ಒಲಿಂಪಿಕ್ಸ್‌ಗೂ ಬಡಿದ ಡ್ರಗ್ಸ್‌ ವಾಸನೆ; ಕೊಕೇನ್ ಖರೀದಿ ಶಂಕೆಯಡಿ ಆಸ್ಟ್ರೇಲಿಯಾ ಹಾಕಿ ಆಟಗಾರನ ಬಂಧನ-australian hockey player tom craig arrested over suspected drugs purchase cocaine amid paris olympics 2024 jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ಸ್‌ಗೂ ಬಡಿದ ಡ್ರಗ್ಸ್‌ ವಾಸನೆ; ಕೊಕೇನ್ ಖರೀದಿ ಶಂಕೆಯಡಿ ಆಸ್ಟ್ರೇಲಿಯಾ ಹಾಕಿ ಆಟಗಾರನ ಬಂಧನ

ಒಲಿಂಪಿಕ್ಸ್‌ಗೂ ಬಡಿದ ಡ್ರಗ್ಸ್‌ ವಾಸನೆ; ಕೊಕೇನ್ ಖರೀದಿ ಶಂಕೆಯಡಿ ಆಸ್ಟ್ರೇಲಿಯಾ ಹಾಕಿ ಆಟಗಾರನ ಬಂಧನ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದ ಆಸ್ಟ್ರೇಲಿಯಾ ಹಾಕಿ ತಂಡದ ಆಟಗಾರ ಕೊಕೇನ್‌ ಖರೀದಿ ಶಂಕೆಯಡಿ ಬಂಧನಕ್ಕೊಳಗಾಗಿದ್ದಾರೆ.

ಒಲಿಂಪಿಕ್ಸ್‌ಗೂ ಬಡಿದ ಡ್ರಗ್ಸ್‌ ವಾಸನೆ; ಕೊಕೇನ್ ಖರೀದಿ ಶಂಕೆಯಡಿ ಹಾಕಿ ಆಟಗಾರನ ಬಂಧನ
ಒಲಿಂಪಿಕ್ಸ್‌ಗೂ ಬಡಿದ ಡ್ರಗ್ಸ್‌ ವಾಸನೆ; ಕೊಕೇನ್ ಖರೀದಿ ಶಂಕೆಯಡಿ ಹಾಕಿ ಆಟಗಾರನ ಬಂಧನ (REUTERS)

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮೇಲಿಂದ ಮೇಲೆ ವಿವಾದಗಳು ಕೇಳಿಬರುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ, ಆಸ್ಟ್ರೇಲಿಯಾದ ಹಾಕಿ ಆಟಗಾರನೊಬ್ಬನನ್ನು ಫ್ರಾನ್ಸ್‌ ಪೊಲೀಸರು ಬಂಧಿಸಿದ್ದಾರೆ. ಸೆಂಟ್ರಲ್ ಪ್ಯಾರಿಸ್‌ನಲ್ಲಿ ಡ್ರಗ್ ಡೀಲರ್‌ಗಳಿಂದ ಕೊಕೇನ್ ಖರೀದಿಸಿದ ಶಂಕೆ ಮೇಲೆ ಪೊಲೀಸರು ಆಸೀಸ್‌ ಹಾಕಿ ಆಟಗಾರ ಟಾಮ್ ಕ್ರೇಗ್ ಅವರನ್ನು ಬಂಧಿಸಿದ್ದಾರೆ. ಈ ಕುರಿತು ಪೊಲೀಸರು ತಿಳಿಸಿದ್ದಾರೆ. 28 ವರ್ಷದ ಮಿಡ್‌ಫೀಲ್ಡರ್ ಕ್ರೇಗ್, ನೆದರ್ಲೆಂಡ್ಸ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಪರ ಆಡಿದ್ದರು. ಪಂದ್ಯದಲ್ಲಿ ಆಸೀಸ್‌ ಸೋತಿತ್ತು. ಘಟನೆ ಬಳಿಕ ಬುಧವಾರ ಆಟಗಾರನನ್ನು ಬಂಧಿಸಲಾಗಿದೆ.

ಅಪಾರ್ಟ್‌ಮೆಂಟ್ ಕಟ್ಟಡದ ಬಳಿ ಕೊಕೇನ್ ವಹಿವಾಟು ನಡೆಸಿದ್ದು ತಿಳಿದುಬಂದ ನಂತರ ಬುಧವಾರ ಬೆಳಗ್ಗೆ ಆಟಗಾರನನ್ನು ಬಂಧಿಸಲಾಗಿದೆ ಎಂದು ಪ್ಯಾರಿಸ್‌ ಪೊಲೀಸ್ ಮೂಲಗಳು ತಿಳಿಸಿವೆ. ಬಂಧನ ಸಮಯದಲ್ಲಿ ಆಟಗಾರನ ಬಳಿಕ ಸುಮಾರು ಒಂದು ಗ್ರಾಂನಷ್ಟು ಕೊಕೇನ್ ಪತ್ತೆಯಾಗಿದೆ.

ಕೊಕೇನ್ ಖರೀದಿ ಮಾಡಿದ ಟಾಮ್ ಕ್ರೇಗ್ ಜೊತೆಗೆ, ಮಾರಾಟ ಮಾಡಿದ 17ರ ಹರೆಯದ ಯುವಕನನ್ನು ಕೂಡಾ ಬಂಧಿಸಲಾಗಿದೆ. ಆತನ ಬಳಿಕ 75 ಎಕ್ಸ್ಟಸಿ ಮಾತ್ರೆಗಳು (ecstasy) ಮತ್ತು ಸಿಂಥೆಟಿಕ್ ಡ್ರಗ್ಸ್ ಸೇರಿದಂತೆ ಹಲವು ರೀತಿಯ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ಪ್ರಮಾಣದ ಡ್ರಗ್ಸ್ ಪತ್ತೆಯಾದ ಕಾರಣದಿಂದ, ಫ್ರೆಂಚ್ ಪೊಲೀಸರು ಪ್ರಕರಣದ ತನಿಖೆಯನ್ನು ಮಾದಕ ದ್ರವ್ಯ ವಿರೋಧಿ ದಳಕ್ಕೆ ಹಸ್ತಾಂತರಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಘಟನೆ ಸಂಬಂಧ ಆಸ್ಟ್ರೇಲಿಯನ್ ಒಲಿಂಪಿಕ್ ಸಮಿತಿ (AOC) ಕೂಡಾ ದೃಢಪಡಿಸಿದೆ. ಪ್ಯಾರಿಸ್‌ನಲ್ಲಿ ಆಸ್ಟ್ರೇಲಿಯನ್ ಹಾಕಿ ತಂಡದ ಸದಸ್ಯ ಬಂಧನದಲ್ಲಿದ್ದಾರೆ ಎಂದು ತಿಳಿಸಿದೆ. ಪ್ರಕರಣ ಸಂಬಂಧ ದೇಶದ ಒಲಿಂಪಿಕ್ ಸಮಿತಿ ವಿಚಾರಣೆ ಮುಂದುವರೆಸಿದೆ. ತಂಡದ ಸದಸ್ಯರಿಗೆ ಬೆಂಬಲ ಸೂಚಿಸುತ್ತದೆ ಎಂದು ಅದು ಹೇಳಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.