ನಟಿ ತಾಪ್ಸಿ ಪನ್ನು ಮದುವೆಯಾಗುತ್ತಿರುವ ಹುಡುಗ ಯಾರು? ಚಿರಾಗ್-ಸಾತ್ವಿಕ್ ಯಶಸ್ಸಿನ ನಾವಿಕ ಮಥಿಯಾಸ್ ಬೋ
Taapsee Pannu Mathias Boe: ನಟಿ ತಾಪ್ಸಿ ಪನ್ನು ಅವರು ಮಾಜಿ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಅವರನ್ನು ಮದುವೆಯಾಗಲಿದ್ದಾರೆ. ಪ್ರಸ್ತುತ ಭಾರತದ ನಂಬರ್ ವನ್ ಬ್ಯಾಡ್ಮಿಂಟನ್ ಜೋಡಿಯ ಯಶಸ್ವಿ ಕೋಚ್ ಆಗಿರುವ ಬೋ ಅವರ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.
ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ತಾಪ್ಸಿ ಪನ್ನು (Taapsee Pannu) ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅವರ ದೀರ್ಘಕಾಲದ ಜೊತೆಗಾರ ಹಾಗೂ ಮಾಜಿ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ (Mathias Boe) ಅವರೊಂದಿಗೆ ಮಾರ್ಚ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಸುಂದರವಾದ ನಗರ ಉದಯಪುರದಲ್ಲಿ ವಿವಾಹ ಸಮಾರಂಭ ನಡೆಯಲಿದ್ದು, ಕುಟುಂಬ ಸದಸ್ಯರು ಮಾತ್ರವೇ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ನಡುವೆ, ತಾಪ್ಸಿ ಮದುವೆಯಾಗುತ್ತಿರುವ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಯಾರು? ಅವರ ವೃತ್ತಿಬದುಕಿನ ಕುರಿತು ತಿಳಿಯೋಣ.
ಮಥಿಯಾಸ್ ಬೋ ಅವರು ಡೆನ್ಮಾರ್ಕ್ ಮೂಲದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ. 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ಹಾಗೂ 2013ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಸುದೀರ್ಘ ಇಪ್ಪತ್ತು ವರ್ಷಗಳ ವೃತ್ತಿಬದುಕಿನಲ್ಲಿ ಅವರು ಡ್ಯಾನಿಶ್ ಮಾಜಿ ಶಟ್ಲರ್‌ಗಳಾದ ಮೈಕೆಲ್ ಜೆನ್ಸನ್, ಥಾಮಸ್ ಹೊವ್ಗಾರ್ಡ್ ಮತ್ತು ಮೈಕೆಲ್ ಲ್ಯಾಂಪ್ ಅವರಂಥ ಪ್ರಸಿದ್ಧ ಆಟಗಾರರೊಂದಿಗೆ ಆಡಿದ ಅನುಭವ ಹೊಂದಿದ್ದಾರೆ.
ಕಾರ್ಸ್ಟನ್ ಮೊಗೆನ್ಸೆನ್ ಅವರೊಂದಿಗೆ ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ಈ ಜೋಡಿಯು ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿತ್ತು. ಅದರ ಬೆನ್ನಲ್ಲೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿಯೂ ಗೆದ್ದು ಬೀಗಿದ್ದರು.
ಭಾರತದ ನಂಬರ್ ವನ್ ಬ್ಯಾಡ್ಮಿಂಟನ್ ಜೋಡಿಯ ಯಶಸ್ಸಿನಲ್ಲಿ ಬೋ ಪಾತ್ರ
ಸದ್ಯ ಭಾರತೀಯ ಬ್ಯಾಡ್ಮಿಂಟನ್ ವಲಯದಲ್ಲಿ ಸದ್ದು ಮಾಡುತ್ತಿರುವ ಜನಪ್ರಿಯ ಡಬಲ್ಸ್ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಯಶಸ್ಸಿನಲ್ಲಿ ಮಥಿಯಾಸ್ ಬೋ ಪಾತ್ರ ಮಹತ್ವದ್ದು. ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿಗೆ ಸಲಹೆ ಸೂಚನೆ ನೀಡುತ್ತಿರುವವರು ಬೋ. ಪ್ರಸ್ತುತ ಪುರುಷರ ಡಬಲ್ಸ್‌ನಲ್ಲಿ ವಿಶ್ವದ ನಂ1 ಡಬಲ್ಸ್ ಜೋಡಿಯಾಗಿರುವ ಸಾತ್ವಿಕ್ ಹಾಗೂ ಚಿರಾಗ್‌ಗೆ ಮಥಿಯಾಸ್ ತರಬೇತಿ ನೀಡುತ್ತಿದ್ದಾರೆ. ಬೋ ಅವರು 2021ರಲ್ಲಿ ಭಾರತೀಯ ಜೋಡಿಗೆ ಕೋಚಿಂಗ್ ಆರಂಭಿಸಿದರು.
ಆಕ್ರಮಣಕಾರಿ ಆಟ
ತಾವು ಆಡುತ್ತಿದ್ದ ಸಮಯದಲ್ಲಿ ಆಕ್ರಮಣಕಾರಿ ಮತ್ತು ಭಾವೋದ್ರಿಕ್ತ ಆಟದ ವಿಧಾನಕ್ಕೆ ಹೆಸರುವಾಸಿಯಾಗಿದ್ದವರು ಬೋ. ಇದೀಗ ಅವರ ಕೋಚಿಂಗ್ ಶೈಲಿ ಕೂಡಾ ಅದಕ್ಕೆ ಕೈಗನ್ನಡಿಯಾಗಿದೆ. ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಆಕ್ರಮಣಕಾರಿ ಆಟದ ಮೇಲೂ ಇವರ ಕೋಚಿಂಗ್ ಗಮನಾರ್ಹ ಪರಿಣಾಮ ಬೀರಿದೆ ಎಂದರೆ ತಪ್ಪಲ್ಲ.
ಇದನ್ನೂ ಓದಿ | Taapsee Pannu: ಮುಂದಿನ ತಿಂಗಳು ತಾಪ್ಸಿ ಪನ್ನು ಮದುವೆಯಂತೆ, ಬ್ಯಾಂಡ್ಮಿಟನ್ ಆಟಗಾರನ ಕೈಹಿಡಿಯಲಿದ್ದಾರೆ ಡಂಕಿ ನಟಿ
ಇಂಡೋನೇಷ್ಯಾ ಓಪನ್ ಸೂಪರ್ 1000, ಥಾಮಸ್ ಕಪ್ ಮತ್ತು ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಮೂಲಕ 2023ರಲ್ಲಿ ಭಾರತೀಯ ಜೋಡಿಯು ವಿಶ್ವದ ನಂಬರ್ 1 ಶ್ರೇಯಾಂಕವನ್ನು ಸಾಧಿಸಿದರು. ಕಳೆದ ವರ್ಷ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಬೋ ಅವರ ಕೋಚಿಂಗ್‌ನಲ್ಲೇ ಈ ಜೋಡಿ ಭಾರತಕ್ಕೆ ಮೊದಲ ಚಿನ್ನ ಗೆದ್ದರು. ಈ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ನಡೆಯುತ್ತಿದ್ದು, ಮಹತ್ವದ ವರ್ಷದಲ್ಲಿ ಭಾರತೀಯ ಬ್ಯಾಡ್ಮಿಂಟನ್‌ನಲ್ಲಿ ಪ್ರಮುಖ ವ್ಯಕ್ತಿಯಾಗಿ ಮುಂದುವರೆಯಲಿದ್ದಾರೆ.
ಇದನ್ನೂ ಓದಿ | WPL 2024: ಗುಜರಾತ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್ಗೆ ಪ್ರಪೋಸ್ ಮಾಡಿದ RCB ಅಭಿಮಾನಿ; ಫೋಟೋ ವೈರಲ್
(This copy first appeared in Hindustan Times Kannada website. To read more like this please logon to kannada.hindustantimes.com)