ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ; ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು; ಅಶ್ಮಿತಾಗೆ ಸೋಲು
PV Sindhu: ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಆರನೇ ಶ್ರೇಯಾಂಕದ ಹಾನ್ ಯೂ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮಲೇಷ್ಯಾ ಮಾಸ್ಟರ್ಸ್ (Malaysia Masters) ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು (PV Sindhu) ಸೆಮಿಫೈನಲ್ ಪ್ರವೇಶಿಸಿದ್ದಾರೆ. ಒಲಿಂಪಿಕ್ಸ್ ಪದಕ ಗೆದ್ದಿರುವ ವಿಶ್ವದ 15ನೇ ಶ್ರೇಯಾಂಕದ ಸಿಂಧು, ಬರೋಬ್ಬರಿ 55 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ವಿಶ್ವ ಆರನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಹಾನ್ ಯೂ ಅವರನ್ನು 21-13, 14-21, 21-12 ಅಂತರದಿಂದ ಸೋಲಿಸಿದರು. ಆ ಮೂಲಕ ಕಳೆದ ತಿಂಗಳು ನಿಂಗ್ಬೊದಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಕೊನೆಯ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು.
2022ರಲ್ಲಿ ಕೊನೆಯ ಬಾರಿಗೆ ಸಿಂಗಾಪುರ್ ಓಪನ್ ಗೆದ್ದಿದ್ದ ಸಿಂಧು, 55 ನಿಮಿಷಗಳ ಕಾಲ ನಡೆದ ಪಂದ್ಯದ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು. ಒಂದು ಹಂತದಲ್ಲಿ 3-3ರಿಂದ ಸಮಬಲವಾಗಿದ್ದ ಬಳಿಕ, ವಿರಾಮದ ವೇಳೆಗೆ 11-5ರ ಅಂತರದಲ್ಲಿ ಮುನ್ನಡೆ ಸಾಧಿಸಿದರು. ಚೀನಾದ ಆಟಗಾರ್ತಿ ನಿಧಾನವಾಗಿ 13-16ಕ್ಕೆ ಮುನ್ನಡೆ ಸಾಧಿಸಿದರು. ಆದರೆ ಸಿಂಧು ಉಳಿದ ಐದು ನೇರ ಅಂಕಗಳನ್ನು ಗಳಿಸಿ ಆರಂಭಿಕ ಗೇಮ್ ತಮ್ಮದಾಗಿಸಿಕೊಂಡರು.
ಎರಡನೇ ಸುತ್ತಿನಲ್ಲಿ ಹಾನ್ ಆರಂಭದಲ್ಲೇ 5-0 ಅಂತರದಿಂದ ಮುನ್ನಡೆ ಸಾಧಿಸಿದರು. ಬಳಿಕ ಅದನ್ನು 15-2ಕ್ಕೆ ಏರಿಸಿದರು. ಪಂದ್ಯವನ್ನು ಸುಲಭವಾಗಿ ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು. ಆದರೆ, ಅಂತಿಮ ಹಾಗೂ ನಿರ್ಣಾಯಕ ಸುತ್ತಿನಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಮೇಲುಗೈ ಸಾಧಿಸಿದರು.
ಸೆಮೀಸ್ ಪಂದ್ಯದಲ್ಲಿ ಬಲಿಷ್ಠ ಎದುರಾಳಿ
ಮಾಜಿ ವಿಶ್ವ ಚಾಂಪಿಯನ್ ಆಗಿರುವ ಸಿಂಧು, ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಕುಸುಮಾ ವರ್ದಾನಿ ಅಥವಾ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೆಣಸಲಿದ್ದಾರೆ. ಅಲ್ಲಿ ಗೆದ್ದರೆ ಫೈನಲ್‌ಗೆ ಲಗ್ಗೆ ಹಾಕಲಿದ್ದಾರೆ.
ಇದನ್ನೂ ಓದಿ | ಆರ್ಸಿಬಿ ಸೋಲಿಗೆ ಅಭಿಮಾನಿಗಳ ಅಹಂಕಾರವೇ ಕಾರಣ, ಅದಕ್ಕೆ ಬಾಯಿ ಮುಚ್ಚಿಕೊಂಡಿರಬೇಕು; ತಮಿಳುನಾಡು ಮಾಜಿ ಕ್ರಿಕೆಟಿಗ
ಅತ್ತ ಭಾರತದ ಅಶ್ಮಿತಾ ಚಾಲಿಹಾ ಅವರು ಕ್ವಾರ್ಟರ್ ಕದನದಲ್ಲಿ ಚೀನಾದ ಆರನೇ ಶ್ರೇಯಾಂಕದ ಜಾಂಗ್ ಯಿ ಮ್ಯಾನ್ ವಿರುದ್ಧ 10-21, 15-21 ಅಂತರದಲ್ಲಿ ಸೋತರು.
ಇದನ್ನೂ ಓದಿ | SRH vs RR live score IPL 2024: ಸನ್‌ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ ಪಂದ್ಯದ ಲೇಟೆಸ್ಟ್ ಅಪ್ಡೇಟ್
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
