದೆ. ಅಂದರೆ, 6 ಗೋಲುಗಳ ಅಂತರಕ್ಕೆ ಈಗ 8 ಗೋಲು ಅಂತರದ ಗೆಲುವು ತನ್ನದಾಗಿಸಿದೆ.
ತೃತೀಯ ಲಿಂಗಿ ಮಹಿಳೆಯಿಂದಾಗಿ ಪದಕ ಕಳ್ಕೊಂಡೆ; ಹೊಸ ವಿವಾದ ಎಬ್ಬಿಸಿದ ಅಥ್ಲೀಟ್ ಸ್ವಪ್ನಾ ಬರ್ಮನ್
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ವಿಫಲರಾಗಿರುವ ಭಾರತದ ಅಥ್ಲೀಟ್ ಸ್ವಪ್ನಾ ಬರ್ಮನ್, ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ತೃತೀಯ ಲಿಂಗಿ ಮಹಿಳೆಯಿಂದಾಗಿ ತಾನು ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.