ಕನ್ನಡ ಸುದ್ದಿ  /  ಕ್ರೀಡೆ  /  Neeraj Chopra: ಡೈಮಂಡ್​ ಲೀಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ

Neeraj Chopra: ಡೈಮಂಡ್​ ಲೀಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ

Neeraj Chopra, Diamond League 2023: ಸೂಪರ್‌ ಸ್ಟಾರ್ ಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ, ಡೈಮಂಡ್ ಲೀಗ್ ಫೈನಲ್‌ನಲ್ಲಿ 83.80 ಮೀಟರ್​​​ ಅತ್ಯುತ್ತಮ ಥ್ರೋನೊಂದಿಗೆ 2ನೇ ಸ್ಥಾನವನ್ನು ಗಳಿಸಿದರು.

ನೀರಜ್ ಚೋಪ್ರಾ.
ನೀರಜ್ ಚೋಪ್ರಾ.

ಸೆಪ್ಟೆಂಬರ್​​ 16ರಂದು ತಡರಾತ್ರಿ ಅಮೆರಿಕ ಯುಜೀನ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ (Diamond League Final) ಭಾರತದ ಸೂಪರ್ ಸ್ಟಾರ್ ಜಾವೆಲಿನ್ ಪಟು​ ನೀರಜ್ ಚೋಪ್ರಾ (Neeraj Chopra) 83.80 ಮೀಟರ್ ಎಸೆದು ಎರಡನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಆದರೆ, 2022ರಲ್ಲಿ ನಡೆದ ಡೈಮಂಡ್​ ಲೀಗ್​​ನಲ್ಲಿ 88.44 ಮೀಟರ್‌ ದೂರ ಎಸೆದು ಚಿನ್ನದ ಪದಕ ಗೆದ್ದಿದ್ದರು.

ವಡ್ಲೆಜ್​​ಗೆ ಚಿನ್ನದ ಪದಕ

ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರು ಈ ಬಾರಿಯ ಡೈಮಂಡ್ ಲೀಗ್​​​ ಚಾಂಪಿಯನ್ ಆಗಿ ಹೊರಹೊಮ್ಮಿದರು. ವಡ್ಲೆಜ್​ 84.24 ಮೀಟರ್ ದೂರ ಎಸೆಯುವ ಮೂಲಕ ಬಂಗಾರದ ಪದಕವನ್ನು ಸ್ವಂತ ಮಾಡಿಕೊಂಡರು. ಅಂತಿಮ ಪ್ರಯತ್ನದಲ್ಲಿ ಎಸೆದ ಎಸೆತ ಇದಾಗಿದೆ. ಆದರೆ ಈತ ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಮೊದಲ ಸ್ಥಾನ ಪಡೆಯಲು ವಿಫಲರಾಗಿದ್ದರೆ, ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಪ್ರಸ್ತುತ ಡೈಮಂಡ್ ಲೀಗ್​​ನಲ್ಲಿ ಸ್ವರ್ಣ ಗೆದ್ದಿರುವ ವಡ್ಲೆಜ್​, ಅಂದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಡೈಮಂಡ್​ ಲೀಗ್​ನಲ್ಲಿ ಚೋಪ್ರಾ ತಮಗೆ ಸಿಕ್ಕ ಅವಕಾಶಗಳಲ್ಲಿ 81.37, 80.74, ಮತ್ತು 80.90 ಮೀಟರ್‌ ಜಾವೆಲಿನ್ ಎಸೆದರು. ಆದರೆ ವಡ್ಲೆಜ್ ಅವರನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಜೆಕ್​ ಅಥ್ಲೀಟ್ ಮತ್ತು ಈ ವರ್ಷ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಕಂಚು ಗೆದ್ದಿದ್ದ ವಡ್ಲೆಜ್, ನಿನ್ನೆ​ ಆರಂಭದಿಂದಲೂ ಮುನ್ನಡೆ ಸಾಧಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಚೋಪ್ರಾ ಮುನ್ನಡೆ ಮೊದಲ ಸ್ಥಾನ ಪಡೆಯಲು ಪಡೆಯಲು ಹೋರಾಟ ನಡೆಸಿದ್ದು ಮಾತ್ರವಲ್ಲದೆ, 3ನೇ ಸ್ಥಾನದಲ್ಲಿರುವ ಫಿನ್‌ಲ್ಯಾಂಡ್‌ನ ಒಲಿವರ್ ಹೆಲಾಂಡರ್ ಅವರೊಂದಿಗೆ ಹೋರಾಟ ನಡೆಸುವ ಪರಿಸ್ಥಿತಿ ಎದುರಾಯಿತು. ಹೆಲಾಂಡರ್ 83.74 ಮೀಟರ್‌ ದೂರ ಜಾವೆಲಿನ್ ಎಸೆದು ತನ್ನ ಅವಕಾಶಗಳನ್ನು ಮುಗಿಸಿದರು. ಆದರೆ ಚೋಪ್ರಾಗಿಂತ ಕೇವಲ 6 ಸೆಂಟಿ ಮೀಟರ್​​​​ಗಳಿಂದ ಬೆಳ್ಳಿ ಪದಕ ಗೆಲ್ಲುವ ಅವಕಾಶ ಕಳೆದುಕೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ದೋಹಾ-ಲೂಸಾನ್​ನಲ್ಲಿ ಚಿನ್ನ ಗೆದ್ದಿದ್ದ ಚೋಪ್ರಾ

ಮೇ 5ರಂದು ದೋಹಾದಲ್ಲಿ ನಡೆದಿದ್ದ ಡೈಮಂಡ್‌ ಲೀಗ್​ ಫೈನಲ್​ನಲ್ಲಿ (Doha Diamond League 2023) 88.67 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದರು. ಲೂಸಾನ್​​​ನ ಚರಣದ ಡೈಮಂಡ್​ ಲೀಗ್ ಫೈನಲ್​ನಲ್ಲೂ (Lausanne Diamond League) 87.66 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಮತ್ತೊಂದು ಚಿನ್ನದ ಪದಕ್ಕೆ ಕೊರಳೊಡ್ಡಿದ್ದರು.

ಭಾರತದ ಏಕೈಕ ಸ್ಪರ್ಧಿ

ಪ್ರತಿಷ್ಠಿತ ಡೈಮಂಡ್‌ ಲೀಗ್‌ ಫೈನಲ್​​ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪರ ನೀರಜ್ ಚೋಪ್ರಾ ಮಾತ್ರ ಸ್ಪರ್ಧಿಸಿದ್ದರು. ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಮತ್ತು 3000 ಮೀಟರ್ ಸ್ಟೀಪಲ್‌ಚೇಸರ್ ಅವಿನಾಶ್ ಸೇಬಲ್ ಡೈಮಂಡ್ ಲೀಗ್​ಗೆ ಅರ್ಹತೆ ಪಡೆದಿದ್ದರು. ಆದರೆ ಏಷ್ಯನ್ ಗೇಮ್ಸ್ 2023ಗೆ ಸಜ್ಜಾಗುವ ನಿಟ್ಟಿನಲ್ಲಿ ಈ ಕೂಟದಿಂದ ಹಿಂದೆ ಸರಿದರು. ಹಾಗಾಗಿ ನೀರಜ್ ಚೋಪ್ರಾ ಈ ಬಾರಿ ಭಾರತದ ಏಕೈಕ ಸ್ಪರ್ಧಿ ಎನಿಸಿದ್ದರು. ಇದೀಗ ಅವರು ಬೆಳ್ಳಿ ಗೆದ್ದಿದ್ದು, ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನ ಗೆಲ್ಲಲು ಸಜ್ಜಾಗಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.