ಆಸ್ಟ್ರೇಲಿಯನ್ ಓಪನ್ 2025: ದಿನಾಂಕ, ಡ್ರಾ, ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ಸೇರಿ ಇನ್ನಷ್ಟು ವಿವರ
ಕನ್ನಡ ಸುದ್ದಿ  /  ಕ್ರೀಡೆ  /  ಆಸ್ಟ್ರೇಲಿಯನ್ ಓಪನ್ 2025: ದಿನಾಂಕ, ಡ್ರಾ, ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ಸೇರಿ ಇನ್ನಷ್ಟು ವಿವರ

ಆಸ್ಟ್ರೇಲಿಯನ್ ಓಪನ್ 2025: ದಿನಾಂಕ, ಡ್ರಾ, ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ಸೇರಿ ಇನ್ನಷ್ಟು ವಿವರ

ಆಸ್ಟ್ರೇಲಿಯನ್ ಓಪನ್ 2025 ಟೆನಿಸ್‌ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಜನವರಿ 12ರಂದು ಪಂದ್ಯಗಳು ಶುರುವಾಗಲಿವೆ. ಈ ಬಾರಿಯೂ ಜಗತ್ತಿನ ಸ್ಟಾರ್‌ ಆಟಗಾರರು ಭಾಗವಹಿಸುತ್ತಿದ್ದು, ಹಾಲಿ ಚಾಂಪಿಯನ್ ಜಾನಿಕ್ ಸಿನ್ನರ್ ಟ್ರೋಫಿ ಉಳಿಸಿಕೊಳ್ಳಲು ಕೋರ್ಟ್‌ಗೆ ಇಳಿಯಲಿದ್ದಾರೆ.

ಆಸ್ಟ್ರೇಲಿಯನ್ ಓಪನ್ 2025: ದಿನಾಂಕ, ಡ್ರಾ, ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ವಿವರ
ಆಸ್ಟ್ರೇಲಿಯನ್ ಓಪನ್ 2025: ದಿನಾಂಕ, ಡ್ರಾ, ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ವಿವರ (AFP)

ಪ್ರಸಕ್ತ ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್‌ಗೆ ವೇದಿಕೆ ಸಜ್ಜಾಗಿದೆ. 2025ರ ಜನವರಿ 12ರಿಂದ 26ರವರೆಗೆ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯನ್ ಓಪನ್ (Australian Open 2025) ಟೆನಿಸ್‌ ಟೂರ್ನಿ ನಡೆಯಲಿದೆ. 1905ರಲ್ಲಿ ಆರಂಭವಾದ ಹಾರ್ಡ್ ಕೋರ್ಟ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿ ಇದಾಗಿದ್ದು, ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆಯುತ್ತದೆ. ಪ್ರತಿಷ್ಠಿತ ಗ್ರ್ಯಾಂಡ್‌ಸ್ಲಾಮ್‌ಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಜಗತ್ತಿನ ಬಲಿಷ್ಠ ಟೆನಿಸ್‌ ಆಟಗಾರರು ಪಾಲ್ಗೊಳ್ಳುತ್ತಾರೆ. ಈ ಬಾರಿಯ ಟೂರ್ನಿಯ ದಿನಾಂಕ, ಪಂದ್ಯಗಳು ಹಾಗೂ ನೇರಪ್ರಸಾರದ ವಿವರ ನೋಡೋಣ.

10 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್, ಹಾಲಿ ಚಾಂಪಿಯನ್ ಜಾನಿಕ್ ಸಿನ್ನರ್ (Jannik Sinner) ಮತ್ತು ಕಾರ್ಲಸ್ ಅಲ್ಕರಾಜ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಉಳಿದಂತೆ ಅಲೆಕ್ಸಾಂಡರ್ ಜ್ವೆರೆವ್, ಡೇನಿಯಲ್ ಮೆಡ್ವೆಡೆವ್, ಟೇಲರ್ ಫ್ರಿಟ್ಜ್, ಕ್ಯಾಸ್ಪರ್ ರುಡ್, ಅಲೆಕ್ಸ್ ಡಿ ಮಿನೌರ್, ಆಂಡ್ರೆ ರುಬ್ಲೆವ್, ಗ್ರಿಗರ್ ಡಿಮಿಟ್ರೋವ್ ಕೂಡಾ ಗಮನ ಸೆಳೆಯಲಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ ಡ್ರಾ ಯಾವಾಗ?

ಜನವರಿ 9ರ ಗುರುವಾರ ಮಧ್ಯಾಹ್ನ 2:30ಕ್ಕೆ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಡ್ರಾ ಮಾಡಲಾಗುತ್ತದೆ. ಡಬಲ್ಸ್ ಡ್ರಾವನ್ನು ಜನವರಿ 11ರ ಶನಿವಾರ ಮಧ್ಯಾಹ್ನ 3:00 ಗಂಟೆಗೆ ಮಾಡಲಾಗುತ್ತದೆ. ಇದರ ನಂತರ ಸ್ಪಷ್ಟ ವೇಳಾಪಟ್ಟಿ ಸಿಗಲಿದೆ. ಅರ್ಹತಾ ಪಂದ್ಯಗಳು ಜನವರಿ 06ರಿಂದ ಪ್ರಾರಂಭವಾಗಿವೆ. ಆದರೆ ಮುಖ್ಯ ಪಂದ್ಯಗಳು ಜನವರಿ 12ರಂದು ಆರಂಭವಾಗಿ 26ರವರೆಗೆ ಮುಂದುವರಿಯುತ್ತದೆ.

ಆಸ್ಟ್ರೇಲಿಯನ್ ಓಪನ್ ವೇಳಾಪಟ್ಟಿ

  1. ಡಬಲ್ಸ್ ಫೈನಲ್: ಜನವರಿ 25, ಶನಿವಾರ ಸಂಜೆ 7:3
  2. ಸಿಂಗಲ್ಸ್ ಫೈನಲ್: ಜನವರಿ 26, ಭಾನುವಾರ ಸಂಜೆ 7:30

2024ರಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿ ಗೆದ್ದವರು ಯಾರು?

ಕಳೆದ ಬಾರಿ ನಡೆದ ಟೂರ್ನಿಯಲ್ಲಿ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 3-6, 3-6, 6-4, 6-4, 6-3 ಅಂತರದ ಗೆಲುವಿನೊಂದಿಗೆ ಜಾನಿಕ್ ಸಿನ್ನರ್ 2024ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು. ಇದೇ ವೇಳೆ ಡಬಲ್ಸ್ ಫೈನಲ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರ ಜೋಡಿಯು ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೋರಿ ಅವರನ್ನು ಸೋಲಿಸಿದರು. ಇದರೊಂದಿಗೆ ರೋಹನ್‌ ಬೋಪಣ್ಣ ಐತಿಹಾಸಿಕ ಸಾಧನೆ ಮಾಡಿದರು.

ಆಸ್ಟ್ರೇಲಿಯನ್ ಓಪನ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆ ನೊವಾಕ್ ಜೊಕೊವಿಕ್ ಹೆಸರಲ್ಲಿದೆ. ಇವರು 10 ಬಾರಿ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.

ಭಾರತದಲ್ಲಿ ಆಸ್ಟ್ರೇಲಿಯನ್ ಓಪನ್ 2025ರ ನೇರ ಪ್ರಸಾರ ವೀಕ್ಷಿಸುವುದು ಹೇಗೆ?

ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್, ಆಸ್ಟ್ರೇಲಿಯನ್ ಓಪನ್‌ನ ಅಧಿಕೃತ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದೆ. ಹೀಗಾಗಿ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಪಂದ್ಯಗಳನ್ನು ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ SD/HD ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದರ OTT ಪ್ಲಾಟ್‌ಫಾರ್ಮ್ SonyLIV ಅಪ್ಲಿಕೇಶನ್‌ನಲ್ಲಿ ಆಸ್ಟ್ರೇಲಿಯನ್ ಓಪನ್ 2025ರ ಲೈವ್ ಸ್ಟ್ರೀಮಿಂಗ್ ಅನ್ನು ನೋಡಬಹುದು. ಮೊಬೈಲ್ ಮತ್ತು ಸ್ಮಾರ್ಟ್ ಟಿವಿ ಮೂಲಕ ಟೆನಿಸ್‌ ವೀಕ್ಷಣೆ ಮಾಡಬಹುದು. SonyLIV ವೆಬ್‌ಸೈಟ್‌ ಮೂಲಕವೂ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಗಳನ್ನು ವೀಕ್ಷಿಸಹುದು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.