ಕನ್ನಡ ಸುದ್ದಿ  /  Sports  /  Badminton News Kidambi Srikanth Lost To Lin Chun Yi Of Chinese Taipei In Swiss Open 2024 Semi Finals Jra

ಸೆಮಿಫೈನಲ್‌ನಲ್ಲಿ ಚೈನೀಸ್ ತೈಪೆಯ ಲಿನ್ ಚುನ್ ಯಿ ವಿರುದ್ಧ ಸೋಲು; ಕಿಡಂಬಿ ಶ್ರೀಕಾಂತ್ ಸ್ವಿಸ್ ಓಪನ್ ಅಭಿಯಾನ ಅಂತ್ಯ

Kidambi Srikanth: ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸ್ವಿಸ್ ಓಪನ್ 2024 ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ವಿಶ್ವದ 22ನೇ ಶ್ರೇಯಾಂಕಿತ ಚೈನೀಸ್ ತೈಪೆಯ ಎದುರಾಳಿ ಲಿನ್ ಚುನ್-ಯಿ ವಿರುದ್ಧ ಸೋತು ಪರಾಭವಗೊಂಡರು.

ಕಿಡಂಬಿ ಶ್ರೀಕಾಂತ್ ಸ್ವಿಸ್ ಓಪನ್ ಅಭಿಯಾನ ಅಂತ್ಯ
ಕಿಡಂಬಿ ಶ್ರೀಕಾಂತ್ ಸ್ವಿಸ್ ಓಪನ್ ಅಭಿಯಾನ ಅಂತ್ಯ (AP)

ಭಾರತದ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್ (Kidambi Srikanth) ಸ್ವಿಸ್ ಓಪನ್ 2024 ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ನಿಂದ ಹೊರಬಿದ್ದಿದ್ದಾರೆ. ಪುರುಷರ ಸಿಂಗಲ್ಸ್ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವದ 22ನೇ ಶ್ರೇಯಾಂಕಿತ ಚೈನೀಸ್ ತೈಪೆಯ ಲಿನ್ ಚುನ್-ಯಿ ವಿರುದ್ಧ ಸೋತ ಭಾರತೀಯ, ಪರಾಭವಗೊಂಡಿದ್ದಾರೆ.

ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ಸುಮಾರು ಒಂದು ಗಂಟೆ ಐದು ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಕಾಂತ್ 21-15, 9-21, 18-21ರ ಅಂತರದಲ್ಲಿ ಚೈನೀಸ್ ತೈಪೆ ಆಟಗಾರನ ವಿರುದ್ಧ ಪರಾಭವಗೊಂಡರು. 2022ರ ನವೆಂಬರ್ ತಿಂಗಳ ಬಳಿಕ, ಶ್ರೀಕಾಂತ್ ಇದೇ ಮೊದಲ ಬಾರಿಗೆ ಬಿಡಬ್ಲ್ಯೂಎಫ್ ಸೆಮಿಫೈನಲ್ ಪಂದ್ಯವೊಂದರಲ್ಲಿ ಆಡಿದ್ದಾರೆ.

ವಿಶ್ವದ ಮಾಜಿ ನಂಬರ್‌ ವನ್ ಭಾರತೀಯ ಬ್ಯಾಡ್ಮಿಂಟನ್ ಆಟಗಾರ‌, ಆಕ್ರಮಣಕಾರಿ ಆಟದೊಂಧಿಗೆ ಟೂರ್ನಿಯ ಸೆಮಿಕದನದಲ್ಲಿ ಶುಭಾರಂಭ ಮಾಡಿದರು. ತಮ್ಮ ಸ್ಮ್ಯಾಶ್ ಮತ್ತು ಅತ್ಯುತ್ತಮ ನೆಟ್ ಆಟದೊಂದಿಗೆ ಆರಂಭಿಕ ಗೇಮ್ ಅನ್ನು 21-15 ಅಂತರದಿಂದ ಗೆದ್ದರು. 31ರ ಹರೆಯದ ಅನುಭವಿ ಆಟಗಾರ ಶ್ರೀಕಾಂತ್, ಎರಡನೇ ಗೇಮ್‌ನಲ್ಲಿ ಪೈಪೋಟಿ ನೀಡಲು ಹೆಣಗಾಡಿದರು. ಆರಂಭದಲ್ಲಿ 4-1ರ ಅಂತರದಿಂದ ಮುನ್ನಡೆ ಸಾಧಿಸಿದರೂ, ತ್ವರಿತವಾಗಿ ಕಂಬ್ಯಾಕ್‌ ಮಾಡಿದ ಎದುರಾಳಿ ಭಾರಿ ಅಂತರದೊಂದಿಗೆ ಎರಡನೇ ಸೆಟ್‌ ವಶಪಡಿಸಿಕೊಂಡರು.‌

ನಿರ್ಣಾಯಕ ಸೆಟ್‌ನಲ್ಲಿ ಸೋಲು

ಮೂರನೇ ಸೆಟ್‌ ನಿರ್ಣಾಯಕವಾಗಿತ್ತು. ರೋಚಕವಾಗಿ ಸಾಗಿದ ಸೆಟ್‌ನಲ್ಲಿ ಚುನ್-ಯಿ ಆಕ್ರಮಣಕಾರಿ ವಿಧಾನ ಅನುಸರಿಸಿದರು. ಆರಂಭದಲ್ಲೇ 4-1ರ ಮುನ್ನಡೆ ಸಾಧಿಸಿದರು. ಆ ಬಳಿಕ ಪುಟಿದೆದ್ದ ಶ್ರೀಕಾಂತ್, ಮೊದಲಾರ್ಧದಲ್ಲಿ 11-10ರ ಮುನ್ನಡೆ ಸಾಧಿಸಿದ್ದರು. ಆ ಬಳಿಕ ಒಂದು ಹಂತದಲ್ಲಿ ಸೆಟ್‌ 16-16 ಅಂಕಗಳೊಂದಿಗೆ ಸಮಬಲಗೊಂಡಿತು. ಕೊನೆಯವರೆಗೂ ತೀವ್ರ ಪೈಪೋಟಿಯಿಂದ ಕೂಡಿತ್ತು. ಈ ವೇಳೆ ಕೆಲವು ಅನಗತ್ಯ ತಪ್ಪುಗಳನ್ನು ಮಾಡಿದ ಶ್ರೀಕಾಂತ್, ಎದುರಾಳಿಗೆ ಆಟದ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ಮಾಡಿಕೊಟ್ಟರು. ಕೊನೆಗೆ ಸೆಟ್‌ ಕೈಚೆಲ್ಲಿ ಪಂದ್ಯವನ್ನೂ ಕೈಚೆಲ್ಲಿದರು.

ಇದನ್ನೂ ಓದಿ | 150ನೇ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ಸುನಿಲ್‌ ಛೆಟ್ರಿ;‌ ವಿಶೇಷ ಮೈಲಿಗಲ್ಲು ವೇಳೆ ಎಐಎಫ್ಎಫ್ ಸನ್ಮಾನ

ಈ ಸೋಲಿನೊಂದಿಗೆ, ಸ್ವಿಸ್ ಓಪನ್‌ನಲ್ಲಿ ಭಾರತೀಯರ ಅಭಿಯಾನ ಅಂತ್ಯವಾಗಿದೆ. ಈ ಹಿಂದೆ ಪ್ರಿಯಾಂಶು ರಾಜವತ್ ಮತ್ತು ಕಿರಣ್ ಜಾರ್ಜ್ ಕ್ವಾರ್ಟರ್ ಫೈನಲ್‌ನಲ್ಲಿ ನಿರ್ಗಮಿಸಿದ್ದರು. ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಕೂಡ ವಿಫಲರಾದರು. ಅತ್ತ ಒಲಿಂಪಿಕ್‌ ಪದಕ ವಿಜೇತೆ ಪಿವಿ ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿನಲ್ಲಿಯೇ ಸೋತು ನಿರ್ಗಮಿಸಿದರು.

ವಿಭಾಗ