ಆಸ್ಟ್ರೇಲಿಯನ್ ಓಪನ್ 2025: ಸಂಪೂರ್ಣ ವೇಳಾಪಟ್ಟಿ, ಬಹುಮಾನ ಮೊತ್ತ ಹಾಗೂ ಸ್ಟಾರ್ ಆಟಗಾರರ ವಿವರ
2025ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ಗಳಾದ ಜಾನಿಕ್ ಸಿನ್ನರ್ ಮತ್ತು ಆರ್ನಾ ಸಬಲೆಂಕಾ ತಮ್ಮ ಪ್ರಶಸ್ತಿಗಳನ್ನು ಉಳಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಜನವರಿ 12ರಿಂದ ಟೂರ್ನಿಯ ಪ್ರಮುಖ ಪಂದ್ಯಗಳು ಪ್ರಾರಂಭವಾಗುತ್ತಿವೆ. ಸ್ಟಾರ್ ಆಟಗಾರರು ಗಮನ ಸೆಳೆದಿದ್ದಾರೆ.
ಟೆನಿಸ್ ಪ್ರಿಯರ ನೆಚ್ಚಿನ ಗ್ರ್ಯಾಂಡ್ ಸ್ಲಾಮ್ ಋತು ಆರಂಭವಾಗಿದೆ. 2025ರ ಮೊದಲ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಾದ ಆಸ್ಟ್ರೇಲಿಯನ್ ಓಪನ್ (Australian Open), ಇಂದು (ಜನವರಿ 12) ಆರಂಭವಾಗಲಿದೆ. ಟೂರ್ನಿಯ ಅರ್ಹತಾ ಸುತ್ತು ಜನವರಿ 6ರಂದು ಆರಂಭವಾಗಿವೆ. ಆದರೆ, ಪ್ರಮುಖ ಪಂದ್ಯಗಳು ಜನವರಿ 12ರಂದು ಆರಂಭವಾಗುತ್ತಿದೆ. ಜಗತ್ತಿನ ಸ್ಟಾರ್ ಆಟಗಾರರು ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಆಡಲಿದ್ದಾರೆ. ಹಾಲಿ ಸಿಂಗಲ್ಸ್ ಚಾಂಪಿಯನ್‌ಗಳಾದ ಜಾನಿಕ್ ಸಿನ್ನರ್ ಮತ್ತು ಆರ್ನಾ ಸಬಲೆಂಕಾ ತಮ್ಮ ಪ್ರಶಸ್ತಿಗಳನ್ನು ಉಳಿಸಿಕೊಳ್ಳುವ ಗುರಿ ಹೊಂದಿದ್ದಾರೆ.
1988ರಿಂದ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ತವರೂರಾಗಿರುವ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ನಡೆಯಲಿದೆ.
ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಜನವರಿ 25ರಂದು ನಡೆಯಲಿದೆ. ಇದೇ ವೇಳೆ ಬಲು ರೋಚಕ ಪುರುಷರ ಫೈನಲ್ ಜನವರಿ 26ರಂದು ನಡೆಯಲಿದೆ. ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರರು ಮುಖ್ಯ ಡ್ರಾ ಹಂತದಲ್ಲಿ ಸ್ವಯಂಚಾಲಿತವಾಗಿ ಪಂದ್ಯಾವಳಿಗೆ ಪ್ರವೇಶಿಸುತ್ತಾರೆ. ಸಿಂಗಲ್ಸ್ ಡ್ರಾಗಳಲ್ಲಿ 104 ಶ್ರೇಯಾಂಕಿತ ಆಟಗಾರರು, ಜೊತೆಗೆ ಎಂಟು ವೈಲ್ಡ್ ಕಾರ್ಡ್ ಆಟಗಾರರು ಹಾಗೂ 16 ಅರ್ಹತೆ ಪಡೆದ ಆಟಗಾರರು ಕೂಡಾ ಭಾಗಿಯಾಗಲಿದ್ದಾರೆ.
ಆಸ್ಟ್ರೇಲಿಯನ್ ಓಪನ್ 2025ರ ಸಂಪೂರ್ಣ ವೇಳಾಪಟ್ಟಿ
- ಜನವರಿ 12-14: ಮೊದಲ ಸುತ್ತು (ಮಹಿಳೆಯರು ಮತ್ತು ಪುರುಷರು)
- ಜನವರಿ 15-16: ಎರಡನೇ ಸುತ್ತು (ಮಹಿಳೆಯರು ಮತ್ತು ಪುರುಷರು)
- ಜನವರಿ 17-18: ಮೂರನೇ ಸುತ್ತು (ಮಹಿಳೆಯರು ಮತ್ತು ಪುರುಷರು)
- ಜನವರಿ 19-20: ನಾಲ್ಕನೇ ಸುತ್ತು (ಮಹಿಳೆಯರು ಮತ್ತು ಪುರುಷರು)
- ಜನವರಿ 21-22: ಕ್ವಾರ್ಟರ್ ಫೈನಲ್ (ಮಹಿಳೆಯರು ಮತ್ತು ಪುರುಷರು)
- ಜನವರಿ 23: ಮಹಿಳಾ ಸೆಮಿಫೈನಲ್
- ಜನವರಿ 24: ಪುರುಷರ ಸೆಮಿಫೈನಲ್
- ಜನವರಿ 25: ಮಹಿಳೆಯರ ಫೈನಲ್
- ಜನವರಿ 26: ಪುರುಷರ ಫೈನಲ್
- ಪುರುಷರ ಮತ್ತು ಮಹಿಳೆಯರ ಡಬಲ್ಸ್: 14-26 ಜನವರಿ
- ಮಿಶ್ರ ಡಬಲ್ಸ್: 16-25 ಜನವರಿ
- ಗಾಲಿಕುರ್ಚಿ ಸ್ಪರ್ಧೆಗಳು: 21-25 ಜನವರಿ
- ಜೂನಿಯರ್ ಸ್ಪರ್ಧೆಗಳು: ಜನವರಿ 18-27
ಆಸ್ಟ್ರೇಲಿಯನ್ ಓಪನ್ 2025: ಅಗ್ರ ಶ್ರೇಯಾಂಕಿತ ಆಟಗಾರರು
ಮಹಿಳಾ ಸಿಂಗಲ್ಸ್
1. ಆರ್ನಾ ಸಬಲೆಂಕಾ (ಬೆಲಾರಸ್)
2. ಇಗಾ ಸ್ವಿಯಾಟೆಕ್ (ಪೋಲೆಂಡ್)
3. ಕೊಕೊ ಗೌಫ್ (ಯುಎಸ್ಎ)
4. ಜಾಸ್ಮಿನ್ ಪಯೋಲಿನಿ (ಇಟಲಿ)
5. ಕಿನ್ವೆನ್ ಝೆಂಗ್ (ಚೀನಾ)
6. ಎಲೆನಾ ರೈಬಾಕಿನಾ (ಕಜಕಿಸ್ತಾನ್)
7. ಜೆಸ್ಸಿಕಾ ಪೆಗುಲಾ (ಯುಎಸ್‌ಎ)
8. ಎಮ್ಮಾ ನವಾರೊ (ಯುಎಸ್ಎ)
9. ಡೇರಿಯಾ ಕಸಟ್ಕಿನಾ
10. ಡೇನಿಯಲ್ ಕಾಲಿನ್ಸ್ (ಯುಎಸ್ಎ)
ಪುರುಷರ ಸಿಂಗಲ್ಸ್
1. ಜಾನಿಕ್ ಸಿನ್ನರ್ (ಇಟಲಿ)
2. ಅಲೆಕ್ಸಾಂಡರ್ ಝ್ವೆರೆವ್ (ಜರ್ಮನಿ)
3. ಕಾರ್ಲಸ್ ಅಲ್ಕರಾಜ್ (ಸ್ಪೇನ್)
4. ಟೇಲರ್ ಫ್ರಿಟ್ಜ್ (ಯುಎಸ್‌ಎ)
5. ಡ್ಯಾನಿಲ್ ಮೆಡ್ವೆಡೆವ್
6. ಕ್ಯಾಸ್ಪರ್ ರುಡ್ (ನಾರ್ವೆ)
7. ನೊವಾಕ್ ಜೊಕೊವಿಕ್ (ಸೆರ್ಬಿಯಾ)
8. ಆಂಡ್ರೆ ರುಬ್ಲೆವ್
9. ಅಲೆಕ್ಸ್ ಡಿ ಮಿನೌರ್ (ಆಸ್ಟ್ರೇಲಿಯಾ)
10. ಗ್ರಿಗೊರ್ ಡಿಮಿಟ್ರೋವ್ (ಬಲ್ಗೇರಿಯಾ)
ಬಹುಮಾನ ಮೊತ್ತ ಎಷ್ಟು?
ಆಸ್ಟ್ರೇಲಿಯನ್ ಓಪನ್ ಗೆದ್ದು ಚಾಂಪಿಯನ್ ಆಗುವ ಆಟಗಾರರಿಗೆ ಬರೋಬ್ಬರಿ 35,00,000 ಆಸ್ಟ್ರೇಲಿಯನ್ ಡಾಲರ್ ಬಹುಮಾನ ಸಿಗಲಿದೆ. ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ ಸರಿಸುಮಾರು 18.52 ಕೋಟಿ ರೂಪಾಯಿ.